ಪಳ್ಳತ್ತಡ್ಕ ಸೇತುವೆ ಅಧ್ಯಯನ: 10 ಲಕ್ಷ ರೂ. ಯೋಜನೆ
ಅಂತಾರಾಜ್ಯ ಸಂಪರ್ಕ ರಸ್ತೆಯ ದುರವಸ್ಥೆ
Team Udayavani, May 28, 2019, 6:10 AM IST
ಕಾಸರಗೋಡು: ಶಿಥಿಲಗೊಳ್ಳುತ್ತಿರುವ ಅಂತಾರಾಜ್ಯ ಸಂಪರ್ಕವನ್ನು ಕಲ್ಪಿಸುವ ಪಳ್ಳತ್ತಡ್ಕ ಸೇತುವೆ ಕುಸಿದು ಬೀಳುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು 10 ಲಕ್ಷ ರೂ. ಯೋಜನೆಯನ್ನು ತಯಾರಿಸಲಾಗಿದೆ.
ಸೇತುವೆಯ ಪಿಲ್ಲರೊಂದು ಶೋಚನೀಯ ಸ್ಥಿತಿಯಲ್ಲಿದ್ದು, ಈ ಪಿಲ್ಲರ್‌ನಲ್ಲಿ ಸಂಭವಿಸಬಹುದಾದ ಅಪಾಯದ ಕುರಿತಾಗಿ ತಪಾಸಣೆ ನಡೆಯಲಿದೆ.
ಸೇತುವೆಯ ಮೇಲ್ಭಾಗದ ರಸ್ತೆ ಹೊಂಡಗುಂಡಿಯಿಂದ ಕೂಡಿದ್ದು ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಸುರಿದರಂತೂ ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ವಾಹನಗಳು ಸ್ಕಿಡ್ ಆಗಿ ಉರುಳಿ ಬೀಳುತ್ತಿರುವುದು ಸಾಮ್ಯಾನವಾಗಿದೆ.
ಮೆಕಡಾಂ ಟಾರಿಂಗ್ ನಡೆಯುತ್ತಿರುವ ಚೆರ್ಕಳ-ಕಲ್ಲಡ್ಕ ರಸ್ತೆಯಲ್ಲಿ ಬರುವ ಪಳ್ಳತ್ತಡ್ಕ ಸೇತುವೆ ಶೋಚನೀಯಾವಸ್ಥೆಗೆ ತಲುಪಿದ್ದು ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಿದೆ ಎಂದು ವ್ಯಾಪಕ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಬ್ರಿಡ್ಜಸ್ ಡಿವಿಶನ್ ಸೇತುವೆ ಡಿಸೈನ್ ವಿಭಾಗವನ್ನು ಸಂಪರ್ಕಿಸಿದೆ. ಡಿಸೈನ್ ವಿಭಾಗದಲ್ಲಿ ಲಭಿಸಿದ ನಿರ್ದೇಶದಂತೆ ಸೇತುವೆ ಅಪಾಯಕಾರಿ ಸ್ಥಿತಿಗೆ ತಲುಪಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ದುರಸ್ತಿ ಮಾಡಿದ ಬಳಿಕ ಸೇತುವೆಯನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಗಿ ಬಂದರೆ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಲಿವೆ. ಈ ಹಿನ್ನೆಲೆಯಲ್ಲಿ ಸೇತುವೆಯ ಸಂಪೂರ್ಣ ಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ.
ಸೇತುವೆಯನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಗಿ ಬಂದಲ್ಲಿ ವಾಹನಗಳು ಸಾಗಲು ರಸ್ತೆ ವ್ಯವಸ್ಥೆ ಕಲ್ಪಿಸಲು ಸ್ಥಳವಿದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಸಬೇಕಾಗಿದೆ.
ಆತಂಕ ಸೃಷ್ಟಿ
ಅಂತಾರಾಜ್ಯ ಸಂಪರ್ಕವನ್ನು ಕಲ್ಪಿಸುವ ಪಳ್ಳತ್ತಡ್ಕ ಸೇತುವೆ ಶಿಥಿಲಗೊಳ್ಳುತ್ತಿದ್ದು, ಆತಂಕ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದ ಪುತ್ತೂರು ಸಂಪರ್ಕಿಸಲು ಬದಿಯಡ್ಕ ರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ಸಿಗುವ ಪಳ್ಳತ್ತಡ್ಕದಲ್ಲಿರುವ ಈ ಸೇತುವೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣ ವಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಚಾಲಕರು ಸಾಹಸದಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಚೆರ್ಕಳ- ಕಲ್ಲಡ್ಕ ರಸ್ತೆಯ ದುರಸ್ತಿಗಾಗಿ ನಡೆದ ನಿರಂತರ ಹೋರಾಟದ ಪರಿಣಾಮವಾಗಿ ಈ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ನಿಧಾನಗತಿಯಲ್ಲಿ ಸಾಗುತ್ತಿದೆ. ಈ ರಸ್ತೆಯಲ್ಲಿ ಸಿಗುವ ಮುಖ್ಯ ಸೇತುವೆಯೇ ಪಳ್ಳತ್ತಡ್ಕ ಸೇತುವೆ. ಈ ರಸ್ತೆಯಲ್ಲಿ ಇದು ಅತೀ ದೊಡ್ಡ ಸೇತುವೆಯೂ ಆಗಿದೆ. ಸೇತುವೆ ಮೇಲಿನ ರಸ್ತೆ ಅತೀ ಹೆಚ್ಚು ಹದಗೆಟ್ಟಿದೆ. ಸೇತುವೆ ಮೇಲಿನ ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣವಾಗಿದ್ದು ಜಲ್ಲಿ ಮೇಲೆದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಾಗುತ್ತಿದ್ದು, ಘನ ವಾಹನ ಸಂಚರಿಸುವ ಸಂದರ್ಭ ದಲ್ಲಿ ಸೇತುವೆಯ ಅಡಿ ಭಾಗದ ಸಿಮೆಂಟ್‌ನ ಹಾಳೆಗಳು ಉದುರಿ ಬೀಳುತ್ತಿವೆೆ. ಸೇತುವೆಯ ಕಾಂಕ್ರೀಟ್ ಸಿಮೆಂಟ್ ಇದೇ ರೀತಿ ಉದುರಿ ಬೀಳುವುದು ಮುಂದುವರಿದರೆ ಸೇತುವೆಗೆ ಅಪಾಯದ ಭೀತಿ ಎದುರಾಗಲಿದೆ.
ಸೇತುವೆಯ ಪಿಲ್ಲರ್‌ಗಳಲ್ಲಿ ಅಲ್ಲಲ್ಲಿ ಸಿಮೆಂಟ್ ಎದ್ದು ಹೋಗಿ ಕಬ್ಬಿಣದ ರಾಡ್‌ಗಳು ಗೋಚರಿಸುತ್ತಿವೆ. ಸೇತುವೆಯ ಮೇಲ್ಭಾಗವೂ ಶೋಚನೀಯ ಸ್ಥಿತಿಯಲ್ಲಿದ್ದು ಹೊಂಡ ಬಿದ್ದಿರುವ ಅಲ್ಲಲ್ಲಿ ಕಬ್ಬಿಣದ ರಾಡ್‌ಗಳು ಕಾಣಿಸುತ್ತಿವೆ. ಈ ಕಬ್ಬಿಣದ ರಾಡ್‌ಗಳು ಮುಂದಿನ ದಿನಗಳಲ್ಲಿ ತುಕ್ಕು ಹಿಡಿದು ಅಪಾಯಕ್ಕೆ ದಾರಿ ಮಾಡಿಕೊಡಲಿದೆ. ಸೇತುವೆಯ ಒಂದು ಭಾಗ ಯಾವುದೇ ಕ್ಷಣ ಕುಸಿದು ಬೀಳಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬದಿಯಡ್ಕ-ಪುತ್ತೂರು ರಸ್ತೆಯಲ್ಲಿ ಪಳ್ಳತ್ತಡ್ಕದಲ್ಲಿರುವ ಪಳ್ಳತ್ತಡ್ಕ ಸೇತುವೆಯನ್ನು ಆಶ್ರಯಿಸಿ ನಿತ್ಯ ನೂರಾರು ವಾಹನಗಳು ಓಡಾಡುತ್ತಿವೆ. ಸೇತುವೆಯ ಅಡಿಭಾಗ ಶೋಚನೀಯ ಸ್ಥಿತಿಗೆ ತಲುಪಿರುವುದರಿಂದ ಎಂತಹ ಗಂಡೆದೆಯ ವ್ಯಕ್ತಿಯೂ ಭಯ ಪಡುವುದರಲ್ಲಿ ಅಚ್ಚರಿಯಿಲ್ಲ.
ಪುತ್ತೂರಿಗೆ ಸಾಗುವಾಗ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಗಲಕಿರಿದಾದ ಸೇತುವೆಗಳಿವೆ. ಆದರೆ ಅವುಗಳು ಇನ್ನೂ ಗಟ್ಟಿಮುಟ್ಟಾಗಿವೆೆ. ಆದರೆ ಇಂತಹ ಸಂದರ್ಭದಲ್ಲೇ ಹೊಸ ತಾಂತ್ರಿಕತೆಯನ್ನು ಬಳಸಿ ನಿರ್ಮಿಸಿದ ಪಳ್ಳತ್ತಡ್ಕ ಸೇತುವೆ ಶಿಥಿಲಗೊಳ್ಳುತ್ತಿರುವುದು ತಾಂತ್ರಿಕತೆ ಯಲ್ಲಿನ ದೋಷ ಕಾರಣವೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.