ಕೃಷಿ ಬದುಕಿನಿಂದ ನೆಮ್ಮದಿ: ಕೃಷ್ಣ ಭಟ್
ಮಾನ್ಯ ದೇವರಕೆರೆಯಲ್ಲಿ ಮಳೆ-ಬೆಳೆ ಮಹೋತ್ಸವ
Team Udayavani, Jul 8, 2019, 5:26 AM IST
ಬದಿಯಡ್ಕ: ಭಾರತೀಯ ಮೂಲ ಕೃಷಿ ಪರಂಪರೆಯನ್ನು ಉಳಿಸುವ, ಪ್ರಕೃತಿಯನ್ನು ಸಂರಕ್ಷಿಸುವ ಅಂತರಂಗವನ್ನು ಮೈಗುಡಿಸಬೇಕಾದ ಅನಿವಾರ್ಯತೆ ಇಂದಿದೆ. ಬದುಕನ್ನು ಸುಗಮವಾಗಿ ಮುನ್ನಡೆಸಲು ಕೃಷಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದ್ದು, ಕೃಷಿ ಮರೆತ ಮಾನವ ಬದುಕು ದುರಂತವನ್ನು ಅನುಭವಿಸುತ್ತದೆ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅವರು ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಮತ್ತು ಕುಟುಂಬಶ್ರೀ ಸಿಡಿಎಸ್ ಸಂಯುಕ್ತ ಆಶ್ರಯದಲ್ಲಿ ಕುಟುಂಬಶ್ರೀಯ ಭತ್ತ ಬೆಳೆ, ಜಲಸಂರಕ್ಷಣಾ ಯಜ್ಞ 2019ರ ಅಂಗವಾಗಿ ನೀರ್ಚಾಲು ಸಮೀಪದ ಮಾನ್ಯ ದೇವರಕೆರೆ ಕೃಷಿ ಕೂಟ ಸಮಿತಿಯ ಸಹಕಾರದೊಂದಿಗೆ ಆಯೋಜಿಸಲಾದ ‘ಮಳೆ-ಬೆಳೆ ಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾ. ಪಂ. ಉಪಾಧ್ಯಕ್ಷೆ ಝೈಬುನ್ನೀಸಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮ ವ್ಯಾಪಕಗೊಳ್ಳಲಿ ಎಂದು ತಿಳಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತ್ ವಿದ್ಯಾಭ್ಯಾಸ-ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಟಿ.ಎಸ್. ಅಹಮ್ಮದ್, ಬದಿಯಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶಬಾನಾ, ಸದಸ್ಯರಾದ ಮುನೀರ್, ಮುಹಮ್ಮದ್ ಸಿರಾಜ್, ರಾಜೇಶ್ವರಿ, ಗ್ರಾ.ಪಂ. ಸಹಾಯಕ ಕಾರ್ಯದರ್ಶಿ ಸುನಿಲ್ ಕುಮಾರ್ ಎಸ್., ಗ್ರಾ.ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಮಾಜೀ ಅಧ್ಯಕ್ಷೆ ಸವಿತಾ ಎಂ.ಪಿ., ಎಡಿಸಿ ಸಮಿತಿ ಸದಸ್ಯ ಖಾದರ್ ಮಾನ್ಯ, ಕುಟುಂಬಶ್ರೀ ಎಡಿಎಸ್ ಕಾರ್ಯದರ್ಶಿ ಸರೋಜಿನಿ, ಬದಿಯಡ್ಕ ಗ್ರಾಮ ಪಂಚಾಯತ್ ಕೃಷಿ ಅಧಿಕಾರಿ ಮೀರಾ, ಪ್ರಸನ್ನ, ಎಂ.ಎಚ್. ಜನಾರ್ದನ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ಪ್ರಗತಿಪರ ಕೃಷಿಕರಾದ ಧರ್ಮಪಾಲ ಮಾನ್ಯ, ಪರಮೇಶ್ವರಿ ಮೇಗಿನಡ್ಕ, ಬೆಂಜಮಿನ್ ಡಿ’ಸೋಜಾ ಕಾರ್ಮಾರು, ಪಿ.ಕೆ. ಶಾಫಿ ಮಾನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಮಳೆ-ಬೆಳೆ ಮಹೋತ್ಸವದ ವ್ಯವಸ್ಥೆಗೆ ತನ್ನ ಗದ್ದೆಯನ್ನು ನೀಡಿ ಸಹಕರಿಸಿದ ಮಾಜಿ ಸೈನಿಕ ಕೃಷ್ಣ ನಾಯ್ಕ ದೇವರಕೆರೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಬದಿಯಡ್ಕ ಗ್ರಾ.ಪಂ. ಆರೋಗ್ಯ- ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಧಾ ಜಯರಾಂ ವಂದಿಸಿದರು. ಗ್ರಾ.ಪಂ. ಕಿರಿಯ ಗುಮಾಸ್ತ ಬಾಬು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ಮಹಿಳೆಯರಿಗೆ ಕಾಲ್ಚೆಂಡು, ಕಬ್ಬಡಿ, ಹಗ್ಗಜಗ್ಗಾಟ, ಜಾನಪದ ಹಾಡು, ನೇಜಿ ನೆಡುವುದು ಮತ್ತು ಮಕ್ಕಳಿಗಾಗಿ ಕಬಡ್ಡಿ, ಹಗ್ಗಜಗ್ಗಾಟ, 100 ಮೀಟರ್ ರಿಲೇ ಓಟದ ಸ್ಪರ್ಧೆಗಳು ಕೆಸರು ತುಂಬಿದ ಗದ್ದೆ ಬಯಲಲ್ಲಿ ಉತ್ಸಾಹದಿಂದ ನಡೆಯಿತು.
ನೂರಾರು ಮಂದಿ ಸ್ಥಳೀಯರು ಭಾಗವಹಿಸಿದರು. ಕುಟುಂಬಶ್ರೀ ಹಾಗೂ ವಿವಿಧ ಸಂಘಟನೆಗಳ ಸಂಪೂರ್ಣ ಸಹಕಾರದೊಂದಿಗೆ ಸಂಪನ್ನಗೊಂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.