ಕಾಸರಗೋಡು ಡಿಸಿಗೆ ರಾಷ್ಟ್ರೀಯ ಪ್ರಶಸ್ತಿ
Team Udayavani, Jan 24, 2020, 6:30 AM IST
ಕಾಸರಗೋಡು : 2019- 20ನೇ ವರ್ಷದ ಇ- ಗವರ್ನೆನ್ಸ್‌ಗಿರುವ ರಾಷ್ಟ್ರೀಯ ಪ್ರಶಸ್ತಿಗೆ ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ಆಯ್ಕೆಯಾಗಿದ್ದಾರೆ.
ಕೇಂದ್ರ ಪರ್ಸನಲ್, ಪಬ್ಲಿಕ್ ಗ್ರಿವೆನ್ಸೆಸ್ ಆ್ಯಂಡ್ ಪೆನ್ಶನ್ಸ್ ಸಚಿವಾಲಯ ಸಿಬ್ಬಂದಿ ಆಡಳಿತ ಪರಿಷ್ಕಾರ ಇಲಾಖೆ ಏರ್ಪಡಿಸಿರುವ ಪುರಸ್ಕಾರಕ್ಕೆ ಅವರು ಆಯ್ಕೆಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ನೇತೃತ್ವದಲ್ಲಿ ವಿಶೇಷಚೇತನರಿಗಾಗಿ ಜಾರಿಗೊಳಿಸಿರುವ “ವೀ ಡಿಸರ್ವ್’ ಯೋಜನೆಗಾಗಿ ಈ ಪುರಸ್ಕಾರ ಸಂದಿದೆ. ಇ-ಗವರ್ನೆನ್ಸ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಯೋಜನೆಗಾಗಿ ಚಿನ್ನದ ಪದಕ ಇವರಿಗೆ ಲಭಿಸಲಿದೆ. ಫೆ. 8ರಂದು ಮುಂಬಯಿಯಲ್ಲಿ ನಡೆಯುವ ಇ-ಗವರ್ನೆನ್ಸ್ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಾಸರಗೋಡು ಜಿಲ್ಲೆಗೆ ಈ ಮೂಲಕ ಪ್ರಥಮ ಬಾರಿಗೆ ಈ ಪುರಸ್ಕಾರ ಲಭಿಸುತ್ತಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಜಿಲ್ಲಾ ಧಿಕಾರಿ ಅವರನ್ನು ಅಭಿನಂದಿಸಿದರು.
ಗಾಲಿಕುರ್ಚಿ, ಎಂ.ಆರ್. ಕಿಟ್, ಬ್ರೈಲಿ ಕೈನ್, ಸ್ಮಾರ್ಟ್ ಫೋನ್ ಸಹಿತ ಸಹಾಯಕ ಉಪಕರಣಗಳನ್ನು, ವಿವಿಧ ರೀತಿಯ ಕ್ರಚಸ್ ಸಹಿತ ಉಪಕರಣಗಳನ್ನು ಈ ಯೋಜನೆಯ ಅಂಗವಾಗಿ ಈಗಾಗಲೇ ವಿತರಣೆ ನಡೆಸಲಾಗಿದೆ. ಯೋಜನೆಯ ಅಂಗವಾಗಿ ನಡೆದ ಶಿಬಿರಗಳಲ್ಲಿ 19,578 ವಿಶೇಷಚೇತನರು ಭಾಗವಹಿಸಿದ್ದಾರೆ. ಇವರಲ್ಲಿ 4,886 ಮಂದಿಯ ಸಮಗ್ರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. 3,745 ಮಂದಿಗೆ ವೈದ್ಯಕೀಯ ಮಂಡಳಿಯ ಅರ್ಹತಾಪತ್ರ ಲಭಿಸಿದೆ. 21 ಗ್ರಾಮ ಪಂಚಾಯತ್‌ಗಳಲ್ಲಿ ಈ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಹಂತದಲ್ಲಿ ಎಲ್ಲ ವಿಶೇಷ ಚೇತನರಿಗೆ ಯು.ಡಿ.ಐ.ಡಿ. ಕಾರ್ಡ್ ಲಭಿಸಲಿದೆ. ಈ ಯೋಜನೆ ಜಾರಿ ಮೂಲಕ 2016ರ ರಾಷ್ಟ್ರೀಯ ವಿಶೇಷಚೇತನ ಕಾಯಿದೆ ಜಾರಿಗೊಳಿಸಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಕಾಸರಗೋಡಿಗೆ ಲಭಿಸಿದೆ.
“ವೀ ಡಿಸರ್ವ್’
ಅರ್ಹ ವ್ಯಕ್ತಿಗೆ ಸೂಕ್ತ ಅವಧಿಯಲ್ಲಿ ಅಗತ್ಯವಿರುವ ಸಹಾಯ ಒದಗಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ರಚಿಸಿದ ಯೋಜನೆ “ವೀ ಡಿಸರ್ವ್’. ಕೇಂದ್ರ ಸರಕಾರದ ಎ.ಡಿ.ಐ.ಪಿ. ಯೋಜನೆಯೊಂದಿಗೆ ಸಹಕರಿಸಿ ಈ ಯೋಜನೆ ಜಾರಿಗೊಳ್ಳುತ್ತಿದೆ. ಎ.ಡಿ.ಐ.ಪಿ. ಸ್ಕೀಂ ಪ್ರಕಾರ ಜಿಲ್ಲೆಯಲ್ಲಿ ನಡೆಸಿದ ಶಿಬಿರಗಳಲ್ಲಿ ಆಯ್ಕೆಗೊಂಡ ವಿಶೇಷ ಚೇತನರಿಗೆ ಕೇಂದ್ರ ಸರಕಾರಿ ಸಂಸ್ಥೆ ಅಲೀಂಕೋದ ಸಹಕಾರದೊಂದಿಗೆ ಸಹಾಯ ಉಪಕರಣಗಳನ್ನು ವಿತರಿಸಲಾಗಿದೆ. ಯೋಜನೆ ಪ್ರಕಾರ ಈಗಾಗಲೇ 757 ಅತ್ಯಾಧುನಿಕ ಸಹಾಯಕ ಉಪಕರಣಗಳನ್ನು ವಿತರಿಸಲಾಗಿದೆ. ಜಿಲ್ಲಾ ಆಡಳಿತಕ್ಕಾಗಿ ಕೇರಳ ಸಾಮಾಜಿಕ ಸುರಕ್ಷಾ ಮಿಷನ್ ಯೋಜನೆಯ ಏಕಸೂತ್ರತೆ ನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.