ಒಂದು ರೂಪಾಯಿ ನೋಟಿನ ವೃತ್ತಾಂತ
Team Udayavani, Jul 20, 2017, 5:05 AM IST
ಕೇವಲ ಒಂದು ರೂಪಾಯಿಗೆ ಪಾಕಿಸ್ತಾನದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಭಾರಿ ಪ್ರಶಂಸೆಗೆ ಪಾತ್ರರಾದರು. ಅನ್ನುವಂತೆ ಅವರು ವಕಾಲತ್ತಿಗೆ ಪಡೆಯುವ ದರ ಕನಿಷ್ಠ 15 ಲಕ್ಷ ರೂ. ಬಹುಶಃ ಬೃಹತ್ ಮೊತ್ತ ಪಡೆದು ವಾದಿಸಿ ಗೆಲುವು ಪಡೆದ ಕೇಸುಗಳಿಂದ ಅವರು ಪ್ರತಿಷ್ಠೆ ಪಡೆದಿರಲಾರರು. ಆದರೆ ಒಂದು ರೂಪಾಯಿಯ ವಕೀಲಿಗೆ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಅವರೇ ಅನ್ನುವಂತೆ ತನ್ನ ವಕೀಲ ವೃತ್ತಿಯಲ್ಲಿ ಇದು ದೊರೆತ ಮಹಾ ಸಂತೃಪ್ತಿ.
ಹೀಗೆ ಒಂದು ರೂಪಾಯಿ ನಡೆಸಿದ ಪವಾಡದ ಕತೆ ನನ್ನದೊಂದಿದೆ. ಮುದ್ರಣ ಲೋಪದಿಂದ ಚಲಾವಣೆಗೆ ಬಂದು ವಿಶೇಷತೆ ಪಡೆದ ಒಂದು ರೂಪಾಯಿ ನೋಟು ನನ್ನ ಕೈ ಸೇರಿತ್ತು. ಇದಕ್ಕೆ ಸಂಗ್ರಹಕಾರರ ಮಟ್ಟದಲ್ಲಿ ಅಪಾರ ಮೌಲ್ಯವಿದೆ. ಆ ವೇಳೆ ನನಗೆ ನೆನಪಿಗೆ ಬಂದದ್ದು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ. ಈ ನೋಟನ್ನು ಅಂಚೆ ಮೂಲಕ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಹೆಸರಲ್ಲೇ ಕಳುಹಿಸಿ ಬಿಟ್ಟೆ. ಆಶ್ಚರ್ಯ ! ವಾರದಲ್ಲೇ ಈ ನೋಟು ಸಿಕ್ಕಿದ ಬಗ್ಗೆ ಮರು ಪತ್ರ. ಜತೆಗೆ “ಅದನ್ನು ನಮ್ಮ ಸಂಗ್ರಹಾಲಯದಲ್ಲಿ ಇಡಲಾಗುವುದು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ’. ಹೆಗ್ಗಡೆ ಅವರ ಸಹಿ ಇರುವ ಕನ್ನಡದಲ್ಲಿ ಟೈಪ್ ಮಾಡಿದ 28-11-1993 ರ ಈ ಪವಿತ್ರ ಪತ್ರ ನನ್ನನ್ನು ರೋಮಾಂಚನಗೊಳಿಸಿತು. ಒಂದು ರೂಪಾಯಿ ನೋಟಿಗೆ ಗೌರವಾನ್ವಿತ ಶ್ರೇಷ್ಠರ ಪ್ರಶಂಸೆ ಪಡೆದಿರುವ ಈ ಪತ್ರದ ನೆನಪಾದದ್ದು ಹರೀಶ್ ಸಾಳ್ವೆ ಅವರ ಒಂದು ರೂಪಾಯಿ ದರದ ವಕಾಲತ್ತು ನಡೆಸಿದ ಸುದ್ದಿ ಓದಿ.
