ಶಾಲಾ-ಕಾಲೇಜು ಶಿಕ್ಷಣ ಬುಡಮೇಲು: ನಾಣಿತ್ತಿಲು
Team Udayavani, Jul 4, 2017, 3:45 AM IST
ಬದಿಯಡ್ಕ: ಅಭಿವೃದ್ಧಿ ಕನಸುಗಳ ಬಾಲಿಶ ಹೇಳಿಕೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಎಡರಂಗ ಇಂದು ರಾಜ್ಯದಲ್ಲಿ ಜನವಂಚನೆಯ ಕೇಂದ್ರೀಕೃತ ಆಡಳಿತ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿರುವ ದ್ರೋಹವಾಗಿದೆ. ರಾಜ್ಯದಲ್ಲಿ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ತುರುಕುವ ಯತ್ನಗಳಲ್ಲಿ ಸರಕಾರ ಮಗ್ನವಾಗಿ ಶಾಲಾ ಕಾಲೇಜು ಶಿಕ್ಷಣವನ್ನು ಬುಡಮೇಲುಗೊಳಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ ನಾಣಿತ್ತಿಲು ಟೀಕಿಸಿದರು.
ಕುಂಬಳೆ ಉಪಜಿಲ್ಲಾ ಕೆ.ಪಿ.ಎಸ್.ಟಿ.ಎ. ಅಧ್ಯಾಪಕ ಸಂಘಟನೆಯು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬದಿಯಡ್ಕದಲ್ಲಿರುವ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆಸಿದ ಮುಷ್ಕರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಪ್ರಬುದ್ಧ ಆದೇಶ
ಶಾಲಾ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಪಠ್ಯ ಬೋಧಿಸಬೇಕೆಂದು ಎಲ್‌ಡಿಎಫ್ ಸರಕಾರ ನೀಡಿರುವ ಹೊಸ ಆದೇಶ ಅಪ್ರಬುದ್ಧವಾಗಿದ್ದು, ಇದರಿಂದ ಹೆಚ್ಚುವರಿ ಹೊರೆ ಮತ್ತು ಶಾಲಾಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಸರಕಾರ ಮನಗಾಣಬೇಕು ಎಂದು ತಿಳಿಸಿದ ಅವರು ಹೈಯರ್ ಸೆಕೆಂಡರಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಖಂಡನಾರ್ಹ ಎಂದು ತಿಳಿಸಿದರು. ಹೈಯರ್ ಸೆಕೆಂಡರಿಗಳು ವ್ಯಾಪಕ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿದ್ದು, ಇವುಗಳನ್ನು ನಿಯಂತ್ರಿಸುವ ಜಿಲ್ಲಾ ಕಚೇರಿಗಳು ಪ್ರತಿಜಿಲ್ಲೆಗೊಂದರಂತೆ ಇರಬೇಕೆಂಬುದನ್ನು ಸರಕಾರ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಿದರು. ವಿದ್ಯಾಭ್ಯಾಸ ಸಹಿತ ಸಾರ್ವಜನಿಕ ಸೇವೆಗಳ ಅವಗಣನೆಗೆ ಕಾಂಗ್ರೆಸ್ ಅವಕಾಶ ನೀಡದು ಎಂದು ಎಚ್ಚರಿಸಿದ ಅವರು ಸರಕಾರ ಎಚ್ಚೆತ್ತುಕೊಳ್ಳದೆ ಶಿಕ್ಷಣ ವ್ಯವಸ್ಥೆಯಲ್ಲಿ ಸೃಷ್ಟಿಸುವ ಗೊಂದಲ, ದುರಾಡಳಿತಕ್ಕೆದುರಾಗಿ ಯುಡಿಎಫ್ ಪ್ರಬಲ ಹೋರಾಟಕ್ಕೆ ಧುಮುಕುವುದಾಗಿ ತಿಳಿಸಿದರು. ಮುಷ್ಕರದಲ್ಲಿ ಪ್ರಶಾಂತ್ ಕಾನತ್ತೂರು, ರಾಧಾಕೃಷ್ಣನ್, ಧನೇಶ್ ಕುಮಾರ್, ಯೂಸಫ್ ಕೊಟ್ಯಾಡಿ, ಅರವಿಂದಾಕ್ಷನ್, ಗೋಪಾಲಕೃಷ್ಣನ್ ಪಳ್ಳಂಗೋಡು, ರವಿಶಂಕರ, ಜಲಜಾಕ್ಷಿ, ರಾಮಕೃಷ್ಣನ್ ಮೊದಲಾದವರು ಮಾತನಾಡಿದರು.