ಕೋಟೆಕಣಿಯ ರಸ್ತೆಯಲ್ಲೊಂದು ಮೃತ್ಯು ಕೂಪ
ನಗರಸಭೆ ರಸ್ತೆ ದುರವಸ್ಥೆ
Team Udayavani, Jul 25, 2019, 5:30 AM IST
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳು ಸ್ಥಳೀಯ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತದೆ. ಆದರೆ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗುತ್ತಿಲ್ಲ ಎಂಬುದು ಕಾಸರಗೋಡು ನಗರಸಭೆಯ ರಸ್ತೆಗಳನ್ನು ಗಮನಿಸಿದರೆ ಮನವರಿಕೆಯಾಗದಿರದು.
ಕಾಸರಗೋಡು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರ ವೆಂದು ಹೇಳಿಕೊಳ್ಳುತ್ತಿದ್ದರೂ ಈ ನಗರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಎಷ್ಟು ಸಮರ್ಥವಾಗಿದೆ ಎನ್ನುವುದು ಮಿಲಿ ಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಕಾಸರಗೋಡು ನಗರಸಭೆಯ ಹೊಸ ಬಸ್ ನಿಲ್ದಾಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಕೋಟೆಕಣಿಯ ರಸ್ತೆಯನ್ನೊಮ್ಮೆ ನೋಡಿದರೆ ಸಾಕು. ನಗರಸಭೆಯ ಅಭಿವೃದ್ಧಿ ಕಾರ್ಯ ಎಷ್ಟು ಸಮರ್ಥವಾಗಿ ನಡೆಯುತ್ತಿದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಾಗಿಲ್ಲ. ಕೋಟೆಕಣಿ ರಸ್ತೆಗೆ ಅಪೂರ್ಣವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಆದರೆ ಈ ರಸ್ತೆ ಕಾಂಕ್ರೀಟ್ ರಸ್ತೆ ಎಂದು ಯಾರೂ ಹೇಳಲಾರರು. ರಸ್ತೆಯಾದರೂ ಸಮರ್ಥವಾಗಿ ನಿರ್ಮಾಣವಾಗಿಲ್ಲ. ಜಲ್ಲಿ ರಸ್ತೆಯ ಮೇಲೆ ಎದ್ದು ಕಾಣಿಸುತ್ತಿದೆ. ರಸ್ತೆಯ ಬದಿಮಣ್ಣು ತುಂಬಿದ ಚರಂಡಿ ಒಂದೆಡೆಯಾದರೆ, ಇನ್ನೂ ಕೆಲವೆಡೆ ಚರಂಡಿ ಮೃತ್ಯು ಕೂಪವಾಗಿ ಬದಲಾಗಿದೆ.
ರಸ್ತೆ ಬದಿಯ ಚರಂಡಿಗೆ ಹಾಕಿದ ಸಿಮೆಂಟ್ ಸ್ಲ್ಯಾಬ್ ಗಳು ಮುರಿದು ಬಿದ್ದು ಚರಂಡಿಗೆ ಮುಚ್ಚುಗಡೆ ಇಲ್ಲದೆ ಅಪಾಯವನ್ನು ಕೈಬೀಸಿ ಕರೆಯುವಂತಿದೆ.
ಈ ರಸ್ತೆಯ ಅಲ್ಲಲ್ಲಿ ಸ್ಲ್ಯಾಬ್ ಗಳಿಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿವೆ. ರಸ್ತೆಯ ಪಕ್ಕದಲ್ಲೇ ಮೃತ್ಯು ಕೂಪ ಇರುವು ದರಿಂದ ಪಾದಚಾರಿಗಳಿಗೆ, ವಾಹನ ಗಳಿಗೆ ಅಪಾಯ ತಪ್ಪಿದ್ದಲ್ಲ. ಈ ಹೊಂಡಕ್ಕೆ ಬಿದ್ದಲ್ಲಿ ಕೈಕಾಲು ಮುರಿವುದಂತೂ ಖಚಿತ. ಸಾವೂ ಸಂಭವಿಸಲೂಬಹುದು. ಚರಂಡಿ ಅವ್ಯವಸ್ಥೆ ಯಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆಯಲ್ಲಿ ವಾಹನ ಸಾಗುವಾಗ ರಸ್ತೆ ಬದಿ ನಡೆದು ಹೋಗುವವರಿಗೆ ಕೆಸರು ನೀರಿನ ಅಭಿಷೇಕ ಸಾಮಾನ್ಯವಾಗಿದೆ. ಕೋಟೆಕಣಿಯ ಬಹುತೇಕ ವಿದ್ಯುತ್ ಬಲ್ಬ್ಗಳು ಬೆಳಗದೆ ಕೆಲವು ತಿಂಗಳುಗಳೇ ಸಂದಿವೆ. ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಕೋಟೆಕಣಿ ರಸ್ತೆಗೆ ಎದುರಾಗಿರುವ ಶಾಪದಿಂದ ಮುಕ್ತಗೊಳಿಸಬೇಕಾಗಿದೆ. ಅಪಾಯ ಸಂಭವಿಸುವ ಮುನ್ನವೇ ನಗರಸಭೆ ಕಣ್ಣು ತೆರೆಯಬೇಕಾಗಿದೆ. ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರು ಇಚ್ಛಾಶಕ್ತಿಯನ್ನು ತೋರಬೇಕಾಗಿದೆ.
ಆ. 3ರಂದು ಪ್ರತಿಭಟನ ಮಾರ್ಚ್
ನಗರದ ರಸ್ತೆಗಳು ಹೊಂಡಗಳಾಗಿ ಮಾರ್ಪಾಡುಗೊಂಡಿವೆ. ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಸೌಲಭ್ಯವಿಲ್ಲ. ವಾಹನ ಸಂಚಾರ ಕಷ್ಟಕರವಾಗಿದೆ. ತ್ಯಾಜ್ಯಗಳೆಲ್ಲ ರಸ್ತೆಯ ಬದಿಯಲ್ಲೇ ಕೊಳೆತು ದುರ್ನಾತ ಬೀರುತ್ತಿವೆ. ನಗರದ ಬೀದಿ ದೀಪಗಳು ಉರಿಯದೆ ಹಲವು ತಿಂಗಳುಗಳೇ ಕಳೆದವು. ಜನಜೀವನ ಕಷ್ಟಕರ ವಾಗಿದೆ. ಆಡಳಿತದ ಭ್ರಷ್ಟಾಚಾರವೇ ಇಂತಹ ಸಮಸ್ಯೆ ಗಳಿಗೆ ಕಾರಣವಾಗಿದೆ ಎಂದು ಕಾಸರ ಗೋಡು ನಗರಸಭಾ ಸದಸ್ಯ ರವೀಂದ್ರ ಪೂಜಾರಿ ಅವರು ಆರೋಪಿಸಿದ್ದಾರೆ. ನಗರವನ್ನು ಈ ಸ್ಥಿತಿಗೆ ತಲುಪಿಸಿದ ಮುಸ್ಲಿಂ ಲೀಗ್ ಆಡಳಿತ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಆ. 3ರಂದು ಕಾಸರಗೋಡು ನಗರಸಭೆಗೆ ಪ್ರತಿಭಟನ ಮಾರ್ಚ್ ನಡೆಸಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.