ಟ್ರಿಬ್ಯೂನಲ್ ಬೇಡಿಕೆ ತಿರಸ್ಕರಿಸಿದ ಕೇರಳ ಸರಕಾರ
Team Udayavani, May 7, 2018, 6:15 AM IST
ಕಾಸರಗೋಡು: ಎಂಡೋಸಲ್ಫಾನ್ ವಿಷಯಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ಅದಕ್ಕೆ ಕಾರಣಕರ್ತರಾದವರನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ಅರ್ಹ ನಷ್ಟ ಪರಿಹಾರ ನಿರ್ಣಯಿಸುವುದಕ್ಕಾಗಿ ಟ್ರಿಬ್ಯೂನಲ್ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಕೇರಳ ಸರಕಾರವು ಸಂಪೂರ್ಣ ತಿರಸ್ಕರಿಸಿದೆ ಎಂದು ರಾಜ್ಯ ಕಂದಾಯ ಸಚಿವ, ಎಂಡೋಸಲ್ಫಾನ್ ಸೆಲ್ ಅಧ್ಯಕ್ಷ ಇ. ಚಂದ್ರಶೇಖರನ್ ಹೇಳಿದ್ದಾರೆ.
ಕಾಸರಗೋಡು ಕಲೆಕ್ಟರೇಟ್‌ನ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ ಎಂಡೋಸಲ್ಫಾನ್ ಸಮಿತಿಯ ಜಿಲ್ಲಾ ಮಟ್ಟದ ವಿಶೇಷ ಸಭೆಯಲ್ಲಿ ಟ್ರಿಬ್ಯೂನಲ್ ರೂಪಿಸಬೇಕೆಂದು ಸದಸ್ಯರು ಬೇಡಿಕೆ ಮುಂದಿಟ್ಟರೂ ಸರಕಾರದ ನಿರ್ಧಾರದ ವಿರುದ್ಧ ಸೆಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲವೆಂದು ಸಚಿವ ಚಂದ್ರಶೇಖರನ್ ಸ್ಪಷ್ಟಪಡಿಸಿದರು. ಟ್ರಿಬ್ಯೂನಲ್ ಬೇಕೆಂಬ ಬೇಡಿಕೆಯನ್ನು ಇಟ್ಟವರು ಬೇರೆ ದಾರಿಯ ಮೂಲಕ ಅದಕ್ಕಾಗಿ ಶ್ರಮಿಸಬಹುದು ಎಂದು ಸೆಲ್‌ನ ಅಧ್ಯಕ್ಷರಾದ ಸಚಿವರು ತಿಳಿಸಿದರು.
ಹಿಂದಿನ ಯುಡಿಎಫ್ ಸರಕಾರ ಸಹ ಟ್ರಿಬ್ಯೂನಲ್ ಬೇಡಿಕೆಯನ್ನು ತಿರಸ್ಕರಿಸಿತ್ತು. ಎಂಡೋಸ್ಫಲಾನ್ ವಿಷಯದಲ್ಲಿ ಟ್ರಿಬ್ಯೂನಲ್ ರಚಿಸುವ ಕುರಿತು ಅಧ್ಯಯನ ನಡೆಸಿದ ಜಸ್ಟೀಸ್ ರಾಮಚಂದ್ರನ್ ಆಯೋಗವು ಈ ಬೇಡಿಕೆ ಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಈಗಿನ ಎಲ್‌ಡಿಎಫ್ ಸರಕಾರವು ಟ್ರಿಬ್ಯೂನಲ್ ಬೇಡಿಕೆಯನ್ನು ಮತ್ತೆ ತಿರಸ್ಕರಿಸಿದೆ.
ಟ್ರಿಬ್ಯೂನಲ್ ವಿಚಾರದಲ್ಲಿ ತನಗೆ ಸರಕಾರದ ವಿರುದ್ಧ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು. ಇದರಿಂದ ಎಂಡೋಸಲ್ಫಾನ್ ಸದಸ್ಯರ ಮತ್ತು ಸಚಿವರ ಮಧ್ಯ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಅವರು ಮಧ್ಯ ಪ್ರವೇಶಿಸಿ ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಬಳಿಕ ಪರಿಸ್ಥಿತಿ ಶಮನವಾಯಿತು.
ಜಿಲ್ಲೆಯ ಬಡ್ಸ್ ಶಾಲೆಗಳ ವಿದ್ಯುದೀ ಕರಣ ಕಾಮಗಾರಿಯನ್ನು ತ್ವರಿತ ಗೊಳಿಸಲು, ಮೊಬೈಲ್ ವೈದ್ಯಕೀಯ ತಂಡವನ್ನು ಎಂಡೋ ಬಾಧಿತರಿಗೆ ಪ್ರಯೋಜನ ವಾಗುವ ರೀತಿಯಲ್ಲಿ ಕ್ರಮೀಕರಿಸ ಬೇಕೆಂದು ಸಂಬಂಧಪಟ್ಟ ವರಿಗೆ ನಿರ್ದೇಶನ ನೀಡಲಾಯಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ತಿರುವನಂತ ಪುರದಲ್ಲಿ ಉನ್ನತ ಮಟ್ಟದ ಸಭೆ ನಡೆದು ತೆಗೆದುಕೊಂಡ ತೀರ್ಮಾನಗಳನ್ನು ಜಿಲ್ಲಾ ಸೆಲ್ ಸಭೆಯಲ್ಲಿ ಅಂಗೀಕರಿಸಲಾಯಿತು. ಕಲೆಕ್ಟರೇಟ್‌ನ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ ಈ ಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷ ಎ.ಜಿ.ಸಿ.ಬಶೀರ್, ಪಂಚಾಯತ್ ಅಧ್ಯಕ್ಷರು, ಸೆಲ್ ಸದಸ್ಯರು ಭಾಗವಹಿಸಿದ್ದರು.
ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಒಳಗೊಂಡಿರುವ ಅನರ್ಹರನ್ನು ಪತ್ತೆ ಮಾಡುವುದಕ್ಕಾಗಿ ಪ್ರತ್ಯೇಕ ಮಾನದಂಡ ಇರಿಸಲಾಗುವುದು. ಈ ಮಾನದಂಡದ ಮೂಲಕ ಎಂಡೋ ಸಂತ್ರಸ್ತರ ಯಾದಿಯನ್ನು ಕ್ರಮೀಕರಿಸಲಾಗುವುದು.
ಎಂಡೋಸಲ್ಫಾನ್ ಸಂತ್ರಸ್ತರ ಮೂರು ಲಕ್ಷ ರೂ. ತನಕದ ಸಾಲ ಮನ್ನಾ ಮಾಡಲು 7.63 ಕೋಟಿ ರೂ. ಮಂಜೂರುಗೊಳಿಸಲಾಗುವುದು. ಸಂತ್ರಸ್ತರಿಗೆ ನೀಡಲಾದ ರೇಶನ್ ಕಾರ್ಡ್ ಗಳನ್ನು ಆದ್ಯತಾ ವಿಭಾಗದಲ್ಲಿ ಒಳಪಡಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು.
ಸಂತ್ರಸ್ತರಿಗಾಗಿ ಸ್ಥಾಪಿಸಿದ ಒಂಬತ್ತು ಬಡ್ಸ್ ಶಾಲೆಗಳನ್ನು ರಾಜ್ಯ ಸಾಮಾಜಿಕ ನ್ಯಾಯ ಇಲಾಖೆಯ ಅಧೀನಕ್ಕೆ ಪಡೆಯಲಾಗುವುದು. ಚೀಮೇನಿ, ಪೆರಿಯ, ರಾಜಪುರ ಪ್ಲಾಂಟೇಶನ್ ಕಾರ್ಪೋರೇಶನ್‌ನ ಎಸ್ಟೇಟ್‌ಗಳಲ್ಲಿರುವ ಎಂಡೋಸಲ್ಫಾನ್ ಕೀಟನಾಶಕ ನಿಷ್ಕ್ರಿಯಗೊಳಿಸಲು 10 ಲಕ್ಷ ರೂ. ಈಗಾಗಲೇ ನೀಡಲಾಗಿದೆ. ಉಳಿದ 20 ಲಕ್ಷ ರೂ. ಒದಗಿಸಲಾಗಿವುದು.
ಪ್ರಸ್ತುತ ಸಂತ್ರಸ್ತರಿಗೆ ನೀಡುವ ಪಿಂಚಣಿಯನ್ನು ಹೆಚ್ಚಿಸುವುದಿಲ್ಲ. ಸಂತ್ರಸ್ತರ ಚಿಕಿತ್ಸೆಗಾಗಿ ಒಂದು ವರ್ಷದಲ್ಲಿ ಎರಡು ಕೋಟಿ ರೂ. ಮಂಜೂರುಗೊಳಿಸಲಾಗುವುದು. ಎಂಡೋಸಲ್ಫಾನ್ ಸಿಂಪಡಿಸಿದ ಕೀಟ ನಾಶಕ ಕಂಪೆನಿಯಿಂದ ನಷ್ಟಪರಿಹಾರ ಒದಗಿಸಲು ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು. ಈ ನಿರ್ಧಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ತಿರುವನಂತಪುರದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೂಡ ತೀರ್ಮಾನಿಸಲಾಗಿದೆ.
ಸಂತ್ರಸ್ತರ ಪರಿಹಾರ ಬಾಕಿ 18 ಕೋಟಿ ರೂ. ಶೀಘ್ರ ಬಿಡುಗಡೆ
ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಾರ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಹಾಗೂ ನಷ್ಟಪರಿಹಾರ ನೀಡುವುದಕ್ಕಾಗಿ ನಿರ್ದೇಶಿಸಿದ 30 ಕೋಟಿ ರೂ. ಗಳಲ್ಲಿ ಈಗಾಗಲೇ 12 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಉಳಿದ 18 ಕೋಟಿ ರೂ. ಗಳನ್ನು ಶೀಘ್ರ ಬಿಡುಗಡೆಗೊಳಿಸಲು ತಿರುವನಂತಪುರದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಕಟಿಸಿದರು. ಮುಂದಿನ ತಪಾಸಣೆಯಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಮಾಡಿದ ಪ್ಲಾಂಟೇಶನ್ ಕಾರ್ಪೊರೇಶನ್‌ನ ಎರಡು ಕಿಲೋ ಮೀಟರ್ ಸುತ್ತಳತೆಯ ಜನರೂ ರೋಗ ಬಾಧಿತರಾಗಿದ್ದಾರೋ ಎಂಬುದಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.