ಕೇರಳದಲ್ಲಿ ಶೇ. 75ರಷ್ಟು ಶಾಲಾ ಕೊಠಡಿಗಳು ಹೈಟೆಕ್
Team Udayavani, May 4, 2018, 6:10 AM IST
ಕಾಸರಗೋಡು: 2018- 19ನೇ ಶೈಕ್ಷಣಿಕ ವರ್ಷ ಆರಂಭ ಗೊಳ್ಳಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಜೂನ್ 1ರಿಂದಲೇ ಅನ್ವಯವಾಗುವಂತೆ ಕೇರಳ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಅಭಿಯಾನದಡಿ ರಾಜ್ಯದ ಶೇಕಡಾ 75ರಷ್ಟು ತರಗತಿ ಕೊಠಡಿಗಳು ಹೈಟೆಕ್ ಟಚ್ ಪಡೆದುಕೊಂಡಿವೆ.
ಸಾರ್ವಜನಿಕ ಶಿಕ್ಷಣ ವಲಯದ ವ್ಯಾಪ್ತಿಯಲ್ಲಿ ಬರುವ ಸುಮಾರು 34,500 ಶಾಲಾ ತರಗತಿ ಕೊಠಡಿಗಳು ಲ್ಯಾಪ್‌ಟಾಪ್, ಪ್ರಾಜೆಕ್ಟರ್, ಸ್ಪೀಕರ್ ಹಾಗೂ ಇನ್ನಿತರ ಅತ್ಯಾಧುನಿಕ ಮಾದರಿಯ ಉಪಕರಣಗಳೊಂದಿಗೆ ಹೈಟೆಕ್ ಆಗಿವೆ. ಮುಂದಿನ ಶೈಕ್ಷಣಿಕ ವರ್ಷವು ಜೂನ್ ಮೊದಲ ವಾರದಿಂದ ಆರಂಭಗೊಳ್ಳಲಿದ್ದು, ಇದಕ್ಕೆ ಮೊದಲೇ ಇನ್ನಷ್ಟು ತರಗತಿ ಕೊಠಡಿಗಳನ್ನು ಸಾರ್ವಜನಿಕರ, ಹಳೆ ವಿದ್ಯಾರ್ಥಿಗಳ, ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ಹೈಟೆಕ್‌ಗೊಳಿಸಲು ನಿರ್ಧರಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಅಭಿಯಾನದ ಪ್ರಯುಕ್ತ ರಾಜ್ಯ ಸರಕಾರದ ಕಂಪೆನಿಯಾದ ಕೇರಳ ಇನ್‌ಫ್ರಾಸ್ಟ್ರಕ್ಚರ್ ಆ್ಯಂಡ್ ಟೆಕ್ನಾಲಜಿ ಫಾರ್ ಎಜ್ಯುಕೇಶನ್ (ಕೆಐಟಿಇ) ಸಹಭಾಗಿತ್ವದಲ್ಲಿ ಶಾಲಾ ಕೊಠಡಿಗಳನ್ನು ಹೈಟೆಕ್ ಗೊಳಿಸಲಾಗುತ್ತಿದೆ.
ಕೇರಳದ ಒಟ್ಟು 14 ಜಿಲ್ಲೆಗಳ ಆಯ್ದ ಸರಕಾರಿ ಶಾಲೆಗಳಲ್ಲಿ ಈಗಾಗಲೇ ಲ್ಯಾಪ್‌ಟಾಪ್, ಮಲ್ಟಿ ಮೀಡಿಯಾ ಪ್ರಾಜೆಕ್ಟರ್‌ಗಳು, ಗೋಡೆಯ ಮೇಲಿನ ಪ್ರಾಜೆಕ್ಟರ್‌ಗಳು, ಯುಎಸ್‌ಬಿ ಸ್ಪೀಕರ್, ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಇವುಗಳೆಲ್ಲಾ ಕಾರ್ಯಾಚರಿಸುವ ಸಲುವಾಗಿ ಹೈಸ್ಪೀಡ್ ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಸಹ ಒದಗಿಸಲಾಗಿದೆ. ಕೆಐಟಿಇ ಸಂಸ್ಥೆಯು ಈಗಾಗಲೇ ಹೈಟೆಕ್ ತರಗತಿ ನಡೆಸುವ ಕುರಿತು ಈ ಉಪಕರಣಗಳನ್ನು ಬಳಸುವ ಬಗ್ಗೆ ಅಧ್ಯಾಪಕರಿಗೆ ತರಬೇತಿ ನೀಡಲು ಆರಂಭಿಸಲಾಗಿದೆ.
