ಗಡಿನಾಡ ಕನ್ನಡಿಗರ ನೋವಿಗೆ ಧ್ವನಿಯಾಗುವುದೇ ಸಮ್ಮೇಳನ?
Team Udayavani, Mar 29, 2018, 8:50 AM IST
ಕಾಸರಗೋಡು: ಒಂದೆಡೆ ಎಲ್ಲ ರಂಗಗಳಲ್ಲೂ ಮಲಯಾಳ ಕಡ್ಡಾಯದ ಭೀತಿ. ಮಲಯಾಳೀಕರಣದ ಕುಣಿಕೆ ಬಿಗಿಯಾಗುತ್ತಿದೆ. ಇನ್ನೊಂದೆಡೆ ಇಂಗ್ಲಿಷ್‌ನ ಮೋಹಪಾಶ ಶಾಪವಾಗಿ ಕಾಡುತ್ತದೆ. ಕನ್ನಡ, ತುಳು, ಮರಾಠಿ, ಕೊಂಕಣಿ ಮೊದಲಾದ ಮನೆಮಾತಿನವರು ತಮ್ಮ ಮಾತೃಭಾಷೆ ಸಂಸ್ಕೃತಿಗಳನ್ನು ಮರೆತು ಮಲಯಾಳಿಗಳಾಗುತ್ತಿದ್ದಾರೆ. ಕಾಸರಗೋಡಿನ ವಿಶಿಷ್ಟ ಬಹುಭಾಷಾ ಸಂಸ್ಕೃತಿ ಇಂದು ಅಪಾಯದಲ್ಲಿದ್ದು ಮಲಯಾಳದ ಏಕಸಂಸ್ಕೃತಿಯತ್ತ ಸಾಗುತ್ತಿದೆ. ಇಂತಹ ಸಂಕಟದ ಕಾಲಘಟ್ಟದಲ್ಲಿ ಇದನ್ನು ಪರಿಹರಿಸಬೇಕಾದವರ ಆತ್ಮಸಾಕ್ಷಿಯನ್ನು ಎಚ್ಚರಿಸುವುದನ್ನು ಬಿಟ್ಟು ನೊಂದವರಿಗೆ ಭಾಷಾ ಸೌಹಾರ್ದದ ಪಾಠವನ್ನು ಬೋಧಿಸಲಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಮಾಡುವ ಈ ಅನ್ಯಾಯ ಕನ್ನಡಿಗರ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುತ್ತದೆ. ಹನ್ನೊಂದನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಾದರೂ ಗಡಿನಾಡಿನ ಕನ್ನಡಿಗರ ನೋವನ್ನು ಅರಿತು ಸರಕಾರಕ್ಕೆ ಸಂದೇಶ ಮುಟ್ಟಿಸುವ ಕೆಲಸವಾಗಬಹುದೆ? ಅಥವಾ ಯಥಾಪ್ರಕಾರ ಸಂಸದರು ಶಾಸಕರನ್ನೊಳಗೊಂಡ ಜನಪ್ರತಿನಿಧಿಗಳು, ಇತರ ರಾಜಕಾರಣಿಗಳು, ನಾಡಿನ ಸಮಸ್ಯೆಯ ನಾಡಿಮಿಡಿತವನ್ನರಿಯದ ಸಾಹಿತಿಗಳು ಕನ್ನಡಿಗರಿಗೆ ನೀತಿಪಾಠ ಬೋಧಿಸುವುದರಲ್ಲಿ ಸಮ್ಮೇಳನದ ಆಶಯವನ್ನು ಪರ್ಯಾವಸಾನಗಳಿಸುವರೆ ಎಂಬ ಆತಂಕ ಕನ್ನಡಿಗರನ್ನು ಕಾಡುತ್ತದೆ.
