ಜಿಲ್ಲೆಯಲ್ಲಿ 115 ತಾತ್ಕಾಲಿಕ ಕಂಡಕ್ಟರ್‌ಗಳಿಗೆ ಕೊಕ್
Team Udayavani, Dec 19, 2018, 3:40 AM IST
ಕಾಸರಗೋಡು: ಹೈಕೋರ್ಟ್ ಆದೇಶದಂತೆ ಎಂ.ಪ್ಯಾನೆಲ್ ಕಂಡಕ್ಟರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸೇವೆ ಹಳಿ ತಪ್ಪಿದೆ. ಕೆಎಸ್‌ಆರ್‌ಟಿಸಿಯ ಕಾಸರಗೋಡು ಡಿಪೋದಿಂದ 77 ಮಂದಿ ಬಸ್ ಕಂಡಕ್ಟರ್‌ಗಳನ್ನು ಹಾಗೂ ಕಾಂಞಂಗಾಡ್ ಡಿಪೋದಿಂದ 38 ಬಸ್ ಕಂಡಕ್ಟರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಕಾರಣದಿಂದ ಈ ಎರಡೂ ಡಿಪೋಗಳಲ್ಲಿ ಕಂಡಕ್ಟರ್‌ಗಳ ಕೊರತೆ ಕಂಡು ಬಂದಿದ್ದು, ಇದರಿಂದ ಹಲವು ಬಸ್‌ಗಳ ಸಂಚಾರವನ್ನು ನಿಲುಗಡೆಗೊಳಿಸಲಾಯಿತು. ಸೋಮವಾರ ಸಂಜೆ 15 ಶೆಡ್ಯೂಲ್‌ಗಳನ್ನು ರದ್ದುಪಡಿಸಲಾಯಿತು. ಮಂಗಳವಾರದಿಂದ ಇನ್ನಷ್ಟು ಹೆಚ್ಚು ಶೆಡ್ನೂಲ್‌ಗಳನ್ನು ರದ್ದುಪಡಿಸಬೇಕಾಗಿ ಬಂದಿದೆ. ಸೋಮವಾರ ಮಲೆನಾಡು ಪ್ರದೇಶಕ್ಕೆ ಸಾಗುವ ಹೆಚ್ಚಿನ ಬಸ್‌ಗಳ ಸೇವೆ ರದ್ದಾಯಿತು. ಕಾಸರಗೋಡು ಜಿಲ್ಲೆಯಲ್ಲಿ 239 ಮಂದಿ ಕಂಡಕ್ಟರ್‌ಗಳಿದ್ದರು. ಕಂಡಕ್ಟರ್‌ಗಳ ಕೊರತೆಯನ್ನು ನೀಗಿಸಲು ಕರುನಾಗ ಪಳ್ಳಿಯಿಂದ ವರ್ಕ್ ಅರೆಂಜ್‌ಮೆಂಟ್ ಮುಖಾಂತರ ನೇಮಿಸಲ್ಪಟ್ಟ 50 ಮಂದಿ ಇದರಲ್ಲೊಳಗೊಂಡಿದ್ದಾರೆ. ಈ ಪೈಕಿ 20 ಮಂದಿ ಮಹಿಳೆಯರು.
ಎಂ ಪ್ಯಾನೆಲ್ ಕಂಡಕ್ಟರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ 115 ಮಂದಿ ಕಂಡಕ್ಟರ್‌ಗಳ ಕೊರತೆಗೆ ಕಾರಣವಾಗಿದೆ. ದಿನಾ ಕಾಸರಗೋಡು ಡಿಪೋದಿಂದ 97 ಶೆಡ್ಯೂಲ್‌ಗಳು ಮತ್ತು ಕಾಂಞಂಗಾಡ್ ಡಿಪೋದಿಂದ 55 ಶೆಡ್ಯೂಲ್‌ಗಳು ಇತ್ತು. ಇದೀಗ 115 ಮಂದಿ ಕಂಡಕ್ಟರ್‌ಗಳನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಡಿಪೋದಿಂದ 30 ಶೆಡ್ಯೂಲ್‌ಗಳೂ, ಕಾಂಞಂಗಾಡ್ ಡಿಪೋದಿಂದ 17 ಶೆಡ್ಯೂಲ್‌ಗಳೂ ಮೊಟಕುಗೊಳ್ಳಲಿದೆ. ಮಲೆನಾಡು ಪ್ರದೇಶಗಳಿಗಿರುವ ಬಸ್ ಶೆಡ್ಯೂಲ್‌ಗಳನ್ನು ಎಂ.ಪ್ಯಾನೆಲ್ ಕಂಡಕ್ಟರ್‌ಗಳು ನಿರ್ವಹಿಸುತ್ತಿದ್ದರು. ಇವರ ಕೊರತೆಯಿಂದಾಗಿ ಬಂದಡ್ಕ, ವೆಳ್ಳರಿಕುಂಡು, ಪಾಣತ್ತೂರು, ನರ್ಕಿಲಕ್ಕಾಡ್, ಕೊನ್ನಕ್ಕಾಡ್, ಚಿಕಾಡ್ ಪ್ರದೇಶಗಳಲ್ಲಿ ಸರ್ವೀಸ್ ಮೊಟಕುಗೊಳ್ಳಲಿದೆ. ಬಸ್ ಮೊಟಕುಗೊಳ್ಳುವುದರಿಂದ ದಿನಾ ಟಿಕೆಟ್ ರೂಪದಲ್ಲಿ ಕನಿಷ್ಠ ಆರು ಲಕ್ಷ ರೂಪಾಯಿ ನಷ್ಟವಾಗಲಿದೆ.
