ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಕೇರಳಕ್ಕೆ ಹಿನ್ನಡೆ
Team Udayavani, Apr 12, 2018, 9:20 AM IST
ಕಾಸರಗೋಡು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಮತ್ತು ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ ಎಲ್ಲಾ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳು ಷಟ್ಪಥವಾಗಿ ಅಭಿವೃದ್ಧಿ ಹೊಂದುತ್ತಿರುವಂತೆಯೇ ಕೇರಳ ರಾಜ್ಯ ಮಾತ್ರ ಈ ವಿಷಯದಲ್ಲಿ ಹಿಂದಕ್ಕೆ ಸಾಗುತ್ತಿರುವುದು ನೋವಿನ ಹಾಗೂ ವಿಷಾದನೀಯ ಸಂಗತಿಯಾಗಿದೆ. ಇತರ ರಾಜ್ಯಗಳಿಗಿಂತ ಭಿನ್ನವಾಗಿ ಕೇರಳವು ಅತಿ ಹೆಚ್ಚು ಜನಸಾಂದ್ರತೆ ಇರುವ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮನವಿಯಂತೆ ಕೇರಳದ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥದ ಬದಲು ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂ ಸಾರಿಗೆ ಇಲಾಖೆಯು ಸಂಪೂರ್ಣ ಒಪ್ಪಿಗೆ ನೀಡಿತ್ತು. ಆದರೆ ಇದೇ ವೇಳೆ ಯೋಜನೆಯ ನಿಮಿತ್ತ ಅಗತ್ಯದ ಭೂಸ್ವಾಧೀನ ಕ್ರಮ ಆರಂಭಿಸಿದಾಗ ಅದನ್ನು ಪ್ರತಿಭಟಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಜನರು ಹೋರಾಟ ಆರಂಭಿಸಿದ್ದು, ಅದು ಭೂಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೊಂಡಲ್ಲಿ ಅದು ಕೇರಳದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ. ಆದರೆ ಅದಕ್ಕೆ ಅಡ್ಡಿಪಡಿಸಿದರೆ ಕೇರಳವು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಲಿದೆ. ಈ ಮಧ್ಯೆ ಅಗತ್ಯದ ಸ್ಥಳ ನೀಡಿದರೆ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಎಷ್ಟು ಬೇಕಾದರೂ ಅನುದಾನ ನೀಡಲು ಸಿದ್ಧವೆಂದು ಕೇಂದ್ರ ಭೂ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಯವರು ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಭೂಸ್ವಾಧೀನ ವಿರುದ್ಧ ಹಲವೆಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳು ರಾಜ್ಯ ಸರಕಾರದ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳ್ಳುವಂತೆ ಮಾಡುತ್ತಿವೆ.
ಕಾಸರಗೋಡು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಗತ್ಯದ ಭೂಸ್ವಾಧೀನ ಕ್ರಮ ಭರದಿಂದ ಸಾಗುತ್ತಿದೆ. ಜಿಲ್ಲೆಯ ತಲಪಾಡಿಯಿಂದ ಕಾಲಿಕ್ಕಡವು ತನಕದ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ಹಂತದ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಮಂಜೇಶ್ವರ, ಉಪ್ಪಳ, ಕುಂಬಳೆ, ಕಾಸರಗೋಡು, ಕಾಂಞಂಗಾಡು, ನೀಲೇಶ್ವರ ಸೇರಿದಂತೆ ಎಲ್ಲ ಪ್ರದೇಶಗಳಲ್ಲೂ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಲವು ಕಡೆಗಳಲ್ಲಿ ಮೇಲ್ಸೇತುವೆ (ಓವರ್ ಬ್ರಿಡ್ಜ್ ) ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆಯೂ ಅಂತಿಮ ಚರ್ಚೆ ಮುಂದುವರಿದಿದೆ. ಇದೇ ವೇಳೆ ಹೋರಾಟದ ಹಿನ್ನೆಲೆಯಲ್ಲಿ ಉಳಿದ ಜಿಲ್ಲೆಗಳಲ್ಲಿ ಪ್ರಕ್ರಿಯೆ ಇನ್ನೂ ಆರಂಭಗೊಳ್ಳದಿರುವುದು ದುರದೃಷ್ಟಕರ. ಇದು ರಾಜ್ಯದ ಒಟ್ಟು ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ದಾರಿ ಮಾಡಿಕೊಡಲಿದೆ.
ಅಭಿವೃದ್ಧಿಗೆ ಜನರದ್ದೇ ಅಸಹಕಾರ
ಕಾಸರಗೋಡಿನಿಂದ ಆರಂಭಗೊಂಡು ತಿರುವನಂತಪುರದ ವರೆಗೆ 590 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು 26,000 ಕೋಟಿ ರೂ.ಗಳನ್ನು ಒದಗಿಸಲು ಮುಂದಾಗಿದೆ. ಆದರೆ ಈ ಪೈಕಿ ಕೇವಲ 120 ಕಿಲೋ ಮೀಟರ್ ಭೂಮಿ ಸ್ವಾಧೀನಪಡಿಸುವ ಟೆಂಡರ್ ಕ್ರಮ ಮಾತ್ರವೇ ಪೂರ್ತಿಯಾಗಿದೆ. ಬಾಕಿ ಉಳಿದಿರುವ ಭೂಸ್ವಾಧೀನಕ್ಕೆ ಸರ್ವೇ ಆರಂಭಿಸಿದಾಗ ಅದನ್ನು ಹಲವೆಡೆಗಳಲ್ಲಿ ಸ್ಥಳೀಯರು ತಡೆದ ಹಿನ್ನೆಲೆಯಲ್ಲಿ ಅದು ಘರ್ಷಣೆಗೂ ದಾರಿ ಮಾಡಿಕೊಟ್ಟಿದೆ. ಇಂತಹ ಬೆಳವಣಿಗೆಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ತಡೆಯಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಕೇರಳದ ಇತರ ಗ್ರಾಮೀಣ ಪ್ರದೇಶಗಳ ಪ್ರಗತಿಗೂ ಇದು ಮಾರಕವಾಗಿದ್ದು, ಆಧುನಿಕ ವ್ಯವಸ್ಥೆ ರಾಜ್ಯಕ್ಕೆ ನಷ್ಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.