ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, May 1, 2019, 6:17 AM IST
ಅಪಹರಿಸಿ ಕೊಲೆ ಯತ್ನ: ಕೊಲ್ಲಿಗೆ ಪರಾರಿಯಾಗಿದ್ದ ಆರೋಪಿ ಬಂಧನ
ಬದಿಯಡ್ಕ: ಗಾಂಜಾ ಸಾಗಿಸುತ್ತಿದ್ದ ಮಾಹಿತಿಯನ್ನು ಪೊಲೀಸರಿಗೆ ನೀಡಿರುವುದಾಗಿ ಶಂಕಿಸಿ ಯುವಕನನ್ನು ಅಪಹರಿಸಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಮಧೂರು ಬಳಿಯ ಉಳಿಯತ್ತಡ್ಕದ ಅಬ್ದುಲ್ ಸಮದಾನಿ ಯಾನೆ ಕೋಬ್ರಾ ಸಮದಾನಿ (34)ಯನ್ನು ಬಂಧಿಸಲಾಗಿದೆ. ಕೊಲ್ಲಿಯಿಂದ ಮರಳಿದ ಈತ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಿದ ಮಾಹಿತಿ ತಿಳಿದು ಪೊಲೀಸರು ಅಲ್ಲಿಗೆ ತಲುಪಿ ಆತನನ್ನು ಬಂಧಿಸಿದರು. 2018ರ ಅಕ್ಟೋಬರ್ 8ರಂದು ನೆಲ್ಲಿಕಟ್ಟೆಯ ನೌಶಾದ್ ಅವರನ್ನು ಕಾರಿನಲ್ಲಿ ಅಪಹರಿಸಿ ಕೊಲೆಗೈಯ್ಯಲು ಯತ್ನಿಸಿದ್ದಾಗಿ ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿದ್ದರು.
ಐದು ಲಕ್ಷ ರೂ. ಮೌಲ್ಯದ ಗಾಂಜಾವನ್ನು ಆಂಧ್ರ ಪ್ರದೇಶದಿಂದ ಸಾಗಿಸುತ್ತಿದ್ದಾಗ ಅಲ್ಲಿನ ಪೊಲೀಸರು ತಂಡವನ್ನು ಬಂಧಿಸಿದ್ದರು. ಗಾಂಜಾ ಸಾಗಾಟ ಬಗ್ಗೆ ಪೊಲೀಸರಿಗೆ ನೌಶಾದ್ ಮಾಹಿತಿ ನೀಡಿದ್ದ ಎಂದು ಶಂಕಿಸಿ ಕಾರಿನಲ್ಲಿ ಅಪಹರಿಸಿ ಮಧೂರು ಬಳಿಯ ಪರಕ್ಕಿಲದಲ್ಲಿ ಜನವಾಸವಿಲ್ಲದ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನೆಲ್ಲಿಕಟ್ಟೆಯ ಸಫಾನ್‌ನನ್ನು ಈ ಹಿಂದೆ ಬಂಧಿಸಲಾಗಿತ್ತು. ಎರಡನೇ ಆರೋಪಿ ಬದ್ರು ತಲೆಮರೆಸಿಕೊಂಡಿದ್ದಾನೆ.
