ಕಾಸರಗೋಡಿನಲ್ಲಿ ಏಳು ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ
Team Udayavani, Mar 27, 2018, 9:35 AM IST
ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಮಾ. 27ರಂದು ನಡೆಯಲಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬೆಂಗಳೂರಿನ ವಿ.ಕೆ.ಎಂ. ಕಲಾವಿದರು ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಸಮಾರಂಭದೊಂದಿಗೆ ಕಾಸರಗೋಡು ಕರ್ನಾಟಕ ಉತ್ಸವ ನಡೆಯಲಿದೆ. ವಿಶ್ವರಂಗಭೂಮಿ ದಿನಾಚರಣೆಯನ್ನು ಮಾ. 27ರಂದು ಸಂಜೆ 5 ಗಂಟೆಗೆ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಸಾಹಿತ್ಯ, ರಂಗಭೂಮಿ, ಯಕ್ಷಗಾನ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಕಾಸರಗೋಡಿನ ಮೂರು ಮಂದಿ ಸಹಿತ ಕರ್ನಾಟಕದ ಒಟ್ಟು 7 ಮಂದಿಗೆ ವಿಶ್ವರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದಿವಾಕರ ಪಿ. ಅಶೋಕನಗರ
ಕಳೆದ ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ದಿವಾಕರ ಪಿ. ಅಶೋಕನಗರ ಅವರು ಗಡಿನಾಡು ಕಲಾವಿದರು ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು. ಪ್ರಕೃತ ಈ ಸಂಸ್ಥೆಯ ಕಾರ್ಯದರ್ಶಿ. ರಂಗಭೂಮಿಯ ಎಲ್ಲ ಆಯಾಮಗಳನ್ನು ಬಲ್ಲವರು. ಹಿನ್ನೆಲೆ ಗಾಯನ, ಅಭಿನಯ, ರಂಗಸಜ್ಜಿಕೆ, ಬೆಳಕು-ಧ್ವನಿ ಸಂಯೋಜನೆಯಲ್ಲಿ ಪರಿಣತರು. ಇವರು ಬೆಳಕು ಸಂಯೋಜನೆ ಮಾಡಿದ ನಾಟಕಗಳು ಕರ್ನಾಟಕ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಿಟ್ಟಿಸಿವೆ. ಉತ್ತಮ ಗಾಯಕರಾಗಿರುವ ದಿವಾಕರ ಅವರು ಭಾವ-ಭಕ್ತಿ ಗೀತೆಗಳನ್ನು ಶ್ರುತಿ ಮಧುರವಾಗಿ ಹಾಡಬಲ್ಲರು.
ಕೆ.ವಿ. ರಮಣ್ ಮಂಗಳೂರು
25 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರು. ನಾಟಕ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಆಕಾಶವಾಣಿಯ ಶ್ರೇಣೀಕೃತ ನಾಟಕ ಮತ್ತು ಸುಗಮ ಸಂಗೀತ ಕಲಾವಿದ. 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದು, ಅಂತಾರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಇವರ ನಾಟಕಗಳು 2 ಬಾರಿ ಪ್ರಥಮ ಬಹುಮಾನ ಪಡೆದಿವೆ. ಇವರ ನೃತ್ಯ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಮಾಧ್ಯಮ, ಸಂಗೀತ, ನೃತ್ಯ, ನಾಟಕ ತರಬೇತಿ ನೀಡುತ್ತಿದ್ದಾರೆ.
