ನಿರ್ವಹಣೆ ಇಲ್ಲದೆ ನೀರು ಪೋಲಾಗುತ್ತಿರುವ ಶಿಥಿಲ ಶಿರಿಯಾ ಅಣೆಕಟ್ಟು
Team Udayavani, Jan 12, 2019, 6:14 AM IST
ಕುಂಬಳೆ : ಕಳೆದ ಸುಮಾರು ಏಳು ದಶಕಗಳಿಂದ ಪುತ್ತಿಗೆ ಮತ್ತು ಪೈವಳಿಕೆ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರದೇಶ ಗಳಿಗೆ ನೀರು ಪೂರೈಸುತ್ತಿದ್ದ ಧರ್ಮತ್ತಡ್ಕ, ಮಣಿಯಂಪಾರೆ ಸಮೀಪದ ಶಿರಿಯಾ ಅಣೆಕಟ್ಟು ಪ್ರಕೃತ ಶಿಥಿಲಾವಸ್ಥೆಯಲ್ಲಿದೆ.ಇದರಿಂದ ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ನೀರಿನ ಸಂಗ್ರಹಣೆ ಮತ್ತು ಸಮರ್ಪಕ ನೀರು ಪೂರೈಕೆಗೆ ತೊಡಕಾಗುತ್ತಿದೆ.
ಮಳೆ ಕುಂಠಿತವಾಗಿ ಮುಂದಿನ ದಿನಗಳಲ್ಲಿ ನೀರಿಗಾಗಿ ತತ್ವಾರವಾಗಲಿರುವ ದಿನಗಳು ಸಮೀಪಿಸುತ್ತಿವೆೆ. ಕುಡಿಯುವ ನೀರಿಗಾಗಿ ಹಾತೊರೆಯುವ ಸ್ಥಿತಿ ನಿರ್ಮಾಣ ವಾಗುವ ಹಿನ್ನೆಲೆಯಲ್ಲಿ ಶಿರಿಯಾ ಅಣೆಕಟ್ಟನ್ನು ಸಮರ್ಪಕವಾಗಿ ದುರಸ್ಥಿಪಡಿಸದಿರುವುದು ಅಧಿಕೃತರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ನೀರಿನ ಸೋರಿಕೆ
ಶಿರಿಯಾ ಅಣೆಕಟ್ಟಿನಲ್ಲಿ ಮರಳು,ಹೂಳು ತುಂಬಿ ವರ್ಷದಿಂದ ವರ್ಷಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಕೆಟ್ಟಿರುವ ಕ್ರಶ್ ಗೇಟುಗಳ ಮುಖಾಂತರ ನೀರು ನಿರಂತರ ಪೋಲಾಗುತ್ತಿದೆ. ಮಳೆಗಾಲದ ನೆರೆ ನೀರಿನೊಂದಿಗೆ ಹರಿದು ಬಂದ ಮರದ ಕೊಂಬೆಗಳು, ಮರದ ದಿಮ್ಮಿಗಳು ಅಣೆಕಟ್ಟಿನ ಮರದ ಹಲಗೆಗಳ ಮಧ್ಯೆ ಸಿಲುಕಿರುವ ಕಾರಣ ರಂಧ್ರಗಳು ಸೃಷ್ಟಿಯಾಗಿ ನೀರಿನ ಸೋರಿಕೆಗೆ ಕಾರಣವಾಗಿದೆ. ಅರ್ಧ ಶತಮಾನದ ಇತಿಹಾಸವಿರುವ ಅಣೆಕಟ್ಟಿನ ರಕ್ಷಣೆಗೆ ಚುನಾಯಿತ ಜನಪ್ರತಿನಿಧಿಗಳು ಶ್ರಮಿಸು ತ್ತಿಲ್ಲವೆಂಬುದಾಗಿ ಫಲಾನುಭವಿಗಳು ಆರೋಪಿಸುತ್ತಾರೆ.
