ಕೋಟಿ ಕೋಟಿ ಭರವಸೆ, ಅಭಿವೃದ್ಧಿಯಲ್ಲಿ ಮಾತ್ರ ನಿರಾಸೆ
Team Udayavani, May 21, 2018, 8:05 PM IST
ಕಾಸರಗೋಡು: ತನ್ನದೇ ಆದ ಸಂಪದ್ಭರಿತ ಇತಿಹಾಸ ಹೊಂದಿರುವ ಕಾಸರಗೋಡು ಹತ್ತು ಹಲವು ಭಾಷೆಗಳ ಸಂಗಮ ಭೂಮಿ. ಹಲವು ಸಂಸ್ಕೃತಿ, ಆಚಾರ, ವಿಚಾರಗಳಿಂದ ಸಮೃದ್ಧಿ ಯಿಂದ ವಿಶಿಷ್ಟತೆಯನ್ನು, ಮಹತ್ವ ವನ್ನು ಪಡೆದುಕೊಂಡಿದ್ದರೂ ಅಭಿವೃದ್ಧಿಯ ಕನಸು ನಿರಾಸೆಯ ಕೂಪಕ್ಕೆ ತಳ್ಳಿದೆ. ಕಾಸರಗೋಡಿನ ಸಮಗ್ರ ಅಭಿವೃದ್ಧಿ ಗಾಗಿ ಮಲೆನಾಡು, ಕರಾವಳಿ ಪ್ರದೇಶ ಗಳನ್ನೊಳಗೊಂಡ ಕಾಸರಗೋಡು ಮತ್ತು ಹೊಸದುರ್ಗ ತಾಲೂಕು ಗಳನ್ನು ಸೇರಿಸಿಕೊಂಡು ಜನ್ಮ ತಳೆದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
1984ರ ಮೇ 24ರಂದು ಯುಡಿಎಫ್ ಸರಕಾರದ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ “ಲೀಡರ್’ ಎಂದೇ ಖ್ಯಾತರಾಗಿದ್ದ ಕೆ. ಕರುಣಾಕರನ್ ಅವರು ಉದ್ಘಾಟಿಸಿದ್ದ ಕಾಸರಗೋಡು ಜಿಲ್ಲೆ 34 ವರ್ಷಗಳನ್ನು ಪೂರೈಸಿ 35 ನೇ ವರ್ಷಕ್ಕೆ ಕಾಲಿರಿಸಿದರೂ, ಅಭಿವೃದ್ಧಿ ಮಾತ್ರ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿಯಿಂದ ಬದಲಾಯಿಸಲು ಸಾಧ್ಯವಾಗಿಲ್ಲ ಎಂಬುದು ಕಾಸರಗೋಡು ಜಿಲ್ಲೆಯ ಮಟ್ಟಿಗೆ ದೊಡ್ಡ ದುರಂತವೇ. ಬದಲಿ ಬದಲಿ ಬಂದ ಸರಕಾರಗಳು ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಭರವಸೆಗಳನ್ನು ನೀಡುತ್ತಾ ಇಲ್ಲಿನ ಜನರನ್ನು ವಂಚಿಸುತ್ತಲೇ ಬಂದಿವೆ.
