ಮರೀಚಿಕೆಯಾದ ಮಳೆ; ಬತ್ತಿದ ಜಿಲ್ಲೆಯ ನದಿಗಳು
Team Udayavani, Apr 26, 2019, 6:24 AM IST
ಬದಿಯಡ್ಕ: ಈ ವರ್ಷ ಕೇರಳವನ್ನೇ ಮುಳುಗಿಸುವ ಮಳೆ ಬಂದರೂ ಸಕಾಲಕ್ಕೆ ಮಳೆ ಬಾರದಿರುವುದು ಭಾರೀ ಪರಿಣಾಮವನ್ನು ಎದುರಿಸುವಂತೆ ಮಾಡಿದೆ. ಹಿಂಗಾರು ಮಳೆ ಕಡಿಮೆ; ಜನರ ಜೀವನಾಡಿಯಾಗಿರುವ, ಕೃಷಿಗೆ ಪ್ರಧಾನ ಆಸರೆಯಾಗಿದ್ದ ನದಿಗಳು ಬತ್ತಿ ಹೋಗುವ ಪರಿಸ್ಥಿತಿ ಎದುರಾಗಿದೆ.
ಬಯಲಾದ ಪಯಸ್ವಿನಿ
ಪಯಸ್ವಿನಿ ಬತ್ತಿತೆಂದರೆ ಕಾಸರಗೋಡು ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು ಮೊದಲಾದ ಗ್ರಾಮ ಪಂಚಾಯತಿಗಳಲ್ಲಿ ನೀರಿಗೆ ಹಾಹಾಕಾರ ಆರಂಭವಾಗುತ್ತದೆ. ಈಗ ಪಯಸ್ವಿನಿ ನದಿಯು ನೀರಿಲ್ಲದೆ ಬಯಲಿನಂತಾಗಿದೆ. ಕಲ್ಲಿನ ಹಾಸು ಎದ್ದು ಕಾಣುತ್ತಿದೆ, ಹಲವೆಡೆ ಮಕ್ಕಳ ಆಟದ ಮೈದಾನವಾಗಿ ಪರಿಣಮಿಸಿದೆ. ನದಿಗೆ ಹೊಂದಿಕೊಂಡಿರುವ ಸಾಕಷ್ಟು ಕೃಷಿಕರು ಪಯಸ್ವಿನಿ ನದಿಯನ್ನು ಆಶ್ರಯಿಸುತ್ತಾರೆ. ಕುಡಿಯುವ ನೀರಿಗಾಗಿಯೂ ಉಪಯೋಗಿಸುತ್ತಾರೆ. ಪಯಸ್ವಿನಿಯ ಉದ್ದಗಲಕ್ಕೂ ಹರಡಿಕೊಂಡಿರುವ ಕಿರು ನೀರಾವರಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳು ಈಗ ಬಹುತೇಕ ಮುಚ್ಚಲ್ಪಟ್ಟು ಜನರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡಿದೆ. ನದಿಯ ಕಯಗಳಲ್ಲಿ ಮಾತ್ರಾ ಈಗ ನೀರು ಕಾಣಿಸುತ್ತಿದೆ. ಇವು ನದಿಯ ಸಮೀಪದ ಕೆಲವೊಂದು ಮಂದಿಗೆ ಪ್ರಯೋಜನಕಾರಿ. ನೀರಿಲ್ಲದಾಗ ಇಂತಹ ಕಯಗಳಲ್ಲಿ ಹತ್ತಾರು ಮೋಟಾರುಗಳು ಸೇರಿಕೊಳ್ಳುತ್ತವೆ.
ಇದರ ನೀರು ಹೆಚ್ಚೆಂದರೆ ಒಂದೆರಡು ವಾರಕ್ಕೆ ಸಾಕು! ಜಲ ಚರಗಳ ವಿಲಿವಿಲಿ ಒದ್ದಾಟ ಬೇರೆ. ಕೆಲವರಂತೂ ಇದ್ದ ಹೊಂಡಗಳಿಂದ ಸುಲಭವಾಗಿ ಮೀನುಗಳನ್ನು ಹಿಡಿಯುವ ಕಾಯಕಕ್ಕೆ ತೊಡಗಿಸಿಕೊಂಡು ಕುಷಿಪಡುತ್ತಾರೆ.
ನಾಶದಂಚಿನಲ್ಲಿ ತೋಟಗಳು
ನೀರಿನ ಕೊರತೆ ಎದುರಾದಾಗ ಕೃಷಿಕರು ಕಂಗಾಲಾಗುತ್ತಾರೆ. ಅದರ ಲ್ಲಿÉಯೂ ಅಡಕೆ ಕೃಷಿಕರು ತಮ್ಮ ವರ್ಷದ ದುಡಿತವೆಲ್ಲವನ್ನೂ ಕಳೆದುಕೊಳ್ಳುವ ದುಸ್ಥಿತಿಗೆ ಒಳಗಾಗುತ್ತಾರೆ. ನೀರು ಹಾಯಿಸಲಾಗದ ಸಾಕಷ್ಟು ಅಡಕೆ ತೋಟಗಳು ಈ ಪ್ರದೇಶದಲ್ಲಿವೆ. ಇಂತಹ ತೋಟಗಳ ಅಡಕೆ ಮರಗಳು ನ್ನು ಮಳೆ ಬಂದರೂ ಬದುಕಿ ಉಳಿಯುವುದು ಕಷ್ಟ. ಹಾಗಾಗಿ ಈ ಕಡು ಬೇಸಗೆ ಅಡಕೆ ಕೃಷಿಕರಿಗಂತೂ ಗಾಯಕ್ಕೆ ಬರೆ ಎಳೆದಂತೆಯೇ ಸರಿ.
