ಗದ್ದಿಕ ಮಹೋತ್ಸವ-2018: ಪರಂಪರಾಗತ ವನಭೋಜನ ಸವಿ ಸಿದ್ಧ
Team Udayavani, Dec 25, 2018, 3:41 PM IST
ಕಾಸರಗೋಡು : ಕಾಡಿನೊಳಗೂ ಹಸಿವರಳಿಸುವ ರುಚಿಕರ ಭಂಡಾಗಾರ ಅಡಗಿಕೊಂಡಿದೆ. ಆರೋಗ್ಯಕರ ಆಹಾರ ಪ್ರಿಯರಿಗಾಗಿಯೇ ಮಿತದರದಲ್ಲಿ ಅವನ್ನು ಸವಿಯಲು ವೇದಿಕೆಯೊಂದು ಸಿದ್ಧವಾಗಿದೆ. ಕುಟುಂಬ ಸಮೇತರಾಗಿ ಇವನ್ನು ಸೇವಿಸುವ ಮನಸ್ಸಿದೆಯೇ….ಬನ್ನಿ ಗದ್ದಿಕ ಮಹೋತ್ಸವಕ್ಕೆ…
ಕಾಲಿಕಡವು ಮೈದಾನದಲ್ಲಿ ನಡೆಯುತ್ತಿರುವ ಗದ್ದಿಕ – 2018 ಸಾಂಸ್ಕೃತಿಕೋತ್ಸವಕ್ಕೆ ಹೆಚ್ಚುವರಿ ಆಕರ್ಷಿಸುವ ನಿಟ್ಟಿನಲ್ಲಿ ಇಲ್ಲಿನ ಪರಂಪರಾಗತ ವಿಶಿಷ್ಟ ವಿಶೇಷ ಆಹಾರ ಮಳಿಗೆ ಜನತೆಯನ್ನು ತನ್ನತ್ತ ಸೆಳೆಯುತ್ತಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ನಾವು ಕೇಳಿಯೂ ಅರಿಯದ ಪೌಷ್ಠಿಕ ಆಹಾರ ವೈವಿಧ್ಯವನ್ನು ಉಣಮಡಿಸುವ ವಿಶಾಲ ಸ್ಟಾಲೊಂದು ಇಲ್ಲಿ ತೆರೆದುಕೊಂಡಿದೆ. ಪೂರ್ಣ ಅರಣ್ಯಜನ್ಯವಾದ ಸಾಮಾಗ್ರಿಗಳಿಂದ ತಯಾರಿಸಿದ ಖಾದ್ಯಗಳು, ಪೇಯಗಳು ಇಲ್ಲಿ ಲಭ್ಯವಿದೆ. ಜೊತೆಗೆ ಜನಪ್ರಿಯ ಖಾದ್ಯಗಳೂ ಕೊಂಚ ವಿಭಿನ್ನ ಶೈಲಿಯಲ್ಲಿ ತಯಾರಿಸಿ ಬಡಿಸಲಾಗುತ್ತಿದೆ.
ಬೇಡಿಕೆಯ ಖಾದ್ಯಗಳು: ಪರಿಶಿಷ್ಟರಲ್ಲಿ ಸೇರಿದ ಕುರುಮ ಜನಾಂಗದವರ ವಿಶೇಷ ಖಾದ್ಯ ಕಲ್ಲಿಪುಟ್ಸ್ ಇಲ್ಲಿ ಬಲು ಬೇಡಿಕೆಯ ತಿನಿಸಾಗಿದೆ. ಗಂಧಸಾಲೆ ಅಕ್ಕಿ ಅರೆದು, ನಂತರ ಅರಣ್ಯದಲ್ಲಿ ಲಭಿಸುವ ವಿಶೇಷ ಸಾಮಾಗ್ರಿಗಳನ್ನು ಮೆರೆಸಿ ಸಿದ್ಧಗೊಳಿಸುವ ಖಾದ್ಯವಿದು. ಬಿದಿರಕ್ಕಿ ಪಾಯಸ, ಸುವರ್ಣಗೆಡ್ಡೆ ಪಾಯಸ ಇತ್ಯಾದಿಗಳು ಮೇಳದ ಸವಿ ಹೆಚ್ಚಿಸುತ್ತಿವೆ. ತುಳುನಾಡಿನ ಜನಪ್ರಿಯ ಕಜ್ಜಾಯವನ್ನು ಹೋಲುವ ಕಾರಿಕುಂಡ್ ಅಪ್ಪಂ, ರಾಗಿ ಬಾಳೆಹಣ್ಣಿನ ಪೋಡಿ, ರಾಗಿ ವಡೆ, ರಾಗಿ ರೊಟ್ಟಿ ಇತಾದಿಗಳೂ ಇಲ್ಲಿ ಆಕರ್ಷಕವಾಗಿವೆ.
