ಉಪ್ಪು ಮಿಶ್ರಣ: ಕೃಷಿ ಬಳಕೆಗೆ ಅಯೋಗ್ಯವಾದ ಬಂಬ್ರಾಣ ಅಣೆಕಟ್ಟು ನೀರು
Team Udayavani, Feb 9, 2018, 7:10 PM IST
ಕಾಸರಗೋಡು: ಕೃಷಿ ಪ್ರಧಾನ ಪ್ರದೇಶವಾದ ಕುಂಬಳೆ ಆಸುಪಾಸಿನ ಹಳ್ಳಿಗಳಿಗೆ, ಭತ್ತದ ಗದ್ದೆಗಳಿಗೆ ಕಡುಬೇಸಗೆಯಲ್ಲೂ ನೀರನ್ನು ಪೂರೈಸಲು ಸಹಕಾರಿಯಾಗಿದ್ದ ಬಂಬ್ರಾಣ ಅಣೆಕಟ್ಟು ಹಲವು ವರ್ಷಗಳಿಂದ ಸಮುದ್ರದ ಉಪ್ಪು ನೀರು ಮಿಶ್ರಿತವಾಗಿ ಉಪಯೋಗ ಶೂನ್ಯವಾಗುತ್ತಿದೆ. ಇಚ್ಲಂಗೋಡು, ಬಂಬ್ರಾಣ, ಕಟ್ಟತ್ತಡ್ಕ ಮೊದಲಾದ ಪ್ರದೇಶಗಳ ಕೃಷಿ ಭೂಮಿಗೆ ಹಲವು ದಶಕಗಳಿಂದ ನೀರು ಪೂರೈಸುತ್ತಿದ್ದು ಬಂಬ್ರಾಣ ಅಣೆಕಟ್ಟು ದಕ್ಷತೆಯನ್ನು ಕಳೆದುಕೊಳ್ಳುತ್ತಿದ್ದು, ಅಣೆಕಟ್ಟಿನ ಕಿಂಡಿಗಳಲ್ಲಿ ನಿರ್ಮಾಣಗೊಂಡ ಸಣ್ಣ ರಂಧ್ರಗಳ ಮೂಲಕ ಉಪ್ಪು ನೀರು ಮಿಶ್ರಿತಗೊಂಡ ಪರಿಣಾಮ ಕೃಷಿ ಬಳಕೆಗೆ ಅಯೋಗ್ಯವಾಗಿದೆ.
1954ರಲ್ಲಿ ಆರಂಭಗೊಂಡ ಲೋಕೋಪಯೋಗಿ ಅಧೀನದ ಅಂದಿನ ಅಣೆಕಟ್ಟು ನಿರ್ಮಾಣವು 1964ರಲ್ಲಿ ಪ್ರಧಾನ ಎಂಜಿನಿಯರ್ ಟಿ.ಪಿ. ಕುಟ್ಟಿಯಮ್ಮ ಅವರಿಂದ ಉದ್ಘಾಟನೆಗೊಂಡಿತ್ತು. ಸತತ ಐದು ದಶಕಗಳ ಕಾಲ ಈ ಭಾಗದ ಭತ್ತ, ಅಡಿಕೆ ಸಹಿತ ವಿವಿಧ ಬೆಳೆಗಳನ್ನು ಬೆಳೆಸುವ ಕೃಷಿಕರಿಗೆ ವರದಾನವಾಗಿದ್ದ ಅಣೆಕಟ್ಟು ನೀರಿಗೆ ಕಳೆದ ಕೆಲ ವರ್ಷಗಳಿಂದ ಸಮುದ್ರದ ಉಪ್ಪು ಮಿಶ್ರಿತವಾಗುವ ಕಾರಣ ಕೃಷಿಯನ್ನು ನಡೆಸಲಾಗದೆ ಕೃಷಿಕರು ಕಂಗಾಲಾಗಿದ್ದಾರೆ.
ಅಧ್ಯಯನ ವರದಿಗೆ 5 ಲಕ್ಷ ರೂ.
