ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ
ಸಿದ್ಧಗೊಳ್ಳುತ್ತಿದ್ದಾನೆ ಆವೆ ಮಣ್ಣಿನ ಗಣಪ
Team Udayavani, Aug 31, 2019, 5:28 AM IST
ಗಣಪನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದರು.
ಕಾಸರಗೋಡು: ದೇಶದಲ್ಲಿ ಐಕ್ಯತೆ, ಸಾಮರಸ್ಯವನ್ನು ಮೂಡಿಸುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ನಾಡು ಸಿದ್ಧಗೊಳ್ಳುತ್ತಿದ್ದು, ಗಣೇಶ ವಿಗ್ರಹ ತಯಾರಿ ಭರದಿಂದ ಸಾಗುತ್ತಿದೆ. ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಹಿತ ಜಿಲ್ಲೆಯ 25 ಕ್ಕೂ ಅಧಿಕ ಪ್ರದೇಶಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗುತ್ತಿದೆ. ಹಲವು ಮನೆಗಳಲ್ಲೂ ಗಣೇಶ ವಿಗ್ರಹ ಇರಿಸಿ ಗಣೇಶನನ್ನು ಪೂಜಿಸುವ ರೂಢಿ ಹಲವು ವರ್ಷಗಳಿಂದ ಇಲ್ಲಿ ನಡೆದು ಬಂದಿದೆ. ಪೂಜೆಗೊಳ್ಳಲಿರುವ ಗಣೇಶ ವಿಗ್ರಹ ತಯಾರಿ ಎಲ್ಲೆಡೆ ಭರದಿಂದ ಸಾಗುತ್ತಿದೆ.
ದೇವಸ್ಥಾನ, ಮಂದಿರ ಮೊದಲಾದೆಡೆ ಗಳಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಗತ್ಯದ ಶ್ರೀ ಗಣೇಶ ವಿಗ್ರಹ ರಚನೆಯಲ್ಲಿ ಖ್ಯಾತ ಕಲಾವಿದ ಕಾಸರಗೋಡಿನ ನೆಲ್ಲಿಕುಂಜೆಯ ಲಕ್ಷ್ಮೀಶ ಆಚಾರ್ಯ ಅವರು ತೊಡಗಿದ್ದಾರೆ. ಬಹುತೇಕ ಗಣೇಶ ವಿಗ್ರಹ ಕೆಲಸ ಪೂರ್ತಿ ಗೊಂಡಿದ್ದು, ಅಂತಿಮ ಸ್ಪರ್ಶದಲ್ಲಿ ನಿರತರಾಗಿದ್ದಾರೆ.
ಲಕ್ಷ್ಮೀಶ ಆಚಾರ್ಯ ಅವರು ಕಳೆದ 26 ವರ್ಷಗಳಿಂದ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಕಾಸರಗೋಡು, ಕಣ್ಣೂರು ಜಿಲ್ಲೆಯ ವಿವಿಧೆಡೆಗಳಲ್ಲಿ ಗಣೇಶೋತ್ಸವಕ್ಕೆ ಪ್ರತಿಷ್ಠಾಪನೆಗೊಳ್ಳುತ್ತಿರುವ ಬಹುತೇಕ ಗಣೇಶ ವಿಗ್ರಹ ಲಕ್ಷ್ಮೀಶ ಆಚಾರ್ಯ ಅವರಿಂದಲೇ ತಯಾರಾ ಗುತ್ತಿದೆ. ತಮಿಳುನಾಡಿನ ಕೊಯಮತ್ತೂರಿ ನಲ್ಲೂ ಲಕ್ಷ್ಮೀಶ ಆಚಾರ್ಯ ಅವರ ತಯಾರಿಸಿದ ಗಣಪ ವಿಗ್ರಹ ಪೂಜೆ ಗೊಂಡದ್ದಿದೆ. ಕಾಸರಗೋಡು ಶ್ರೀ ಮಲ್ಲಿ ಕಾರ್ಜುನ ದೇವಸ್ಥಾನದಲ್ಲಿ ಪೂಜೆಗೊಳ್ಳುವ ಗಣಪ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಗಣೇಶ ವಿಗ್ರಹವಾಗಿದೆ. ಬದಿಯಡ್ಕ, ಮುಳಿಂಜ, ಮೇಲ್ಪರಂಬ, ತೃಕ್ಕನ್ನಾಡ್, ಕಾಂಞಂಗಾಡ್, ಪಯ್ಯನ್ನೂರು, ಕಣ್ಣೂರು ಮೊದಲಾದೆಡೆಗಳಲ್ಲಿ ನಡೆಯುವ ಗಣೇಶೋತ್ಸವಗಳಲ್ಲಿ ಲಕ್ಷ್ಮೀಶ ಆಚಾರ್ಯ ಅವರ ಕರಗಳಲ್ಲಿ ಮೂಡಿಬಂದ ಗಣೇಶನೇ ಪೂಜೆಗೊಳ್ಳುತ್ತಿದ್ದಾನೆ. ಇದಲ್ಲದೆ ತರವಾಡು ಕ್ಷೇತ್ರಗಳಲ್ಲಿ, ಕುಟುಂಬ ಕ್ಷೇತ್ರಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ವಿಗ್ರಹಗಳೂ ಸಿದ್ಧವಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಲಕ್ಷ್ಮೀಶ ಆಚಾರ್ಯ ಅವರು ತಯಾರಿಸುವ ಗಣೇಶ ವಿಗ್ರಹಗಳಲ್ಲಿ ತನ್ನದೇ ಆದ ವೈವಿಧ್ಯತೆ ಇದೆ. ಕಲಾತ್ಮಕತೆ, ಆಲಂಕಾರಿಕ ಕುಸುರಿ ಕೆಲಸಗಳು ಅತ್ಯಂತ ಸೊಗಸು ನೀಡುತ್ತವೆ.
