ಬೇಸಗೆ ಶಿಬಿರ ಮಕ್ಕಳ ಪಾಲಿಗೆ ಪ್ರಯೋಜನಕಾರಿಯೇ?
Team Udayavani, Apr 3, 2018, 6:30 AM IST
ವಾರ್ಷಿಕ ಪರೀಕ್ಷೆ ಇನ್ನೇನು ಮುಗಿಯುವ ಹಂತಕ್ಕೆ ಬರುತ್ತಿದ್ದಂತೆಯೇ ಹೆತ್ತವರಿಗೆ ಬೇಸಗೆ ಶಿಬಿರದ್ದೇ ಚರ್ಚೆ. ದಿನ ಪತ್ರಿಕೆಗಳಲ್ಲಿ ಬರುವ ಬೇಸಗೆ ಶಿಬಿರಗಳ ಜಾಹೀರಾತು ನೋಡಿ ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸುವ ಗಂಭೀರ ಚಿಂತನೆಯಲ್ಲಿ ತೊಡಗಿರುತ್ತಾರೆ. ಆದರೆ ವರ್ಷಪೂರ್ತಿ ಕ್ಲಾಸ್ ಪರೀಕ್ಷೆಗಳು, ಕಾಲುವಾರ್ಷಿಕ ಮಧ್ಯವಾರ್ಷಿಕ ವಾರ್ಷಿಕ ಪರೀಕ್ಷೆಯೆಂದು ಓದಿ ಬರೆದು ಸುಸ್ತಾಗಿದ್ದ ಮಕ್ಕಳಿಗೆ ಪೋಷಕರ ಜತೆ ಟೂರ್‌ಹೋಗುವುದೋ ಅಜ್ಜನಮನೆಗೋ ನೆಂಟರಿಷ್ಟರ ಮನೆಗೋ ಹೋಗುವ ಹಂಬಲವಿರುತ್ತದೆ. ಅಲ್ಲಿ ತಮ್ಮ ಸಮ ಪ್ರಾಯದ ಮಕ್ಕಳ ಜತೆ ಆಡಿಕೂಡಿ ನಲಿಯುವ ಬಣ್ಣಬಣ್ಣದ ಕನಸಿನ ಲೋಕಕ್ಕೇ ಇಳಿದಿರುತ್ತಾರೆ. ಶಿಬಿರಕ್ಕೆ ಹೋಗಿ ಮತ್ತೆ ಪುನಃ ಒಂದು ತರಹದ ಬೇಲಿಯೊಳಗೆ ಸಿಕ್ಕಿಹಾಕಿಕೊಳ್ಳಲು ಹೆಚ್ಚಿನ ಮಕ್ಕಳು ಇಷ್ಟಪಡುವುದಿಲ್ಲ.
ಒಟ್ಟಿನಲ್ಲಿ ಬೇಸಗೆ ಶಿಬಿರ ಎನ್ನುವುದು ಕೆಲವರಿಗೆ ಹಿತ, ಇನ್ನು ಕೆಲವರಿಗೆ ಇದು ಊಟದಲ್ಲಿ ಕಲ್ಲು ಸಿಕ್ಕಿದಂತೆ..
ಮಕ್ಕಳಿಗೆ ರಜೆ ಸ್ವಾತಂತ್ರ್ಯ ಏಕೆ ಬೇಕು?
