ಜಾಗೋ ಗ್ರಾಹಕ್ ಜಾಗೋ ಸುರಕ್ಷಿತ ಆಹಾರ – ಆರೋಗ್ಯದ ಆಧಾರ
Team Udayavani, Jul 27, 2017, 8:20 AM IST
ಮಾರುಕಟ್ಟೆಯಲ್ಲಿ ರಂಗು ರಂಗಿನ ಹಣ್ಣು ಹಂಪಲು ಕಂಡಾಗ ಆಹ್ಲಾದ ಗೊಂಡ ನಾವು ಯಥೇಷ್ಟ ಹಣ್ಣುಗಳನ್ನು ಖರೀದಿಸಿ ನಿತ್ಯ ಸೇವಿಸುತ್ತೇವೆ. ಆರೋಗ್ಯಕ್ಕೆ ಹಣ್ಣುಗಳು ಉತ್ತಮ ಎಂದು ನಾವು ತಿಳಿದಿದ್ದೇವೆ ಅಲ್ಲವೇನು ? ಇದು ಸರಿಯೇ ! ಆದರೆ ಹಣ್ಣು ಹಂಪಲುಗಳಿಗೆ ಇಷ್ಟೊಂದು ಕಣ್ಣು ಕೋರೈಸುವ ರಂಗು ಹೇಗೆ ಬಂತು? ಇದನ್ನು ಯಾರಾದರೂ ಆಲೋಚಿಸಿದ್ದೀರೇನು? ಇನ್ನೂ ಬೆಳೆಯದ ಹಣ್ಣುಗಳನ್ನು ದಿಢೀರ್ ಪಕ್ವಗೊಳಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನುವ ಅತ್ಯಂತ ಅಪಾಯ ಕಾರಿ ರಾಸಾಯನಿಕ ಉಪಯೋಗಿಸ ಲಾಗುತ್ತಿದ್ದು ಇದು ಕ್ಯಾನ್ಸರ್ ರೋಗವನ್ನೂ ಹುಟ್ಟಿಸಬಹುದೆಂದು ಎಚ್ಚರಿಕೆ ನೀಡಲಾಗಿದೆ.
ಭಾರತ ಸರಕಾರದ ಅಧೀನ ಸಂಸ್ಥೆ ಎಫ್‌ಎಸ್‌ಎಸ್‌ಎಐ (ಫುಡ್ ಸೇಫ್ಟಿ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ) ಈ ವಿಷಕಾರಿ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಇದೀಗ ನಾಗರಿಕರಲ್ಲಿ ಜಾಗರೂಕತೆ ಪಾಲಿಸಲು ಕರೆ ಇತ್ತಿದೆ. ಈ ಸಂಸ್ಥೆ ತಿಳಿಸುವ ಮಾಹಿತಿ ಇಷ್ಟು : ಕ್ಯಾಲ್ಸಿಯಂ ಕಾರ್ಬೈಡ್ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ರಾಸಾಯನಿಕ. ಇದು ಆರ್ಸೆನಿಕ್ ಹಾಗೂ ಫಾಸ್ಪರಸ್ ಅಂಶಗಳನ್ನು ಒಳಗೊಂಡಿದ್ದು, ನೀರಿನೊಂದಿಗೆ ಬೆರೆತಾಗ ಅಸೆಟಿಲೀನ್ ಅನಿಲವನ್ನು (ಕಾರ್ಬೈಡ್ ಅನಿಲ) ಉತ್ಪಾದಿಸುತ್ತದೆ.
ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಕ್ಯಾನ್ಸರ್ ಜನಕ ಅಂಶಗಳಿರುವುದರಿಂದ ಕಾರ್ಬೈಡ್‌ನಿಂದ ಪಕ್ವಗೊಳಿಸಿದ ಹಣ್ಣುಗಳು ಸೇವಿಸಿದರೆ ಆರೋಗ್ಯಕ್ಕೆ ಅನೇಕ ಅಪಾಯ ಉಂಟಾಗುತ್ತದೆ. ತಲೆನೋವು, ತಲೆಸುತ್ತುವಿಕೆ, ಬುದ್ಧಿ ಭ್ರಮಣೆ, ನಿರಂತರ ನಿದ್ದೆ, ಮಾನಸಿಕ ಗೊಂದಲ, ಸ್ಮರಣ ಶಕ್ತಿಯ ನಷ್ಟ, ಮಸ್ತಷ್ಕ ಸಂಬಂಧಿ ಸಮಸ್ಯೆ, ಆಮ್ಲಜನಕ ಕೊರತೆಯನ್ನು ಪ್ರೇರೇಪಿಸುವ ಮೂಲಕ ನರವ್ಯೂಹಕ್ಕೆ ಬಾಧೆ ಉಂಟು ಮಾಡುತ್ತದೆ.
ಈ ಸಂಸ್ಥೆ ಕೃತಕವಾಗಿ ಪಕ್ವಗೊಳಿಸಿದ ಹಣ್ಣುಗಳನ್ನು ಗುರುತಿಸುವ ಬಗ್ಗೆಯೂ ತಿಳಿಸಿದೆ. ಕೃತಕವಾಗಿ ಪಕ್ವಗೊಳಿಸಿದ ಹಣ್ಣಿಗೆ ಕಲೆಗಳಿರುತ್ತವೆ ಮತ್ತು ಸ್ವಾಭಾವಿಕವಾಗಿ ಪಕ್ವಗೊಳಿಸಿದ ಹಣ್ಣುಗಳಿಗಿಂತ ಹೆಚ್ಚಿನ ಹೊಳಪು ಬಣ್ಣವಿರುತ್ತದೆ. ಕೆಲವೊಮ್ಮೆ ರುಚಿಯಲ್ಲೂ ವ್ಯತ್ಯಾಸವಿರುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್ ಅಂಶಗಳಿಂದಾಗಿ ಬಾಯಿಯ ಒಳಗಡೆ ಸುಡುವ ಸಂವೇದನೆ ಭಾಸವಾಗುತ್ತದೆ. ಕೃತಕವಾಗಿ ಪಕ್ವಗೊಳಿಸಿದ ಹಣ್ಣು ಹೊರಭಾಗದಿಂದ ಪೂರ್ತಿಯಾಗಿ ಪಕ್ವವಾದಂತೆ ಕಂಡರೂ ಒಳಗಿನ ಭಾಗ ಹಸಿಯಾಗಿಯೇ ಇರುತ್ತದೆ. ಸ್ವಾಭಾವಿಕವಾಗಿ ಪಕ್ವಗೊಳಿಸಿದ ಹಣ್ಣಿನಲ್ಲಿ ಸಾಕಷ್ಟು ರಸ ಇರುತ್ತದೆ ಮತ್ತು ಮಧುರತೆ ಹೆಚ್ಚಿರುತ್ತದೆ. ಕೃತಕವಾಗಿ ಪಕ್ವಗೊಳಿಸಿದ ಹಣ್ಣುಗಳಲ್ಲಿ ಈ ಗುಣ ತೀರಾ ಕಮ್ಮಿ.
