ಪತ್ರಿಕೋದ್ಯಮ ವೃತ್ತಿಯಲ್ಲ, ಪ್ರವೃತ್ತಿ: ಮಲಾರ್ ಜಯರಾಮ ರೈ
ಕನ್ನಡ ಪತ್ರಿಕಾ ದಿನಾಚರಣೆ
Team Udayavani, Jul 2, 2019, 5:28 AM IST
ಕಾಸರಗೋಡು: ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿಯನ್ನು ಪಡೆದು ಕೊಂಡಿರುವ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸದೆ ಪ್ರವೃತ್ತಿಯಾಗಿ ಬೆಳೆಸಿಕೊಂಡು ಸಾಧನೆಯನ್ನು ತೋರಬೇಕು ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಅವರು ಹೇಳಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕಾಸರಗೋಡು ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ ಕನ್ನಡ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸತನವನ್ನು ರೂಢಿಸಿಕೊಳ್ಳುತ್ತಾ ವಸ್ತುನಿಷ್ಠ ವರದಿಯನ್ನು ನೀಡುವ ಮೂಲಕ ಪತ್ರಿಕೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಅಪಾಯದ ಮಧ್ಯೆ ಕೆಲಸ ಮಾಡಬೇಕಾಗಿದ್ದರೂ ಯಾವುದೇ ಕಾರಣಕ್ಕೂ ಅಸತ್ಯವನ್ನು ಪ್ರತಿಪಾದಿಸಬಾರದು. ನಿರ್ಭಯತೆಯ ಮೂಲಕ ಸತ್ಯವನ್ನು ಮಾತ್ರವೇ ಪ್ರತಿಪಾದಿಸಬೇಕು. ಪತ್ರಕರ್ತರು ಪತ್ರಿಕಾರಂಗಕ್ಕೆ ಶೋಭೆ ತರುವ ಜತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಗಡಿನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಪತ್ರಿಕೆಗಳ ಜವಾಬ್ದಾರಿ ಮಹತ್ವದ್ದು. ಕನ್ನಡ ಪತ್ರಿಕೆಗಳ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಹೇಳಿದರು. ಪತ್ರಕರ್ತರು ಜೀವನಕ್ಕೆ ಅಗತ್ಯವಾದ ವರದಿಗೆ ಪ್ರಾಮುಖ್ಯವನ್ನು ನೀಡಬೇಕು. ಕಾಸರಗೋಡಿನಲ್ಲಿ ಭಾಷೆ, ಸಾಹಿತ್ಯ, ನಾಡುನುಡಿ, ಆಚಾರ ವಿಚಾರಗಳಿಗೆ ಧಕ್ಕೆ ಆಗುತ್ತಲೇ ಇದೆ. ಭಾಷೆಗೆ ಅಪಾಯವುಂಟಾದರೆ ಸಂಸ್ಕೃತಿಗೂ ಅಪಾಯ ಬರುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಭಾಷೆ, ಸಾಹಿತ್ಯ, ಸಂಸ್ಕೃತಿಯ ರಕ್ಷಣೆಗೆ ಮುಂದಾಗ ಬೇಕಾದ ಅನಿವಾರ್ಯ ಇದೆ ಎಂದು ಅಭಿಪ್ರಾಯ ಪಟ್ಟರು. ತುಳಿತಕ್ಕೊಳಗಾದವರನ್ನು ರಕ್ಷಿಸಬೇಕಾದ ಜವಾಬ್ದಾರಿ ಪತ್ರಕರ್ತನದ್ದು. ಈ ಹಿನ್ನೆಲೆಯಲ್ಲಿ ಆತನ ಜವಾಬ್ದಾರಿ ಅಧಿಕವಾಗಿದೆ. ಕಾಸರಗೋಡು ಬಹುಭಾಷಾ ಸಂಗಮ ಭೂಮಿ. ಇಂತಹ ಪ್ರದೇಶದಲ್ಲಿ ಭಾಷಾ ಪ್ರೇಮಿ ಸಾಮರಸ್ಯದಿಂದ ಸಾಗಲು ಸಾಧ್ಯವಾಗುತ್ತದೆ. ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸದೆ ಸವಾಲಾಗಿ ಸ್ವೀಕರಿಸಿದಾಗ ಮಾತ್ರವೇ ಪತ್ರಕರ್ತನಿಗೆ ಬೆಳೆಯಲು, ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಟಿ. ಶಂಕರನಾರಾಯಣ ಭಟ್, ಕಾಸರಗೋಡು ಪ್ರಸ್ ಕ್ಲಬ್ ಕಾರ್ಯದರ್ಶಿ ಒ.ವಿ. ಸುರೇಶ್ ಶುಭಹಾರೈಸಿದರು.