ಹೊಟೇಲ್‌ನಿಂದ ಕಳವು
ಉಪ್ಪಳ: ಉಪ್ಪಳ ಪೇಟೆಯಲ್ಲಿ ಕಾರ್ಯಾಚರಿಸುವ ಹೊಟೇಲ್ ಪ್ರೊಮಿಸ್‌ನಿಂದ 12,500 ರೂ. ಕಳವು ಮಾಡಿದ ಘಟನೆ ನಡೆದಿದೆ. ಹೊಟೇಲ್‌ನ ಹಿಂಬದಿಯ ಅಡುಗೆ ಕೋಣೆಯ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿ ಮೇಜಿನ ಡ್ರಾವರ್‌ನಲ್ಲಿದ್ದ ಹಣ ಮತ್ತು ಹರಕೆ ಡಬ್ಬಿಯಿಂದ ಕಳವು ಮಾಡಿದ್ದಾಗಿ ಹೊಟೇಲ್ ಮಾಲಕ ಆಯೂಬ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಲೆ ಯತ್ನ ಪ್ರಕರಣ :
ಆರೋಪಿಗಳು ಪೊಲೀಸ್ ಕಸ್ಟಡಿಗೆ
ಉಪ್ಪಳ: ಮಣಿಮುಂಡ ಬೀಚ್‌ನಲ್ಲಿ ಸಂಭವಿಸಿದ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಉಪ್ಪಳ ಶಾರದಾ ನಗರದ ನಿವಾಸಿ ಕಿರಣ್ (30) ಮತ್ತು ಪ್ರವೀಣ್ (31)ನನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಮೂರು ದಿನಕ್ಕೆ ಪೊಲೀಸರ ಕಸ್ಟಡಿಗೆ ನೀಡಿದೆ. ಮಣಿಮುಂಡ ನಿವಾಸಿ ನಾರಾಯಣ ಅವರ ಪುತ್ರ ಸುರೇಶ್ (41) ನೀಡಿದ ದೂರಿನಂತೆ ಇವರಿಬ್ಬರ ವಿರುದ್ಧ ಹತ್ಯೆ ಯತ್ನ ಕೇಸು ದಾಖಲಿಸಲಾಗಿತ್ತು.
ವಾರಂಟ್ ಆರೋಪಿ ಬಂಧನ
ಕಾಸರಗೋಡು: ವಾರಂಟ್ ಆರೋಪಿಯಾದ ಅಣಂಗೂರು ನಿವಾಸಿ ಹಬೀಬ್ ರಹ್ಮಾನ್(23)ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಐದು ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಾಹನ ಅಪಘಾತ :
6.18 ಲಕ್ಷ ರೂ. ನಷ್ಟ ಪರಿಹಾರ
ಕಾಸರಗೋಡು: ಸೂರ್ಲು ಬಟ್ಟಂಪಾರೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ ಢಿಕ್ಕಿ ಹೊಡೆದು ಸಾವಿಗೀಡಾದ ಕೂಡ್ಲು ರಾಮದಾಸನಗರ ಕಾಳಿಕಾಂಬಾ ಪ್ರಸನ್ನ ಬಳಿಯ ಕೆ. ಶಂಕರ ಅವರ ಆಶ್ರಿತರಾದ ಪತ್ನಿ ಮತ್ತು ಮಕ್ಕಳಿಗೆ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪೆನಿಯ ಕಾಸರಗೋಡು ಶಾಖೆ 6,18,000 ರೂ. ನಷ್ಟಪರಿಹಾರ ನೀಡುವಂತೆ ಕಾಸರಗೋಡು ಪ್ರಿನ್ಸಿಪಲ್ ಎಂಎಸಿಟಿ ನ್ಯಾಯಾಲಯ ತೀರ್ಪು ನೀಡಿದೆ.
2014ರ ಆ.2 ರಂದು ಅಪರಾಹ್ನ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಶಂಕರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದರೂ ರಕ್ಷಿಸಲು ಸಾಧ್ಯವಾಗದೆ 2014ರ ಆ.13 ರಂದು ಸಾವಿಗೀಡಾಗಿದ್ದರು.
ಪೊದೆಗಳಿಗೆ ಬೆಂಕಿ
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಆವರಣದೊಳಗೆ ಬೆಂಕಿ ಆಕಸ್ಮಿಕದಿಂದ ಕಾಲೇಜು ಪರಿಸರದ ಕಾಡು ಪೊದೆ ಬೆಂಕಿಗಾಹುತಿಯಾಗಿದೆ. ಉಪ್ಪಳದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು. ಕಿಡಿಗೇಡಿಗಳು ಬೀಡಿ ಸೇದಿ ಪೊದೆಗೆ ಎಸೆದಿರಬೇಕೆಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.