Kasaragod ಅಪರಾಧ ಸುದ್ದಿಗಳು: ಯುವತಿಗೆ ಕಿರುಕುಳ : ಆರೋಪಿಗೆ ನ್ಯಾಯಾಂಗ ಬಂಧನ
Team Udayavani, May 3, 2023, 6:05 AM IST
ರಿಯಾಸ್ ಮೌಲವಿ ಕೊಲೆ ಪ್ರಕರಣ: ಸ್ಪೆಷಲ್ ಪ್ರಾಸಿಕ್ಯೂಟರ್ ಫ್ಲಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮೂಲತಃ ಮಡಿಕೇರಿ ನಿವಾಸಿ ಹಾಗೂ ನಗರದ ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ ರಿಯಾಸ್ ಮೌಲವಿ (28) ಅವರನ್ನು 2017 ಮಾರ್ಚ್ 21ರಂದು ರಾತ್ರಿ ಹಳೆ ಸೂರ್ಲಿನಲ್ಲಿರುವ ಅವರ ವಾಸ ಸ್ಥಳದಲ್ಲಿ ಇರಿದು ಕೊಲೆಗೈದ ಪ್ರಕರಣದಲ್ಲಿ ಸರಕಾರ ಪರ ವಾದಿಸುತ್ತಿರುವ ಸ್ಪೆಷಲ್ ಪ್ರಾಸಿಕ್ಯೂಟರ್, ಕಲ್ಲಿಕೋಟೆ ಐಎಂಎ ಹಾಲ್ ರಸ್ತೆ ನಡಕ್ಕಾವು ನಿವಾಸಿ ನ್ಯಾಯವಾದಿ ಎಂ.ಅಶೋಕನ್ (60) ಅವರು ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇವರು ಕೇಸೊಂದಕ್ಕೆ ಸಂಬಂಧಿಸಿ ವಾದಿಸಲು ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿ ಬರುವ ಸಂದರ್ಭದಲ್ಲಿ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ತಂಗಿದ್ದರು. ಅಲ್ಲಿ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಹೃದಯಾಘಾತ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕೋಳಿ ಅಂಕ : ಮೂವರ ಬಂಧನ
ಉಪ್ಪಳ: ಮೀಂಜ ಬಳಿಯ ಬೆಜ್ಜದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ 13 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರಲ್ಲಿ ಮೂವರನ್ನು ಬಂಧಿಸಿದ್ದಾರೆ. ಹತ್ತು ಮಂದಿ ಪರಾರಿಯಾಗಿದ್ದಾರೆ. ಐದು ಕೋಳಿ, ಮೂರು ಬಾಳು ಹಾಗೂ 6,570 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಕನಿಯಾಲ ನಿವಾಸಿ ನಾರಾಯಣ (55), ಕೂಳೂರಿನ ಮುರಳೀಧರ(45), ಕುಂಬಳೆ ಕೋಟೆಕಾರಿನ ಕೊರಗಪ್ಪ (51) ನನ್ನು ಬಂಧಿಸಲಾಗಿದೆ.
ಬಿಎಸ್‌ಎನ್‌ಎಲ್‌ನ
ಬ್ಯಾಟರಿ ಕಳವು
ಕಾಸರಗೋಡು: ಕರಂದಕ್ಕಾಡ್‌ನ ಬಿಎಸ್‌ಎನ್‌ಎಲ್ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಗುಜರಿಗೆ ನೀಡಲೆಂದು ದಾಸ್ತಾನು ಇರಿಸಲಾಗಿದ್ದ ಸುಮಾರು 24ರಷ್ಟು ಬಿಎಸ್‌ಎನ್‌ಎಲ್‌ನ ಹಳೆ ಬ್ಯಾಟರಿ ಕಳವು ಮಾಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಇದಕ್ಕೆ ಸುಮಾರು ಒಂದು ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ.
ತುಂತುರು ಮಳೆ : ರಾ.ಹೆದ್ದಾರಿಯಲ್ಲಿ ಮಗುಚಿ ಬಿದ್ದ ವಾಹನಗಳು
ಉಪ್ಪಳ: ಉಪ್ಪಳ, ಕೈಕಂಬದಲ್ಲಿ ಮಂಗಳವಾರ ಬೆಳಗ್ಗೆ ತುಂತುರು ಮಳೆ ಸುರಿದಿದ್ದು, ಇದು ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನಗಳು ನಿಯಂತ್ರಣ ತಪ್ಪಲು ಕಾರಣವಾಯಿತು. ಬೆಳಗ್ಗೆ ಸುಮಾರು 7 ಗಂಟೆಗೆ ತುಂತುರು ಮಳೆ ಸುರಿದಿದೆ.
