ಕಾಸರಗೋಡಿನ ಸಾಹಿತ್ಯ ಲೋಕ – ದಿ| ಡಾ| ಸಬಿತಾ ಮರಕಿಣಿ
Team Udayavani, Apr 16, 2018, 6:40 AM IST
ಕಾಸರಗೋಡಿನ ಕನ್ನಡ ಸಾಹಿತ್ಯ ಲೋಕಕ್ಕೆ ವಿವಿಧ ವೃತ್ತಿಗಳಲ್ಲಿರುವ ಮಹನೀಯರುಗಳು ಮತ್ತು ಮಹಿಳೆಯರು ಸೇವೆ ಸಲ್ಲಿಸಿ ಕೀರ್ತಿಶೇಷರಾಗಿರುತ್ತಾರೆ. ಅಂತಹವರಲ್ಲಿ ಸಮಾಜಕ್ಕಾಗಿ ಬದುಕಿದ ವೈದ್ಯೆ – ಸಾಹಿತಿ ದಿ| ಡಾ| ಸಬಿತಾ ಮರಕಿಣಿಯವರೂ ಒಬ್ಬರು.
ಮಂಜೇಶ್ವರ ತಾಲೂಕು ಕುಂಬಳೆ ಸಮೀಪದ ನಾರಾಯಣಮಂಗಲದ ಹಿಳ್ಳೆ ಮನೆಯಲ್ಲಿ “ಮಾಂಗಿ¡ ಮಾಸ್ಟರ’ರೆಂದೇ ಪ್ರಸಿದ್ಧರಾಗಿದ್ದ ಎಚ್.ಎಂ. ಮಹಾಲಿಂಗ ಭಟ್ಟ- ಪರಮೇಶ್ವರಿ ಅಮ್ಮ ದಂಪತಿಯ ಪುತ್ರಿಯಾಗಿ ಸಬಿತಾ ಮರಕಿಣಿಯವರು 1934 ಎಪ್ರಿಲ್ 19ರಂದು ಜನಿಸಿದರು. ಸಬಿತಾ ಅವರಿಗೆ “ಸಾವಿತ್ರಿ’ ಎಂಬ ಹೆಸರೂ ಇತ್ತು. ಎಚ್.ಎಂ. ಗೋಪಾಲಕೃಷ್ಣ ಭಟ್ಟ, ಎಚ್. ರಮೇಶ ಭಟ್ಟ, ಎಚ್. ಮಹಾಲಿಂಗ ಭಟ್ಟ, ಎಚ್. ಸುಬ್ರಾಯ ಭಟ್ಟ ಅವರು ಸಹೋದರರು. ದಿ| ಪರಮೇಶ್ವರಿ ಅವರು ಅಕ್ಕ.
ಡಾ| ಸಬಿತಾ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ನಾರಾಯಣ ಮಂಗಲದ ಪಾಠಶಾಲೆ ಹಾಗೂ ಎಡನೀರು ಮಠದ ಶಾಲೆಗಳಲ್ಲೂ, ಪ್ರೌಢ ಶಿಕ್ಷಣವನ್ನು ವಿಟ್ಲದ ಹೈಸ್ಕೂಲಿನಲ್ಲಿಯೂ ಪೂರೈಸಿದರು. ಅನಂತರ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಸೇರಿದರು. ಮುಂದೆ ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಎಲ್. ಎ.ಎಂ.ಎಸ್. ವೈದ್ಯಕೀಯ ಶಿಕ್ಷಣವನ್ನು ಪಡೆದು ಮಂಗಳೂರಿನ ವೆನಾÉಕ್ ಮತ್ತು ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಹಾಗೂ ಮಡಿಕೇರಿಯ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿಯೂ “ಹೌಸ್ ಸರ್ಜನ್ಸಿ’ ತರಬೇತಿಯನ್ನು ಪಡೆದರು. ಅನಂತರ ವಿಟ್ಲದಲ್ಲಿ “ಡಾ| ಸಬಿತಾ ದೇವಿ ಕ್ಲಿನಿಕ್’ ಎಂಬ ಸುಸಜ್ಜಿತ ಆಸ್ಪತ್ರೆಯನ್ನು ಪ್ರಾರಂಭಿಸಿ ರೋಗಿಗಳ ಶುಶ್ರೂಷೆಗೆ ತೊಡಗಿದರು. ಇಲ್ಲಿಗೆ ದೂರದೂರುಗಳಿಂದ, ಹಳ್ಳಿಗಳಿಂದ ಕೂಡ ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದರು. ಹೆಂಗಸರ ಕಾಯಿಲೆಗಳು, ಗರ್ಭಿಣಿ ಪ್ರಸೂತಿ, ಬಾಣಂತಿ, ಶಿಶು ಆರೈಕೆ ಹೀಗೆ ಬಿಡುವಿಲ್ಲದೆ ದುಡಿಯತೊಡಗಿದರು. ಜೀವನ ಶ್ರದ್ಧೆ, ಶಿಸ್ತಿನ ಬದುಕನ್ನು ಅವರು ರೂಢಿಸಿಕೊಂಡಿದ್ದರು. ಅವರು ಕಷ್ಟ ಜೀವಿ, ಶ್ರಮ ಜೀವಿ, ಶಿಸ್ತಿನ ಸಿಪಾಯಿ ಹಾಗೂ ಬಡವರ ನೋವು ನಲಿವುಗಳನ್ನು ಹತ್ತಿರದಿಂದ ಬಲ್ಲವರು, ತೀವ್ರವಾಗಿ ಸ್ಪಂದಿಸುವ ಸ್ವಭಾವದವರು. ಅಡ್ಯನಡ್ಕದ ಡಾ| ಎಂ.ಬಿ. ಮರಕಿಣಿಯವರು ಸಬಿತಾ ಡಾಕ್ಟರರ ಪತಿ.
ಸಬಿತಾ ಅವರು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಕತೆ ಕವಿತೆಗಳನ್ನು ಬರೆಯಲು ತೊಡಗಿದ್ದರು. ಅವರ ಕವಿತೆ, ಕತೆಗಳು ಅಲ್ಲಲ್ಲಿ ಪತ್ರಿಕೆಗಳಲ್ಲಿಯೂ ಪ್ರಕಟಗೊಳ್ಳುತ್ತಿದ್ದುವು. ಅವರ ರಚನೆಗಳು “ಅಂಕಿತ’ ಎಂಬ ನಾಮದಿಂದ ಪ್ರಕಟಗೊಳ್ಳುತ್ತಿದ್ದುವು. ಶಿವರಾಮ ಕಾರಂತರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ “ವಿಚಾರವಾಣಿ’ ವಾರಪತ್ರಿಕೆಯಲ್ಲಿ ಡಾ| ಸಬಿತಾರವರ ಬರೆಹಗಳು ಪ್ರಕಟಗೊಳ್ಳುತ್ತಿದ್ದುವು. ಅವರು ಇಂಗ್ಲಿಷ್‌ನಿಂದ ಅನುವಾದಿಸಿದ ರಚನೆಗಳು ಅಂದಿನ ಜನಪ್ರಿಯ ಪತ್ರಿಕೆಗಳಾದ “ಪ್ರಪಂಚ’ ಮೊದಲಾದವುಗಳಲ್ಲಿ ಪ್ರಕಟಗೊಂಡು ಜನಪ್ರಿಯವೆನಿಸಿಕೊಂಡವು. ಹೀಗೆ ಮುಂದುವರಿಯುತ್ತಿದ್ದ ಅವರ ರಚನೆಗಳನ್ನು ಒಂದೆಡೆ ಸಂಗ್ರಹಿಸುವ ಗೋಜಿಗೆ ಹೋಗದಿದ್ದುದರಿಂದ ಇಂದು ಅಲಭ್ಯವಾಗಿವೆ.