ಮುಂದೆ ವಿಡಿಯೋ ಕಾನ್ಫರೆನ್ಸ್
ಈ ಮಹತ್ವಾಕಾಂಕ್ಷಿ ಯೋಜನೆಯ ಮುಂದಿನ ಹಂತದಲ್ಲಿ ತರಗತಿ ಕೊಠಡಿಗಳಲ್ಲಿ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಕೂಡ ಅಳವಡಿಸಲು ತೀರ್ಮಾನಿಸಲಾಗಿದೆ. ಈ ಶಾಲೆಗಳಲ್ಲಿ ಮಲ್ಟಿ ಫಂಕ್ಷನ್ ಪ್ರಿಂಟರ್‌ಗಳು, ಎಚ್‌ಡಿ ಡಿಜಿಟಲ್ ಹ್ಯಾಂಡಿಕ್ಯಾಮ್, ಎಚ್‌ಡಿ ವೆಬ್‌ಕ್ಯಾಮ್, ಎಲ್‌ಇಡಿ ಟಿವಿ ಮುಂತಾದವುಗಳನ್ನು ಒದಗಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಎಲ್ಲ ಶಿಕ್ಷಕರಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು. ವಿದ್ಯಾಭ್ಯಾಸ ಇಲಾಖೆಯು ಸಮಗ್ರ ರಿಸೋರ್ಸ್ ಪೋರ್ಟಲ್ ಮೂಲಕ ವಿಷಯ ಹಾಗೂ ಪಠ್ಯ ಯೋಜನೆಗಳನ್ನು ಸಿದ್ಧಪಡಿಸಿದ್ದು, ಅದರನ್ವಯ ಮುಂದಿನ ಚಟುವಟಿಕೆಗಳನ್ನು ಜಾರಿಗೆ ತರುತ್ತಿದೆ.
493.50 ಕೋ. ರೂ. ಮಂಜೂರು
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞವನ್ನು ಈಗಿನ ಎಲ್‌ಡಿಎಫ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ 2016ರ ಮೊದಲ ಮುಂಗಡಪತ್ರದಲ್ಲಿ ಘೋಷಿಸಿತ್ತು. ಕಳೆದ ಯುಡಿಎಫ್ ಸರಕಾರ ಕೂಡ ಈ ಯೋಜನೆಗೆ ವಿಶೇಷ ಮಹತ್ವ ನೀಡಿತ್ತು.
ರಾಜ್ಯದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಗಾಗಿ ಕೇರಳ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಫಂಡ್ ಬೋರ್ಡ್ (ಕಿಫ್‌ಬಿ) ಮೂಲಕ 493.50 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಪ್ರಥಮ ಹಂತದಲ್ಲಿ ಕೇರಳದ 140 ವಿಧಾನಸಭಾ ಕ್ಷೇತ್ರಗಳ ಪ್ರತಿ ಒಂದು ಶಾಲೆಯಂತೆ ಯೋಜನೆಯನ್ನು ಆರಂಭಿಸಲಾಗಿತ್ತು.
ಜಿಲ್ಲೆಗೂ ಯೋಜನೆ ವಿಸ್ತರಣೆ
ಶಾಲಾ ಕೊಠಡಿಗಳನ್ನು ಹೈಟೆಕ್ ಮಾಡುವ ಮಹತ್ತರ ಯೋಜನೆಯನ್ನು ಕಾಸರಗೋಡು ಜಿಲ್ಲೆಯಲ್ಲೂ ಆರಂಭಿಸಲಾಗಿದೆ. ಜಿಲ್ಲೆಯ ಕೆಲವು ಸರಕಾರಿ ವಲಯದ ಶಾಲೆಗಳನ್ನು ಈಗಾಗಲೇ ಅತ್ಯಾಧುನಿಕ ಮಾದರಿಯಲ್ಲಿ ಹೈಟೆಕ್ ಮಾಡಲಾಗಿದೆ. ಜೂನ್ ಮೊದಲ ವಾರಕ್ಕಾಗುವಾಗ ಮತ್ತಷ್ಟು ಶಾಲೆಗಳನ್ನು ಸ್ಮಾರ್ಟ್ ತರಗತಿಗಳಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಕ್ರಮಬದ್ಧ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಜಿಲ್ಲೆಯ ಸರಕಾರಿ ಶಾಲೆಗಳ ಜೊತೆಯಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಕೂಡ ಹೈಟೆಕ್ ಆಗುತ್ತಿದ್ದು, ಅತ್ಯಾಧುನಿಕ ಮಾದರಿಯ ಸ್ಮಾರ್ಟ್ ತರಗತಿ ಕೊಠಡಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.