ಅನಿಶ್ಚಿತತೆಯಲ್ಲಿ ಮಂಜೇಶ್ವರ ರೈಲ್ವೇ ಮೇಲ್ಸೇತುವೆ ಜೀವಭಯದಲ್ಲಿ ಜನತೆ
Team Udayavani, Jul 21, 2019, 5:19 AM IST
ವಿದ್ಯಾನಗರ:ಅಪಘಾತಗಳ ಆಗರವಾಗಿರುವ ಮಂಜೇಶ್ವರ ಮೇಲ್ಸೇತುವೆ ಅನಿಶ್ಚಿತತೆಯಲ್ಲೇ ಉಳಿದು ಶಾಪಮೋಕ್ಷಕ್ಕಾಗಿ ಕಾಯುತ್ತಿದೆ. ಜೀವಭಯದಿಂದ ದೈನಂದಿನ ಅಗತ್ಯಗಳಿಗಾಗಿ ಹಳಿದಾಟುವ ಸಾವಿರಾರು ಮಂದಿಯ ನಿರೀಕ್ಷೆ ತುಕ್ಕುಹಿಡಿದು ಮೂಲೆಸೇರಿದೆ. ಹಲವಾರು ಸಾವು ನೋವುಗಳಿಗೆ ಕಾರಣವಾಗಿರುವ ಮೇಲ್ಸೇತುವೆಯ ನಿರ್ಮಾಣಕಾರ್ಯದಲ್ಲಿ ಅಧೀಕೃತರು ತೋರುವ ಅನಾಸ್ಥೆ ಜನತೆಯ ಪಾಲಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ಇರುವುದೊಂದೇ ದಾರಿ
ಹೆದ್ದಾರಿಯಿಂದ ಮಂಜೇಶ್ವರ ಒಳಪೇಟೆಗೆ ತೆರಳಬೇಕಾದರೆ ರೈಲು ಹಳಿಯನ್ನು ದಾಟಿಯೇ ಸಾಗಬೇಕಾಗಿದ್ದು ಪ್ರತಿನಿತ್ಯ ಸಾವಿರಾರು ಮಂದಿ ಈ ಅಪಾಯಕಾರಿ ಹಾದಿಯನ್ನು ಆಶ್ರಯಿಸುತ್ತಿದ್ದಾರೆ. ರೈಲು ಪ್ರಯಾಣಿಕರಿಗೆ ರೈಲು ನಿಲ್ದಾಣವನ್ನು ದಾಟಲು ಮೇಲ್ಸೇತುವೆ ಇದೆ. ಆದರೆ ಒಳಪೇಟೆಯಿಂದ ಸುಮಾರು 250 ಮೀಟರ್ ದೂರದಲ್ಲಿ ಈ ಮೇಲ್ಸೇತುವೆ ಇದ್ದು ಅದನ್ನು ದಾಟಿ ಹೆದ್ದಾರಿಯಲ್ಲಿರುವ ಬಸ್ಸು ತಂಗುದಾಣ ತಲುಪಲು ಕಡಿಮೆಯೆಂದರೆ ಒಂದು ಕಿಲೋ ಮೀಟರ್ ಸಂಚರಿಸಬೇಕು. ಆದುದರಿಂದ ಇಲ್ಲಿನ ಜನತೆ ಅಪಾಯಕಾರಿಯಾದ ರೀತಿಯಲ್ಲಿ ಹಳಿ ದಾಟುವ ಸಾಹಸ ಮಾಡುತ್ತಿದ್ದಾರೆ.
ಇದೇ ಸ್ಥಳದಲ್ಲಿ ಗೂಡ್ಸ್ ರೈಲನ್ನು ವಾರಗಟ್ಟಲೆ ನಿಲ್ಲಿಸಲಾಗುತ್ತಿದ್ದು ಅದರ ಅಡಭಾಗದಿಂದ ದಿನನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ನುಸುಳಿಕೊಂಡು ಸಾಗುತ್ತಾರೆ. ಇದರಂದ ಕಂಗೆಟ್ಟ ಜನತೆ ಇಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದೆಯಾದರೂ ಇದುವರೆಗೂ ಯಾವುದೇ ಫಲ ದೊರಕಿಲ್ಲ.
ನಿರಂತರ ಅವಘಡ
ನಿರಂತರ ಅವಘಡಗಳಿಗೆ ಕಾರಣವಾಗುತ್ತಿರುವ ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪದ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಒತ್ತಡಕ್ಕೆ ಮಣಿದು ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಕ್ತ ಕ್ರಮಕೈಗೊಳ್ಳಲು ನಿರ್ಧರಿಸಲಾಗಿತ್ತು. ತಜ್ಞ ಅಧಿಕಾರಿಗಳ ಸಲಹೆಯಂತೆ ಗುತ್ತಿಗೆ ನೀಡಿ ಸೇತುವೆ ನಿರ್ಮಿಸುವ ಬಗ್ಗೆ ಚರ್ಚಿಸಲಾಗಿತ್ತು. ಮಾತ್ರವಲ್ಲದೆ ಸುಮಾರು ಒಂದೂವರೆ ಕೋಟಿ ವೆಚ್ಚ ತಗಲುವ ಅಂದಾಜು ಹಾಕಲಾಯಿತು. ಆದರೆ ಅಂದು ಜಿಲ್ಲಾ ರೈಲ್ವೇ ವಿಭಾಗದ ಪ್ರಬಂಧಕರು ಸಹಿತ ಅಕಾರಿಗಳು ಸ್ಥಳ ಸಂದರ್ಶಿಸಿ ನಾಗರಿಕರಿಂದ ಮಾಹಿತಿ ಪಡೆದು ಯೋಜನೆಯ ನೀಲನಕಾಶೆ ತಯಾರಿಸಿದ್ದರು. ಆದರೆ ಅದಾಗಿ ವರ್ಷಗಳೇ ಕಳೆದರೂ ಯಾರೂ ಇತ್ತ ತಿರುಗಿ ನೋಡಲಿಲ್ಲ. ಅಪಘಾತ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು ಹಾಗೂ ಇತರ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಮೌನವಾಗುತ್ತಿರುವುದು ಸ್ಥಳೀಯ ಆತಂಕವನ್ನು ಹೆಚ್ಚಿಸಿದೆ. ಇನ್ನೊಂದು ದುರಂತಕ್ಕೆ ಸಾಕ್ಷಿಯಾಗುವ ಮುನ್ನ ಇವರು ಎಚ್ಚೆತ್ತುಕೊಳ್ಳುವರೆಂಬ ನಂಬಿಕೆಯೇ ಜನರಿಗೆ ಇಲ್ಲವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ರೈಲು ನಿಲ್ದಾಣಗಳಿವೆ. 17 ನಿಲ್ದಾಣಗಳಲ್ಲೂ ಅದರದ್ದೇ ಆದ ಸಮಸ್ಯೆ ತಪ್ಪಿದ್ದಲ್ಲ. ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇಲ್ಲಿಗೆ ಭೇಟಿಯಿತ್ತಾಗ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಮಂಜೇಶ್ವರದಲ್ಲಿ ಸೇತುವೆ ನಿರ್ಮಾಣ ಅಗತ್ಯವೆಂದು ಮನಗಂಡು ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸಂಸದರಾದ ಮೇಲೆ ಯಾವುದೇ ಆಸಕ್ತಿ ತೋರಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.