ಎಪ್ರಿಲ್- ಮೇ ಎರಡು ತಿಂಗಳು ಎಲ್ಲ ಪ್ರಾಥಮಿಕ ಶಾಲಾ ಮಕ್ಕಳಿಗೆ ರಜೆಯು ಇದ್ದೇ ಇರುವುದು. ಈ ಸಮಯವು ಕಡು ಬಿಸಿಲಿನ ದಿನಗಳಾಗಿದ್ದು ಮಕ್ಕಳ ಮನಸ್ಸು ಪಾಠ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ವರ್ಷಪೂರ್ತಿಯ ಕಲಿಕೆಯೆಂಬ ಒತ್ತಡದಿಂದ ಹೊರಬಂದು ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿರಾಳ ಮಾಡಿಕೊಳ್ಳಲೋಸುಗವೇ ಮಕ್ಕಳಿಗೆ ಸರಕಾರವು ರಜೆಯನ್ನಿತ್ತಿರುವುದು. ಆ ಕ್ಲಾಸು, ಈ ಕ್ಲಾಸು ಎಂದು ತಲೆಕೆಡಿಸಿಕೊಂಡು ಆಟವಾಡುವುದನ್ನೇ ಮರೆಯುವ ಮಕ್ಕಳು ಒಂದಿಷ್ಟು ರಿಲ್ಯಾಕ್ಸ್ ಆಗಿ ಅಜ್ಜಿ ಮನೆ, ಪ್ರವಾಸವೆಂದು ಒಂದಷ್ಟು ಸುತ್ತಾಡವುದು ಮಕ್ಕಳ ದೈಹಿಕವಾದ ಹಾಗೂ ಮಾನಸಿಕವಾದ ವಿಕಾಸನಕ್ಕೆ ಸಹಕಾರಿಯಾಗುವುದು.
ಶಿಬಿರಗಳ ಬಗ್ಗೆ ಮಾಹಿತಿ
ಸ್ವತಃ ಷೋಷಕರಿಗೇ ಮಕ್ಕಳನ್ನು ಹೊರಗೆ ಸುತ್ತಾಡಿಸುವ ತಾಳ್ಮೆ, ಸಮಯಾವಕಾಶಗಳಿದ್ದರೆ ಶಿಬಿರದ ಆವಶ್ಯಕತೆ ಅಷ್ಟಾಗಿ ಬರದು. ಅಲ್ಲದೆ ಮಕ್ಕಳಿಗೂ ಅದು ಹೆಚ್ಚು ಸಂತೋಷದ ವಿಷಯವೇ. ಆದರೆ ಇತ್ತೀಚೆಗಿನ ದಿನಗಳಲ್ಲಿ ಶಿಬಿರಕ್ಕೆ ಮಕ್ಕಳನ್ನು ಕಳುಹಿಸುವುದೆಂದರೆ ಏನೋ ಒಂದು ಪ್ರತಿಷ್ಠೆಯ ರೀತಿ ಹೆತ್ತವರು ಭಾವಿಸುತ್ತಾರೆ. ಇದಕ್ಕೆ ಸರಿಯಾಗಿ ಅಲ್ಲಲ್ಲಿ ನಾಯಿಕೊಡೆಗಳಂತೆ ಬೇಸಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಕೆಲವು ಇಂತಹ ಶಿಬಿರಗಳು ಕೇವಲ ಕಾಸು ಮಾಡುವ ಉದ್ದೇಶವನ್ನೇ ಹೊಂದಿರುತ್ತವೆ. ಇವುಗಳ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರು ವಹಿಸಬೇಕಾದುದು ಅತಿ ಮುಖ್ಯ.
ಮಾತ್ರವಲ್ಲ ಶಿಬಿರಗಳ ಯೋಜನೆಗಳು ಮಕ್ಕಳ ಊಟ ತಿಂಡಿ ಉಳಕೊಳ್ಳುವ ವ್ಯವಸ್ಥೆ ಎಲ್ಲವೂ ಸರಿಯಾಗಿರುವುದೇ ಎಂಬುದಾಗಿ ವಿಚಾರಿಸಿ ಅನಂತರವೇ ಕಳುಹಿಸುವುದು ಒಳಿತು.ಇಲ್ಲದಿದ್ದಲ್ಲಿ ಮುಗ್ಧª ಮಕ್ಕಳು ಮಾನಸಿಕವಾಗಿ ವೇದನೆಯನ್ನನು ಭವಿಸಬೇಕಾಗಬಹುದು.
ಶಿಬಿರದಿಂದೇನೇನು ಪ್ರಯೋಜನಗಳು?
