ಕಟ್ಟುನಿಟ್ಟಿನ ಟ್ರಾಫಿಕ್ ಕಾನೂನು : ಜಿಲ್ಲೆಯಲ್ಲಿ ವಾಹನ ಅಪಘಾತ ಸಂಖ್ಯೆ ಕುಸಿತ
Team Udayavani, Mar 5, 2020, 6:45 AM IST
ಕಾಸರಗೋಡು: ರಸ್ತೆ ಸುರಕ್ಷೆ ಕಾಯ್ದೆಯನ್ನು ಕಟ್ಟುನಿಟ್ಟುಗೊಳಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ವಾಹನ ಅಪಘಾತ ಸಂಖ್ಯೆ ಕುಸಿದಿರುವುದಾಗಿ ಅಂಕಿಅಂಶ ಬಯಲುಗೊಳಿಸಿದೆ. ಅಶ್ರದ್ಧೆ ಮತ್ತು ಜವಾಬ್ದಾರಿ ರಹಿತವಾಗಿ ವಾಹನ ಚಲಾಯಿಸುವವರ ವಿರುದ್ಧ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಲಾರಂಭಿಸಿರುವಂತೆ ಟ್ರಾಫಿಕ್ ಉಲ್ಲಂಘಿಸಿ ವಾಹನ ಚಲಾಯಿಸುವುದು ಸಾಕಷ್ಟು ನಿಯಂತ್ರಣ ಬಂದುದರಿಂದಾಗಿ ವಾಹನ ಅಪಘಾತಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಅಲ್ಲದೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯದ ಕ್ರಮ ತೆಗೆದುಕೊಳ್ಳುತ್ತಿರುವುದು ಕೂಡಾ ವಾಹನ ಅಪಘಾತ ಕಡಿಮೆಯಾಗಲು ಪ್ರಮುಖ ಕಾರಣಗಳಲ್ಲೊಂದಾಗಿದೆ.
ಘನ ವಾಹನಗಳ ಅಪಘಾತ ಕಡಿಮೆಯಾಗಿದೆ ಯೆಂದೂ ದ್ವಿಚಕ್ರ ವಾಹನಗಳೇ ಹೆಚ್ಚು ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಅಂಕಿಅಂಶ ಸಾರುತ್ತಿದೆ. ಕಳೆದ ವರ್ಷ 638 ದ್ವಿಚಕ್ರ ವಾಹನಗಳ ಅಪಘಾತ ಸಂಭವಿಸಿದ್ದರೆ, ಎಲ್ಲಾ ಘನ ವಾಹನಗಳು ಸೇರಿ ಒಟ್ಟು ಆದ ಅಪಘಾತಗಳ ಸಂಖ್ಯೆ 644. ವಾಹನ ಅಪಘಾತಗಳಲ್ಲಿ ಮರಣ ಸಂಖ್ಯೆ ಹೆಚ್ಚು ಸಂಭವಿಸಿರುವುದು ದ್ವಿಚಕ್ರ ವಾಹನಗಳ ಅಪಘಾತದಿಂದಾಗಿದೆ.
ಒಟ್ಟು ಸಂಭವಿಸಿದ ಮರಣಗಳ ಪೈಕಿ ಶೇ.90 ರಷ್ಟು ಮಂದಿ ಹೆಲ್ಮೆಟ್ ಧರಿಸದೆ ತಲೆಗೆ ಉಂಟಾದ ಗಾಯಗಳಿಂದಾಗಿ ಸಾವಿಗೀಡಾಗಿದ್ದಾರೆ. ಅಶ್ರದ್ಧೆ, ಅಮಿತ ವೇಗ, ಮದ್ಯ ಸೇವಿಸಿ ವಾಹನ ಚಲಾಯಿಸಿದ್ದು, ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದು, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದ್ದು ವಾಹನ ಅಪಘಾತಗಳಿಗೆ ಪ್ರಮುಖ ಕಾರಣ ಗಳಾಗಿವೆ. ಕಾರು ಪ್ರಯಾಣಿಕರ ಸಾವಿಗೆ ಸೀಟ್ ಬೆಲ್ಟ್ ಧರಿಸದಿರುವುದು ಪ್ರಮುಖ ಕಾರಣವಾಗಿದೆ.
