Crime news: ಕಾಸರಗೋಡು ಅಪರಾಧ ಸುದ್ಧಿಗಳು
Team Udayavani, Aug 13, 2024, 6:41 PM IST
ವ್ಯಕ್ತಿಯನ್ನು ತಡೆದು ನಿಲ್ಲಿಸಿ 10 ಸಾವಿರ ರೂ. ಅಪಹರಣ : ಇಬ್ಬರ ಬಂಧನ
ಉಪ್ಪಳ: ಗೆರಟೆ ಕಂಪೆನಿಯ ಮಾಲಕನನ್ನು ಬೆಜ್ಜಂಗಳದಲ್ಲಿ ತಡೆದು ನಿಲ್ಲಿಸಿ 10 ಸಾವಿರ ರೂ. ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೊರತ್ತಣೆ ನಿವಾಸಿ ಮೊಹಮ್ಮದ್ ಸಾಲಿ(30) ಮತ್ತು ವರ್ಕಾಡಿ ಪುರುಷಂಗೋಡಿ ನಿವಾಸಿ ಮೊಹಮ್ಮದ್ ರಾಸಿಕ್(24)ನನ್ನು ಕೆದುಂಬಾಡಿಯಿಂದ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಢಿಕ್ಕಿ : ಬೈಕ್ ಸವಾರನ ಸಾವು
ಕಾಸರಗೋಡು: ಬೇಕಲ ಪಳ್ಳಿಕೆರೆಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದು ಬೈಕ್ ಸವಾರ ನೀಲೇಶ್ವರ ಚಿರಪ್ಪುರದ ಅಖೀಲ್‌ದೇವ್(24) ಸಾವಿಗೀಡಾದ ಘಟನೆ ನಡೆದಿದೆ.
ಇವರ ಸ್ನೇಹಿತ ಪೇರೋಲ್ ಪಳನೆಲ್ಲಿ ನಿವಾಸಿ ಮಿಥುನ್(24) ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ.12 ರಂದು ರಾತ್ರಿ 9 ಗಂಟೆಗೆ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಅಖೀಲ್ ದೇವ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ಧಂತೆ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ. 10 ದಿನಗಳ ಹಿಂದೆಯಷ್ಟೇ ಅಖೀಲ್ ಕೊಲ್ಲಿಯಿಂದ ಊರಿಗೆ ಬಂದಿದ್ದರು.
ಮಿಕ್ಸಿಯಿಂದ ಬೆಂಕಿ : ತಪ್ಪಿದ ದುರಂತ
ಉಪ್ಪಳ: ಉಪ್ಪಳ ಪತ್ವಾಡಿ ರಸ್ತೆಯ ಅಲ್ಫಾ ವಿಲೇಜ್ ಫ್ಲಾಟ್‌ನಲ್ಲಿ ಪರ್ಸಾನ ಅವರು ವಾಸಿಸುವ ಮನೆಯಲ್ಲಿ ಮಿಕ್ಸಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿ ಅಪಾಯ ತಪ್ಪಿಸಿದೆ.
ಮಿಕ್ಸಿ ಚಾಲು ಮಾಡಿ ಪರ್ಸಾನ ಹೊರಗೆ ಹೋಗಿದ್ದರು. ಕೆಲವು ಹೊತ್ತಿನಲ್ಲಿ ಬಂದಾಗ ಮಿಕ್ಸಿ ಬೆಂಕಿಗಾಹುತಿಯಾಗಿತ್ತು. ಕೊಠಡಿಯಲ್ಲಿ ಹೊಗೆ ತುಂಬಿಕೊಂಡಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು. ಅದೇ ಕೊಠಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಇದ್ದು, ಕೂಡಲೇ ಅದನ್ನು ಅಲ್ಲಿಂದ ತೆರವುಗೊಳಿಸಿದುದರಿಂದ ಸಂಭವನೀಯ ಅಪಾಯ ತಪ್ಪಿತು.
ಮಹಿಳೆಗೆ ಹುಚ್ಚು ನರಿ ಕಡಿತ
ಕಾಸರಗೋಡು: ಮನೆ ಹೊರಗೆ ನಿಂತಿದ್ದ ಪಳಯಂಗಾಡಿ ಆಡುತ್ತಿಲಾಯಿ ನಿವಾಸಿ ಕೆ.ವಿ.ರಾಧಾ(62) ಅವರಿಗೆ ಹುಚ್ಚು ನರಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಅವರನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂದಕಕ್ಕೆ ಬಿದ್ದು ಸ್ಕೂಟರ್ ಸವಾರ ಸಾವು
ಕಾಸರಗೋಡು: ನಿಯಂತ್ರಣ ಕಳೆದುಕೊಂಡ ಸ್ಕೂಟರ್ ರಸ್ತೆ ಬದಿಯ ಕಂದಕಕ್ಕೆ ಬಿದ್ದು ದೇಳಿ ಜಂಕ್ಷನ್ ಅರಮಂಗಾನಂ ರಸ್ತೆಯ ಅಬ್ದುಲ್ ರಸಾಕ್ ಅವರ ಪುತ್ರ ಅಹಮ್ಮದ್ ರಂಸಾನ್(19) ಸಾವಿಗೀಡಾದರು.
ದೇಳಿ ಜಂಕ್ಷನ್‌ನ ಕೋಳಿಯಡ್ಕ ರಸ್ತೆ ಬದಿಯ ಕಂದಕಕ್ಕೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.