ಮಂಜೇಶ್ವರ: ಕಮರುದ್ದೀನ್‌ಗೆ ಗೆಲುವು
Team Udayavani, Oct 25, 2019, 12:44 AM IST
ಕುಂಬಳೆ: ಕುತೂಹಲ ಕೆರಳಿಸಿದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಸಿ. ಕಮರುದ್ದೀನ್ ಅವರು ನಿಕಟ ಪ್ರತಿಸ್ಪರ್ಧಿ ಎನ್‌ಡಿಎಯ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರನ್ನು ಪರಾಭವಗೊಳಿಸಿ ಗೆಲುವು ಸಾಧಿಸಿದರು.
ಎಂ.ಸಿ. ಕಮರುದ್ದೀನ್ 65,407 ಮತಗಳನ್ನು ಪಡೆದರೆ, ರವೀಶ ತಂತ್ರಿ ಕುಂಟಾರು 57,484 ಮತಗಳನ್ನು ಪಡೆದರು. ಎಂ.ಸಿ. ಕಮರುದ್ದೀನ್ 7,923 ಮತಗಳ ಅಂತರದಿಂದ ಕುಂಟಾರು ಅವರನ್ನು ಪರಾಭವಗೊಳಿಸಿದರು. ಎಡರಂಗದ ಸಿಪಿಎಂ ಅಭ್ಯರ್ಥಿ ಶಂಕರ ರೈ ಮಾಸ್ತರ್ ಅವರು 38,233 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.
ಸ್ವತಂತ್ರ ಅಭ್ಯರ್ಥಿಗಳಾದ ಗೋವಿಂದನ್ ಅವರಿಗೆ 337, ಜಾನ್ ಡಿ’ಸೋಜಾ ಅವರಿಗೆ 277, ರಾಜೇಶ್ ಅವರಿಗೆ 232, ಕಮರುದ್ದೀನ್ ಎಂ.ಸಿ. ಅವರಿಗೆ 211 ಮತಗಳು ದೊರೆತವು. 574 ನೋಟ ಮತಗಳು ಚಲಾವಣೆಗೊಂಡು ಒಂದು ಮತ ಅಸಿಂಧುಗೊಂಡಿತು.
ಅ. 21ರಂದು ಮತದಾನ ನಡೆದಿತ್ತು. ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿತ್ತು. ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಅವರ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು. ಮತ ಎಣಿಕೆಯ ಆರಂಭದಿಂದಲೇ ಮುನ್ನಡೆ ಸಾಧಿಸಿದ ಎಂ.ಸಿ. ಕಮರುದ್ದೀನ್ ಅಂತಿಮ ಹಂತದವರೆಗೂ ಮುನ್ನಡೆ ಕಾಯ್ದುಕೊಂಡರು.
ಐಕ್ಯ ರಂಗದ ಅಭ್ಯರ್ಥಿ ಎಂ.ಸಿ. ಕಮರುದ್ದೀನ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕ್ಷೇತ್ರದಾದ್ಯಂತ ಮೆರವಣಿಗೆ ನಡೆಸಿ ಸಿಡಿಮದ್ದು ಪ್ರದರ್ಶಿಸಿ, ಸಿಹಿ ವಿತರಿಸಿ ಸಂಭ್ರಮ ಆಚರಿಸಿದರು.
ಮತ ಎಣಿಕೆ ಹಿನ್ನೆಲೆಯಲ್ಲಿ ಪೈವಳಿಕೆ ನಗರ ಸರಕಾರಿ ಹೈಯರ್ ಶಾಲೆ ಸಹಿತ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕಾಸರಗೋಡು ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.