ಸಣ್ಣ ನೀರಾವರಿ ವಿಭಾಗದ ಅಡಿಯಲ್ಲಿ ಬರುವ ಅಣೆಕಟ್ಟು ಪುನರ್ ನಿರ್ಮಾಣದ ವರದಿ ಕ್ರೋಡೀಕರಣ ಹಾಗೂ ಗುತ್ತಿಗೆಗೆ ಇ-ಟೆಂಡರ್ ಈ ಹಿಂದೆ ಕರೆಯಲಾಗಿದ್ದು, ಕೇವಲ ಒಂದು ಕಂಪೆನಿ ಮುಂದೆ ಬಂದಿದೆ. ಶಿರಿಯಾ ನದಿಗೆ ಅಡ್ಡವಾಗಿ ಕಟ್ಟಿರುವ ಅಣೆಕಟ್ಟು ಮಳೆಗಾಲದ ನೀರನ್ನೆ ಅವಲಂಬಿಸಿದ್ದು, ದಟ್ಟ ಬೇಸಗೆ ಕಾಲದಲ್ಲೂ ಕೃಷಿಗೆ ಅಗತ್ಯವಾದ ನೀರನ್ನು ಪೂರೈಸಲು ಶಕ್ತವಾಗಿತು. ಪ್ರಸ್ತುತ ಅಣೆಕಟ್ಟಿನ ಸಂದುಗಳಲ್ಲಿ ಬಿರುಕು ಬಿದ್ದಿರುವ ಕಾರಣ ನೀರು ಪೋಲಾಗುತ್ತಿದ್ದು, ಸಮುದ್ರದ ಉಪ್ಪು ನೀರು ಮಿಶ್ರಿತವಾಗುತ್ತಿದೆ.
ಈ ಹಿಂದೆ ಗುತ್ತಿಗೆ ಕರೆಯುವ ವೇಳೆ ಯಾರೂ ಪ್ರತಿಕ್ರಿಯಿಸದ ಕಾರಣ ಅಣೆಕಟ್ಟು ಪುನರ್ ನಿರ್ಮಾಣದ ಕಾರ್ಯ ವಿಳಂಬಗೊಂಡಿತ್ತು. ಅಣೆಕಟ್ಟು ಪುನರ್ ನಿರ್ಮಾಣದ ಅಂಗವಾಗಿ ಅಧ್ಯಯನ ವರದಿಯನ್ನುಕ್ರೋಡೀಕರಿಸುವ ಕಾರ್ಯಕ್ಕೆ ಜ.29 ರಂದು ಚಾಲನೆ ನೀಡಲಾಗಿದೆ. ಸಣ್ಣ ನೀರಾವರಿ ವಿಭಾಗದ ಅಧೀನ ಬರುವ ಯೋಜನೆಯ ಪೂರ್ವಭಾವಿ ಅಧ್ಯಯನ ವರದಿಗೆ 5 ಲಕ್ಷ ರೂ. ಮೀಸಲಿರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ವರದಿ ಕ್ರೋಡೀಕರಣ ಕಾರ್ಯದ ಅನಂತರ ನೀರಾವರಿ ವಿಭಾಗದ ವಿನ್ಯಾಸ ಹಾಗೂ ಸಂಶೋಧನಾ ಮಂಡಳಿಗೆ ಕಳುಹಿಸಲಾಗುವುದು. ಪುನರ್ ನಿರ್ಮಾಣಕ್ಕೆ ಅಂದಾಜು ವೆಚ್ಚ 30 ಕೋಟಿ ರೂ. ತಗುಲಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಅಣೆಕಟ್ಟು ದಕ್ಷತೆಯನ್ನು ಕಳೆದುಕೊಂಡಿದ್ದು ನೀರಿನ ಅಭಾವದ ಕಾರಣ ಕೃಷಿಕರು ಪರಿತಪಿಸುವಂತಾಗಿದೆ.
ಉಪ್ಪು ನೀರು ಮಿಶ್ರಿತ ನೀರು ಮತ್ತೂಂದು ಸಮಸ್ಯೆಯನ್ನು ಸೃಷ್ಟಿಸಿದೆ ಎನ್ನುತ್ತಾರೆ ರೈತರು. 1964ರಲ್ಲಿ ಉದ್ಘಾಟನೆಗೊಂಡಿದ್ದ ಅಣೆಕಟ್ಟಿನ ಮೂಲಕ ವರ್ಷದಲ್ಲಿ ಸುಮಾರು 113 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಸಹಿತ ವಿವಿಧ ಧಾನ್ಯ ಕೃಷಿ ಮಾಡಲಾಗುತ್ತಿತ್ತು. ಅಣೆಕಟ್ಟಿನ ಪುನರ್ ನಿರ್ಮಾಣಕ್ಕೆ ಕೆಲ ವರ್ಷಗಳೇ ಬೇಕಿದ್ದು, ಪ್ರಸ್ತುತ ಅಣೆಕಟ್ಟಿನ ಲೋಪಗಳನ್ನು ಸರಿಪಡಿಸಲು ಪ್ರತ್ಯೇಕ ಅನುದಾನದ ಆವಶ್ಯಕತೆಯಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಮಸ್ಯೆ ಬಗೆಹರಿಯುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.
