ಸಮಗ್ರ ಅಭಿವೃದ್ಧಿ; ಟ್ರೆಕ್ಕಿಂಗ್, ಮೊಬೈಲ್ ರೇಂಜ್‌ಗೆ ಕ್ರಮ
Team Udayavani, Sep 19, 2018, 1:55 AM IST
ಕಾಸರಗೋಡು: ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಚ್ಚ ಹಸುರಿನ ಸ್ವಚ್ಛಂದ ಪ್ರಕೃತಿಧಾಮ, ಚಾರಣಿಗರ ಸ್ವರ್ಗ ಎಂದೇ ಪರಿಗಣಿಸಿರುವ ರಾಣಿಪುರಂ ನಿಸರ್ಗಧಾಮ ಅಭಿವೃದ್ಧಿ ಸಾಧ್ಯತೆಗೆ ರೂಪು ನೀಡಲು ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲಿಸಿತು. ಖಾಸಗಿ ವ್ಯಕ್ತಿಗಳು ರಾಣಿಪುರಂ ಅರಣ್ಯ ಮತ್ತು ಕಂದಾಯ ಇಲಾಖೆಯ ಭೂ ಸ್ವಾಧೀನ ಮಾಡಿಕೊಂಡಿದ್ದರೆ ವಾಪಸು ಪಡೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರು ಹೇಳಿದ್ದಾರೆ. ಕಂದಾಯ ಅಧಿಕಾರಿಗಳಲ್ಲಿರುವ ಪ್ರದೇಶದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ರಾಣಿಪುರಂ ಪ್ರವಾಸಿ ಕೇಂದ್ರದಲ್ಲಿ ಅಕ್ರಮವಾಗಿ ಭೂಸ್ವಾಧೀನ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಅಗತ್ಯ ಬಂದಲ್ಲಿ ಭೂಸರ್ವೇ ತಂಡಕ್ಕೆ ಹಸ್ತಾಂತರಿಸಲಾಗುವುದು.
ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಡಿ.ಟಿ.ಪಿ.ಸಿ. ಕಾಟೇಜು ಸಮೀಪ ಗೋಡೆ ಸ್ಥಾಪಿಸಲಾಗುವುದು. ಮೊಬೈಲ್ ರೇಂಜ್ ಇಲ್ಲದ ಸಮಸ್ಯೆಯನ್ನು ಪರಿಹರಿಸಲು ಬಿಎಸ್‌ಎನ್‌ಎಲ್ ಸಹಿತ ಕಂಪೆನಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಸೌರ ವಿದ್ಯುತ್ ಯೋಜನೆಯನ್ನು ಜಾರಿಗೆ ತರಲು ಡಿಟಿಪಿಸಿಗೆ ನಿರ್ದೇಶಿಸಿದರು. ವೃದ್ಧರಿಗೆ, ಮಕ್ಕಳಿಗೆ ಪ್ರಯೋಜನವಾಗುವಂತೆ ಬಯಲು ರಂಗ ಮಂದಿರ, ವಿಶ್ರಾಂತಿ ಕೇಂದ್ರ, ಮಕ್ಕಳ ಪಾರ್ಕ್, ಈಜು ಕೊಳ, ಮ್ಯೂಸಿಯಂ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಡಿಟಿಪಿಸಿ ಕಾಟೇಜಿಗೆ ಸಂಬಂಧಿಸಿ ಹಂತಹಂತವಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುವುದು. ವಾಹನ ಪಾರ್ಕಿಂಗ್‌ಗೆ ಡಿಟಿಪಿಸಿ ಕಾಟೇಜು ಸಮೀಪವೇ ಸ್ಥಳ ಕಂಡುಕೊಳ್ಳಲು ಶ್ರಮಿಸ ಲಾಗುವುದು. ರಾಣಿಪುರಂ- ತಲಕಾವೇರಿ ಟಕ್ಕಿಂಗ್ ಬಗ್ಗೆ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅವಲೋಕನ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷ ಪಿ.ಜಿ. ಮೋಹನ್, ವೆಳ್ಳರಿಕುಂಡು ತಹಶೀಲ್ದಾರ್ ಪಿ. ಕುಂಞಿಕಣ್ಣನ್, ಡೆಪ್ಯುಟಿ ತಹಶೀಲ್ದಾರ್ ಪಿ.ವಿ. ಮುರಳಿ, ವಿಲೇಜ್ ಆಫೀಸರ್ ಕೆ. ರಾಘವನ್, ಡಿಟಿಪಿಸಿ ಕಾರ್ಯ ದರ್ಶಿ ಬಿಜು ರಾಘವನ್, ಪಿ. ಸುನಿಲ್ ಕುಮಾರ್, ಟಿ. ಪ್ರಭಾಕರನ್, ಎಂ.ವಿ. ರಾಜು, ರಾಣಿಪುರಂ ಎಂ.ವಿ. ಭಾಸ್ಕರನ್ ಮೊದಲಾದವರಿದ್ದರು.