ಸುಮಾರು ಇಪ್ಪತ್ತು ಬಗೆ ಔಷಧ ಸತ್ವಗಳನ್ನು ಬೆರೆಸಿ ತಯಾರಿಸಿದ ಬಿಸಿ ಬಿಸಿ ಔಷಧ ಕಾಫಿಗೆ ಇಲ್ಲಿ ಬೇಡಿಕೆ.. ಕೆಮ್ಮು, ಕಫದ ಉಪಟಳ, ಉಸಿರಾಟದ ಸಮಸ್ಯೆ ಇದ್ದವರಿಗೆ ಇದು ರಾಮಬಾಣ ಎಂದು ಸ್ಟಾಲ್ ಪ್ರತಿನಿಧಿಗಳು ಹೇಳುತ್ತಾರೆ. ತಿನಿಸು ತಿನ್ನುವುದು ಒಂದು ಅನುಭವವಾದರೆ, ಇವುಗಳನ್ನು ಒಮ್ಮೆ ನೋಡುವುದೂ ಅನುಭವ. ಈ ಬಗ್ಗೆ ಸಂಗ್ರಹಿಸುವ ಮಾಹಿತಿಯೇ ಅದ್ಭುತ ತಿಳಿವಳಿಕೆ. ಇದಕ್ಕೆ ವೇದಿಕೆಒದಗಿಸಿರುವುದು ಗದ್ದಿಕ ಮೇಳ. ಅಪರಾಹ್ನ 3 ರಿಂದ ರಾತ್ರಿ 9 ಗಂಟೆಯವರೆಗೆ ತೆರೆದುಕೊಂಡಿರುವ ಈ ಮೇಳಕ್ಕೆ ಕುಟುಂಬ ಸಮೇತ ಕುಳಿತು ಉಣ್ಣಬಹುದಾದ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಪಲ್ಯವೂ ಉಂಟು
ಅರಣ್ಯದಲ್ಲಿ ಸಿಗುವ ಕಾರಪ್ಪ್ ಎನ್ನುವ ಮರದ ಎಲೆಯೊಂದಿಗೆ ಸಿಗಡಿ ಮೀನು ಸೇರಿಸಿ ಕಲ್ಲಿನಲ್ಲಿ ಅರೆದು ತಯಾರಿಸುವ ಕಾರಪ್ಪ್ ತೋರನ್(ಪಲ್ಯ) ಜನಜನಿತವಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಅಡಗಿಕೊಂಡಿವೆ ಎನ್ನುತ್ತಾರು ಇಲ್ಲಿನ ಪರಿಣತರು.
ಇಲ್ಲಿದೆ ದೊಡ್ಡ ಜಾತಿಯ ಇರುವೆ ಚಣ್ಣಿ
ಮಾಂಸಾಹಾರಿ ವಿಭಾಗದ ಜನತೆಗೆ ವಿಶೇಷ ಆಕರ್ಷಣೆ ನೀಡುವ ಇರುವೆಯಿಂದ ತಯಾರಿಸಿದ ಚಣ್ಣಿ ಈ ಮೇಳದಲ್ಲಿ ಬಹುಬೇಡಿಕೆಯನ್ನು ಹೊಂದಿದೆ. ಇದು ಪರಿಶಿಷ್ಟ ಜನಾಂಗದಲ್ಲಿ ಸೇರಿರುವ ಮಾವಿಲರ ವಿಶೇಷ ಆಹಾರ ಪದಾರ್ಥವಾಗಿದ್ದು ಪ್ರಕೃತಿದತ್ತ ಔಷಧವೂ ಆಗಿದೆ ಎಂದು ಮಳಿಗೆಯ ಪ್ರತಿನಿಧಿಗಳು ತಿಳಿಸುತ್ತಾರೆ. ಕಾಡಿನಿಂದ ಸಂಗ್ರಹಿಸುವ ದೊಡ್ಡ ಜಾತಿಯ ಕೆಂಪು ಇರುವೆಗಳನ್ನು ಸಂಗ್ರಹಿಸಿ, ತೊಳೆದು ಶುಚಿಗೊಳಿಸಿ, ಹಳೆ ಕ್ರಮದ ಅರೆಯುವ ಕಲ್ಲಿನಲ್ಲಿ ಅರೆಯಲಾಗುತ್ತದೆ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರ ಬೆರೆಸಿ ಮತ್ತು ಅರೆದು ಚಣ್ಣಿ ತಯಾರಿಸಲಾಗುತ್ತದೆ. ಬೇಯಿಸಿದ ಯಾ ಸುಟ್ಟ ಗೆಣಸು, ಮರಗೆಣಸುಗಳೊಂದಿಗೆ ಯಾ ಇನ್ನಿತರ ತಿನಿಸುಗಳೊಂದಿಗೆ ಇದನ್ನು ಉಣಬಡಿಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.