Kasaragod ಕಳಮಶ್ಶೇರಿ ಸರಣಿ ಸ್ಫೋಟ : ಎನ್‌ಐಎಯಿಂದ ತನಿಖೆ ಆರಂಭ
Team Udayavani, Oct 31, 2023, 12:42 AM IST
ಕಾಸರಗೋಡು: ಕಳಮಶ್ಶೇರಿಯ ಕನ್ವೆನ್ಶನ್ ಹಾಲ್‌ನಲ್ಲಿ ಅ. 29ರಂದು ಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟವು ಭಯೋತ್ಪಾದಕ ಕೃತ್ಯವಾಗಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ಕೈಗೆತ್ತಿಕೊಂಡಿದೆ.
ಕ್ರೈಸ್ತ ಉಪಪಂಗಡದವರೆಂದೇ ಗುರುತಿಸಿ ಕೊಂಡಿದ್ದ ಯಹೋವನ ಸಮುದಾಯದವರ ಮೂರು ದಿನಗಳ ಧಾರ್ಮಿಕ ವಿಚಾರ ಸಂಕಿರಣದ ಸಂದರ್ಭ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಮೂವರು ಸಾವಿಗೀಡಾಗಿ 52 ಮಂದಿ ಗಾಯಗೊಂಡಿದ್ದರು. ಅವರಲ್ಲಿ 18 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಸರಣಿ ಬಾಂಬ್ ಸ್ಫೋಟಿಸಿದವನು ನಾನೇ ಎಂದು ಸ್ವಯಂ ಘೋಷಿಸಿಕೊಂಡು ಚೆಲವನ್ನೂರು ವೇಲಿಕಗತ್ತ್ ವೀಟಿಲ್‌ನ ಮಾರ್ಟಿನ್ ಡೊಮಿನಿಕ್ (52) ಪೊಲೀಸರ ಮುಂದೆ ಶರಣಾಗಿದ್ದಾನೆ.
ಈ ಸ್ಫೋಟದ ಹಿಂದೆ ಯಾವುದಾದರೂ ವಿದೇಶಿ ನಂಟು ಇದೆಯೇ ಎಂಬ ಬಗ್ಗೆಯೂ ಎನ್‌ಐಎ ತನಿಖೆ ನಡೆಸುತ್ತಿದೆ. ಪೊಲೀಸರಿಗೆ ಶರಣಾಗುವ ಮುನ್ನ ಮಾರ್ಟಿನ್ ತನ್ನ ಫೇಸ್‌ಬುಕ್‌ನಲ್ಲೂ ತಾನೇ ಸ್ಫೋಟಿಸಿದ್ದು ಎಂದು ಹೇಳಿಕೊಂಡಿದ್ದ. ಸ್ಫೋಟಕ್ಕೆ ಬಳಸಲಾಗಿದ್ದ ನೀಲಿ ಬಣ್ಣದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರು ಮಹಿಳೆಯೋರ್ವರ ಹೆಸರಿನಲ್ಲಿದೆ.
ಮಾರ್ಟಿನ್ ಹೇಳಿಕೆ
ಕಳೆದ 16 ವರ್ಷಗಳಿಂದ ನಾನು ಯಹೋವನ ಸಂಘಟನೆಯ ಸದಸ್ಯನಾಗಿದ್ದೆ. ಆದರೆ 6 ವರ್ಷಗಳಿಂದ ಆ ಸಂಘಟನೆಯನ್ನು ತೊರೆದಿದ್ದೇನೆ. ಈ ಸಂಘಟನೆಯ ಚಿಂತನೆಗಳು ಈಗ ಬದಲಾಗಿದ್ದು, ರಾಷ್ಟ್ರಗೀತೆ ಹಾಡಬಾರದು, ಭಾರತೀಯ ಸೇನೆಯಲ್ಲಿ ಸೇರಬಾರದು ಇತ್ಯಾದಿ ಬೋಧನೆಯನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಇದರಿಂದ ನಾನು ಕುಪಿತನಾಗಿದ್ದೆ. ಬಾಂಬ್ ಸ್ಫೋಟಕ್ಕೆ ಇದುವೇ ಕಾರಣ ಎಂದಿದ್ದಾನೆ.
ಗುಪ್ತಚರ ಸೂಚನೆ
ಕೇರಳದ ಇಗರ್ಜಿಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಸಾಧ್ಯತೆಯಿದೆಯೆಂದು ಕೇಂದ್ರ ಗುಪ್ತಚರ ವಿಭಾಗ ಕೇರಳಕ್ಕೆ ತಿಂಗಳುಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿತ್ತು. ಶ್ರೀಲಂಕಾದ ಇಗರ್ಜಿಯಲ್ಲಿ 4 ವರ್ಷಗಳ ಹಿಂದೆ ನಡೆದ ಸರಣಿ ಬಾಂಬ್ ಸ್ಫೋಟ ಮಾದರಿಯಲ್ಲೇ ಕೇರಳದಲ್ಲೂ ಸ್ಫೋಟ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.