ಇದು ಹಣ್ಣು ಹಂಪಲುಗಳ ವಿಚಾರ ವಾಯಿತು. ಆಹಾರದ ಪ್ರಮಾಣ ವನ್ನು ಹೆಚ್ಚಿಸಲು ಮತ್ತು ಹೆಚ್ಚು ಲಾಭದ ದುರಾಸೆಯಿಂದ ತಿನ್ನುವ ಆಹಾರಗಳಿಗೆ ಕಲಬೆರಕೆ ಯಥೇಷ್ಟ ವಾಗಿ ಮಾಡಲಾಗುತ್ತಿದೆ. ಮಣಿಪಾಲ ಕೆ.ಎಂ.ಸಿ. ವೈದ್ಯಕೀಯ ವಿಭಾಗ ಈ ದಿಶೆಯಲ್ಲಿ ಸಾಕಷ್ಟು ಪರೀಕ್ಷೆಗೆ ನಡೆಸಿದ್ದು ಮೈನವಿರೇಳಿಸುವ ವರದಿಯನ್ನು ಪ್ರಕಟಿಸಿದೆ. ಸಂಸ್ಥೆ ತಿಳಿಸುವ ಮಾಹಿತಿ ಯಂತೆ – ಅರಸಿನ, ಹೆಸರು ಇಲ್ಲವೆ ಕಡಲೆಯಂತಹ ಧಾನ್ಯಗಳ ಬೇಳೆಗಳು ಕಾಳುಗಳಿಗೆ ಮೆಥಾನಿಕ್ ಹಳದಿ ಮತ್ತು ಕೇಸರಿ ಬೇಳೆಯನ್ನು ಬೆರೆಸಿ ಹಳದಿ ಬಣ್ಣ ಹೆಚ್ಚಿಸುತ್ತಾರೆ. ಇದು ಕ್ಯಾನ್ಸರ್ ಕಾರಕವಾಗಿದ್ದು, ನಿರಂತರವಾಗಿ ಇದರ ಸೇವನೆಯಿಂದ ಹೊಟ್ಟೆಯ ಅಸ್ವಸ್ಥತೆ ಉಂಟಾಗುತ್ತದೆ. ಹಸಿ ಮೆಣಸು, ಬಟಾಣಿ ಮತ್ತು ಇತರ ತರಕಾರಿಗಳಿಗೆ ದಟ್ಟ ಹಸುರು ಬಣ್ಣದಿಂದ ಹೊಳೆಯುವಂತೆ ಮಾಡಲು ಮೆಲಚೈನ್ ಗ್ರೀನ್ ಅನ್ನುವ ರಾಸಾಯನಿಕ ಬೆರೆಸುತ್ತಾರೆ. ತೂಕ ಹೆಚ್ಚಾಗಿಸಲು ಆರ್ಜಿಮೋನ್ ಬೀಜವನ್ನು ಕಲಬೆರಕೆ ಮಾಡುತ್ತಾರೆ. ಇದು ಕ್ಯಾನ್ಸರ್ ವಾಹಕವಾಗಿದೆ. ಸಾಸಿವೆ ಬೀಜ ಮತ್ತು ಸಾಸಿವೆ ಎಣ್ಣೆಯಲ್ಲೂ ಅರ್ಜಿಮೋನ್, ಪರಂಗಿ ಹಣ್ಣಿನ ಬೀಜ ಕಲಬೆರಕೆಯಾಗುತ್ತಿದ್ದು ಇದರಿಂದ ಗುÉಕೊಮಾ ಉಂಟಾಗುತ್ತದೆ. ಎಳೆಯ ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದರಿಂದ ಹೆಚ್ಚು ತೊಂದರೆ.