ಕೇರಳದ ರಾಜಕಾರಣಿಗಳು ‘ನೀವು ಮಲಯಾಳ ಕಲಿಯಬೇಕು’ ಎಂದು ಕನ್ನಡಿಗರಿಗೆ ಬೋಧಿಸುವುದಲ್ಲದೆ ಅಥವಾ ಹೆಚ್ಚೆಂದರೆ ‘ನಿಮ್ಮ ನೋವಿಗೆ ಧ್ವನಿಯಾಗುತ್ತೇವೆ’ ಎಂಬ ಹುಸಿ ಆಶ್ವಾಸನೆಯನ್ನು ನೀಡುವುದನ್ನು ಬಿಟ್ಟರೆ ಇಲ್ಲಿ ಭಾಷಾ ಅಲ್ಪಸಂಖ್ಯಾಕರ ಜ್ವಲಂತ ಸಮಸ್ಯೆಗಳಾವುವು ಎಂಬುದರ ಪರಿವೆಯೇ ಇಲ್ಲದಂತೆ ಮಾತನಾಡುತ್ತಾರೆ. ಅಕಾಡೆಮಿಗಳು, ಸಾಂಸ್ಕೃತಿಕ ಕೇಂದ್ರಗಳು ಸಂಶೋಧನ ಕೇಂದ್ರಗಳಿಗಿಂತ ಇಂದು ಭಾಷಾ ಅಲ್ಪಸಂಖ್ಯಾಕ ಸಾಮಾನ್ಯ ಜನರಿಗೆ ಅಗತ್ಯವಾಗಿರುವುದು ಎಲ್ಲ ಮಾಹಿತಿಗಳನ್ನು ಕನ್ನಡದಲ್ಲಿ ಪಡೆಯುವ ಅವರ ಹಕ್ಕನ್ನು ಗೌರವಿಸುವುದು, ಕಾಸರಗೋಡಿನ ಆಡಳಿತದಲ್ಲಿ ಕನ್ನಡವನ್ನೂ ಅನುಷ್ಠಾನಗೊಳಿಸುವುದು, ಎಲ್ಲ ರಂಗಗಳಲ್ಲೂ ಮಲಯಾಳ ಕಡ್ಡಾಯ ನೀತಿಯನ್ನು ಕೈಬಿಡುವುದು, ಕನ್ನಡ ಶಾಲೆಗಳ ಉಳಿವಿಗಾಗಿ ಗಂಭೀರವಾಗಿ ಪ್ರಯತ್ನಿಸುವುದು, ಕನ್ನಡಿಗರ ಜ್ವಲಂತ ಸಮಸ್ಯೆಗಳು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ತಲಪ ಬೇಕಾದರೆ ಮೊದಲು ಇಲ್ಲಿನ ಶಾಸಕರಿಗೆ, ಸಂಸದರಿಗೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅವು ಅರಿವಾಗಬೇಕು. ಆದರೆ ಕಳೆದ ವರ್ಷದ ಸಾಹಿತ್ಯ ಸಮ್ಮೇಳನದ ಅನುಭವದಂತೆ ಕನ್ನಡಿಗರ ಸಮ್ಮೇಳನವೆಂದಾಗ ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಜನಪ್ರತಿನಿಧಿಗಳು ಬಾರದಿರುವುದಿದೆ. ಬಂದರೂ ಕನ್ನಡಿಗರ ನೋವಿಗೆ ಸ್ಪಂದಿಸದಂತೆ ಅನಗತ್ಯವಾದುದನ್ನು ರಾಜಕೀಯ ಶೈಲಿಯಲ್ಲಿ ಮಾತನಾಡಿ ತೆರಳುವವರಿದ್ದಾರೆ. ಇಂಥವರು ಹುಸಿ ಆಶ್ವಾಸನೆಗಳನ್ನು ನೀಡಿದ್ದಲ್ಲದೆ ಯಾವುದೇ ಕನ್ನಡಪರ ಕೆಲಸವಾಗುವುದಿಲ್ಲ ಎಂಬ ಕೊರಗು ಕೇಳಿಬರುತ್ತಿದೆ.
