ಇಟ್ಟಿಪಳ್ಳದ ಪ್ರಾಕೃತಿಕ ಜಲಾಶಯ: ಜೀವವೈವಿಧ್ಯಕ್ಕೆ ಆಸರೆ
Team Udayavani, Mar 6, 2017, 5:47 PM IST
ಕಾಸರಗೋಡು: ಪೆರ್ಲದ ನಾಲಂದ ಮಹಾವಿದ್ಯಾಲಯದ ಭೂಮಿತ್ರಾ ಸೇನಾ ಘಟಕ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ್ ಮೊಟ್ಟಕುಂಜ, ಜಲ ಸಾಕ್ಷರತಾ ಅಭಿಯಾನದ ಭಾಗವಾಗಿ ನಿರ್ಮಿಸುತ್ತಿರುವ ಕಿರು ಚಿತ್ರ ‘ಜೀವ ಜಲ’ದ ಚಿತ್ರೀಕರಣ ವಿಸ್ಮಯಕಾರಿ ಪ್ರಾಕೃ ತಿಕ ಜಲಾಶಯ ಇಟ್ಟಿಪಳ್ಳದಲ್ಲಿ ನಡೆಯಿತು. ಶ್ರೀ ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ಇಟ್ಟಿಪಳ್ಳ ಜಲಾಶಯದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ಶಿವಕುಮಾರ್ ವಿದ್ಯಾರ್ಥಿಗಳಿಗೆ ವಿವರಿಸಿದರು. ಹಲವು ತಲೆಮಾರಿನ ಇತಿಹಾಸವಿರುವ ಜಲಾಶಯ ಪುರಾತನದಲ್ಲಿ ತುಂಬಾ ಆಳವಿತ್ತು. ಹಿಂದಿನ ಕಾಲದಲ್ಲಿ ಸ್ಥಳೀಯರು ಎಮ್ಮೆ, ಕೋಣ, ದನ ಇತ್ಯಾದಿ ಸಾಕು ಪ್ರಾಣಿಗಳನ್ನು ಜಲಾಶಯದಲ್ಲಿ ಸ್ನಾನ ಮಾಡಿಸುತ್ತಿದ್ದರು. ಪ್ರಾಣಿಗಳು ಜಲಾಶಯದ ಮಧ್ಯೆ ಬಂದಾಗ ಅವುಗಳನ್ನು ದಡಕ್ಕೆ ತರಲು ಕಲ್ಲುಗಳನ್ನು ಎಸೆಯತ್ತಿದ್ದರು. ಕ್ರಮೇಣ ಜಲಾಶಯದಲ್ಲಿ ಕಲ್ಲುಗಳು ತುಂಬಿಕೊಳ್ಳುತ್ತಾ, ಆಳ ಕಡಿಮೆಯಾಯಿತು. ನೀರಿನ ಸಂಗ್ರಹ ಕಡಿಮೆಯಾಯಿತು ಎನ್ನುವ ಅಭಿಪ್ರಾಯವು ಇದೆ. ಈಗಲೂ ಜಲಾಶಯ 6 ರಿಂದ 10 ಅಡಿ ಆಳವಿದ್ದು, ಸುಮಾರು 2,500 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿದೆ.