ಪನೀರ್ ಕೋವಾ ಕಂಡೆನ್ಸ್$x ಹಾಲು ಮತ್ತು ಹಾಲು – ಇವುಗಳಲ್ಲಿ ಕಲಬೆರಕೆ ಯಾಗುವ ವಸ್ತು ಪಿಷ್ಟ. ಇದು ಆಹಾರ ವಸ್ತುಗಳಲ್ಲಿರುವ ಪೋಷಕಾಂಶಗಳನ್ನು ತಗ್ಗಿಸುತ್ತದೆ ಮತ್ತು ಹೊಟ್ಟೆಯ ಅಸ್ವಸ್ಥತೆ ಉಂಟು ಮಾಡುತ್ತದೆ. ಐಸ್ ಕ್ರೀಂನ ಕಲಬೆರಕೆ ವಸ್ತುಗಳು – ಪೆಪ್ಪಾರಾನಿಲ್, ಇಥೈಲ್ ಎಸಿಟೇಟ್, ಎಮಿಲ್ ಎಸಿಟೇಟ್, ನೈಟ್ರೇಟ್, ವಾಷಿಂಗ್ ಪೌಡರ್ ಇತ್ಯಾದಿ. ಪೆಪ್ಪರಾನಿಲ್ ಕೀಟನಾಶಕವಾಗಿ ಬಳಸುತ್ತಾರೆ. ಇಥೈಲ್ ಅಸಿಟೇಟ್ ಪಿತ್ತಕೋಶ, ಮೂತ್ರ ಪಿಂಡಗಳು ಮತ್ತು ಹೃದಯದ ಮೇಲೆ ಪರಿಣಾಮ ಉಂಟು ಮಾಡುತ್ತದೆೆ. ಐಸ್‌ಕ್ರೀಂ ಅನ್ನು ವಿಶೇಷವಾದ ತಂಪು ಕೋಣೆಯಲ್ಲಿ ತಯಾರಿಸುತ್ತಾರೆ. ಅಲ್ಲಿ ಕೊಬ್ಬನ್ನು ಘನೀಕರಿಸಲಾಗುತ್ತದೆ ಮತ್ತು ಅನೇಕ ಅಪಾಯಕಾರಿ ವಸ್ತುಗಳನ್ನು ಸೇರಿಸಲಾಗುತ್ತದೆ.
ಕಾಫಿ ಹುಡಿಯ ಕಲಬೆರಕೆ ಅಂದರೆ ಹುಣಸೆ ಬೀಜ, ಚಿಕೋರಿ ಪೌಡರ್. ಇದು ತೂಕ ಹೆಚ್ಚಿಸಲು ಮತ್ತು ಬಣ್ಣ ಹೆಚ್ಚಿಸಲು ಇರುವ ಉಪಾಯ. ಆದರೆ ಇದರಿಂದ ಅತಿಸಾರ, ಹೊಟ್ಟೆಯ ಅಸ್ವಸ್ಥತೆ, ತಲೆ ತಿರುಗುವುದು. ತೀವ್ರ ಸಂಧಿ ನೋವು ಉಂಟಾಗುವುದು. ಕಲಬೆರಕೆಯಲ್ಲಿ ಅಮಾನವೀಯ ಅಂದರೆ ಜೆಲ್ಲಿಗಳು ಮತ್ತು ಸಿಹಿ ತಿನಿಸುಗಳಲ್ಲಿ ವಿಷಕಾರಕ ಬಣ್ಣಗಳನ್ನು ಉಪಯೋಗಿಸುವುದು. ಮಕ್ಕಳನ್ನು ಸೆಳೆಯಲು ಬಳಸುವ ಈ ದಟ್ಟ ಬಣ್ಣಗಳಲ್ಲಿ ಸೀಸ, ತಾಮ್ರ, ಅಥವಾ ಪಾದರಸ ತುಂಬಿರುತ್ತದೆ.
ಉಪ್ಪಿನ ಕಾಯಿಗಳು ಮತ್ತು ಕ್ಯಾನ್x ತರಕಾರಿಗಳಿಗೆ ತಾಜಾತನಕ್ಕಾಗಿ ಕಾಪರ್ ಲವಣ, ಬೇಕರಿ ತಿನಸುಗಳಲ್ಲಿ ಅಪಾಯಕಾರಿ ಬಣ್ಣಗಳಾದ ಕ್ರೋಮ್ ಯೆಲ್ಲೋ, ಪ್ರುಶಿಯನ್ ಬ್ಲೂ. ಕಾಪರ್ ಮತ್ತು ಆರ್ಸೆನಿಕ್ ಸಂಯುಕ್ತಗಳು, ಕೆನೆಗೆ ಜೆಲೆಟಿನ್ ಅನ್ನು ಬೆರೆಸಿ ಸಂರಕ್ಷಿಸಿಡಲು ಫಾರ್ಮಾಲ್ಡಿಹೈಡ್ ಬೆರೆಸುತ್ತಾರೆ. ಬೆಣ್ಣೆಯಲ್ಲಿ ಆಲಿಗೋಮಾರ್ಜರಿನ್ ಸೇರಿಸುತ್ತಾರೆ.
