ದಣಿದ ದೇಹಕ್ಕೆ ನವೋಲ್ಲಾಸ, ಕಣ್ಣಿಗೆ ಹಬ್ಬ “ಕಲ್ಲಂಗಡಿ’
Team Udayavani, Apr 4, 2019, 6:30 AM IST
ಕಾಸರಗೋಡು: ಸುಡುವ ಬಿಸಿಲಿನ ಬೇಗೆಯಲ್ಲಿ ದಣಿದ ದೇಹಕ್ಕೆ ತಂಪೆಸಗುವ ಮತ್ತು ನವೋಲ್ಲಾಸ ನೀಡುವ ಕಲ್ಲಂಗಡಿಗೆ ಇನ್ನಿಲ್ಲದ ಬೇಡಿಕೆ.
ದಾರಿಯುದ್ದಕ್ಕೂ ಅಲ್ಲಲ್ಲಿ ರಾಶಿ ಹಾಕಿರುವ ಕಲ್ಲಂಗಡಿಯ ಬಣ್ಣ ಕಣ್ಣಿಗೆ ಹಬ್ಬವನ್ನು ನೀಡಿದರೆ, ಬಾಯಿಗೆ ರುಚಿ, ಸವಿಯನ್ನು ನೀಡುತ್ತದೆ. ಜತೆಗೆ ದಣಿದು ಬಾಯಾರಿದಾಗ ದಣಿವಾರಿಸುವ ಗುಣವನ್ನು ಹೊಂದಿರುವ ಕಲ್ಲಂಗಡಿ ಆರೋಗ್ಯ ದಾಯಕವೂ ಹೌದು. ಕಲ್ಲಂಗಡಿ ಹಣ್ಣಿನ ರಸದ ಸೇವನೆ ದಣಿದ ದೇಹಕ್ಕೆ ನವೋಲ್ಲಾಸ ನೀಡುವ ಜತೆಗೆ ಬಳಲಿಕೆ ಮತ್ತು ದಾಹವನ್ನು ನೀಗಿಸುತ್ತದೆ.
ಬೇಸಗೆಯ ದಿನಗಳಲ್ಲಿ ಬಹುಬೇಗನೆ ತನ್ನ ದೇಹದಲ್ಲಿ ನೀರಿನ ಅಂಶವನ್ನು ಕಳೆದು ಕೊಳ್ಳುವು ದರಿಂದ ಮಾನವ ನಿತ್ರಾಣ ನಾಗುತ್ತಾನೆ. ಅಲ್ಲದೆ ಈ ದಿನಗಳಲ್ಲಿ ನೀರಿನ ಅಗತ್ಯ ದೇಹಕ್ಕೆ ಹೆಚ್ಚಿದ್ದು, ಇದನ್ನು ಪೂರೈಸಲು ಕಲ್ಲಂಗಡಿ ಸಾಮರ್ಥ್ಯವನ್ನು ಪಡೆದುಕೊಂಡಿರುವುದರಿಂದ ಕಲ್ಲಂಗಡಿಯನ್ನು ಹೆಚ್ಚೆಚ್ಚು ಸೇವಿಸುತ್ತಾರೆ. ಇದರಿಂದ ದಣಿವು ನಿವಾರಣೆಯಾಗುತ್ತದೆ. ನಿತ್ರಾಣ ತೊಲಗುತ್ತದೆ.
ಪೌಷ್ಟಿಕಾಂಶ
ಕಲ್ಲಂಗಡಿ ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಕ್ಯಾಲ್ಸಿಯಂ, ಮ್ಯಾಂಗನೀಸ್, ಸಸಾರ ಜನಕ, ಕಬ್ಬಿಣ, ಮೇದಸ್ಸು ಹಾಗೂ ವಿಟಮಿನ್ “ಸಿ’ ಮೊದಲಾದ ಜೀವ ಸತ್ವಗಳಿಂದ ಸಂಪದ್ಭರಿತವಾಗಿದೆ. ದೇಹದ ಕಾಂತಿಯನ್ನು ಕಾಪಾಡುವುದಕ್ಕೂ ಕಲ್ಲಂಗಡಿಯನ್ನು ಬಳಸಬಹುದು. ದೇಹದ ಸೌಂದರ್ಯವರ್ಧಕಗಳನ್ನು ಕಲ್ಲಂಗಡಿಯಿಂದ ಸಿದ್ಧಪಡಿಸಿ ಕೊಳ್ಳಬಹುದು. ಈ ಎಲ್ಲÉ ದೃಷ್ಟಿಯಿಂದ ಕಲ್ಲಂಗಡಿ ಆರೋಗ್ಯದಾಯಕ.