11 ವರ್ಷಗಳಿಂದ ಸೇವೆ
ಸೇವೆಯಿಂದ ಬಿಡುಗೊಳಿಸಲ್ಪಟ್ಟವರಲ್ಲಿ ಹಲವರು ಕಳೆದ 11 ವರ್ಷಗಳಿಂದ ತಾತ್ಕಾಲಿಕ ಸೇವೆಯಲ್ಲಿ ದುಡಿಯುತ್ತಿದ್ದರು. ಇವರಲ್ಲಿ ಹಲವರಿಗೆ ಕಾರ್ಪೊರೇಶನ್, ಕಾರ್ಮಿಕ ಯೂನಿಯನ್‌ಗಳು ನೀಡಿದ ಭರವಸೆಗಳಿಂದ ವಂಚಿತರಾಗಿದ್ದಾರೆ. ಈ 115 ಮಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕೆಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಡಿಪೋ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಕೈಸೇರಿತ್ತು. ಆ ಬಳಿಕ ತಾತ್ಕಾಲಿಕವಾಗಿ ದುಡಿಯುತ್ತಿದ್ದವರಿಗೆ ಕೆಲಸ ನೀಡಿಲ್ಲ.
ಕನಿಷ್ಠ ವೇತನ 600 ರೂ. ನೀಡಬೇಕು ಎಂಬ ವ್ಯವಸ್ಥೆಯಾಗಿದ್ದರೂ, ಇವರಿಗೆ 480 ರೂ. ಒಂದು ಡ್ನೂಟಿಗೆ (8 ಗಂಟೆ) ನೀಡಲಾಗುತ್ತಿತ್ತು. ವಿಶ್ರಮವಿಲ್ಲದೆ ಹಲವರು ಎರಡೋ ಮೂರೋ ಡ್ಯೂಟಿ ತೆಗೆದು ಕೊಂಡು ವರಮಾನ ಹೆಚ್ಚು ಪಡೆದುಕೊಂಡು ಕುಟುಂಬಕ್ಕೆ ಆಶ್ರಯವಾಗಿದ್ದರು. ಕೆಲಸದ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಹಲವರು ಸಾಲ ಪಡೆದು ಸ್ವಂತ ಮನೆಯನ್ನೂ ಕಟ್ಟಿಸಿಕೊಂಡವರು ಇದೀಗ ಆತಂಕಕ್ಕೀಡಾಗಿದ್ದಾರೆ.
ಖಾಸಗಿ ಬಿಟ್ಟು ಸರಕಾರಿಗೆ
ಹಲವು ಮಂದಿ ಖಾಸಗಿ ಬಸ್‌ಗಳಲ್ಲಿ ದುಡಿಯುತ್ತಿದ್ದವರು ಕೆಲಸ ಬಿಟ್ಟು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಾತ್ಕಾಲಿಕ ಸಿಬಂದಿಯಾಗಿ ಸೇವೆಗೆ ಸೇರಿದ್ದರು.
ಅನಾಥವಾದ ಕುಟುಂಬಗಳು
ನ್ಯಾಯಾಲಯದ ಆದೇಶದಂತೆ ಕೆಲಸ ಕಳೆದುಕೊಂಡ 115 ಕುಟುಂಬಗಳು ಅನಾಥವಾಗಿವೆ. ಬಹಳ ನಿರೀಕ್ಷೆಯಿರಿಸಿಕೊಂಡಿದ್ದ ಇವರ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.
ಅಂತಾರಾಜ್ಯ ಸರ್ವೀಸ್ ಮೊಟಕುಗೊಳ್ಳದು
115 ಕಂಡಕ್ಟರ್‌ಗಳನ್ನು ಸೇವೆಯಿಂದ ಬಿಡುಗಡೆ ಗೊಳಿಸಿರುವುದರಿಂದ ಅಂತಾರಾಜ್ಯ ಬಸ್ ಸರ್ವೀಸ್‌ಗಳಿಗೆ ಬಾಧಕವಾಗದು. ಮಂಗಳೂರು, ಪುತ್ತೂರು, ಸುಳ್ಯ ಮೊದಲಾದ ಅಂತಾರಾಜ್ಯ ಸರ್ವೀಸ್‌ಗಳು ಮತ್ತು ಚಂದ್ರಗಿರಿ, ಕಣ್ಣೂರು ಟಿ.ಟಿ. ಬಸ್‌ಗಳೂ ಮೊಟಕುಗೊಳ್ಳದು ಎಂದು ಕೆ.ಎಸ್.ಆರ್.ಟಿ.ಸಿ. ಅಧಿಕೃತರು ತಿಳಿಸಿದ್ದಾರೆ.