ಸಾಮಾನ್ಯ 1993 ನವೆಂಬರ್ ತಿಂಗಳಲ್ಲೇ ಇರಬೇಕು. “ಉದಯವಾಣಿ’ ಯ “ಚಿತ್ರಾವಳಿ’ ಅಂಕಣದಲ್ಲಿ ನನ್ನ ಚಿತ್ರ ಬರಹ ಪ್ರಕಟವಾಗಿತ್ತು. “ಕೋ ಎಂದರೆ ಕೊಳ್ಳುವವರಿಲ್ಲ’ ಅದರ ಶೀರ್ಷಿಕೆ. ಹೊಸದುರ್ಗದ ಮದನ ಮೋಹನ್ ರಾವ್ (ಈಗ ದಿವಂಗಂತರು) ಅವರ ಬಳಿ ಆನೆ ದಂತದ ಕುಸುರಿ ಕೆಲಸದ ಒಂದು ಗೋಲವಿತ್ತು. ಪುಟ್ಟ ಈ ಗೋಲದ ವಿಶೇಷತೆ ಎಂದರೆ ಅದರ ಒಳಗೊಳಗಾಗಿ ಒಟ್ಟು ಏಳು ಗೋಲಗಳೂ ಇದ್ದುವು. ಎಲ್ಲವೂ ಒಂದೇ ತರದ ಕುಸುರಿ ಕೆಲಸದ ಗೋಲಗಳು. ಅವುಗಳನ್ನು ಒಳಗೊಳಗಾಗಿ ಜೋಡಿಸಿದ್ದು ಹೇಗೆ ? ಅದು ಪ್ರಶ್ನಾರ್ಥಕ ಚಿಹ್ನೆಯಾಗಿಯೆ ಇದೆ. ಈ ಗೋಲವನ್ನು ಇಡಲು ಇದಕ್ಕೆ ಆನೆ ದಂತದ್ದೇ ಪುಟ್ಟ ಸ್ಟೇಂಡ್. ಚಿತ್ರಾವಳಿಯಲ್ಲಿ ನನ್ನ ನಿರಂತರ ಚಿತ್ರ ಬರಹ ಗಮನಿಸಿದ ಮದನ ಮೋಹನ ರಾವ್ ಅವರು ನನ್ನನ್ನು ಕರೆಯಿಸಿ ಕೊಂಡರು.
ಗೋಲವನ್ನು ಪರಿಚಯಿಸಿದ ಬಳಿಕ ಅವರು ವಿಷಯ ತಿಳಿಸಿದರು.
ವಿದೇಶೀಯನೊಬ್ಬ ಆ ಗೋಲವನ್ನು ಇವರಿಗೆ ನೀಡಿದ್ದ. ಇವರ ಸಂಗ್ರಹದಲ್ಲಿದ್ದ ಇನ್ಯಾವುದೋ ವಸ್ತುವಿಗಾಗಿ ದೊರೆತ ವಿಕ್ರಯದ ಬಾಬ್ತು ಇದು. ವಿಚಿತ್ರ ಗೋಲವನ್ನು ಅಂದು ಇವರ ಮಿತ್ರರಾಗಿದ್ದ, ಉನ್ನತ ಸ್ಥಾನದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕಂಡು 4 ಲಕ್ಷ ರೂಪಾಯಿ ನೀಡಿ ಖರೀದಿಸಲೂ ಬಯಸಿದ್ದರು. ಅಧಿಕಾರಿ ಅಂದು ತಿಳಿಸಿದಂತೆ ವಿದೇಶಿ ಮಾರುಕಟ್ಟೆಯಲ್ಲಿ ಇದಕ್ಕೆ 15 ಲಕ್ಷ ರೂ. ಬೆಲೆ ಇದೆ. ಸುಮಾರು ವರ್ಷಗಳಿಂದ ಇವರ ವಶವಿದ್ದ ಈ ಗೋಲವನ್ನು ವೀಕ್ಷಿಸಿದವರು ಕಮ್ಮಿ. ಇದು ವಸ್ತು ಸಂಗ್ರಹಾಲಯದಲ್ಲಿ ಇದ್ದರೆ ಅನೇಕರು ಕಾಣಬಹುದಲ್ಲ. ಹೀಗಾಗಿ ಅವರು ಒಂದು ತೀರ್ಮಾನಕ್ಕೆ ಬಂದಿದ್ದರು. ಈ ಗೋಲವನ್ನು ಪುಕ್ಕಟೆಯಾಗಿ ವಸ್ತು ಸಂಗ್ರಹಾಲಯಕ್ಕೆ ನೀಡುವುದು. ಅದನ್ನು ಚಿತ್ರಾವಳಿಯಲ್ಲಿ ಪ್ರಕಟಿಸಲು ನನಗೆ ಬುಲಾವ್ ಮಾಡಿದ್ದರು.