ಇದೇ ಜಲಾಶಯದ ಪರಿಸರದಲ್ಲಿ ಪಾಂಡವರು ಮತ್ತು ಕೌರವರು ದೇವಸ್ಥಾನ ನಿರ್ಮಿಸುವ ಬಗ್ಗೆ ಪಂಥದಲ್ಲಿ ಏರ್ಪಟ್ಟಿದ್ದರು ಎಂಬ ಇತಿಹಾಸವಿದೆ. ಒಂದು ರಾತ್ರಿ – ಬೆಳಾಗಾಗುವುದರ ಮೊದಲು ದೇವಸ್ಥಾನದ ನಿರ್ಮಾಣ ಪೂರ್ತಿಗೊಳಿಸುವವರು ವಿಜಯಿಗಳು ಎಂದು ಪಂಥದ ಷರತ್ತಿನೊಂದಿಗೆ ಇಟ್ಟಿಪಳ್ಳವನ್ನು ಪಾಂಡವರು ಮತ್ತು ವಿಟ್ಲ ಪ್ರದೇಶವನ್ನು ಕೌರವರು ಆಯ್ಕೆಮಾಡಿದರು. ಪಾಂಡವರು ಇಟ್ಟಿಪಳ್ಳದಲ್ಲಿ ದೇವಸ್ಥಾನ ನಿರ್ಮಿಸಲು ತಯಾರಿ ನಡೆಸಿದ್ದರಂತೆ. ಕಂಬಗಳನ್ನು ನಾಟಲು ಗುಂಡಿಗಳನ್ನು ತೆಗೆದಿದ್ದರು. ಬೆಳಾಗಾಗುವುದರ ಮೊದಲು ದೇವಸ್ಥಾನದ ನಿರ್ಮಾಣ ಕೆಲಸ ಪೂರ್ತಿಗೊಳ್ಳಬೇಕಿತ್ತು. ಸಂಜೆಯ ಹೊತ್ತಿನಲ್ಲಿ ಕೆಲಸ ಪ್ರಾರಂಭಿಸಿ ಕೆಲವೇ ಘಳಿಗೆಯಲ್ಲಿ ಕೋಳಿ ಕೂಗಿದ ಶಬ್ಧ ಆಲಿಸಿದ ಪಾಂಡವರು ಬೆಳಗಾಯಿತೆಂದು ಕೆಲಸವನ್ನು ಅರ್ಧದಲ್ಲೇ ಬಿಟ್ಟು ತೆರಳಿದರಂತೆ. ನಿಜವಾಗಿ ಸಮೀಪದಲ್ಲೇ ನೆಲೆಯಾಗಿದ್ದ ಪಿಲಿಚಾಮುಂಡಿ ಭೂತಕ್ಕೆ ದೇವಸ್ಥಾನ ನಿರ್ಮಿಸುವುದರ ಬಗ್ಗೆ ಅಸಮಾಧಾನವಿದ್ದ ಕಾರಣದಿಂದ ರಾತ್ರಿಯಲ್ಲೇ ಕೋಳಿ ಕೂಗಿದ ಶಬ್ಧ ಕೇಳಿ ಬಂತು ಎಂದು ನಂಬಿಕೆಯಿದೆ.
ಪಾಂಡವರು ಇಟ್ಟಿಪಳ್ಳ ಬಿಟ್ಟು ವಿಟ್ಲದಲ್ಲಿ ಕೌರವರ ಕೆಲಸವನ್ನು ನೋಡಲು ಬಂದರು. ಕೌರವರು ವಿಟ್ಲದಲ್ಲಿ ಪಂಚಲಿಂಗೇಶ್ವರ ದೇವಸ್ಥಾನವನ್ನು ಮೂಡು ಭಾಗಕ್ಕೆ ಮುಖವಾಗಿ ನಿರ್ಮಿಸಿದ್ದರು. ಭೀಮ ದೇವಸ್ಥಾನ ನೋಡಿ ಗದಾಪ್ರಹಾರ ಮಾಡಿ ದೇವಸ್ಥಾನದ ಮುಖವನ್ನು ಪಡುಭಾಗಕ್ಕೆ ಬದಲಾಯಿಸಿದ. ಮುಂದೆ ಕೌರವರನ್ನು ಭೇಟಿಯಾಗಿ ಅವರ ಕೆಲಸದ ಬಗ್ಗೆ ವಿಚಾರಿಸಿದಾಗ ಕೌರವರು ವಿಟ್ಲದಲ್ಲಿ ಪಂಚಲಿಂಗೇಶ್ವರ ದೇವಸ್ಥಾನವನ್ನು ಮೂಡುಭಾಗಕ್ಕೆ ಮುಖವಾಗಿ ನಿರ್ಮಿಸಿದ್ದೇವೆ ಎಂದು ಹೇಳುತ್ತಾರೆ. ತತ್‌ಕ್ಷಣ ಪರೀಶಿಲನೆ ಮಾಡಲು ತೆರಳುತ್ತಾರೆ. ನೋಡಿದಾಗ ದೇವಸ್ಥಾನದ ಮುಖವು ಪಡು ಭಾಗಕ್ಕಿತ್ತು ಮಾತ್ರವಲ್ಲ ದೇವಸ್ಥಾನದ ಕೆಲಸ ಪಾಂಡವರು ನಿರ್ಮಿಸಿದ್ದು ಎಂದು ವಾದಿಸಿದರು ಮತ್ತು ಪಾಂಡವರು ವಿಜಯಿಗಳಾದರು ಎನ್ನುವ ಇತಿಹಾಸವಿದೆಯೆಂದು ನಂಬಲಾಗಿದೆ.
ಬಹಳಷ್ಟು ಇತಿಹಾಸವಿರುವ ಇಟ್ಟಿಪಳ್ಳ ಜಲಾಶಯ ಪ್ರಸ್ತುತ ಸ್ಥಳೀಯ ಕೆಂಪುಕಲ್ಲಿನ ಕೋರೆಯಲ್ಲಿ ದುಡಿಯುತ್ತಿರುವ ಉತ್ತರ ಭಾರತದ ಕಾರ್ಮಿಕರು ನೀರಿಗಾಗಿ ಈ ಜಲಾಶಯವನ್ನು ಆಶ್ರಯಿಸಿದ್ದಾರೆ. ಇಟ್ಟಿಪಳ್ಳ ಜಲಾಶಯ ಪ್ರಕೃತಿಯ ಜೀವರಾಶಿಗಳಿಗೆ ವರದಾನವಾಗುವಂತೆ ಜಲಾಶಯದ ಹೂಳೆತ್ತಿ, ನೀರು ಸಂಗ್ರಹವಾಗುವಂತೆ ಕೆಲಸಕಾರ್ಯಗಳನ್ನು ಮಾಡಬೇಕಿದೆ. ಪರಿಸರ ಇಲಾಖೆ ಇದನ್ನು ರಕ್ಷಿಸಬೇಕು. ಈ ಜಲಾಶಯವನ್ನು ಕಾಪಾಡಲು ಸ್ಥಳಿಯಾಡಳಿತ ಸಂಸ್ಥೆ ಮುಂದಾದರೆ ಮುಂದಿನ ದಿನಗಳಲ್ಲಿ ಪ್ರಾಕೃತಿಕ ಸಮತೋಲನ ಸ್ಥಿತಿ ಸುಧಾರಿಸುವುದಲ್ಲದೆ ಇಟ್ಟಿಪಳ್ಳದ ಪ್ರಾಕೃತಿಕ ಜಲಾಶಯ ಜೀವವೈವಿಧ್ಯಕ್ಕೆ ಆಸರೆಯಾಗಲಿದೆ ಎಂದು ಜೀವಜಲ ಕಿರು ಚಿತ್ರದ ನಿರ್ದೇಶಕರಾದ ಅಶೋಕ್ ಮೊಟ್ಟಕುಂಜ ಅಭಿಪ್ರಾಯಪಟ್ಟರು. ಬೇಂಗಪದವು ಸಮೀಪದಲ್ಲಿರುವ ಪ್ರಾಕೃತಿಕ ಜಲಾಶಯ ಇಟ್ಟಿಪಳ್ಳದ ದೃಶ್ಯಾವಳಿಗಳು ವಿದ್ಯಾರ್ಥಿಗಳಿಗೊಂದು ರೋಮಾಂಚಕ ಅನುಭವ.
ಜೀವಜಲ ಕಿರು ಚಿತ್ರದ ಹಿನ್ನೆಲೆ ಸಹಾಯಕರಾಗಿರುವ ವಿಷ್ಣು ಪ್ರಕಾಶ್ ಮುಳ್ಳೇರಿಯ, ಭೂ ಮಿತ್ರಾ ಸೇನಾ ಘಟಕದ ಸಂಚಾಲಕ ರಂಜಿತ್ ಕುಮಾರ್ ಬಿ.ಎಸ್., ಉಪನ್ಯಾಸಕಿಯರಾದ ಶಾಂಭವಿ, ಗೀತಾ ವಿ.ಭಟ್ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.ಎನ್.ಎಸ್.ಎಸ್. ಯೋಜನಾಧಿಕಾರಿ ಹಾಗೂ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಶಂಕರ ಖಂಡಿಗೆ ತಂಡಕ್ಕೆ ಸಹಕರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.