ಕರ್ನಾಟಕದ ರಾಜಕಾರಣಿಗಳು ಹಾಗೂ ಸಾಹಿತಿಗಳು ಕೂಡ ಕಾಸರಗೋಡಿನ ಸಮಸ್ಯೆಯ ನಿಜವಾದ ಅರಿವು ಇರದವರಂತೆ ‘ಬೆಂಗಳೂರಿಗಿಂತ ಹೆಚ್ಚು ಕನ್ನಡ ಇಲ್ಲಿ ಉಳಿದಿದೆ’ ಎಂದು ಹೊಗಳಿಕೆಯ ಭ್ರಮೆಯನ್ನು ತೇಲಿಬಿಟ್ಟು ಹೋಗುತ್ತಾರೆ. ಕನ್ನಡಿಗರಿಗೇ ಭಾಷಾ ಸೌಹಾರ್ದದ ಪಾಠ ಹೇಳಿ ಮಲಯಾಳಿ ರಾಜಕಾರಣಿಗಳನ್ನು ಹಾಗೂ ಅಧಿಕಾರಿಗಳನ್ನು ಖುಷಿಪಡಿಸಿ ಹೋಗುವವರೂ ಇದ್ದಾರೆ. ‘ಮಲಯಾಳ ಕಲಿಯಿರಿ’ ಎನ್ನುವ ಸೌಹಾರ್ದದ ಪಾಠ ಬೋಧಿಸುವಾಗ ಮಲಯಾಳ ಹೇರಿಕೆಯಿಂದ ಇಲ್ಲಿ ತಳಮಟ್ಟದಲ್ಲಿ ಕನ್ನಡದ ಸಹಿತ ತುಳು, ಮರಾಠಿ, ಕೊಂಕಣಿ ಮೊದಲಾದ ಭಾಷೆಗಳು ಸಂಸ್ಕೃತಿಗಳು ನಾಶವಾಗುತ್ತಿರುವುದಕ್ಕೆ ಯಾವ ಪರಿಹಾರವನ್ನೂ ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ. ಕಾಸರಗೋಡಿನ ಸಮಸ್ಯೆಯ ಬಗ್ಗೆ ಯಾವುದೇ ಅನುಭವವಿಲ್ಲದ, ಅಧ್ಯಯನ ನಡೆಸದ ಖ್ಯಾತನಾಮ ಸಾಹಿತಿಗಳು ಇಲ್ಲಿಗೆ ಬಂದು ಸಮ್ಮೇಳನಾಧ್ಯಕ್ಷ ಪೀಠದಿಂದಲೇ ಗಡಿನಾಡಿನ ನೋವನ್ನು ಹಗುರವಾಗಿ ಕಂಡು ಮಾತನಾಡಿ ಹೋದದ್ದಿದೆ. ಇದರಿಂದ ಮಲಯಾಳಿಗಳ ದೃಷ್ಟಿಯಲ್ಲಿ ಅವರು ಬುದ್ಧಿ ಜೀವಿಗಳೆನಿಸಿಕೊಳ್ಳಬಹುದು, ವಿಶ್ವಮಾನವರಾಗಬಹುದು. ಆದರೆ ತನ್ನ ಭಾಷೆ ಸಂಸ್ಕೃತಿಯನ್ನುಳಿಸಿಕೊಂಡು ತಾಯಿನಾಡಿನಲ್ಲಿ ಆತ್ಮಗೌರವದಿಂದ ಬಾಳುವ ಕನ್ನಡಿಗನ ಕನಸು ನುಚ್ಚುನೂರಾಗಿ ನಗುವವರ ಮುಂದೆ ಎಡವಿಬಿದ್ದಂತೆ ಇನ್ನಷ್ಟು ನೋವನ್ನು ಅನುಭವಿಸುತ್ತಾನೆ. ಈ ಬಾರಿಯ ಸಮ್ಮೇಳನಾಧ್ಯಕ್ಷರು ಆಡುವ ಮಾತುಗಳೇನಿರಬಹುದು ಎಂಬುದರ ಬಗ್ಗೆ ಗಡಿನಾಡಿನ ಕನ್ನಡಿಗನಿಗೆ ಆತಂಕವಿದೆ, ನಿರೀಕ್ಷೆಗಳೂ ಇವೆ.