ಡಾ| ಸಬಿತಾರವರು ತಮ್ಮ ಪತಿಯೊಂದಿಗೆ ವಿಕಾಸ’ ಸಾಹಿತ್ಯ ಸಂಘದ ಮೂಲಕ ಅನೇಕ ಕಲಾಕಾರರನ್ನು ಒಟ್ಟುಗೂಡಿಸಿಕೊಂಡು ಸಾಹಿತ್ಯ, ಸಾಂಸ್ಕೃತಿಕ ಸಭೆ ಸಮಾರಂಭಗಳನ್ನು ನಡೆಸಿಕೊಂಡು ಬಂದರು. ಕವಿಗೋಷ್ಠಿ, ಪುಸ್ತಕ ಪ್ರಕಟಣೆ ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ನಡೆಸಿದರು. ಅನೇಕ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಕ್ಕಳಿಗಾಗಿ ಶಾಲೆ, ಹಾಸ್ಟೆಲ್‌ಗಳನ್ನು ಹುಟ್ಟುಹಾಕಿದರು. ಮಹಿಳೆಯರಿಗಾಗಿ ಹೊಲಿಗೆ ಕ್ಲಾಸುಗಳನ್ನು ಏರ್ಪಡಿಸಿ ಬಿಡುವಿನ ವೇಳೆಯಲ್ಲಿ ತರಗತಿಗಳನ್ನು ನೀಡುತ್ತಿದ್ದರು. ಸ್ವಯಂಸೇವಾ ಸಂಸ್ಥೆಗಳ ಮೂಲಕ ತೀರಾ ಹಿಂದುಳಿದ ಗುಡ್ಡಗಾಡು ಜನಗಳ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಚೌಕಟ್ಟಿನಲ್ಲಿ ನಡೆಸುತ್ತಾ ಹೆಗ್ಗಡೆ ದೇವನ ಕೋಟೆ, ಚಿತ್ತಾಪುರ ಕೋಟೆ, ಕಮಲಾಪುರ ಮೊದಲಾದ ಊರುಗಳಲ್ಲಿಯೂ ತೆಲಂಗಾಣದ ಪಡಕಲ್ಲಿನಲ್ಲಿಯೂ ಸುಮಾರು 15 ವರ್ಷಗಳ ಕಾಲ ವೈದ್ಯಕೀಯ, ಸಮಾಜ ವಿಕಾಸ ಕಾರ್ಯಕರ್ತೆಯಾಗಿಯೂ ಕೆಲಸ ಮಾಡಿದರು. ಹಳ್ಳಿ ಹಳ್ಳಿಗಳಿಗೂ ಸಂಚಾರಿ ಆಸ್ಪತ್ರೆಯಲ್ಲಿ ಸಂಚರಿಸುತ್ತಾ ಬಡಬಗ್ಗರ ಆರೋಗ್ಯ ವಿಚಾರಣೆ, ಔಷಧೋಪಚಾರಗಳನ್ನು ನಡೆಸಿದರು. ಡಾಕ್ಟರ್ ದಂಪತಿ ಎಲೆಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ಸಮಾಜ ಸೇವೆಯೊಂದಿಗೆ ತಮ್ಮ ವೃತ್ತಿ ಜೀವನವನ್ನು ನಡೆಸಿದ ಅಪರೂಪದ ವ್ಯಕ್ತಿಗಳು.
ಪ್ರಕಟಿತ ಕೃತಿಗಳು “ಹೆಸರಿಡದ ಕವನ’ ಸಂಕಲನ ಭಾಗ 1 ಮತ್ತು 2 (ಪದ್ಯ).ಮುಗಿಲು ಬಿರಿಯಿತು, ಪಾಮಕ್ಕನ ಸಂಸಾರ (ಹವಿಗನ್ನಡ ಕಾದಂಬರಿಗಳು), ಕಮಲಕ್ಕನ ಕತೆಗಳು, ಹಳೇಮರಕ್ಕೆ ಹೊಸ ಚಿಗುರು, ಗೆದ್ದಳು ಕಾವೇರಿ (ಗದ್ಯ-ಕಥಾ ಸಾಹಿತ್ಯ ಕಾದಂಬರಿಗಳು), ಮಾಂಗಿ¡ ಮಾಸ್ಟ್ರಂಗೆ ನಮಸ್ಕಾರ (ಸಣ್ಣ ಕತೆಗಳು).