ಇದು ಹಂದಿಯ ಕೊಬ್ಬಿನಿಂದ ಮಾಡಿದ ಉತ್ಪನ್ನ. ಮೀನು ತಾಜಾವಾಗಿ ಇರುವಂತೆ ಫಾರ್ಮಾಲಿನ್ ಬಳಕೆ ಮಾಡಲಾಗುತ್ತಿದೆ.
ಹಾಲು ಅತ್ಯಂತ ಹೆಚ್ಚು ಕಲುಷಿತವಾಗುವ ಉತ್ಪನ್ನ. ದನ ಅಥವಾ ಎಮ್ಮೆಯ ಅಗತ್ಯವೇ ಇಲ್ಲದೆ ಡಿಟರ್ಜೆಂಟ್, ಯೂರಿಯಾ, ಕಳಪೆ ಎಣ್ಣೆ ಬಳಸಿ ಹಾಲನ್ನು ಉತ್ಪಾದಿಸಿ ಮಾರುಕಟ್ಟೆಗೆ ತಲುಪಿಸಿರುವುದೂ ನಡೆದಿದೆ.
ಸಮಯ ಕಳೆದಂತೆ ಕಲಬೆರಕೆ ಮತ್ತು ಅದರ ತಂತ್ರಗಳನ್ನು ಪತ್ತೆ ಹಚ್ಚುವುದು ಕ್ಲಿಷ್ಟಕರ ಎಂದು ವೈದ್ಯರು ತಿಳಿಸುತ್ತಾರೆ. ಆಹಾರ ಉತ್ಪನ್ನ ದುಬಾರಿಯಾದಷ್ಟೂ ಮೂಲ ಉತ್ಪನ್ನಕ್ಕೆ ಕಳಪೆ ಹಾಗೂ ಅಪಾಯ ಕಾರಿ ವಸ್ತು ವಿನ ಕಲಬೆರಕೆ ಮಾಡಿ ಲಾಭ ಮಾಡುತ್ತಾರೆ. ಇದು ಗ್ರಾಹಕರ ಜೀವ ಹಿಂಡಿದರೂ ಲಾಭಕೋರನಿಗೆ ಚಿಂತೆ ಇಲ್ಲ !
ಈ ರೀತಿಯಲ್ಲಿ ಅಸುರಕ್ಷಿತವಾದ ಮಾನವ ಉಪಯೋಗಕ್ಕೆ ಹಾನಿಕಾರಕ ವಾದ ಯಾವುದೇ ಆಹಾರ ಪದಾರ್ಥಗಳನ್ನು ಶೇಖರಿಸುವುದು ಮಾರಾಟ ಮಾಡುವುದು, ವಿತರಿಸು ವುದು, ಆಮದು ಮಾಡಿಕೊಳ್ಳುವುದು ಅಪರಾಧ.
ದಂಡ ಸಹಿತ ಕಾರಾಗೃಹ ವಾಸದ ಶಿಕ್ಷೆ ಇದಕ್ಕಿದೆ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಮಾನಕಗಳ ಪ್ರಾಧಿಕಾರ ಇದನ್ನು ಸ್ಪಷ್ಟಪಡಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಇದನ್ನು ಕೂಲಂಕಶವಾಗಿ ಪರಿಶೀಲಿಸುತ್ತಿದೆ.
ದೂರು ನೀಡುವವರು www.nationalconsumerhelpline.in ಮತ್ತು www.core.nic.in ಇದರಲ್ಲಿ ಲಾಗ್ ಇನ್ ಮಾಡಲು ಭಾರತ ಸರಕಾರದ ಮಂತ್ರಾಲಯ ಸೂಚಿಸಿದೆ.
– ರಾಮದಾಸ್ ಕಾಸರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.