ರಾಜ್ಯ ಪುನರ್ವಿಂಗಡಣೆಯ ಬಳಿಕ ಕಣ್ಣೂರು ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಮತ್ತು ಹೊಸದುರ್ಗ ತಾಲೂಕುಗಳನ್ನು ಜೋಡಿಸಿ ಕಾಸರಗೋಡು ಜಿಲ್ಲೆಯನ್ನು ಸ್ಥಾಪಿಸ ಲಾಯಿತು. ಕೇರಳದ ರಾಜಧಾನಿಯಿಂದ ಬಹಳಷ್ಟು ದೂರವಿರುವ ಹಾಗು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. ಜಿಲ್ಲೆ ರಚನೆಯ ಬಳಿಕ ಗಮನಾರ್ಹವಲ್ಲದ ಕೆಲವೊಂದು ಅಭಿವೃದ್ಧಿ ಕೆಲಸಗಳಾದರೂ ಅದು ಅಷ್ಟಕಷ್ಟೇ. ಜಿಲ್ಲೆಯ ಹುಟ್ಟಿನ ಬಳಿಕ ಜಿಲ್ಲಾ ಕೇಂದ್ರವನ್ನು ವಿದ್ಯಾನಗರದಲ್ಲಿ ಸ್ಥಾಪಿಸಿದ್ದು ಹೊರತುಪಡಿಸಿದರೆ ಹೇಳಿಕೊಳ್ಳುವಂತ ಅಭಿವೃದ್ಧಿ ಸಾಧ್ಯವಾಗಿಲ್ಲ.
ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರೂಪೀಕರಿಸಿದ ಡಾ| ಪಿ. ಪ್ರಭಾಕರನ್ ಆಯೋಗ ಶಿಫಾರಸುಗಳು ಇನ್ನೂ ಈಡೇರಿಲ್ಲ. ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ 11,123 ಕೋಟಿ ರೂಪಾಯಿಯ ಯೋಜನೆಯನ್ನು ಶಿಫಾರಸು ಮಾಡಿತ್ತು. ಈ ಯೋಜನೆಗಳಿಗೆ ಹಿಂದಿನ ಐಕ್ಯರಂಗ ಸರಕಾರ ಮಾನ್ಯತೆಯನ್ನು ನೀಡಿತ್ತು. ಆದರೆ ಸಾಕಷ್ಟು ಹಣ ಬಿಡುಗಡೆಗೊಳಿಸಿಲ್ಲ. ಕೇಂದ್ರ ಸರಕಾರ, ರಾಜ್ಯ ಸರಕಾರ, ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರು ಸಂಯುಕ್ತವಾಗಿ ಜಾರಿಗೊಳಿಸಬೇಕಾದ ಯೋಜನೆಗಳನ್ನು ಆಯೋಗ ಶಿಫಾರಸು ಮಾಡಿತ್ತು. ಆದರೆ ಕಾಸರಗೋಡಿನ ಅಭಿವೃದ್ಧಿಗೆ ಅಗತ್ಯದ ಫಂಡ್‌ಗಾಗಿ ಕೇಂದ್ರ ಸರಕಾರಕ್ಕೋ, ಹೂಡಿಕೆದಾರರೊಂದಿಗೋ ಯಾವುದೇ ಚರ್ಚೆಯನ್ನು ರಾಜ್ಯ ಸರಕಾರ ಮಾಡಿಲ್ಲ.
ಜಿಲ್ಲೆಯಲ್ಲಿ ಸಾಕಷ್ಟು ಸ್ಥಳ ಸೌಕರ್ಯಗಳಿದ್ದರೂ, ಕೈಗಾರಿಕೆಗಳನ್ನು ಮಂಜೂರು ಮಾಡಿಲ್ಲ. ಈ ಹಿಂದೆ ಆರಂಭಿಸಲು ಉದ್ದೇಶಿಸಿದ್ದ ಉದುಮ ಸ್ಪಿನ್ನಿಂಗ್ ಮಿಲ್‌ನ ಉಪಕರಣಗಳು ತುಕ್ಕು ಹಿಡಿದು ನಾಶದ ಅಂಚಿಗೆ ಸರಿದಿವೆ. ಎಡರಂಗ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸರಕಾರ ಪ್ರಥಮ ವರ್ಷ ಪೂರೈಸುವ ಮುನ್ನವೇ ಮಿಲ್ ತೆರೆಯುವುದಾಗಿ ಸರಕಾರ ಹೇಳಿದ್ದರೂ, ಇದಕ್ಕೆ ಅಗತ್ಯವಾದ ಯಾವೊಂದು ಪ್ರಾಥಮಿಕ ಪ್ರಕ್ರಿಯೆ ನಡೆದಿಲ್ಲ. ಹಲವು ವರ್ಷಗಳ ಹಿಂದೆ ನೆಲ್ಲಿಕುಂಜೆಯಲ್ಲಿ ಸ್ಥಾಪಿಸಿದ್ದ ಆಸ್ಟ್ರಲ್ ವಾಚಸ್ ಕಂಪೆನಿ ಮುಚ್ಚಲಾಗಿದೆ. ಅದನ್ನು ತೆರೆದು ಯಾವುದಾದರೂ ಕೈಗಾರಿಕೆ ಆರಂಭಿಸುವ ಬಗ್ಗೆ ಚಿಂತಿಸಿಲ್ಲ. ಇಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಬಗ್ಗೆ ಕೇಳಿ ಬಂದಿತ್ತು. ಆದರೆ ಆ ಬಳಿಕ ಈ ವದಂತಿಯೂ ನಿಂತಿತು.
