ಕಾಸರಗೋಡಿನ ಸಾಹಿತ್ಯ ಲೋಕ:ನೀರ್ಚಾಲು ಕೃಷ್ಣ ಮಧ್ಯಸ್ಥ
Team Udayavani, May 14, 2018, 6:45 AM IST
ಕಾಸರಗೋಡಿನ ಪವಿತ್ರ ನೆಲದಲ್ಲಿ ಜನಿಸಿ, ಪ್ರಖ್ಯಾತ ವಾದ ನೀರ್ಚಾಲು ಮಹಾಜನ ಸಂಸ್ಕೃತ ಮಹಾ ವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಹೊರನಾಡುಗಳಲ್ಲಿ ಉದ್ಯೋಗ ನಿರ್ವಹಿಸುವುದ ರೊಡನೆ ಕನ್ನಡ ಸಾಹಿತ್ಯ – ಕಲೆಗಳಲ್ಲಿ ತೊಡಗಿಸಿಕೊಂಡು ಕಾಸರಗೋಡಿನ ಸಾಹಿತ್ಯಲೋಕಕ್ಕೆ ಕೀರ್ತಿಯನ್ನು ತಂದಂತಹ ಅನೇಕ ಮಂದಿ ವಿದ್ವಾಂಸರಿದ್ದಾರೆ. ಇಂತಹವರಲ್ಲಿ ನೀರ್ಚಾಲು ಕೃಷ್ಣ ಮಧ್ಯಸ್ಥರೂ ಓರ್ವರು.
ಕಾಸರಗೋಡು ನೆಲದಲ್ಲಿ ನೆಲೆಸಿರುವ ಹವ್ಯಕ ಬ್ರಾಹ್ಮಣರಲ್ಲಿ ಮಧ್ಯಸ್ಥರದ್ದು ಒಂದು ಪ್ರತಿಷ್ಠಿತ ಮನೆತನ. ಹಿಂದೆ ಮಾಯಿಪ್ಪಾಡಿ ರಾಜರಿಗೆ ಬಗೆಹರಿಸಲಾಗದ ವ್ಯಾಜ್ಯವೊಂದನ್ನು ಈ ಮನೆತನದ ಹಿರಿಯರೊಬ್ಬರು ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದುದರಿಂದ ಅರಸರು ಈ ಮನೆತನದವರಿಗೆ “ಮಧ್ಯಸ್ಥ’ ಎಂಬ ಬಿರುದಿನೊಂದಿಗೆ ಬೇಳ ಗ್ರಾಮದ ಕುಂಜಾರುನಲ್ಲಿ ಸ್ಥಳವನ್ನೂ ಉಂಬಳಿ ಯಾಗಿ ನೀಡಿದರು. ಅಂದಿನಿಂದ ಈ ಮನೆತನದವರು ಮಧ್ಯಸ್ಥರೆಂದೇ ಕರೆಯಲ್ಪಟ್ಟರು ಎಂಬ ಹೇಳಿಕೆಯಿದೆ.
ಈ ಮನೆತನದಲ್ಲಿ ಯಕ್ಷಗಾನದ ಹಿಮ್ಮೇಳವಾದಕರೂ ಅರ್ಥಧಾರಿಗಳೂ ಆಗಿದ್ದ ಈಶ್ವರ ಮಧ್ಯಸ್ಥ – ದೇವಕಿ ಅಮ್ಮ ದಂಪತಿಗೆ ಮೂವರು ಪುತ್ರರು ಮತ್ತು ಐವರು ಪುತ್ರಿಯರು. ಅವರಲ್ಲಿ ಮೂರನೇ ಪುತ್ರರಾಗಿ ನೀರ್ಚಾಲು ಕೃಷ್ಣ ಮಧ್ಯಸ್ಥರು 1943 ಜೂನ್ 2ರಂದು ಜನಿಸಿದರು. ತ್ರಿಭಾಷಾ ಪಂಡಿತರೂ ಹಲವು ನಾಟಕ – ಪ್ರಸಂಗಕರ್ತರೂ ಆಗಿದ್ದ ದಿ|ನೀರ್ಚಾಲು ನಾರಾಯಣ ಮಧ್ಯಸ್ಥರು (ನೀ.ನಾ.ಮಧ್ಯಸ್ಥ) ಮತ್ತು ನಿವೃತ್ತ ಶಿಕ್ಷಕ, ಶ್ರೀ ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಸಹೋದರರು. ಸರಸ್ವತಿ, ಪರಮೇಶ್ವರಿ, ಶಂಕರಿ, ಶಕುಂತಲೆ, ಲಕ್ಷಿ$¾à ಸಹೋದರಿಯರು.
