ವಾಹನ ದಟ್ಟಣೆ: ಆ್ಯಂಬುಲೆನ್ಸ್‌ಗೆ ದಾರಿಯಿಲ್ಲ
Team Udayavani, Nov 17, 2018, 3:45 AM IST
ಕಾಸರಗೋಡು: ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆಯಾದ ಕಾಸರಗೋಡಿನಲ್ಲಿ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಹಿಂದಿದ್ದರೂ ವಾಹನ ದಟ್ಟಣೆಯಲ್ಲಿ ಸಾಕಷ್ಟು ಮುಂದಿದೆ. ಇಲ್ಲಿನ ರಸ್ತೆಗಳ ಶೋಚನೀಯ ಸ್ಥಿತಿ ಮತ್ತು ರಸ್ತೆ ಅಗಲ ಕಿರಿದಾಗಿರುವುದು ವಾಹನ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ರೋಗಿಗಳನ್ನು ಹೊತ್ತು ಆಸ್ಪತ್ರೆಗೆ ಸಾಗುವ ಆ್ಯಂಬುಲೆನ್ಸ್‌ಗಳು ವಾಹನಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ನಿಗದಿತ ಸಮಯಕ್ಕೆ ತಲುಪಲಾಗದೆ ರೋಗಿಗಳಿಗೆ ಕಂಟಕವಾಗುತ್ತಿರುವುದು ಕಾಸರಗೋಡಿನಲ್ಲಿ ಸಾಮಾನ್ಯವಾಗಿದೆ.
ಕಾಸರಗೋಡು-ಮಂಗಳೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ತುರ್ತಾಗಿ ಸಾಗಬೇಕಾಗಿರುವ ಆ್ಯಂಬುಲೆನ್ಸ್‌ಗಳಿಗೆ ಇತರ ವಾಹನಗಳು ಮತ್ತು ರಸ್ತೆಯ ಶೋಚನೀಯ ಸ್ಥಿತಿ ಅಡ್ಡಿಯಾಗುತ್ತಿದೆ. ಇದರಿಂದಾಗಿ ರೋಗಿಗಳ ಜೀವಕ್ಕೂ ಅಪಾಯ ಎದುರಾಗುತ್ತಿ¤ದೆ. ಕಾಸರಗೋಡಿನಿಂದ ತಲಪಾಡಿಯವರೆಗೆ ಅಗಲ ಕಿರಿದಾದ ರಸ್ತೆಯ ಜತೆಯಲ್ಲಿ ರಸ್ತೆಯ ಅಲ್ಲಲ್ಲಿ ಭೀಮ ಗಾತ್ರದ ಹೊಂಡ ನಿರ್ಮಾಣವಾಗಿದ್ದು (ಕೆಲವೆಡೆ ಪ್ಯಾಚ್ ಹಾಕಲಾಗಿದೆ) ಶೋಚನೀಯ ಸ್ಥಿತಿಗೆ ತಲುಪಿದೆ. ತಲಪಾಡಿಯಿಂದ ಮಂಗಳೂರಿನ ಮಧ್ಯೆ ತೊಕ್ಕೋಟು ಮತ್ತು ಪಂಪ್‌ವೆಲ್‌ನಲ್ಲಿ ಚತುಷ್ಪಥ ರಸ್ತೆಯ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವುದರಿಂದ ಪದೇ ಪದೆ ರಸ್ತೆತಡೆ ಎದುರಾಗುತ್ತಿದೆ. ಇದರ ಪರಿಣಾಮ ಜೀವನ್ಮರಣ ಹೋರಾಟ ನಡೆಸುತ್ತಿರುವ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಆ್ಯಂಬುಲೆನ್ಸ್‌ಗಳು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡು ಮುಂದೆ ಸಾಗಲು ಸಾಧ್ಯವಾಗದೆ ರೋಗಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆೆ.