ಸಿರಿಬಾಗಿಲು ರಾಮಕೃಷ್ಣ ಮಯ್ಯ
ಭಾಗವತ ಎಂದರೆ ಯಕ್ಷಗಾನ ರಂಗಭೂಮಿಯ ನಿರ್ದೇಶಕ. ಸಿರಿಬಾಗಿಲು ರಾಮಕೃಷ್ಣ ಮಯ್ಯರು ಧರ್ಮಸ್ಥಳ ಮೇಳದ ಭಾಗವತರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸ್ಥಾಪಿಸಿ ಯಕ್ಷಗಾನ ಪೂರ್ವರಂಗ, ಅರ್ಥಾಂತರಂಗವನ್ನು ಹೊಸ ಜನಾಂಗಕ್ಕೆ ಪರಿಚಯಿಸುತ್ತಿದ್ದಾರೆ. ಸಾಧಕರಿಗೆ ಪ್ರತೀ ವರ್ಷವೂ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಪರಂಪರೆಯ ಉಳಿವಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವ ರಾಮಕೃಷ್ಣ ಮಯ್ಯರು ರಂಗಭೂಮಿಯ ಬಗ್ಗೆಯೂ ಪರಿಜ್ಞಾನವಿರುವ ಸಮರ್ಥ ಸಂಪನ್ಮೂಲ ವ್ಯಕ್ತಿ.
ರಾಧಾಕೃಷ್ಣ ಕೆ.ಉಳಿಯತ್ತಡ್ಕ
ಕವಿಯಾಗಿ, ಪತ್ರಕರ್ತರಾಗಿ ಜನಪ್ರಿಯರಾಗಿರುವ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಹಲವಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಅವುಗಳು ಶಾಲಾ ಕಲೋತ್ಸವ, ಕೇರಳ್ಳೋತ್ಸವಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬಹುಮಾನಗಳಿಸಿವೆ. ಸಾಕ್ಷರತಾ ಚಳವಳಿಯ ಸಂದರ್ಭದಲ್ಲಿ ನಾಟಕ ತಂಡವನ್ನು ಕಟ್ಟಿ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿದ್ದಾರೆ. ಆಕಾಶವಾಣಿಯಲ್ಲೂ ಪ್ರಸಾರವಾಗಿದೆ. ನೆಹರೂ ಯುವ ಕೇಂದ್ರದ ಸಾಂಗ್ಸ್ ಆ್ಯಂಡ್ ಡ್ರಾಮಾ ವಿಭಾಗದ ತೀರ್ಪುಗಾರರಾಗಿ ಕೇರಳದಾದ್ಯಂತ ಸಂಚರಿಸಿದ್ದಾರೆ. ಕೆಲವು ಏಕಾಂಕ ನಾಟಕಗಳನ್ನು ಮಲಯಾಳದಿಂದ ಅನುವಾದಿಸಿದ್ದಾರೆ. ಪತ್ರಿಕೆಗಳಲ್ಲಿ ನಾಟಕ ವಿಮರ್ಶೆ, ಇತರ ಕಲಾ ಪ್ರಕಾರಗಳ ವಿಮರ್ಶೆ ಪ್ರಕಟವಾಗುತ್ತಿವೆ.
ಕನ್ನಡ ಗ್ರಾಮದಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ರಂಗಭೂಮಿ ಸಾಧಕರು ಹಾಗೂ ಸಂಘಟಕರಾದ ಬೆಂಗಳೂರಿನ ಎಂ.ಆರ್. ರಂಗರಾಮಯ್ಯ, ರತ್ನಾ ನಾಗೇಶ್, ಪಣಜಿಯ ಅರುಣ್ ಕುಮಾರ್ ಅವರನ್ನೂ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ವಿಕೆಎಂ ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಚುಟುಕು ಯೋಜನೆಗಳ ಉದ್ಘಾಟನೆ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಘಟಕಗಳ ನೂತನ ಯೋಜನೆಗಳನ್ನು ಮಾ.27 ರಂದು ಅಪರಾಹ್ನ 2 ಕ್ಕೆ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಂ.ಜಿ.ಆರ್.ಅರಸ್ ಉದ್ಘಾಟಿಸುವರು. ವಿ.ಬಿ. ಕುಳಮರ್ವ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಹರೀಶ್ ಸುಲಾಯ ಒಡ್ಡಂಬೆಟ್ಟು, ಕೆ. ಪುರುಷೋತ್ತಮ ಭಟ್ ಉಪನ್ಯಾಸ ನೀಡುವರು. ಬಳಿಕ ಚುಟುಕು ಗೋಷ್ಠಿ ನಡೆಯಲಿದೆ. ವಿರಾಜ್ ಅಡೂರು ಸಂಯೋಜಕರಾಗಿ ಸಹಕರಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ
Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.