ಆರೋಗ್ಯ ರಕ್ಷಣೆ ಭಾಗ-1, ಚುಚ್ಚು ಮದ್ದಿನ ರûಾ ಕವಚ, ಜಂತು ಹುಳುಗಳು, ತುರಿಸುವ ಕಜ್ಜಿ, ನಾವು ಕುಡಿಯುವ ನೀರು, ನಿತ್ಯ ಬಳಕೆಯ ವಿಷ ವಸ್ತುಗಳು, ನೈರ್ಮಲ್ಯ ರಕ್ಷಣೆ, ಮಕ್ಕಳಿಗೆ ಮಾರಕ-ಅತಿಸಾರ-ಭೇದಿ, ಮದ್ದಿಲ್ಲದ ರೋಗ-ಏಡ್ಸ್, ಮಸಾಲೆ ಮದ್ದು, ಸುಲಭ ಚಿಕಿತ್ಸೆ, ಸುಲಭ ಚಿಕಿತ್ಸೆಯ ಮನೆ ಮದ್ದುಗಳು, ಇತರ ಕೃತಿಗಳು (ಪತಿ ಡಾ| ಎಂ.ಬಿ.ಮರಕಿಣಿಯವರೊಂದಿಗೆ). ಇವರ “ಹಳೇಮರಕ್ಕೆ ಹೊಸ ಚಿಗುರು’ ಮೂಲಕಥೆಗೆ ಸಾಹಿತಿ ಮನೋರಮಾ ಎಂ. ಭಟ್ಟರು ಹವಿಗನ್ನಡ ಶ್ರಾವ್ಯ ನಾಟಕ ರೂಪ ನೀಡಿದ್ದಾರೆ.
ಸಂದ ಪ್ರಶಸ್ತಿಗಳು ಮತ್ತು ಗೌರವಗಳು
ಬೆಂಗಳೂರು ಅಖೀಲ ಹವ್ಯಕ ಅಧ್ಯಯನ ಕೇಂದ್ರವು ಕೊಡಮಾಡುವ ಪ್ರತಿಷ್ಠಿತ “ಹವಿಗನ್ನಡ ಸೂರಿ ಪ್ರಶಸ್ತಿ’ ಲಭಿಸಿದೆ. ಅಲ್ಲದೆ ನಾಡಿನ ಅನೇಕ ಸಂಘ ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಗೌರವಿಸಿವೆ.
ವಿಶ್ರಾಂತ ಜೀವನವನ್ನು ನೆಲಮಂಗಲದ ಅರಶಿನಕುಂಟೆ, ಆದರ್ಶ ನಗರದಲ್ಲಿ ನಡೆಸತೊಡಗಿದ ಡಾ| ಮರಕಿಣಿ ದಂಪತಿಗೆ ಓರ್ವ ಪುತ್ರ ನಾರಾಯಣ ಭಟ್(ಆಕಾಶವಾಣಿ ಪ್ರೋಗ್ರಾಂ ಆಫೀಸರ್), ಪುತ್ರಿ ಗೌರಿ. ಬಡಬಗ್ಗರ ಹಾಗೂ ಸಮಾಜ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಆ ಚೇತನ 2011 ಫೆಬ್ರವರಿ 1ರಂದು ವಿಧಿವಶವಾಯಿತು. ಅವರ ಕುರಿತಾಗಿ ಡಾ| ಹರಿಕೃಷ್ಣ ಭರಣ್ಯ ಅವರು ಸಂಪಾದಿಸಿದ ಜೀವನ ಚರಿತ್ರೆಯನ್ನು ಕಾಂತಾವರದ ಕನ್ನಡ ಸಂಘದವರು ಪ್ರಕಾಶಿಸಿರುತ್ತಾರೆ.
– ಕೆ.ಕೇಳು ಮಾಸ್ತರ್ ಅಗಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.