ಕೃಷ್ಣ ಮಧ್ಯಸ್ಥರು ತನ್ನ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದ ತನಕ ನೀರ್ಚಾಲಿನ ಮಹಾಜನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪಡೆದರು. ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ, ಪದವಿಯನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಹಾಗೂ ಶಿಕ್ಷಕರ ತರಬೇತಿಯನ್ನು ರೀಜಿನಲ್ ಕಾಲೇಜ್ ಆಫ್ ಎಜುಕೇಶನ್ ಮೈಸೂರಿನಲ್ಲಿ ಪಡೆಯುವುದರೊಂದಿಗೆ ಖಾಸಗಿಯಾಗಿ ಹಿಂದಿರತ್ನ ಮತ್ತು ಕನ್ನಡರತ್ನ ಪದವಿಯನ್ನು ಗಳಿಸಿದರು.
ಕೃಷ್ಣ ಮಧ್ಯಸ್ಥರು ಸುಮಾರು 40 ವರ್ಷಗಳ ಕಾಲ ಶಿಕ್ಷಕ ವೃತ್ತಿ ಜೀವನವನ್ನು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರದ ಹಿರಿಯ ಪ್ರಾಥಮಿಕ ಶಾಲೆ, ನಿರ್ಮಲಾ ಬಾಲಿಕಾ ಪ್ರೌಢ ಶಾಲೆ, ರೋಟರಿ ಶಾಲೆ, ಸೇವಾ ಸಾಗರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮೊದಲಾದ ವಿದ್ಯಾಲಯಗಳಲ್ಲಿ ಕನ್ನಡ, ಹಿಂದಿ, ಸಂಸ್ಕೃತ ಶಿಕ್ಷಕರಾಗಿ ದುಡಿದು ನಿವೃತ್ತಿಯಾದರು. ನೀರ್ಚಾಲು ಮಧ್ಯಸ್ಥ ಕುಟುಂಬದಲ್ಲಿ ಶಿಕ್ಷಣ ಪಡೆದವರಲ್ಲಿ ಹೆಚ್ಚಿನವರೂ ಕೃಷಿಕರಾಗಿ, ಸಾಹಿತಿಗಳಾಗಿ, ಯಕ್ಷಗಾನ ಅರ್ಥಧಾರಿ – ಕಲಾವಿದರಾಗಿ, ಪತ್ರಕರ್ತರಾಗಿ ಮಿಂಚಿದವರಾಗಿದ್ದಾರೆ. ಕೃಷ್ಣ ಮಧ್ಯಸ್ಥರಿಗೂ ಎಳವೆಯಲ್ಲಿಯೇ ಸಾಹಿತ್ಯ ರಚನೆ ಮತ್ತು ಯಕ್ಷಗಾನದ ಬಗ್ಗೆ ಒಲವು ಇದ್ದು ಅವುಗಳನ್ನು ಕೈಗೂಡಿಸಿಕೊಂಡರು.
ಕೃಷ್ಣ ಮಧ್ಯಸ್ಥರು ವಾಗ್ಮಿ, ಕವಿ, ಸಾಹಿತಿ, ಸಾಹಿತಿ, ಯಕ್ಷಗಾನದ ಹವ್ಯಾಸಿ ಕಲಾವಿದ, ನಾಟಕಕಾರ, ರಂಗನಟ, ತಾಳಮದ್ದಳೆಯ ಅರ್ಥಧಾರಿ, ಪ್ರಸಂಗಕತೃì, ಸಂಘಟಕರಾಗಿ ಗುರುತಿಸಿಕೊಂಡವರು. ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನಗಳ, ಗಮಕ ಕಲಾಸಂಘ, ತಾಳಮದ್ದಳೆ ಕಲಾಸಂಘಗಳಲ್ಲಿ, ಹವ್ಯಾಸಿ ಯಕ್ಷಗಾನ ಮೇಳಗಳಲ್ಲಿ, ಯಕ್ಷಗಾನ ಕಲಾಸಾಗರ ಪ್ರತಿಷ್ಠಾನದಲ್ಲಿ, ಸಂಸ್ಕೃತ ಸಾಗರ ಪ್ರತಿಷ್ಠಾನ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡವರು. ಪರಂಪರೆಯ ಮಧ್ಯಮ ತರಗತಿಯ ಸುಮಾರು 2,500ಕ್ಕೂ ಮಿಕ್ಕಿದ ತಾಳಮದ್ದಳೆಗಳಲ್ಲಿ ಸಂಭಾವನೆ ರಹಿತವಾಗಿ ಅರ್ಥಗಾರಿಕೆಯಲ್ಲಿ ಭಾಗವಹಿಸಿದವರು. ಸುಮಾರು 250ಕ್ಕೂ ಮಿಗಿಲಾಗಿ ಯಕ್ಷಗಾನ ಬಯಲಾಟದ ಪಾತ್ರಧಾರಿಯಾಗಿ ಮಿಂಚಿದವರು. ಸುಮಾರು 100ಕ್ಕೂ ಮಿಗಿಲಾಗಿ ಗಮಕ ವ್ಯಾಖ್ಯಾನ ನೀಡಿದ ಅನುಭವವುಳ್ಳವರು.ಕೃಷ್ಣ ಮಧ್ಯಸ್ಥರು ಶಿಕ್ಷಕ, ಸಾಹಿತ್ಯ ಕಲಾಸೇವೆಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. ಯಕ್ಷಗಾನ ಕಲಾರಾಧಕ ಪ್ರಶಸ್ತಿಯು ಇವರ ಪಾಲಿಗೆ ಬಂದಿರುತ್ತದೆ.