ಒಂದಿಷ್ಟು ತಂಪಿಗೆ
ಸುಡುವ ಬಿಸಿಲ ಬೇಗೆಗೆ ಹೊಟ್ಟೆ ತಂಪಾಗಿಸಲು ಬೀದಿ ಬದಿಗಳಲ್ಲಿ ಲಭಿಸುವ ಕಲ್ಲಂಗಡಿಯ ಜತೆಗೆ ಇತರ ಹಣ್ಣು ಹಂಪಲುಗಳನ್ನು ಸೇವಿಸಬಹುದು. ಇದೀಗ ಮಾರುಕಟ್ಟೆಗೆ ಪಾಲಾ^ಟ್ ನಿವಾಸಿಗಳು ತಾಳೆ ಹಣ್ಣುಗಳನ್ನೂ ಬೀದಿ ಬದಿಯಲ್ಲಿರಿಸಿಕೊಂಡು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಕರ್ನಾಟಕ ಮತ್ತು ತಮಿಳ್ನಾಡಿನಿಂದ ಬೃಹತ್ ಪ್ರಮಾಣದಲ್ಲಿ ಕಲ್ಲಂಗಡಿ ಕಾಸರಗೋಡಿಗೆ ಬರುತ್ತಿದೆ. ಬೀಜವಿಲ್ಲದ ಮೈಸೂರು ಕಲ್ಲಂಗಡಿಗೆ ಹೆಚ್ಚಿನ ಬೇಡಿಕೆಯಿದೆ. ಕಿಲೋಗೆ 18 ರೂ. ಯಿಂದ ಆರಂಭಗೊಂಡು ಬೇಡಿಕೆಗನುಗುಣವಾಗಿ ಧಾರಣೆ ಹೆಚ್ಚಳವಾಗುತ್ತಿದೆ. ತಂಪು ಪಾನೀಯಕ್ಕಿಂತ ಊರಿನ ಸೀಯಾಳಕ್ಕೆ ಹೆಚ್ಚಿನ ಬೇಡಿಕೆ ಇದೆ. ಮಂಗಳೂರು, ಶಿವಮೊಗ್ಗದಿಂದ ಭಾರೀ ಪ್ರಮಾಣದಲ್ಲಿ ಸೀಯಾಳ ಬರುತ್ತಿದೆ. ತಮಿಳ್ನಾಡಿನಿಂದಲೂ ಸೀಯಾಳ ಬರುತ್ತಿದೆ. ಸೀಯಾಳ ಜ್ಯೂಸ್ ಕೂಡಮಾರುಕಟ್ಟೆಯಲ್ಲಿ ಲಭ್ಯವಿದೆ. ತಾಳೆ ಹಣ್ಣು ಕೂಡ ಸೀಯಾಳದಂತೆ ದಾಹವನ್ನು ನೀಗಿಸುವ ಗುಣವನ್ನು ಪಡೆದುಕೊಂಡಿದೆ.
ಆರೋಗ್ಯದಾಯಕ
ಹಲವಾರು ಜೀವ ಸತ್ವಗಳಿಂದ ಕೂಡಿದ ಕಲ್ಲಂಗಡಿ ಸೇವನೆ ಆರೋಗ್ಯದಾಯಕ. ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿರುವ ಕಲ್ಲಂಗಡಿ ಹಲವಾರು ರೋಗಗಳ ಉಪಶಮನಕ್ಕೆ ಪರಿಣಾಮಕಾರಿ. ಸಾಮಾನ್ಯವಾಗಿ ಜನರನ್ನು ಕಾಡುವ ಕಾಮಾಲೆ ರೋಗವನ್ನು ಉಪಶಮನ ಮಾಡುವ ಔಷಧೀಯ ಗುಣವನ್ನು ಪಡೆದುಕೊಂಡಿದೆ. ಕಣ್ಣು ಉರಿ, ಕಜ್ಜಿ(ಅಲರ್ಜಿ), ಮೈಕೈ ನೋವು, ತುರಿಕೆಗಳ ಶಮನಕ್ಕೆಗೆ ದಿವೌÂಷಧವಾಗಿ ಬಳಸಬಹುದು.
- ಪ್ರದೀಪ್ ಬೇಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.