ಇದೇ ಹೊತ್ತಿನಲ್ಲಿ ಮೂರು ವಾಹನಗಳು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿವೆ. ಚಾಲಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಕಾಸರಗೋಡಿನಿಂದ ತಲಪಾಡಿ ಭಾಗಕ್ಕೆ ತೆರಳುತ್ತಿದ್ದ ಪಿಕಪ್ ಕೈಕಂಬದಲ್ಲಿ ನಿಯಂತ್ರಣ ತಪ್ಪಿ ಮಗುಚಿದೆ. ಉಪ್ಪಳದಲ್ಲಿ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಮೀನು ಸಾಗಿಸುತ್ತಿದ್ದ ಟೆಂಪೋ ಹಾಗೂ ಒಂದು ಬೈಕ್ ಮಗುಚಿ ಬಿದ್ದಿದೆ.
ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ
ಮಂಜೇಶ್ವರ: ಪಂಚಾಯತ್‌ನ 5ನೇ ವಾರ್ಡ್ ವ್ಯಾಪ್ತಿಯ ಗೇರುಕಟ್ಟೆಯಲ್ಲಿ ಹಸುರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸಿಟ್ಟಿದ್ದ ತ್ಯಾಜ್ಯಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಂಟೆಗಳ ಕಾಲ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಿಂದ ನಂದಿಸಲಾಗಿದೆ. ಸಂಗ್ರಹಿಸಿಟ್ಟಿದ್ದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ಗಳೇ ಅಧಿಕವಿದ್ದು, ಇದಕ್ಕೆ ಬೆಂಕಿ ಹಚ್ಚಲಾಗಿದೆ. ಇದರಿಂದ ಪರಿಸರದಲ್ಲಿ ದುರ್ವಾಸನೆಗೆ ಕಾರಣವಾಗಿದೆ.
10 ಲೋಡ್ ಮರಳು ಸಹಿತ ಟಿಪ್ಪರ್ ಲಾರಿ, ಜೆಸಿಬಿ ವಶಕ್ಕೆ
ಮಂಜೇಶ್ವರ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ಹೊಳೆಯ ಕೊಡಂಗೆಯಿಂದ ಅನಧಿಕೃತವಾಗಿ ಪರಿಸರದ ಖಾಸಗಿ ಹಿತ್ತಲಿನಲ್ಲಿ ಸಂಗ್ರಹಿಸಿಡಲಾದ 10 ಲೋಡ್ ಮರಳು ಹಾಗು ಎರಡು ಟಿಪ್ಪರ್ ಲಾರಿ, ಒಂದು ಜೆಸಿಬಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನೀರ್ಚಾಲು ನಿವಾಸಿ ಸುನಿಲ್ (26), ಬಿಹಾರ ನಿವಾಸಿ ಅರ್ಬಿಂದ್ (34), ಕಾಸರಗೋಡು ಪಾಡಿ ನಿವಾಸಿ ಮೊಹಮ್ಮದ್ ಅಶ್ರಫ್ (47) ಸಹಿತ 7 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಅನುಚಿತ ವರ್ತನೆ : ನಿವೃತ್ತ ಡಿವೈಎಸ್‌ಪಿ ವಿರುದ್ಧ ಕೇಸು
ಕಾಸರಗೋಡು: ಆಲ್ಬಂನಲ್ಲಿ ಅಭಿನಯಿಸಲೆಂದು ಬಂದ ಯುವತಿಯೊಬ್ಬಳೊಂದಿಗೆ ಅನುಚಿತವಾಗಿ ಸಂಭಾಷಣೆ ನಡೆಸಿದ ದೂರಿನಂತೆ ನಿವೃತ್ತ ಡಿವೈಎಸ್‌ಪಿ ಹಾಗೂ ಸಿನೆಮಾ ನಟರೂ ಆಗಿರುವ ವಿ.ಮಧುಸೂದನ್ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೊಲ್ಲಂ ನಿವಾಸಿಯಾದ ಯುವತಿಯೊಬ್ಬಳೊಂದಿಗೆ ಪೆರಿಯಡ್ಕದಲ್ಲಿ ಅನುಚಿತವಾಗಿ ಸಂಭಾಷಣೆ ನಡೆಸಿದ್ದಾಗಿ ದೂರು ನೀಡಲಾಗಿತ್ತು.
ಗಾಂಜಾ ಬೀಡಿ ಸೇವನೆ : ಇಬ್ಬರ ಬಂಧನ
ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಚೌಕಿ ಅಜಾದ್‌ನಗರದ ಶಿಹಾಬುದ್ದೀನ್ (26) ಮತ್ತು ಬಂದ್ಯೋಡ್ ಅಡ್ಕದ ಮುಜೀಬ್ ರಹಮಾನ್ (27)ನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ಕಿರುಕುಳ : ಆರೋಪಿಗೆ ನ್ಯಾಯಾಂಗ ಬಂಧನ
ಕಾಸರಗೋಡು: ಮದುವೆಯಾಗುವುದಾಗಿ ನಂಬಿಸಿ 19ರ ಹರೆಯದ ಯುವತಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾದ ಖಾಸಗಿ ಬಸ್‌ನ ಚಾಲಕ ರಾಜಪುರಂ ಕೋಳಿಚ್ಚಾಲ್ 18ನೇ ಮೈಲು ನಿವಾಸಿ ರೆನಿಲ್ ವರ್ಗೀಸ್ (39)ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.