ಸಮಸ್ಯೆ ಜಟಿಲ
ಕಾರಡ್ಕ ಗ್ರಾಮ ಪಂಚಾಯತ್‌ನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಡಲಾರಂಭಿಸಿದೆ. ಇಂತಹ ಕುಟುಂಬಗಳಿಗೆ ವಾಹನಗಳ ಮೂಲಕ ಕುಡಿಯುವ ನೀರಿನ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈಗಾಗಲೇ ಅಲ್ಪ ಸ್ವಲ್ಪ ನೀರು ವಿತರಣೆ ನಡೆಸುತ್ತಿದ್ದರೂ ಜನರ ಅಗತ್ಯಕ್ಕೆ ಬೇಕಾಗುವಷ್ಟು ಪೂರೈಕೆಯಾಗದಿರುವುದರಿಂದ ಸಮಸ್ಯೆ ಜಟಿಲವಾಗಿದೆ. ಅಧಿಕೃತರು ಈ ಬಗ್ಗೆ ಗಮನಹರಿಸಬೇಕಾಗಿದೆ.
– ರಮೇಶ ಕಾರಡ್ಕ ಗ್ರಾ.ಪಂ. ನಿವಾಸಿ
ಕೊಳವೆ ಬಾವಿಯಲ್ಲೂ ನೀರಿಲ್ಲ
ನೀರು ಬತ್ತುತ್ತಿರುವ ಸಮಸ್ಯೆ ಕೇವಲ ನದಿ, ಕೆರೆ, ಬಾವಿಗಳಿಗೆ ಮಾತ್ರಾ ಸೀಮಿತವಾಗಿಲ್ಲ. ಕೊಳವೆ ಬಾವಿಗಳನ್ನೂ ಬಿಟ್ಟಿಲ್ಲ. ಕೊಳವೆ ಬಾವಿ ತೋಡಿದರೂ ನೀರು ಸಿಕ್ಕೀತೆಂಬ ಗ್ಯಾರಂಟಿ ಇಲ್ಲ. ಇಂಚು ನೀರು ಲೆಕ್ಕಹಾಕುತ್ತಿದ್ದವರ ಬಾಯಿಯಿಂದಲೂ ನೀರಿಲ್ಲ ಎಂಬ ಮಾತು. ಒಂದೆಡೆ ಕೊಳವೆ ಬಾವಿ ಕೊರೆದರೆ ಇನ್ನೊಂದು ಬಾವಿಯ ನೀರು ಆರಿಹೋಗುತ್ತಿರುವುದಕ್ಕೆ ನಿದರ್ಶನಗಳಿವೆ. ಇಷ್ಟರ ತನಕ ಆರಿರದ ಬಾವಿಗಳಲ್ಲಿ ಈ ವರ್ಷ ನೀರಿನ ಪಸೆಯೂ ಉಳಿದಿಲ್ಲ.
– ಮೊಹಮ್ಮದ್ ಕುಂಞಿ ಸ್ಥಳೀಯ ನಿವಾಸಿ .
ಉಪ್ಪು ನೀರೇ ಗತಿ?
ಕಾಸರಗೋಡು ಪೇಟೆ, ಮುಳಿಯಾರು, ಚೆಂಗಳ ಗ್ರಾಮ ಪಂಚಾಯತ್ ಮೊದಲಾದ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಬಾವಿಕ್ಕೆರೆ ಕುಡಿಯುವ ನೀರು ಯೋಜನೆಗೂ ಪಯಸ್ವಿನಿ ನದಿಯ ನೀರೇ ಬೇಕು. ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದರೆ ನೀರು ಸರಬರಾಜು ಸ್ಥಗಿತಗೊಳ್ಳಬಹುದು. ಈಗ ವಾರಕ್ಕೊಮ್ಮೆ ಸರಬರಾಜಾಗುವ ಉಪ್ಪು ನೀರೂ ದೊರಕದ ಪರಿಸ್ಥಿತಿ ಎದುರಾಗಲಿದೆ. ಬಾವಿಕ್ಕೆರೆಯ ಸಮೀಪದಲ್ಲಿ ಪಯಸ್ವಿನಿ ನದಿಯಲ್ಲಿ ನೀರು ಬತ್ತಿರುವುದೇ ಸಮಸ್ಯೆ ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಒಂದು ತಿಂಗಳ ಕಾಲ ಇಲ್ಲಿನ ನೀರು ವಿತರಣೆ ಮೊಟಕುಗೊಂಡಿತ್ತು. ಪಯಸ್ವಿನಿ ನದಿಗೆ ಉಪ್ಪು ನೀರನ್ನು ತಡೆಯುವ ತಡೆಗೋಡೆ ಬಾವಿಕ್ಕೆರೆ ಸಮೀಪ ಆಲೂರಿನಲ್ಲಿ ನಿರ್ಮಾಣ ಪೂರ್ತಿಗೊಳ್ಳದ ಕಾರಣ ಪೇಟೆಯ ಮಂದಿ ಈ ವರ್ಷವೂ ಉಪ್ಪಿನ ರುಚಿ ನೋಡಬೇಕಾದೀತು.
- ಆಖೀಲೇಶ್ ನಗುಮುಗಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.