ಈಗ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನೆಲೆಸಿರುವ ಕೃಷ್ಣ ಮಧ್ಯಸ್ಥರ ಸಹಧರ್ಮಿಣಿ ಗಿರಿಜಾ. ಈ ದಂಪತಿಗೆ ವಿದ್ಯಾ ಮತ್ತು ದಿವ್ಯಾ ಎಂಬ ಎರಡು ಹೆಣ್ಣು ಮಕ್ಕಳು. ಏಕಮಾತ್ರ ಪುತ್ರ ಪ್ರಶಾಂತ ಮಧ್ಯಸ್ಥ ಬಡಗುತಿಟ್ಟು ಯಕ್ಷಗಾನದ ಹವ್ಯಾಸಿ ಭಾಗವತರು ಮತ್ತು ಅರ್ಥಧಾರಿ. ಅಲ್ಲದೆ ವಿಶೇಷವಾಗಿ ಯಕ್ಷಗಾನ ಅಷ್ಠಾವಧಾನಿಯೂ ಆಗಿರುತ್ತಾರೆ.
25ಕ್ಕೂ ಹೆಚ್ಚು ಕೃತಿ ರಚನೆ
ಕೃಷ್ಣ ಮಧ್ಯಸ್ಥರು ಸುಮಾರು 25ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚನೆ ಮಾಡಿರುತ್ತಾರೆ. ಇವುಗಳಲ್ಲಿ ಗಜೇಂದ್ರ ಮೋಕ್ಷ, ವರದಾ ಮಹಾತೆ¾, ಶ್ರೀಕೃಷ್ಣ ಲೀಲೆ (ಮಕ್ಕಳ ಯಕ್ಷಗಾನ ನೃತ್ಯ ರೂಪಕ), ಕ್ಷಮಾದಾನ(ಬೈಬಲ್ ಕಥೆಯ ಆಧಾರಿತ ಯಕ್ಷಗಾನ), ರಾಣಿ ಸಾಧನಾ, ಅಂಡೆಪುಸಲ ಪುಸ್ಕಾ ಸೋಜರ ಕಾಳಗ(ಅಣಕು ಯಕ್ಷಗಾನ)ಇವು ಯಕ್ಷಗಾನ ಪ್ರಸಂಗಗಳು. ಅವುಗಳಲ್ಲಿ 3 ಪ್ರಕಟಿತ ಮತ್ತು 3 ಅಪ್ರಕಟಿತವಾಗಿವೆ. ಸೋಲಿನಲ್ಲೂ ಗೆಲುವು, ಹೆಣ್ಣಿನ ಕೈವಾಡ, ನೊಂದ ಮಾತೆ, ಪ್ರಾಯಶ್ಚಿತ್ತ, ಭಕ್ತ ಪುಂಡಲೀಕ, ಭಕ್ತಿ ಪರೀಕ್ಷೆ, ಸಿನಿಮಾ ಫೂಲ್, ಜ್ಞಾನಶ್ರೀ ಹೀಗೆ ಒಟ್ಟು 8 ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಒಂದು ಪ್ರಕಟಿತ ಮತ್ತು 7 ಅಪ್ರಕಟಿತ ಕೃತಿಗಳಾಗಿವೆ.
ಶಾಕುಂತಲಾ, ಸೃಷ್ಟಿ, ರಕ್ಷೆ, ಕ್ರಿಸ್ತ ಜನನ, ಬೆಳಗಿದ ಜ್ಯೋತಿ, ನ್ಯಾಯ ರಕ್ಷೆ, ನುಡಿದಂತೆ ನಡೆಯುತ್ತಾರೆಯೇ ಎಂಬ 6 ಗೀತನಾಟಕಗಳು ಅಪ್ರಕಟಿತವಾದರೂ ಹಲವಾರು ರಂಗಪ್ರಯೋಗಗಳನ್ನು ಕಂಡಿವೆ. ಗೇಯ ಗೀತೆಗಳು (ಭಾಗ 1 ಮತ್ತು 2) ಗೀತಾ ಸಂಕಲನಗಳು, 3 ಸಂಪಾದನಾ ಗ್ರಂಥಗಳು ಅಲ್ಲದೆ ಹಲವಾರು ಮಕ್ಕಳ ನೃತ್ಯ ಗೀತೆಗಳನ್ನು ರಚಿಸಿದ್ದಾರೆ. ಇವರ ನೂರಾರು ಬರಹಗಳು ಬಿಡಿಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
– ಲೇ: ಕೇಳು ಮಾಸ್ತರ್ ಅಗಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.