ದಾರಿ ಬಿಡಿ, ಜೀವ ಉಳಿಸಿ
ಮೇಲಿನ ಕಾಣುತ್ತಿರುವ ಚಿತ್ರವನ್ನೊಮ್ಮೆ ವೀಕ್ಷಿಸಿದರೆ ಸಾಕು. ಆ್ಯಂಬುಲೆನ್ಸ್ ಇತರ ವಾಹನಗಳ ‘ಚಕ್ರವ್ಯೂಹ’ದಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿಗೆ ಸಿಲುಕಿರುವುದನ್ನು ಕಾಣಬಹುದು. ಆ್ಯಂಬುಲೆನ್ಸ್ ಸಾಗುವ ಸಂದರ್ಭದಲ್ಲಿ ದಾರಿ ಸುಗಮ ಮಾಡಿಕೊಡಬೇಕೆಂದಿದ್ದರೂ ವಾಹನಗಳು ಬದಿಗೆ ಸರಿಯದೆ ಅಥವಾ ರಸ್ತೆಯಲ್ಲೇ ಅಡ್ಡಗಟ್ಟಿ ನಿಂತು ಆ್ಯಂಬುಲೆನ್ಸ್ ಸಾಗಲು ಅಸಾಧ್ಯವಾಗುವುದಿದೆ. ರಸ್ತೆ ಅಗಲ ಕಿರಿದಾಗಿರುವುದರಿಂದ ಆ್ಯಂಬು ಲೆನ್ಸ್ ಸಾಗಲು ದಾರಿ ಮಾಡಿಕೊಡಲು ಸಾಧ್ಯವಾಗದಿರುವುದು ಒಂದು ಪ್ರಮುಖ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ತುರ್ತಾಗಿ ಸಾಗಬೇಕಾದ ಆ್ಯಂಬುಲೆನ್ಸ್ ರಾಷ್ಟ್ರೀಯ ಹೆದ್ದಾರಿಯಲ್ಲೇ ಉಳಿದು ಬಿಡುವುದು ಇದೆ. ಇದರಿಂದ ಹಲವು ಸಂದರ್ಭಗಳಲ್ಲಿ ನಿಗದಿತ ಸಮಯಕ್ಕೆ ತುರ್ತಾಗಿ ಆಸ್ಪತ್ರೆಗೆ ಸಾಗಲು ಸಾಧ್ಯವಾಗದೆ ರೋಗಿಗಳ ಪ್ರಾಣ ಪಕ್ಷಿ ಹಾರಿಹೋದ ಘಟನೆಗಳು ಹಲವು ನಡೆದಿವೆ.
ಇನ್ನೂ ಚತುಷ್ಪಥ ರಸ್ತೆ ಕನಸು
ಕೇಂದ್ರ ಸರಕಾರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಚತುಷ್ಪಥ ರಸ್ತೆ ನಿರ್ಮಾಣದ ಮಹತ್ವಾಕಾಂಕ್ಷೆಯ ಯೋಜನೆ ಜಾರಿಯಲ್ಲಿದೆ. ಬಹುತೇಕ ರಾಜ್ಯಗಳಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಕೇರಳದಲ್ಲಿ ಇನ್ನೂ ಚತುಷ್ಪಥ ರಸ್ತೆ ಕಾಮಗಾರಿ ಆರಂಭಗೊಂಡಿಲ್ಲ. ಎಲ್ಲಾ ರಾಜ್ಯಗಳಲ್ಲಿ 60 ಮೀಟರ್ ಅಗಲದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದ್ದರೆ ಕೇರಳದಲ್ಲಿ ಕೇವಲ 45 ಮೀಟರ್ ಅಗಲದಲ್ಲಿ ರಸ್ತೆ ಅಭಿವೃದ್ಧಿ ಸಾಕು ಎಂಬ ನಿಲುವಿಗೆ ಸರಕಾರ ಬಂದಿದೆ. ಜನರ ಸಹಕಾರವಿಲ್ಲದಿದ್ದರೆ ಅಭಿವೃದ್ಧಿಯಾಗದು. ರಾ.ಹೆದ್ದಾರಿಯನ್ನು ಕೇವಲ 30 ಮೀಟರ್ ಅಗಲದಲ್ಲಿ ಅಭಿವೃದ್ಧಿ ಪಡಿಸಿದರೆ ಸಾಕು ಎಂಬ ನಿಲುವನ್ನು ಹೊಂದಿರುವ ಹಲವು ಸಂಘಟನೆಗಳು ಹೋರಾಟವನ್ನೂ ನಡೆಸಿದ್ದವು.