ರಾಜ್ಯದಲ್ಲೇ ಅತ್ಯಂತ ಹೆಚ್ಚು ಗೇರು ಬೆಳೆಯುವ ಎರಡನೇ ಜಿಲ್ಲೆ ಹಾಗೂ ಅತ್ಯುತ್ತಮ ಗುಣಮಟ್ಟದ ಗೇರು ನೀಡುವ ಕಾಸರಗೋಡು ಜಿಲ್ಲೆಯಲ್ಲಿ ಸರಕಾರಿ ಗೇರು ಫ್ಯಾಕ್ಟರಿಯೂ ಇಲ್ಲ. ಜಿಲ್ಲೆಯಲ್ಲಿ ಗಮನಿಸಬಹುದಾದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. ಕಾಸರಗೋಡಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಬೇಕಾದರೆ ಮಂಗಳೂರನ್ನೇ ಆಶ್ರಯಿಸಬೇಕಾದ ಗತಿಗೇಡು ಮುಂದುವರಿದಿದೆ.
ಹಿಂದಿನ ಸರಕಾರ ವೆಳ್ಳರಿಕುಂಡು ಮತ್ತು ಮಂಜೇಶ್ವರ ಎಂಬೀ ಎರಡು ತಾಲೂಕುಗಳನ್ನು ರೂಪೀಕರಿಸಿದ್ದರೂ ಈ ತಾಲೂಕು ಕಚೇರಿಗಳಲ್ಲಿ ಯಾವುದೇ ಸೌಕರ್ಯಗಳಿಲ್ಲ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಸಾಧ್ಯತೆಗಳಿದ್ದರೂ, ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಬಹಳಷ್ಟು ಹಿಂದುಳಿದಿದೆ. ಇತಿಹಾಸ ಪ್ರಸಿದ್ಧ ಬೇಕಲಕೋಟೆ ಯಾಗಲಿ, ಚಾರಣಪ್ರಿಯರ ರಾಣಿಪುರ, ಪೊಸಡಿ ಗುಂಪೆ ಮೊದಲಾದ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಇಕೋ ಟೂರಿಸಂ, ತೋಣಿ ಕಡವು ಅಭಿವೃದ್ಧಿ ನಡೆದಿಲ್ಲ. ಈ ಕಾರಣದಿಂದ ಕಾಸರಗೋಡು ಜಿಲ್ಲೆ ಪ್ರವಾಸೋದ್ಯಮದಲ್ಲಿ ಬಹಳಷ್ಟು ಹಿಂದುಳಿದಿದೆ.
ಮಹತ್ವಾಕಾಂಕ್ಷೆಯ ಕಾಸರಗೋಡು ಮೀನುಗಾರಿಕಾ ಬಂದರಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಇನ್ನೂ ಉದ್ಘಾಟನೆಯಾಗಿಲ್ಲ. ಮಂಜೇಶ್ವರ ಮೀನುಗಾರಿಕಾ ಬಂದರು ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದೆ.