ಈ ಬಾರಿಯ ಸಮ್ಮೇಳನದಲ್ಲಿ ಕನ್ನಡಿಗರ ಜ್ವಲಂತ ಸಮಸ್ಯೆಗಳ ಬಗ್ಗೆ ವಿಚಾರಗೋಷ್ಠಿಯಿದೆ. ಕಾಸರಗೋಡಿನ ಸಮಸ್ಯೆಗಳ ಬಗ್ಗೆ ಅನುಭವವುಳ್ಳ ಸಾಕಷ್ಟು ಅರಿವುಳ್ಳ ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಔದ್ಯೋಗಿಕ ರಂಗದ ಸವಾಲುಗಳು ಹಾಗೂ ಪರಿಹಾರ ಎಂಬ ವಿಚಾರದ ಬಗ್ಗೆ ಮಾತನಾಡಲಿರುವ ನ್ಯಾಯವಾದಿ ಲೇಖಕ ಥಾಮಸ್ ಡಿ’ಸೋಜಾ ಅವರು ಈ ಸಮಸ್ಯೆಗಳ ಬಗ್ಗೆ ಆಳವಾದ ತಿಳುವಳಿಕೆಯುಳ್ಳವರು. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಮಹಾಲಿಂಗೇಶ್ವರ ಎಂ.ವಿ. ಅವರು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಆಳವಾದ ಅರಿವುಳ್ಳವರಾಗಿದ್ದು ಇದೇ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.
ಇನ್ನು ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಲಿರುವ ಆಶಾ ದಿಲೀಪ್ ಸುಳ್ಯಮೆ ಸ್ವತಃ ಅಧ್ಯಾಪಿಕೆಯೂ ಬರಹಗಾರ್ತಿಯೂ ಆಗಿದ್ದು ಅವರಿಂದ ಕೂಡ ವಿಚಾರದ ಅನಾವರಣವನ್ನು ನಿರೀಕ್ಷಿಸಬಹುದಾಗಿದೆ. ಸಮಾರೋಪ ಸಮಾರಂಭದಲ್ಲಿ ನ್ಯಾಯವಾದಿ ಐ.ವಿ.ಭಟ್ಟರಿಂದ ಕನ್ನಡಿಗರ ಹಕ್ಕೊತ್ತಾಯದ ಠರಾವು ಮಂಡನೆಯಿದ್ದು ಅದಕ್ಕೆ ಆಡಳಿತ ಸ್ಪಂದಿಸಬೇಕಾಗಿದೆ.
ಮೂಗಿನ ತುದಿಗೆ ಜೇನುತುಪ್ಪ…..
ಕೇರಳದ ರಾಜಕಾರಣಿಗಳು “ನೀವು ಮಲಯಾಳ ಕಲಿಯಬೇಕು’ ಎಂದು ಕನ್ನಡಿಗರಿಗೆ ಬೋಧಿಸುವುದಲ್ಲದೆ ಅಥವಾ ಹೆಚ್ಚೆಂದರೆ ‘ನಿಮ್ಮ ನೋವಿಗೆ ಧ್ವನಿಯಾಗುತ್ತೇವೆ’ ಎಂಬ ಹುಸಿ ಆಶ್ವಾಸನೆಯನ್ನು ನೀಡುವುದನ್ನು ಬಿಟ್ಟರೆ ಇಲ್ಲಿ ಭಾಷಾ ಅಲ್ಪಸಂಖ್ಯಾಕರ ಜ್ವಲಂತ ಸಮಸ್ಯೆಗಳಾವುವು ಎಂಬುದರ ಪರಿವೆಯೇ ಇಲ್ಲದಂತೆ ಮಾತನಾಡುತ್ತಾರೆ.
ಕರ್ನಾಟಕದ ರಾಜಕಾರಣಿಗಳು ಹಾಗೂ ಸಾಹಿತಿಗಳು ಕೂಡ ಕಾಸರಗೋಡಿನ ಸಮಸ್ಯೆಯ ನಿಜವಾದ ಅರಿವು ಇರದವರಂತೆ ‘ಬೆಂಗಳೂರಿಗಿಂತ ಹೆಚ್ಚು ಕನ್ನಡ ಇಲ್ಲಿ ಉಳಿದಿದೆ’ ಎಂದು ಹೊಗಳಿಕೆಯ ಭ್ರಮೆಯನ್ನು ತೇಲಿಬಿಟ್ಟು ಹೋಗುತ್ತಾರೆ. ಕನ್ನಡಿಗರಿಗೇ ಭಾಷಾ ಸೌಹಾರ್ದದ ಪಾಠ ಹೇಳಿ ಮಲಯಾಳಿ ರಾಜಕಾರಣಿಗಳನ್ನು ಹಾಗೂ ಅಧಿಕಾರಿಗಳನ್ನು ಖುಷಿಪಡಿಸಿ ಹೋಗುವವರೂ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.