ಚಿತ್ರಾವಳಿಯಲ್ಲಿ ಸುದ್ದಿ ಬಂತು. ಅಂದು ನನಗೆ ಅನೇಕ ವಿಶ್ವ ವಿದ್ಯಾಲಯಗಳಿಂದ ತಮ್ಮ ಸಂಗ್ರಹಾಲಯಕ್ಕೆ ಇದನ್ನು ನೀಡಿ ಎಂದು ದೂರವಾಣಿ ಕರೆ ಬಂತು. ಆದರೆ ಧರ್ಮಸ್ಥಳದಿಂದ ಬಂದ ಕರೆ ಈ ಗೋಲ ಅಲ್ಲಿನ ವಸ್ತು ಸಂಗ್ರಹಾಲಯದ ಪಾಲಾಯಿತು. ಮದನ ಮೋಹನ ರಾವ್ ಅವರು ಇದನ್ನು ಹೆಗ್ಗಡೆ ಅವರಿಗೆ ಒಪ್ಪಿಸಲು ಅಂದು ಇಲ್ಲಿಂದ ಎರಡು ಬಸ್‌ಗಳಲ್ಲಿ ಜನರನ್ನೂ ಧರ್ಮಸ್ಥಳಕ್ಕೆ ಕೊಂಡೊಯ್ದಿದ್ದರು. ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ಹೆಗ್ಗೆಡೆ ಅವರು ಈ ಗೋಲವನ್ನು ಸ್ವೀಕರಿಸಿದ್ದರು. ಆ ವೇಳೆ ಈ ಗೋಲದ ಬಗ್ಗೆ ಮಾಹಿತಿ ಒದಗಿಸಿ ಮಾತನಾಡುವ ಅವಕಾಶವೂ ನನಗೆ ದೊರಕಿತ್ತು.
ಅಂದು ಹೆಗ್ಗೆಡೆ ಅವರು ಹೇಳಿದ್ದರು. “ಕಲೆಗೆ ಬೆಲೆ ಕಟ್ಟಲಾಗದು. ವಿದೇಶದಲ್ಲಿ ಇದಕ್ಕೆ ಲಕ್ಷಾಂತರ ರೂಪಾಯಿ ಇದೆ’ ಎಂದರೆ ನಾವು ಕಲೆಗೆ ಬೆಲೆ ಕಟ್ಟಿದಂತಾಗುತ್ತದೆ. ಅದು ಬಿಟ್ಟು ಭಾರತೀಯ ಕಲೆಯು ಯಾವತ್ತೂ ಇಲ್ಲೇ ಇದ್ದು ಅದನ್ನು ಕಂಡು ಅನೇಕರು ಪುಳಕಿತರಾಗಬೇಕು. ಈ ಗೋಲ ಇಲ್ಲಿ ಸೇರಿದ್ದು ನಿಜಕ್ಕೂ ಕಲೆಗೆ ದೊರೆತ ಗೌರವ ಎನಿಸುತ್ತದೆ. ಇಂತಹದ್ದೇ ಇನ್ನೊಂದು ಗೋಲ ಲಂಡನ್ ಮ್ಯೂಸಿಯಂನಲ್ಲಿದೆ. ಅದು ಜೋತು ಹಾಕುವ ಮಾದರಿಯದ್ದು ಎಂದೂ ಮಾಹಿತಿ ನೀಡಿದ್ದರು. ಈ ಸಮಾರಂಭದ ವರದಿ ಅಂದು ಇಂಗ್ಲಿಷ್, ಕನ್ನಡ, ಮಲಯಾಳಂ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದು ಪ್ರಕಟವಾಗಿತ್ತು.
ಧರ್ಮಸ್ಥಳದ ವಸ್ತು ಸಂಗ್ರಹಾಲಯದ ಮಹತ್ವ ಅಂದು ನಾನು ಮನಗಂಡಿದ್ದೆ. ಹೆಗ್ಗಡೆ ಅವರ ಜತೆ ಆ ಸಮಾರಂಭದ ವೇಳೆ ಮಾತನಾಡಿದ್ದು ಏಕೋ ನನಗೆ ದೊರೆತ ವಿಶೇಷ ಒಂದು ರೂಪಾಯಿ ನೋಟು ಅವರಿಗೆ ನೇರ ಕಳುಹಿಸಿ ಕೊಡಲು ಪ್ರೇರೇಪಿಸಿತ್ತು. ಆ ನೋಟು ಇದೀಗ ವಸ್ತು ಸಂಗ್ರಹಾಲಯದಲ್ಲಿ ಅನೇಕರ ದೃಷ್ಟಿಗೆ ಬೀಳುತ್ತಿದೆ.
ಹೆಗ್ಗಡೆ ಅವರು ಬರೆದ ಪತ್ರವೂ ನನ್ನ ಕಡತದಲ್ಲಿ ಅಷ್ಟೇ ಮಹತ್ವದ ಸ್ಥಾನವನ್ನೂ ಪಡೆದಿದೆ. ನೀಡಿದ್ದು ಒಂದು ರೂಪಾಯಿ ದೊರೆತದ್ದು ಮೌಲ್ಯ ಕಟ್ಟಲಾಗದ ಪ್ರತಿಷ್ಠೆ. ಈ ಧನ್ಯತಾಭಾವ ನನ್ನಲ್ಲಿ ಈಗಲೂ ಇದೆ.
– ರಾಮದಾಸ್ ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.