ಜಾಗತೀಕರಣದಿಂದ ಆಧುನಿಕ ವ್ಯವಸ್ಥೆಗಳು, ತಾಂತ್ರಿಕತೆಗಳು ಆವರಿಸಿದ್ದರೂ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಇದನ್ನು ಉಳಿಸಿ ಕೊಳ್ಳಬೇಕಾದರೆ ಪತ್ರಿಕೆ ಹೊಸತನ್ನು ಅಳವಡಿಸಿ ಕೊಳ್ಳಬೇಕು ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ| ರತ್ನಾಕರ ಮಲ್ಲಮೂಲೆ ಅವರು ಹೇಳಿದರು.
ಅವರು ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಪತ್ರಿಕೆ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಪತ್ರಿಕೆಗಳು ಮೂಲ ಪ್ರೇರಣೆಯಾಗಿದ್ದವು. ಪತ್ರಿಕೆ ಸೃಜನಶೀಲತೆಯನ್ನು ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಓದುಗರ ಸಂಖ್ಯೆ ಕಡಿಮೆಯಾದರೆ ಪತ್ರಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದರು. ಪತ್ರಿಕೆಯ ಮೂಲಕ ಓದು, ಬರಹ ಆರಂಭವಾಗಬೇಕು. ಈ ಮೂಲಕ ಓದುಗರಲ್ಲಿ ಜಾಗೃತಿ ಮೂಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾಸರಗೋಡು ವಾರ್ತಾ ವಿನಿಮಯ ಕಚೇರಿಯ ಕನ್ನಡ ವಿಭಾಗದ ಸಂಪಾದಕ ವಿ.ಜಿ. ಕಾಸರಗೋಡು ಅವರು ಕನ್ನಡ ಪತ್ರಿಕೆಯ ಸವಾಲುಗಳ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹಿರಿಯ ಪತ್ರಕರ್ತ ನರಸಿಂಗ ರಾವ್ ಅವರು ಕಾಸರಗೋಡಿನ ಹಿರಿಯ ಪತ್ರಕರ್ತರನ್ನು ನೆನಪಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಹಿರಿಯ ಪತ್ರಕರ್ತ ಜಯರಾಮ ರೈ ಅವರು ವಿತರಿಸಿದರು.
ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ ಯಾದವ್ ಸ್ವಾಗತಿಸಿದರು. ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ವಂದಿಸಿದರು. ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಹಿಂದಿನಿಂದಲೂ ಕನ್ನಡ ಪತ್ರಕರ್ತರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಪರಂಪರೆ ಇಂದೂ ಮುಂದುವರಿಯುತ್ತಿರುವುದು ಸಂತೋಷದ ವಿಚಾರ. ಪತ್ರಿಕಾರಂಗದಲ್ಲಿ ಸಾಧನೆ ಮಾಡಬೇಕಾದರೆ ಸಾಕಷ್ಟು ದುಡಿಯಬೇಕಾಗುತ್ತದೆ. ಇಂದು ಕ್ಷಣ ಮಾತ್ರದಲ್ಲಿ ಘಟನೆಗಳು ವಿಶ್ವಾದ್ಯಂತ ವ್ಯಾಪಿಸುತ್ತವೆೆ. ಈ ಕಾರಣದಿಂದ ಪತ್ರಕರ್ತರು ಹೊಸತನ್ನು ಕಂಡುಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಜಯರಾಮ ರೈ ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.