ಮಕ್ಕಳು ಪರಿಸರದೊಂದಿಗೆ ಆಡುತ್ತಾ ನಿಸರ್ಗ ದ ಕುರಿತು ಕಲಿಯುತ್ತಾ ಇರುವುದಾದರೆ ಸರಿ.ಅದು ಹೊರತಾಗಿ ಕಂಪ್ಯೂಟರ್, ಮೊಬೈಲ್ ಟಿವಿ ನೋಡುತ್ತಾ ಕಾಲಹರಣ ಮಾಡುವುದಕ್ಕಿಂತ ಉತ್ತಮ ಶಿಬಿರಗಳಲ್ಲಿ ಭಾಗವಹಿಸುವುದು ಸೂಕ್ತ. ಇವುಗಳನ್ನುನೋಡಲೇಬಾರದೆಂದಲ್ಲ..ಮಿತವಾಗಿದ್ದರೆ ತೊಂದರೆ ಇಲ್ಲ.ಆದರೆ ಇಂತಹ ಸಮಯದಲ್ಲಿ ಮಕ್ಕಳು ಹೊರಜಗತ್ತನ್ನೇ ಮರೆತುಬಿಡುವುದರ ಜತೆಗೆ ಅನ್ಯೋನ್ಯ ಬಂಧ ಸಂಬಂಧಗಳೇ ಕಡಿಮೆಯಾಗುತ್ತಾ ಹೋಗುವುದು. ಶಿಬಿರಗಳಲ್ಲಿ ಆದರೆ ಕಲೆ ಸಂಸ್ಕೃತಿಗಳ ವಿಚಾರಗಳು, ಅಟೋಟಗಳಲ್ಲಿ ಎಲ್ಲರೂ ಒಂದಾಗಿ ಪಾಲುಗೊಳ್ಳುತ್ತಾರೆ.
ಇಂತಹ ಸಂದರ್ಭಗಳಲ್ಲಿ, ಒಂದು ಸಮುದಾಯದಲ್ಲಿ ಮಗು, ಹೇಗೆ ಇತರರೊಡನೆ ಬೆರೆಯಬೇಕು,ಪರಸ್ಪರ ಸಹಾಯ, ಕೆಲಸಕಾರ್ಯಗಳನ್ನು ಒಟ್ಟಾಗಿ ಹೇಗೆ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುತ್ತದೆ. ಸಣ್ಣಪುಟ್ಟ ಕೆಲಸಗಳ ಮೂಲಕ, ತನ್ನ ಪರಿಣತಿಯನ್ನೂ ಬೆಳೆಸಿಕೊಳ್ಳುತ್ತದೆ. ಮನೆ ಶಾಲೆಗಳಲ್ಲಿ ಸಿಗದೇ ಇರುವಂತಹ ಹಲವಾರು ಹೊಸ ಅನುಭವಗಳು, ಮಕ್ಕಳಲ್ಲಿ ಜ್ಞಾನ ವಿಕಸನವನ್ನು ಉಂಟುಮಾಡುತ್ತದೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗಿ ಜೀವನದಲ್ಲಿ ಎಂತಹುದೇ ಸಂದರ್ಭದಲ್ಲೂ ಧೃತಿಗೆಡದೆ ಮುನ್ನಡೆಯಲು ಸಹಕಾರಿಯಾಗಬಲ್ಲುದು.ಆದರೆ ತೀರಾ ಆಸಕ್ತಿ ಇಲ್ಲದ ಮಕ್ಕಳನ್ನು ಒತ್ತಾಯಪೂರ್ವಕ ಕಳುಹಿಸದಿರುವುದೇ ಉತ್ತಮ. ಒಟ್ಟಿನಲ್ಲಿ ಬೇಸಗೆ ಶಿಬಿರಗಳು ದೀರ್ಘ ಸಮಯವಿರದೆ ಮುಗ್ಧ ಮಕ್ಕಳ ಮನಸಿಗೆ ಬೇಸರ ತರದಂತೆ ಮಕ್ಕಳ ಆಟ ವಿಹಾರಕ್ಕೇ ಹೆಚ್ಚು ಪ್ರಾಶಸ್ತ್ಯ ಅದರ ಮೂಲಕವೇ ಜ್ಞಾನ ಸಂಪಾದಿಸುವಂತೆ ಇದ್ದರೆ ಉತ್ತಮ.