ಮಂಜೇಶ್ವರ ವಲಯದಲ್ಲಿ ಕಳೆದ ವರ್ಷ ಸಂಭವಿಸಿದ ವಾಹನ ಅಪಘಾತಗಳಿಗೆ ರಸ್ತೆ ಶೋಚನೀಯ ಸ್ಥಿತಿಯೂ ಕಾರಣವಾಗಿತ್ತು. ರಸ್ತೆಯಲ್ಲಿ ಅಶ್ರದ್ಧೆಯಿಂದ ನಡೆದು ಹೋಗುವುದು, ಅಶ್ರದ್ಧೆಯಿಂದ ರಸ್ತೆ ದಾಟುವುದರಿಂದಾಗಿ ಕೆ.ಎಸ್.ಟಿ.ಪಿ. ರಸ್ತೆ ಸಹಿತ ಎಲ್ಲÉ ರಸ್ತೆಗಳಲ್ಲಿ ಪಾದಚಾರಿಗಳ ಸಾವಿಗೆ ಪ್ರಮುಖ ಕಾರಣವಾಗಿದೆ. ಸೀಬ್ರಾ ಲೈನ್‌ನಲ್ಲಿ ರಸ್ತೆ ದಾಟುತ್ತಿದ್ದರೂ, ಗಮನಿಸದೆ ಅಥವಾ ಅಶ್ರದ್ಧೆಯಿಂದ ವಾಹನ ಚಲಾಯಿಸಿದ ಕಾರಣದಿಂದಲೂ ಹಲವು ಮಂದಿ ಪಾದಚಾರಿಗಳು ಸಾವಿಗೀಡಾಗಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕರಿಗೆ ವಾಹನ ನೀಡುತ್ತಿರುವುದು ಕೂಡಾ ಅಪಘಾತಗಳಿಗೆ ಕಾರಣವಾಗುತ್ತಿದೆ. ಲೈಸನ್ಸ್ ರಹಿತವಾಗಿ ವಾಹನ ಚಲಾಯಿಸುವ ಅಪ್ರಾಪ್ತರು ಅಶ್ರದ್ಧೆಯಿಂದ ಹಾಗೂ ವೇಗವಾಗಿ ವಾಹನ ಚಲಾಯಿಸುತ್ತಿರುವುದರಿಂದ ವಾಹನ ಅಪಘಾತಗಳು ಸಂಭವಿಸಿವೆ. ವಾಹನಗಳು ಅಮಿತ ವೇಗದಲ್ಲಿ ಸಾಗುತ್ತಿರು ವುದು ಕೂಡ ವಾಹನ ಅಪಘಾತಗಳನ್ನುಂಟು ಮಾಡಿದೆ.
ವಾಹನ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಚಾಲಕರು, ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆಗಳು ಜವಾಬ್ದಾರಿಯಿಂದ ನಡೆದುಕೊಂಡರೆ ಇನ್ನಷ್ಟು ವಾಹನ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ. ರಸ್ತೆ ಸುರಕ್ಷೆಯ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು.
ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಟ್ರಾಫಿಕ್ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿನ ಕ್ರಮ ತೆಗೆದುಕೊಂಡಲ್ಲಿ ಇನ್ನಷ್ಟು ವಾಹನ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ. ವಾಹನ ಚಾಲಕರೂ ಜವಾಬ್ದಾರಿಯುತವಾಗಿ ವಾಹನ ಚಲಾಯಿಸುವುದರಿಂದ ಅಪಘಾತವನ್ನು ತಡೆಗಟ್ಟ ಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.