ಜಿಲ್ಲಾ ಪಂಚಾಯತ್‌ನ ಕನಸಿನ ಯೋಜನೆ: ಕಾಸರಗೋಡಿನ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಪೆರಿಯ ಏರ್‌ಸ್ಟ್ರಿಪ್ ಸಾಕಾರಗೊಳ್ಳದು ಎಂದು ತಿಳಿದಿರುವಂತೆ ಯೋಜನೆಯನ್ನು ಜಾರಿಗೊಳಿಸಲು ಕಾಸರಗೋಡು ಜಿಲ್ಲಾ ಪಂಚಾಯತ್ ಮುಂದಾಗಿದೆ. ಸರಕಾರದ ಅನುಮತಿಗಾಗಿ ಕಾಯುತ್ತಿದೆ. ಅನುಮತಿ ಲಭಿಸಿದಲ್ಲಿ ಕಿರು ವಿಮಾನಗಳು ಲ್ಯಾಂಡ್ ಆಗುವ ಸ್ಥಳವಾಗಿ ಬದಲಾಗಲಿದೆ.
ಇದಕ್ಕಾಗಿ ಈಗಾಗಲೇ ಒಂದು ಹಂತದ ವರೆಗೆ ಚರ್ಚೆಗಳು ನಡೆದಿವೆ. ಅಲ್ಲದೆ ಕಿರು ಜಲ ವಿದ್ಯುತ್ ಯೋಜನೆಗೂ ಜಿಲ್ಲಾ ಪಂಚಾಯತ್ ಮುಂದಾಗಿದೆ. ಇದು ಸಾಕಾರಗೊಳ್ಳಬೇಕಾದರೆ ಇಚ್ಛಾಶಕ್ತಿ ತೋರಲೇ ಬೇಕಾಗುತ್ತದೆ. ಇದೇ ರೀತಿ ಸ್ಥಳೀಯಾಡಳಿತ ಸಂಸ್ಥೆಗಳೂ ಅಭಿವೃದ್ಧಿ ಕಾರ್ಯದಲ್ಲಿ ಬಹಳಷ್ಟು ಆಸಕ್ತಿ ವಹಿಸಬೇಕು.
ಕನ್ನಡಿಗರ ಮೇಲೆ ಸದಾ ತೂಗುಗತ್ತಿ
ಇಲ್ಲಿನ ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರಿಗೆ ಕೇರಳ ಸರಕಾರ ಪದೇ ಪದೆ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮೂಲಕ ನಿರಂತರವಾಗಿ ಕನ್ನಡ ಭಾಷೆ, ಸಂಸ್ಕೃತಿ ನಾಶಕ್ಕೆ ಪ್ರಯತ್ನಿಸುತ್ತಲೇ ಇದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನಬದ್ಧವಾಗಿ ನೀಡಲಾದ ಹಕ್ಕು, ಸವಲತ್ತುಗಳನ್ನು ಕಸಿಯುತ್ತಲೇ ಕನ್ನಡಿಗರ ಮೇಲೆ ತೂಗುಗತ್ತಿಯಂತೆ ವರ್ತಿಸುತ್ತಲೇ ಇದೆ. ಇದೀಗ ಜೂನ್ 1ರಿಂದ ಒಂದನೇ ತರಗತಿಯಿಂದ 10ನೇ ತರಗತಿಯ ವರೆಗೂ ಮಲಯಾಳ ಕಲಿಕೆ ಕಡ್ಡಾಯಗೊಳಿಸಿದೆ. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಸರ್ವನಾಶ ಮಾಡಲು ಹೊರಟಿದೆ. ಸಪ್ತ ಭಾಷೆಗಳ ನಾಡೆಂದು ಹೇಳುತ್ತಲೇ ಬಂದಿರುವ ಕೇರಳ ಸರಕಾರ ನಿರಂತರವಾಗಿ ಕನ್ನಡಿಗರ ಮೇಲೆ ದಬ್ಟಾಳಿಕೆ ನಡೆಸುತ್ತಲೇ ಬಂದಿದ್ದು, ಕಾಸರಗೋಡಿನ ಕನ್ನಡಿಗರಿಗೆ ನಿರಂತರ ಸಮಸ್ಯೆ ಸೃಷ್ಟಿಸುತ್ತಲೇ ಇದೆ. ಈ ಮೂಲಕ ಕನ್ನಡಿಗರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.