ಬೇಸಗೆ ಶಿಬಿರದ ಆವಶ್ಯಕತೆ ಏನು?
ಶಿಬಿರವೆಂದಾಕ್ಷಣ ಮಗುವಿಗೆ ಅಸಹ್ಯವೆನಿಸಬಹುದು. ರಜೆಯ ಮಜಾವೇ ಹೋಗುವುದು ಎಂಬ ಭಾವನೆ ಮೂಡಬಹುದು.ಆದರೆ
ಕೆಲವು ಸಂಘ ಸಂಸ್ಥೆಗಳು ಆಯೋಜಿಸುವ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿ ಯಾಗುವುದೂ ನಿಜವೇ. ಎಲ್ಲಾ ಮಕ್ಕಳಿಗೂ ಅಜ್ಜಿ ಮನೆಗೆ ಹೋಗಿ ಚಿನ್ನಿದಾಂಡು, ಕುಂಟು ಬಿಲ್ಲೆ, ಲಗೋರಿ, ಬುಗುರಿ, ಕಣ್ಣಮುಚ್ಚಾಲೆ, ಅಡುಗೆ ಆಟ, ಮರಳಿನಲ್ಲಿ ಮನೆ ಕಟ್ಟುವುದು… ಇವೆಲ್ಲಾ ಆಡುವ ಭಾಗ್ಯ ಸಿಗಲು ಸಾಧ್ಯವೆ? ಖಂಡಿತಾ ಇಲ್ಲ. ಇಂಥ ಮಕ್ಕಳಿಗೆ ಬೇಸಗೆ ಶಿಬಿರ ಒಃದು ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಬಹುದು. ಇಲ್ಲಿ ಮಗು ಉಳಿದ ಮಕ್ಕಳ ಜೊತೆ ಬೆರೆತು ಆಟವಾಡುತ್ತದೆ. ಇದು ಮಕ್ಕಳನ್ನು ಸಂಕುಚಿತ ಮನೋಭಾವದಿಂದ ಹೊರಬರಲು ಸಹಕಾರಿಯಾಗುವುದು. ಕೆಲವು ಶಿಬಿರಗಳಲ್ಲಿ ಮಕ್ಕಳಿಗೆ ಕಸೂತಿ, ರಂಗೋಲಿ ಹಾಕುವುದು, ಕೃಷಿಯ ಕುರಿತಾದ ಮಾಹಿತಿ, ಗ್ರಾಮೀಣ ಆಟಗಳನ್ನು ಮಕ್ಕಳಿಗೆ ಆಟಗಳ ಮೂಲಕವಾಗಿಯೇ ಕಲಿಸಿಕೊಡುವ ವ್ಯವಸ್ಥೆಗಳಿರುತ್ತವೆ. ಪ್ರಕೃತಿ ವೀಕ್ಷಣೆ, ಚಾರಣ, ನಿಸರ್ಗದ ಪರಿಚಯ ಕಾರ್ಯಕ್ರಮ ಇವೆಲ್ಲದರಿಂದ ಮಕ್ಕಳ ಸಾಮರ್ಥ್ಯ ಅವರ ಬುದ್ಧಿಮತ್ತೆಯನ್ನು ಹೆಚ್ಚಿಸಲು ಸಾಧ್ಯ. ಇವುಗಳ ಬಗ್ಗೆ ಮಕ್ಕಳಿಗೆ ಪೋಷಕರು ಸರಿಯಾಗಿ ತಿಳಿಹೇಳಿದಾಗ ಮಕ್ಕಳಿಗೆ ಶಿಬಿರದಲ್ಲಿ ಆಸಕ್ತಿ ಉಂಟಾಗುವುದು.ಆದರೆ ಶಿಬಿರವು ಹೆಚ್ಚು ದಿನವಿರದೆ 8-10 ದಿನಗಳಿಗೆ ಸೀಮಿತಗೊಳಿಸಿದರೆ ಮಕ್ಕಳು ಹಗುರಾಗುವರು.
- ಅನ್ನಪೂರ್ಣಾ ಬೆಜಪ್ಪೆ ಕಿದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.