ಜೀವನಕ್ಕೆ ದಾರಿಯಿಲ್ಲ
2007 ಮೇ 2ರಂದು ಎಂಪ್ಲಾಯ್‌ಮೆಂಟ್ ಮುಖಾಂತರ ಕಂಡಕ್ಟರ್ ಕೆಲಸಕ್ಕೆ ಹಾಜರಾಗಿದ್ದೆ. ಆದರೆ ಇದೀಗ ನ್ಯಾಯಾಲಯದ ಆದೇಶದಿಂದ ಜೀವನಕ್ಕೆ ದಾರಿಯಿಲ್ಲದಂತಾಗಿದೆ. ವೇತನ ಪರಿಷ್ಕಾರದೊಂದಿಗೆ 5 ವರ್ಷಗಳಿಂದ ಎಂ ಪ್ಯಾನೆಲ್ ಸಿಬಂದಿಗಳನ್ನು ಖಾಯಂಗೊಳಿಸಲಾಗುವುದೆಂದು ಭರವಸೆ ನೀಡಲಾಗಿದ್ದರೂ ಅದು ಸಾಧ್ಯವಾಗಿಲ್ಲ. ನ್ಯಾಯಾಲಯದ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು.
– ಎಂ.ವಿಶ್ವನಾಥ, ಕೆ.ಎಸ್.ಆರ್.ಟಿ.ಸಿ. ಎಂ. ಪ್ಯಾನೆಲ್ ಕಂಡಕ್ಟರ್
ಉದ್ಯೋಗ ಹುಡುಕಬೇಕು
ಕಳೆದ 7 ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇದೀಗ ಇದ್ದಕ್ಕಿದ್ದಂತೆ ಸೇವೆಯಿಂದ ಬಿಟ್ಟಿರುವುದರಿಂದ ಮನಸ್ಸು ಮುದುಡಿ ಹೋಗಿದೆ. ದಿನಾ 480 ರೂ. ಲಭಿಸುತ್ತಿತ್ತು. ಅದೂ ಈಗ ಇಲ್ಲದಂತಾಗಿದೆ. ಇನ್ನು ಕುಟುಂಬವನ್ನು ಸಲಹಲು ಬೇರೆ ಉದ್ಯೋಗ ಹುಡುಕಬೇಕು. ಆದರೂ ಸರಕಾರದಲ್ಲೂ, ಮ್ಯಾನೇಜ್‌ಮೆಂಟ್‌ನಲ್ಲೂ ಇನ್ನೂ ನಿರೀಕ್ಷೆಯಿದೆ.
– ಸಿ.ಶಾಜಿ ತೃಕ್ಕನ್ನಾಡ್, ಎಂ.ಪ್ಯಾನೆಲ್ ಕಂಡಕ್ಟರ್
ಮೇಲ್ಮನವಿ ಸಲ್ಲಿಸಬಹುದು
ಹೈಕೋರ್ಟ್ ಆದೇಶದಂತೆ ಕೆಎಸ್‌ಆರ್‌ಟಿಸಿಯ ತಾತ್ಕಾಲಿಕ ಸೇವೆಯಲ್ಲಿದ್ದ ಒಟ್ಟು 3,861 ಮಂದಿ ಕಂಡಕ್ಟರ್‌ಗಳನ್ನು ವಜಾಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಿಂದ 115 ಮಂದಿ ವಜಾಗೊಂಡಿದ್ದಾರೆ. ಈ ಕಾರಣದಿಂದ ಕಾಸರಗೋಡಿನಲ್ಲಿ ಮಂಗಳವಾರ 25 ಶೆಡ್ಯೂಲ್‌ಗಳು ಮೊಟಕುಗೊಂಡಿವೆ. ಕೆಲಸ ಕಳೆದುಕೊಂಡಿರುವ ಕಂಡಕ್ಟರ್‌ಗಳಿಗೆ ಜೀವನ ನಿರ್ವಹಣೆಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತು ಕೇರಳ ರಾಜ್ಯ ಸಾರಿಗೆ ನಿಗಮ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ.
– ಕುಂಞಿಕಣ್ಣನ್, ಕಂಟ್ರೋಲ್ ಆಫೀಸರ್,ಕೆಎಸ್‌ಆರ್‌ಟಿಸಿ, ಕಾಸರಗೋಡು ಡಿಪೋ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.