ಆರೋಗ್ಯ ಕ್ಷೇತ್ರ ಅನಾರೋಗ್ಯಪೀಡಿತ
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ತಪ್ಪಿಲ್ಲ. ಅತ್ಯಾಧುನಿಕ ಮತ್ತು ತಜ್ಞರಿರುವ ಆಸ್ಪತ್ರೆಗಳಿಗೆ ಕಾಸರಗೋಡಿನ ಜನರು ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯನ್ನೇ ಆಶ್ರಯಿಸಿದ್ದಾರೆ. ಕಾಸರಗೋಡು ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆಗಳಿದ್ದರೂ ಬೇಕಾದಷ್ಟು ವೈದ್ಯರಾಗಲೀ, ದಾದಿಯರಾಗಲೀ, ಸಿಬಂದಿಯಾಗಲೀ ಇಲ್ಲ. ಆಧುನಿಕ ಸೌಕರ್ಯಗಳೂ ಇಲ್ಲ. ಇರುವ ಕೆಲವೊಂದು ಸಲಕರಣೆಗಳು ಉಪಯೋಗಕ್ಕಿಲ್ಲ ಎಂಬಂತ ಪರಿಸ್ಥಿತಿ ತಪ್ಪಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪದೇ ಪದೇ ಕೈಕೊಡುತ್ತಿರುವ ಲಿಫ್ಟ್‌ಗೆ ಇನ್ನೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ರೋಗಿಗಳನ್ನು ಸಾಗಿಸಲು ಇನ್ನೂ ರ್‍ಯಾಂಪ್ ನಿರ್ಮಾಣವಾಗಿಲ್ಲ. ಎಂಡೋಸಲ್ಫಾನ್ ದುರಂತದ ಹಿನ್ನೆಲೆಯಲ್ಲಿ ಉಕ್ಕಿನಡ್ಕದಲ್ಲಿ ಹಿಂದಿನ ಐಕ್ಯರಂಗ ಸರಕಾರ ಮಂಜೂರು ಮಾಡಿದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ, ಕಾಲೇಜು ಕಟ್ಟಡ ಕಾಮಗಾರಿ ನಿಂತೇ ಹೋಗಿದೆ.
11 ನದಿಗಳಿದ್ದರೂ ಕುಡಿಯಲು ಉಪ್ಪುನೀರು
ಕಾಸರಗೋಡು ಜಿಲ್ಲೆಯಲ್ಲಿ ಪ್ರಮುಖ 11 ನದಿಗಳ ಸಹಿತ ಹಲವು ನದಿಗಳಿದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ವರೆಗೂ ಸಾಧ್ಯವಾಗಿಲ್ಲ. ಕಾಸರಗೋಡು ನಗರ ಮತ್ತು ಕೆಲವು ಗ್ರಾಮ ಪಂಚಾಯತ್‌ಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಬಾವಿಕೆರೆಗೆ ಶಾಶ್ವತ ಅಣೆಕಟ್ಟು ಸ್ಥಾಪಿಸಲು ಸಾಧ್ಯವಾಗದಿರುವುದರಿಂದ ಉಪ್ಪು ನೀರು ಕುಡಿಯಬೇಕಾದ ಪರಿಸ್ಥಿತಿ ಇನ್ನೂ ತಪ್ಪಿಲ್ಲ. ಜಿಲ್ಲೆಯಲ್ಲಿ ಒಂದೇ ಒಂದು ನೀರಾವರಿ ಯೋಜನೆಯಿಲ್ಲ.
– ಪ್ರದೀಪ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.