ಜಲನಿಧಿಗೂ ಅಣೆಕಟ್ಟಿನ ನೀರು
ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಕುಡಿಯುವ ನೀರು ಪೂರೈಕೆಯ ಜಲನಿಧಿ ಯೋಜನೆಗೂ ಅಣೆಕಟ್ಟಿನ ಒಂದು ಪಾರ್ಶ್ವದಲ್ಲಿರುವ ಬಾವಿಯ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಪ್ರಸ್ತುತ ನೀರಿನ ಅಭಾವ ಹಾಗೂ ಉಪ್ಪು ನೀರು ಮಿಶ್ರಣಗೊಂಡ ಪರಿಣಾಮ ಕುಡಿಯುವ ನೀರು ಯೋಜನೆಗೂ ತೊಂದರೆಯಾಗಲಿದೆ. ಅಣೆಕಟ್ಟಿನ ನೀರು ಸಾಗುವ ಕಾಲುವೆಗಳನ್ನು ಹಲವು ವರ್ಷಗಳಿಂದ ದುರಸ್ತಿ ಮಾಡದ ಕಾರಣ ಅಸಮರ್ಪಕವಾಗಿದ್ದು, ನೀರಿನ ಹರಿವಿಗೆ ಸಮಸ್ಯೆಯಾಗಿದೆ.
ಬಂಬ್ರಾಣದಲ್ಲಿ ಶಾಶ್ವತ ಅಣೆಕಟ್ಟಿನ ನಿರ್ಮಾಣಕ್ಕಾಗಿ ನೀರಾವರಿ ಇಲಾಖೆಗೆ ಹಲವು ವರ್ಷಗಳ ಹಿಂದೆಯೇ ಬೇಡಿಕೆ ಹಾಗೂ ಮನವಿ ನೀಡಲಾಗಿತ್ತು. ತಡವಾಗಿಯಾದರೂ ಅಣೆಕಟ್ಟು ಪುನರ್ ನಿರ್ಮಾಣಕ್ಕೆ ಮುಂದಾಗಿರುವ ಇಲಾಖೆ ಕ್ರಮದ ಬಗ್ಗೆ ಸಂತಸವಿದೆ. ಜಿಲ್ಲೆಯಲ್ಲಿ ಒಟ್ಟಾರೆ 11 ನದಿಗಳಿದ್ದರೂ ಯಾವುದೇ ನದಿಗೆ ಶಾಶ್ವತ ಅಣೆಕಟ್ಟು ಇರದ ಕಾರಣ ನೀರಿನ ಮೂಲಗಳ ರಕ್ಷಣೆ ಸಾಧ್ಯವಾಗುತ್ತಿಲ್ಲ. ಉಳಿದ ಜಿಲ್ಲೆಗಳಲ್ಲಿ ಉತ್ತಮ ಅಣೆಕಟ್ಟು ವ್ಯವಸ್ಥೆಗಳಿದ್ದು, ನೀರಿನ ಸಂರಕ್ಷಣೆಯೂ ಸಾಧ್ಯವಾಗುತ್ತಿದೆ. ಭೂಗರ್ಭ ಜಲ ಸಂರಕ್ಷಣೆಗೆ ಅಣೆಕಟ್ಟುಗಳು ಸಹಾಯಕವಾಗಿದ್ದು, ಕೃಷಿ ಕಾರ್ಯಕ್ಕೂ ಅಣೆಕಟ್ಟು ಸಹಕಾರಿ. ಬಂಬ್ರಾಣ ಅಣೆಕಟ್ಟು ನಿರ್ಮಾಣದ ಜತೆಯಲ್ಲಿ ಕುಂಬಳೆ ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗಳನ್ನು ಬೆಸೆಯುವ ಉತ್ತಮ ಸೇತುವೆ ನಿರ್ಮಾಣ ಕಾರ್ಯವು ಕೈಗೂಡಬೇಕಿದೆ. ಶಾಶ್ವತ ಅಣೆಕಟ್ಟಿನ ನಿರ್ಮಾಣದಿಂದ ಉಪ್ಪು ನೀರಿನ ಮಿಶ್ರಣದಿಂದ ಪಾರಾಗಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು.
– ಕೆ.ಎಲ್. ಪುಂಡರೀಕಾಕ್ಷ, ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.