ಅಚ್ಚುಮೆಚ್ಚಿನ ಗಿರಿಧಾಮ
ಪಶ್ಚಿಮ ಘಟ್ಟ ಶ್ರೇಣಿಯ ಬೆಟ್ಟ ಪ್ರದೇಶದ ಭಾಗವಾಗಿರುವ ರಾಣಿಪುರಂ ಪ್ರವಾಸಿಗರ ಸ್ವರ್ಗ ಮಾತ್ರವಲ್ಲದೆ ಚಾರಣಿಗರ ಅಚ್ಚುಮೆಚ್ಚಿನ ಗಿರಿಧಾಮ. ಸಮುದ್ರ ಮಟ್ಟಕ್ಕಿಂತ ಸುಮಾರು 1,022 ಮೀ. ಎತ್ತರದಲ್ಲಿರುವ ರಾಣಿಪುರಂ ಹಲವು ಬಗೆಯ ಜೀವ ಮತ್ತು ಸಸ್ಯ ಸಂಕುಲಕ್ಕೆ ಆಶ್ರಯ ನೀಡಿದೆ. ಮಳೆಗಾಲದ ವೇಳೆ ಚಿಗುರಿದ ಹುಲ್ಲುಗಾವಲನ್ನು ಚಾಚಿಕೊಂಡಿರುವ ರಾಣಿಪುರಂ ನಿಸರ್ಗ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಕಾಸರಗೋಡಿನ ಉತ್ತಮ ಪ್ರವಾಸಿ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ರಾಣಿಪುರಂನಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಚಾರಣಿಗರಿಗಾಗಿ ವಿಶ್ರಮಧಾಮವನ್ನು ನಿರ್ಮಿಸಲಾಗಿದೆ. ತಂಗಲು ಕಾಟೇಜ್ ವ್ಯವಸ್ಥೆಗಳಿವೆ. ಕಾಸರಗೋಡಿನ ಊಟಿ ಎಂದು ಖ್ಯಾತಿ ಪಡೆದ ರಾಣಿಪುರಂ ಕಾಂಞಂಗಾಡು ನಗರದಿಂದ 45 ಕಿ.ಮೀ. ದೂರವಿದೆ.
ಇರಿಯದಲ್ಲಿ ನಾಶದಂಚಿನಲ್ಲಿರುವ ಬ್ರಿಟಿಷ್ ಬಂಗಲೆ, ಕುದುರೆ ಲಾಯ, ತಲೆಹೊರೆ ಕಲ್ಲು ಸಂರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿನ ಕಂದಾಯ ಭೂಮಿಯನ್ನು ಅಳೆದು ಖಾತರಿಪಡಿಸಲಾಗುವುದು. ಇದಕ್ಕಾಗಿ ವಿಲೇಜ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಬ್ರಿಟಿಷ್ ಬಂಗಲೆ ಮತ್ತು ಕುದುರೆ ಲಾಯವನ್ನು ಬಿಸಿಲ ಆಘಾತದಿಂದ ಸಂರಕ್ಷಿಸಿ ಕಾಪಾಡಲಾಗುವುದು.
– ಡಾ| ಡಿ. ಸಜಿತ್‌ಬಾಬು, ಕಾಸರಗೋಡು ಜಿಲ್ಲಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.