ದಿಢೀರ್ ಸಾಹಿತ್ಯ ಉತ್ತಮ ಬೆಳವಣಿಗೆಯಲ್ಲ: ಡಾ| ಪೆರ್ಲ
Team Udayavani, Dec 5, 2018, 2:00 AM IST
ಬದಿಯಡ್ಕ: ಇತ್ತೀಚೆಗೆ ದಿಢೀರ್ ಸಾಹಿತ್ಯದ ಸೃಷ್ಟಿ ಆಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಜತೆಗೆ ದ್ವೇಷ-ನಿಂದನೆಗಳಂತಹ ಮನಃಸ್ಥಿತಿಗಳೂ ಬೆಳವಣಿಗೆ ಪಡೆಯುತ್ತಿವೆ. ಜನಪ್ರಿಯತೆಯ ಹುಚ್ಚಿಗೆ ಇಂಬು ನೀಡದೆ ಅಧ್ಯಯನದ ಮೂಲಕ ಹೆಚ್ಚೆಚ್ಚು ತಿಳಿದು ಯಾವುದಕ್ಕೂ ಬದ್ದರಾಗದೆ ಮಧ್ಯಮ ಮಾರ್ಗ ಹಿಡಿಯುವ ಪರಿಪಾಠ ಬೆಳೆಸಬೇಕು ಎಂದು ಮಂಗಳೂರು ಆಕಾಶವಾಣಿಯ ನಿಲಯ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಕರೆ ನೀಡಿದರು.
ಪುತ್ತೂರಿನ ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರರು ಮಾನ್ಯ, ಉಪ್ಪಿನಂಗಡಿಯ ಸತ್ಯಶಾಂತಾ ಪ್ರೊಡಕ್ಷನ್ಸ್ ಹಾಗೂ ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಘಟಕದ ಸಂಯುಕ್ತ ಆಶ್ರಯದಲ್ಲಿ ನೀರ್ಚಾಲು ಸಮೀಪದ ಪುದುಕೋಳಿ ಶೇಷ ಸಭಾಭವನದಲ್ಲಿ ಆಯೋಜಿಸಲಾದ ಸಾಹಿತ್ಯ ಸಂಭ್ರಮ 2018-19 ಕಾರ್ಯ ಕ್ರಮದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಕ್ಷಮಿತ್ರರು ಮಾನ್ಯ ಸಂಸ್ಥೆಯ ಅಧ್ಯಕ್ಷರೂ ಕಾರ್ಯಕ್ರಮದ ರೂವಾರಿಗಳೂ ಆದ ಕೃಷ್ಣಮೂರ್ತಿ ಪುದುಕೋಳಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ಸಾಹಿತಿ-ಸಂಶೋಧಕ ಡಾ| ಹರಿಕೃಷ್ಣ ಭರಣ್ಯ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ಮನೆಗಳಲ್ಲಿ ಸಾಹಿತ್ಯದ ಸಂಸ್ಕೃತಿ ಕಾಸರಗೋಡಿನ ವಿಶೇಷವಾಗಿದೆ. ಆದರೆ ಕಾರ್ಯಕ್ರಮಗಳ ಆಯೋಜನೆಯಲ್ಲಿ ತೊಡಗಿಸಿ ಕೊಂಡಷ್ಟು ತಮ್ಮ ಬರಹಗಳಲ್ಲಿ ಪ್ರೌಢಿಮೆಯ ಕೊರತೆ ಎದ್ದು ಕಾಣುತ್ತಿ ರುವುದು ಆತಂಕಕಾರಿ ಎಂದರು. ಅನುಭವಗಳನ್ನು ಹೆಚ್ಚಿಸುವ ಸಾಹಿತ್ಯಗಳು ಮೂಡಿಬರಬೇಕು. ಎಳೆಯರನ್ನು ಎಳೆದು ತರಬೇಕು ಎಂದು ಅವರು ತಿಳಿಸಿದರು.
ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆ ಉಪಸ್ಥಿತರಿದ್ದು ಮಾತನಾಡಿ, ಸಾಹಿತ್ಯದಲ್ಲಿ ನಿತ್ಯಜೀವನದ ನವುರಾದ ಹಾಸ್ಯದ ಲೇಪವಿದ್ದಾಗ ಆಪ್ಯಾಯತೆ ಮೂಡಿ ಬರುತ್ತದೆ. ಚಿವುಟುವ ಇಂತಹ ಪ್ರಕ್ರಿಯೆ ಬಳಿಕ ಸುದೀರ್ಘ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಜೀವ ಪ್ರೀತಿಯ, ಭಿನ್ನತೆಗೆ ಆಸ್ಪದ ನೀಡದ ಬರಹಗಳು ಮೂಡಿಬರಲೆಂದು ಹಾರೈಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು, ಇಂದು ಕನ್ನಡವನ್ನು ಹಿಸುಕುವ ಯತ್ನಗಳು ನಡೆಯುತ್ತಿವೆ. ಆದರೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಮಾಡುತ್ತಿರುವ ಯತ್ನಗಳು ಮುಂದುವರಿಯುತ್ತಿರುವುದು ಸ್ತುತ್ಯರ್ಹ ಎಂದು ತಿಳಿಸಿದರು.
ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಗ್ರಾ.ಪಂ. ಸದಸ್ಯೆ ಪ್ರೇಮಾ ಕೆ., ಕಹಳೆ ಮಾಧ್ಯಮ ಸಂಪಾದಕ ಶ್ಯಾಮ್ ಸುದರ್ಶನ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉದಯೋನ್ಮುಖ ಚಿತ್ರಕಲಾವಿದೆ ಅನುಪಮಾ ಪಿ.ಜಿ ಅವರಿಗೆ ಕಲಾಶ್ರೀ, ಲೇಖಕಿ, ಧಾರ್ಮಿಕ ಬರಹಗಾರ್ತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆಯವರಿಗೆ ಸೇವಾಸಿರಿ ಹಾಗೂ ಶಾಂತಾ ರವಿ ಕುಂಟಿನಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖೀಲೇಶ್ ಸ್ವಾಗತಿಸಿ, ಪುರುಷೋ ತ್ತಮ ಭಟ್ ಕೆ. ವಂದಿಸಿದರು. ಸುಂದರ ಶೆಟ್ಟಿ ಮಾಸ್ತರ್ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
ಬಾಲ ಕವಿಗೋಷ್ಠಿ
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾಹಿತ್ಯ ಸಂಭ್ರಮದ ಮೊದಲ ಭಾಗದಲ್ಲಿ ಬಾಲ ಕವಿಗೋಷ್ಠಿ ನಡೆಯಿತು. ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ ಪೆರ್ಲ ಅಧ್ಯಕ್ಷತೆ ವಹಿಸಿದ್ದರು ಕವಿಗೋಷ್ಠಿಯಲ್ಲಿ ಆದ್ಯಂತ್ ಅಡೂರು, ಅಭಿಲಾಷ್ ಪೆರ್ಲ, ಉಪಾಸನಾ ಪಂಜರಿಕೆ, ಸ್ವಸ್ತಿಶ್ರೀ ಮಂಗಳೂರು, ವೈಷ್ಣವಿ ಮಾನ್ಯ ಮೊದಲಾದವರು ಕವನ ವಾಚಿಸಿದರು. ಸತ್ಯಾತ್ಮ ಕುಂಟಿನಿ ಸ್ವಾಗತಿಸಿದರು. ಚಿತ್ತರಂಜನ್ ಕಡಂದೇಲು ವಂದಿಸಿದರು. ಸೃಷ್ಟಿ ಶೆಟ್ಟಿ ಪೆರ್ಲ ಹಾಗೂ ಸೌರಭ ಕುಂಟಿನಿ ನಿರ್ವಹಿಸಿದರು. ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರು ಕವಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಯುವ ಕವಿಗೋಷ್ಠಿ
ಬಳಿಕ ನಡೆದ ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಚುಟುಕು ಸಾಹಿತಿ ವಿರಾಜ್ ಅಡೂರು ವಹಿಸಿದ್ದರು. ಕವಿಗೋಷ್ಠಿಯಲ್ಲಿ ಅಕ್ಷತಾರಾಜ್ ಪೆರ್ಲ, ರಂಗಶರ್ಮ ಉಪ್ಪಂಗಳ, ವಿಜಯರಾಜ ಪುಣಿಂಚತ್ತಾಯ, ಸುಭಾಷ್ ಪೆರ್ಲ, ಸುಕುಮಾರ ಬೆಟ್ಟಂಪಾಡಿ, ಆನಂದ ರೈ ಅಡ್ಕಸ್ಥಳ, ಕೆ. ಎಸ್. ದೇವರಾಜ್, ಶ್ರೀಶಕುಮಾರ ಪಂಜಿತ್ತಡ್ಕ, ವೀರೇಶ್ವರ ಭಟ್, ಡಾ| ರತ್ನಾಕರ ಮಲ್ಲಮೂಲೆ, ಚಿನ್ಮಯಕೃಷ್ಣ ಕಡಂದೇಲು, ಭೀಮಾರಾವ್ ವಾಷ್ಟರ್ ಸುಳ್ಯ ಮೊದಲಾದವರು ಭಾಗವಹಿಸಿ ದ್ದರು. ಪತ್ರಕರ್ತ ಪುರುಷೋತ್ತಮ ಭಟ್ ನಿರ್ವಹಿಸಿದರು. ಹರೀಶ್ ಸುಲಾಯ ಒಡ್ಡಂಬೆಟ್ಟು ನಿರೂಪಿಸಿದರು. ದೇವರಾಜ್ ಕುಂಬಳೆ ಸ್ವಾಗತಿಸಿ, ಗಣೇಶ್ ಪೈ ಬದಿಯಡ್ಕ ವಂದಿಸಿದರು. ಮಹಿಳಾ ಕವಿಗೋಷ್ಠಿ ಯಲ್ಲಿ ಶಾಂತಾ ರವಿ ಕುಂಟಿನಿ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಹೆಣ್ಮಕ್ಕಳ ಸಾಹಿತ್ಯಕ್ಕೆ ಒಲವು ಹೆಚ್ಚಾಗಿ ಸಮಾಜಮುಖೀಯಾಗ ಹೊರಟಾಗ ಹಲವು ಒತ್ತಡಗಳ ಸವಾಲುಗಳಿಗೆ ಆಕೆ ಒಳಗಾಗಬೇಕಾಗುತ್ತದೆ. ಇಂತಹ ಒತ್ತಡಗಳಿಂದ ಅಂತರ್ಮುಖೀಯಾಗುವ ಹೆಣ್ಮಕ್ಕಳು ಸವಾಲುಗಳನ್ನು ದಾಟಿ ಅಕ್ಷರ ರೂಪದ ಭಾವ ಸ್ಪುರಣಕ್ಕೆ ತೆರೆದುಕೊಂಡಾಗ ಯಶಸ್ಸು ಸಾಧ್ಯ ಎಂದರು.
ಶ್ಯಾಮಲಾ ರವಿರಾಜ್ ಕುಂಬಳೆ, ಅನ್ನಪೂರ್ಣಾ ಬೆಜಪ್ಪೆ, ಶ್ರದ್ಧಾ ನಾಯ ರ್ಪಳ್ಳ, ನಿರ್ಮಲಾ ಶೇಷಪ್ಪ, ಶಶಿಕಲಾ, ಚಿತ್ರಕಲಾ ದೇವರಾಜ್, ಆಶಾಲತಾ, ಗೀತಾ, ಸವಿತಾ ಎಸ್. ಭಟ್ ಅಡ್ವಾಯಿ, ರಮ್ಯಾ, ರೇಖಾ, ದಿವ್ಯಗಂಗಾ ಪಿ., ಸೌಮ್ಯಾ ಪ್ರಸಾದ್, ವಿಜಯಾ ಸುಬ್ರಹ್ಮಣ್ಯ, ಜ್ಯೋತ್ಸಾ$° ಎಂ. ಕಡಂದೇಲು, ಪ್ರಭಾವತಿ ಕೆದಿಲಾಯ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಕನ್ನಡ ಕಾವ್ಯ ಪರಂಪರೆಯು ವಿಶಿಷ್ಟವಾದ ಚಾರಿತ್ರಿಕ ಮಹತ್ವಪಡೆದು ಬೆಳೆದು ಬಂದಿದ್ದು, ಪ್ರಸ್ತುತ ಸಾಹಿತ್ಯ ಗೋಷ್ಠಿಗಳು ಹೆಚ್ಚುತ್ತಿದ್ದು, ಅದರೊಳಗಿನ ಮೌಲ್ಯಗಳ ಕುಸಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಥೆ, ಕವಿತೆಗಳನ್ನು ತಿದ್ದುವ, ಚರ್ಚಿಸುವ ಹೊಸ ಕ್ರಮದತ್ತ ಯುವ ಸಾಹಿತಿಗಳು ಮನಮಾಡಬೇಕು. ಸಾಹಿತಿಗಳಾಗಬೇಕೆಂಬ ಆಸಕ್ತಿಯಿಂದ ಬರೆಯುವ ಯುವ ತಲೆಮಾರು ಅದನ್ನು ಪ್ರಸ್ತುತಪಡಿಸುವ ಮೊದಲು ತಿದ್ದುವ, ಇತರ ಬರಹಗಳನ್ನು ಓದುವ ತುರ್ತು ಅಗತ್ಯ ಇದೆ.
-ಡಾ| ರಾಧಾಕೃಷ್ಣ ಬೆಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.