ಕೃಷಿ, ಕುಡಿಯುವ ನೀರಿಗೂ ಇದೇ ಮೂಲ
ಉಭಯ ಪಂಚಾಯತಿನ ಸುಮಾರು 500 ರಿಂದ 600 ಎಕ್ರೆ ಪ್ರದೇಶದ ಭತ್ತದಗದ್ದೆ, ಕ.ಮು ತೆಂಗು ಬೆಳೆಗಳಿಗೆ ನೀರುಣಿಸಲು ಸಾಮರ್ಥ್ಯವಿರುವ ಶಿರಿಯಾ ಅಣೆಕಟ್ಟು ಹಲವು ಕಾರಣಗಳಿಂದ ನಿರ್ಲಕ್ಷಕ್ಕೆ ಒಳಗಾಗಿದೆ. ದಶಕಗಳಿಂದ ಅಣೆಕಟ್ಟಿನಲ್ಲಿ ತುಂಬಿರುವ ಮರಳನ್ನು ತೆರವುಗೊಳಿಸಲು, ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಕೃಷಿ ಇಲಾಖೆ ಮತ್ತು ನೀರಾವರಿ ಇಲಾಖೆ ಕೈಗೊಂಡಿಲ್ಲ. ಪ್ರಸ್ತುತ ಕೇವಲ 50ರಿಂದ 60 ಎಕರೆ ಪ್ರದೇಶಗಳಿಗಷ್ಟೇ ಈ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದೆ. ನೀರು ಹರಿಯುವ ಕಾಲುವೆ ಸನಿಹದಲ್ಲೇ ಮರಗಳು ಬೇರುಗಳು ಸಾಗಿದ್ದು, ಕಾಡು ಪೊದರುಗಳು ಬೆಳೆದು ನಿಂತಿವೆ. ಸುಡು ಬೇಆಗೆಯಲ್ಲೂ ಎರಡು ಗ್ರಾ.ಪಂಗಳಿಗಾಗುವಷ್ಟು ಕುಡಿ ನೀರಿನ ಸಹಿತ ನೀರಾವರಿಗೆ ಅಗತ್ಯವಾದ ನೀರನ್ನು ಪೂರೈಸುವ ಸಾಮರ್ಥ್ಯವಿರುವ ಅಣೆಕಟ್ಟು ಸಮರ್ಪಕ ನಿರ್ವಹಣೆಯಿಲ್ಲದೆ ನಿಷ್ಪ್ರಯೋಜಕವಾಗುತ್ತಿದೆ.
ಭೌಗೋಳಿಕ ವಿಶೇಷತೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ 12 ಪ್ರಧಾನ ನದಿಗಳು ಹರಿಯುತ್ತಿವೆ. ಹೆಚ್ಚಿನ ನದಿ ಪಾತ್ರಗಳು ಮಳೆ ನೀರನ್ನೇ ಅವಲಂಬಿಸಿವೆ.ಆದರೆ ಮರಳು ತುಂಬಿ ಮಳೆಗಾಲದ ನೆರೆ ನೀರು ಹೊಳೆಯ ಇಕ್ಕೆಲಗಳ ತೋಟಗಳಿಗೆ ನುಗ್ಗಿ ಬೆಳೆ ನಾಶವಾಗುತ್ತದೆ. ಪುತ್ತಿಗೆ ಮತ್ತು ಪೈವಳಿಕೆ ಗ್ರಾಮ ಪಂಚಾಯತ್‌ಗಳಲ್ಲಿ ವರ್ಷದ ಹಿಂದೆ ಕೋಟಿಗಟ್ಟಲೆ ನಿಧಿ ವ್ಯಯಿಸಿ ಆರಂಭಿಸಿದ ಜಲನಿಧಿ ಯೋಜನೆಗಳು ಅಪೂರ್ಣಗೊಂಡು ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದಿಂದ ಹಲವೆಡೆ ಪೈಪ್ ಮೂಲಕ ನೀರು ಹರಿಯುತ್ತಿಲ್ಲ. ಪುತ್ತಿಗೆ ಮತ್ತು ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಶಿರಿಯಾ ಅಣೆಕಟ್ಟಿನ ನೀರಿನ ಹರಿವು ಕಡಿಮೆಯಾಗುತ್ತಿದೆ. ಅಣೆಕಟ್ಟಿನಲ್ಲಿ ಮರಳು ಸಹಿತ ಹೂಳು ತುಂಬಿದ ಪರಿಣಾಮ ನೀರಿನ ಶೇಖರಣೆಯ ಪ್ರಮಾಣ ತೀರಾ ಕುಂಠಿತವಾಗಿದೆ. ಇದರಿಂದ ಕೃಷಿಕರು ಆತಂಕಕ್ಕೀಡಾಗಿದ್ದಾರೆ.
ಅಣೆಕಟ್ಟಿಗೆ 7 ದಶಕದ ಇತಿಹಾಸ
1951ರ ಭಾಷಾವಾರು ಪ್ರಾಂತ್ಯ ವಿಂಗಡನೆಗೆ ಮುನ್ನ ಮದ್ರಾಸು ಸಂಸ್ಥಾನದ ಭಾಗವಾಗಿದ್ದ ಕಾಸರಗೋಡು ತಾಲೂಕಿನ ಧರ್ಮತ್ತಡ್ಕ ಬಳಿಯ ಶಿರಿಯಾ ಅಣೆಕಟ್ಟು ಮತ್ತು ಕಾಲುವೆಯನ್ನು ಅಂದಿನ ಮದ್ರಾಸು ಸರಕಾರದ ಲೋಕೋಪಯೋಗಿ ಸಚಿವ ಎಂ. ಭಕ್ತವತ್ಸಲಂ ಉದ್ಘಾಟಿಸಿದ್ದರು.