ಈ ವರ್ಷ 26 ಗಣೇಶ ವಿಗ್ರಹ ರಚನೆ
ಕಳೆದ 26 ವರ್ಷಗಳಿಂದ ಗಣೇಶ ವಿಗ್ರಹ ರಚನೆ ಕಾಯಕದಲ್ಲಿ ತೊಡಗಿರುವ ನೆಲ್ಲಿಕುಂಜೆಯ ಲಕ್ಷ್ಮೀಶ ಆಚಾರ್ಯ ಅವರು ಈ ವರ್ಷ 26 ಗಣೇಶ ವಿಗ್ರಹಗಳನ್ನು ರಚಿಸುತ್ತಿದ್ದಾರೆ.
ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಿನಗಳ ಕಾಲ ಪೂಜೆಗೊಳ್ಳುತ್ತಿರುವ ಶ್ರೀ ಗಣೇಶ ವಿಗ್ರಹ ಜಿಲ್ಲೆಯಲ್ಲೇ ಅತ್ಯಂತ ಎತ್ತರದ ಗಣೇಶ ವಿಗ್ರಹ. ಸುಮಾರು ಒಂದೂವರೆ ಅಡಿ ಎತ್ತರದಿಂದ ತೊಡಗಿ ಐದು ಅಡಿ ಎತ್ತರದ ವರೆಗಿನ ಗಣೇಶ ವಿಗ್ರಹವನ್ನು ರಚಿಸುತ್ತಿದ್ದಾರೆ.
ಆವೆ ಮಣ್ಣಿನ ಗಣಪ
ಲಕ್ಷ್ಮೀಶ ಆಚಾರ್ಯ ಅವರು ಕಳೆದ 26 ವರ್ಷಗಳಿಂದ ಆವೆ ಮಣ್ಣಿನಿಂದಲೇ ವಿಗ್ರಹವನ್ನು ರಚಿಸುತ್ತಿರುವುದು ವಿಶೇಷ. ಆವೆ ಮಣ್ಣು ಪರಿಸರ ಸ್ನೇಹಿಯಾಗಿರುವ ಕಾರಣದಿಂದ ನೀರಿನಲ್ಲಿ ವಿಷಕಾರಿ ಯಾಗದೇ ಕರಗಬಲ್ಲವು. ಆವೆ ಮಣ್ಣ ಗಣಪತಿಯಾಗಿರುವುದರಿಂದ ನೀರಿಗೂ, ಊರಿಗೂ, ಯಾರಿಗೂ ಹಾನಿಯಾಗುವುದಿಲ್ಲ. ಆರಾಧನಾ ರೂಪದಲ್ಲಿ ಗಣಪನ ವಿಗ್ರಹ ರಚಿಸುತ್ತಿರುವುದು ಲಕ್ಷ್ಮೀಶ ಆಚಾರ್ಯ ಅವರ ವಿಶೇಷತೆಯಾಗಿದೆ. ಗಣಪ ವಿಗ್ರಹ ರಚನೆಗೆ ಸಹೋದರ ಯೋಗೀಶ್ ಸಹಿತ ಸಹಕರಿಸುತ್ತಾರೆ.
ಶ್ರದ್ಧೆಯ ಕಲಾವಿದ
ನಾನು ಹಲವು ವರ್ಷಗಳಿಂದ ಲಕ್ಷ್ಮೀಶ ಆಚಾರ್ಯ ತಯಾರಿಸುವ ಗಣೇಶ ವಿಗ್ರಹವನ್ನು ನೋಡುತ್ತಿದ್ದೇನೆ. ಅವರು ತುಂಬ ಶ್ರದ್ಧೆಯಿಂದ ವಿಗ್ರಹ ರಚನೆ ಕಾಯಕವನ್ನು ನಡೆಸುತ್ತಿದ್ದಾರೆ. ಅವರು ರಚಿಸುತ್ತಿರುವ ವಿಗ್ರಹಗಳಲ್ಲಿ ಜೀವಂತಿಕೆಯನ್ನು ಕಾಣಬಹುದಾಗಿದೆ.
– ಶಿವರಾಮ ಕಾಸರಗೋಡು,
ಕಾರ್ಪೊರೇಶನ್ ಬ್ಯಾಂಕ್ ಸಿಬಂದಿ
ದೇವರ ಸೇವೆ
ವರ್ಷದಿಂದ ವರ್ಷಕ್ಕೆ ವಿಗ್ರಹ ತಯಾರಿಗೆ ಖರ್ಚು ಹೆಚ್ಚುತ್ತಿದೆ. ಗಣೇಶ ವಿಗ್ರಹ ರಚನೆಯನ್ನು ಲಾಭದ ದೃಷ್ಟಿಯಿಂದ ಮಾಡುತ್ತಿಲ್ಲ. ದೇವರ ಸೇವೆಯಾಗಿ ಭಯ, ಭಕ್ತಿ, ನಿಷ್ಠೆಯಿಂದ ಗಣೇಶ ವಿಗ್ರಹವನ್ನು ಕಳೆದ 26 ವರ್ಷಗಳಿಂದ ರಚಿಸುತ್ತಿದ್ದೇನೆ.
– ಲಕ್ಷ್ಮೀಶ ಆಚಾರ್ಯ,
ವಿಗ್ರಹ ರಚನೆಕಾರ, ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.