ಇಡೀ ದೇಶದಲ್ಲಿ ಮಹತ್ವಾಕಾಂಕ್ಷೆಯ 60 ಮೀಟರ್ ಅಗಲದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿಯಾಗುತ್ತಿದ್ದರೂ ಕೇರಳದಲ್ಲಿ 45 ಮೀಟರ್ ಅಗಲದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲು ಕೇವಲ ಪ್ರಾಥಮಿಕ ಪ್ರಕ್ರಿಯೆ ಆರಂಭಗೊಂಡಿದೆ. ರಾ.ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ವಾಹನ ಅಪಘಾತಗಳು ಹೆಚ್ಚುತ್ತಿದ್ದರೂ, ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಸಾಮಾನ್ಯ ಜ್ಞಾನವು ಸಂಬಂಧಪಟ್ಟವರಿಗೆ ಇಲ್ಲವಲ್ಲ ಎಂಬುದೇ ದುರಂತವಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಕಾಮಗಾರಿ ಜನವರಿ ತಿಂಗಳಲ್ಲಿ ಆರಂಭಿಸುವುದಾಗಿ ಸಂಬಂಧಪಟ್ಟವರು ಹೇಳುತ್ತಿದ್ದಾರೆ. ಆದರೆ ಜನವರಿ ತಿಂಗಳಲ್ಲಿ ಕಾಮಗಾರಿ ಸಾಧ್ಯವೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಜನರಲ್ಲಿ ಇಲ್ಲ. ಕಾರಣ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿಲ್ಲ.
ಅಗಲ ಕಿರಿದಾದ ಸೇತುವೆಗಳೂ ಕಾರಣ
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಗಳಲ್ಲಿ ವಾಹನಗಳಿಗೆ ಸುಗಮವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಗಲಕಿರಿದಾಗಿರುವ ಸೇತುವೆ. ಇದರಿಂದ ಎದುರು ಬದುರಾಗಿ ಬರುವ ವಾಹನಗಳು ಆ್ಯಂಬುಲೆನ್ಸ್ ಸಾಗಲು ಅಡ್ಡಿಯಾಗುತ್ತಿದೆ. ಆ್ಯಂಬುಲೆನ್ಸ್ ಸಾಗಲು ದಾರಿ ಮಾಡಿ ಕೊಡಲು ಸಾಧ್ಯವಾಗದೆ ಆ್ಯಂಬುಲೆನ್ಸ್ ಅರ್ಧ ದಲ್ಲೇ ನಿಂತು ಬಿಡುವುದಿದೆ.
ರಸ್ತೆ ಸ್ಥಿತಿಯೂ ಶೋಚನೀಯ
ಕಾಸರಗೋಡಿನಿಂದ ತಲಪಾಡಿಯವರೆಗೆ ಅಲ್ಲಲ್ಲಿ ರಸ್ತೆ ಶೋಚನೀಯ ಸ್ಥಿತಿಗೆ ತಲುಪಿದೆ. ರಸ್ತೆಯಲ್ಲಿ ಭೀಮ ಗಾತ್ರದ ಹೊಂಡಗಳು ಬಿದ್ದು, ಡಾಮರು ಕಿತ್ತುಹೋಗಿ ವಾಹನ ಸಾಗಲು ಕಷ್ಟ ಪಡುತ್ತಿರುವುದನ್ನು ಕಾಣಬಹುದು. ಇಂತಹ ರಸ್ತೆಯಲ್ಲಿ ವಾಹನಗಳನ್ನು ಸಾಗಿಸಲು ಚಾಲಕರು ಹರಸಾಹಸ ಮಾಡಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗಳಿಗೆ ಮುಂದೆ ಸಾಗಲು ಸಾಧ್ಯವಾಗದ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.