ಏಳು ದಶಕಗಳ ಇತಿಹಾಸವಿರುವ ಅಣೆಕಟ್ಟು ಈ ಭಾಗದ ಜನರ ಕೃಷಿಗೆ ಪೂರಕವಾಗಿದೆ. ಸದೃಢವಾದ ಕಪ್ಪು ಕಗಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಕಳಪೆ ನಿರ್ವಹಣೆಯಿಂದ ಉಪ ಯೋಗಶೂನ್ಯವಾಗುತ್ತಿದೆ. ಕೃಷಿ ಭೂಮಿಗೆ ನೀರು ಪೂರೈಕೆ ಸಹಿತ ಬೇಸಿಗೆ ಕಾಲದಲ್ಲಿ ಕುಡಿ ನೀರಿಗಾಗಿರುವ ಈ ಅಣೆಕಟ್ಟನ್ನು ಮೇಲ್ದರ್ಜೆಗೇರಿಸಬೇಕಿದೆ. ಹೊಳೆಯಲ್ಲಿ ತುಂಬಿದ ಮರಳು ಮತ್ತು ಹೂಳೆತ್ತಿದಲ್ಲಿ ಜಲನಿಧಿ ಕುಡಿಯುವ ನೀರು ಪೂರೈಕೆಗೂ ಶಿರಿಯಾ ಅಣೆಕಟ್ಟು ಸಹಕಾರಿಯಾಗಲಿದೆ.
ಮೇಲ್ದರ್ಜೆ, ಮೇಲ್ಸೇತುವೆ ನಿರ್ಮಾಣವಾಗಬೇಕಿದೆ
ಕೃಷಿಕರಿಗೆ ಮತ್ತು ಕುಡಿಯಲು ವರದಾನವಾಗಿರುವ ಶಿರಿಯಾ ಅಣೆಕಟ್ಟಿನ ಮೇಲ್ದರ್ಜೆಯನ್ನು ಸ್ಥಳೀಯರು ಬಯಸಿದ್ದಾರೆ. ಹಲವು ವರ್ಷಗಳಿಂದ ನಿರ್ವಹಣೆ ಕಾಣದೆ ಸೊರಗುತ್ತಿರುವ ಅಣೆಕಟ್ಟನ್ನು ವೈಜ್ಞಾನಿಕ ರೀತಿ ಯಲ್ಲಿ ಸಂರಕ್ಷಿಸಬೇಕು.ಪೈವಳಿಕೆ, ಪುತ್ತಿಗೆ ಮತ್ತು ಎಣ್ಮಕಜೆ ಗ್ರಾ.ಪಂ.ಗಳನ್ನು ಸಂಪರ್ಕಿಸಲು ಶಿರಿಯಾ ಹೊಳೆಗೆ ಮೇಲ್ಸೇತುವೆ ರಸ್ತೆ ಸಂಪರ್ಕ ಮಾಡ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸೇತುವೆಯೊಂದಿಗೆ ಶಿರಿಯಾ ಮೂಲಕ ರಸ್ತೆ ಸಂಪರ್ಕ ಏರ್ಪಟ್ಟರೆ ಸುತ್ತು ಬಳಸಿ ಪ್ರಮುಖ ಪೇಟೆಗಳಿಗೆ ತೆರಳುವ ಆವಶ್ಯಕತೆ ಇಲ್ಲವಾಗುವುದು. ಪೆರ್ಲದಿಂದ ಬಾಯಾರುಪದವು ಉಪ್ಪಳ ಮಂಗಳೂರು ಸಹಿತ ಪೇಟೆ ಸನಿಹವಾಗಲಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣವಾಗುತ್ತಿರುವ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಜನರಿಗೆ ಸನಿಹವಾಗಲಿದೆ.
ಅಣೆಕಟ್ಟನ್ನು ಸಂರಕ್ಷಿಸಿ
ಹಿಂದೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು, ಆದರೆ ಸೂಕ್ತ ನಿರ್ವಹಣೆಯಿಲ್ಲದ ಕಾರಣ ಅಣೆಕಟ್ಟಿನಲ್ಲಿ ಇದೀಗ ಹೆಚ್ಚಿನ ನೀರು ಸಂಗ್ರಹವಾಗುತ್ತಿಲ್ಲ. ವರ್ಷ ಕಳೆದಂತೆ ಅಣೆಕಟ್ಟು ಶಿಥಿಲವಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತರು ಇತ್ತ ಗಮನ ಹರಿಸಿ,ನೀರಿನ ಬವಣೆ ತಪ್ಪಿಸಲು ಅಣೆಕಟ್ಟನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕಿದೆ.
-ಕೃಷಿಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.