ಹೆಂಡತಿಗೆ ಸುಳಿವು ನೀಡಿದ್ದಕ್ಕೆ ಸೇಡಿನ ಸಂಚು!
Team Udayavani, Jul 12, 2017, 2:10 AM IST
ಕೊಚ್ಚಿ : ಬಹುಭಾಷಾ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಸೆರೆಯಾಗಿರುವ ದಿಲೀಪ್ ರಾತ್ರಿ ಬೆಳಗಾಗುವುದರೊಳಗೆ ವಿಲನ್ ಆಗಿದ್ದಾರೆ. ಮಲಯಾಳಂ ಚಿತ್ರರಂಗದ ಅಗ್ರಮಾನ್ಯ ನಾಯಕ ನಟರಾಗಿದ್ದ ದಿಲೀಪ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಒಂದು ಕಾಲದಲ್ಲಿ ಮೋಹನ್‌ಲಾಲ್ ಉತ್ತರಾಧಿಕಾರಿ ಎಂದು ಕರೆಸಿಕೊಂಡಿದ್ದ ದಿಲೀಪ್ ವಿರುದ್ಧ ಈಗ ಮಲಯಾಳಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಪೊಲೀಸರು ದಿಲೀಪ್ ಬಂಧನವಾಗಿರುವುದನ್ನು ಬಹಿರಂಗಪಡಿಸುತ್ತಿದ್ದಂತೆಯೇ ಕಳೆದ ಐದು ತಿಂಗಳಿಂದ ಹತ್ತಾರು ತಿರುವುಗಳನ್ನು ಪಡೆದುಕೊಂಡು ಅಪಾರ ಕುತೂಹಲ ಕೆರಳಿಸಿದ್ದ ನಟಿಯ ಅಪಹರಣ ಪ್ರಕರಣಕ್ಕೆ ಒಂದು ಹಂತದ ಮುಕ್ತಾಯ ಸಿಕ್ಕಿದಂತಾಗಿದೆ. ಸಿನೆಮಾ ಕಲಾವಿದರ ನಿಜ ಬದುಕು ಕೆಲವೊಮ್ಮೆ ಅವರು ನಟಿಸುವ ಸಿನೆಮಾ ಗಳಿಗಿಂತಲೂ ಹೆಚ್ಚು ಸಿನಿಮೀಯವಾಗಿರುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ನಾಲ್ಕು ವರ್ಷಗಳ ಹಿಂದೆಯೇ ಸಂಚು
ಇಷ್ಟಕ್ಕೂ ದಿಲೀಪ್ ಏಕೆ ಈ ನಟಿಯನ್ನು ಅಪಹರಿಸಿ ಅತ್ಯಾಚಾರ ಎಸಗಲು ಸುಪಾರಿ ಕೊಡಬೇಕು ಎನ್ನುವ ಪ್ರಶ್ನೆ ಇಷ್ಟರತನಕ ಕಾಡುತ್ತಿತ್ತು. ಇದಕ್ಕೆ ಕಾರಣ ದಿಲೀಪ್ ಹೊಂದಿದ್ದ ವಿವಾಹ ಬಾಹಿರ ಸಂಬಂಧವನ್ನು ನಟಿ ಆತನ ಪತ್ನಿಗೆ ತಿಳಿಸಿದ್ದು. ನಟಿ ಕಾವ್ಯಾ ಮಾಧವನ್ ಜತೆಗೆ ದಿಲೀಪ್ ಸಂಬಂಧ ಹೊಂದಿದ್ದರು. ಇದನ್ನು ದಿಲೀಪ್ ಪತ್ನಿ ಮಂಜು ವಾರಿಯರ್‌ಗೆ ತಿಳಿಸಿದ್ದು ಅಪಹರಣಕ್ಕೊಳಗಾಗಿದ್ದ ನಟಿ. ಈ ಕಾರಣಕ್ಕೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕೊನೆಗೆ ಈ ದಾಂಪತ್ಯ ವಿಚ್ಛೇದನದಲ್ಲಿ ಮುಕ್ತಾಯವಾಗಿರುವುದಲ್ಲದೆ ಕಾವ್ಯಾ ಮಾಧವನ್ ಅವರನ್ನು ದಿಲೀಪ್ ಮದುವೆಯಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಮಂಜು ವಾರಿಯರ್‌ಗೆ ವಿಚ್ಛೇದನ ನೀಡಲು ದಿಲೀಪ್‌ಗೆ ಇಷ್ಟವಿರಲಿಲ್ಲ. ಇದೇ ವೇಳೆ ಕಾವ್ಯಾ ಮಾಧವನ್ ಸಂಬಂಧ ಕಡಿದುಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಮಂಜು ವಾರಿಯರ್ ವಿಚ್ಛೇದನಕ್ಕಾಗಿ ಪಟ್ಟು ಹಿಡಿದಿದ್ದರು. ಅವರಿಗೆ ಬೆಂಬಲವಾಗಿ ನಿಂತದ್ದು ಅಪಹರಣಕ್ಕೊಳಗಾದ ನಟಿ.
ಇದು ಒಂದು ಕಾರಣವಾದರೆ ಅಪಹರಣಕ್ಕೊಳಗಾದ ನಟಿ ಮತ್ತು ದಿಲೀಪ್ ನಡುವೆ ವ್ಯಾವಹಾರಿಕ ಸಂಬಂಧವೂ ಇತ್ತು. ಕ್ರಮೇಣ ಈ ಸಂಬಂಧ ಹಳಸಿತ್ತು. ಈ ಕಾರಣಕ್ಕಾಗಿ ನಟಿಯ ಮೇಲೆ ಸೇಡು ತೀರಿಸಲು ದಿಲೀಪ್ ಸಂದರ್ಭ ಕಾಯುತ್ತಿದ್ದರು. ಕೆಲ ವರ್ಷಗಳ ಹಿಂದೆ ಮಲಯಾಳ ಸಿನೆಮಾ ಕಲಾವಿದರ ಸಂಘವಾಗಿರುವ ಅಮ್ಮದ ಸಭೆಯಲ್ಲೇ ನಟಿಗೆ ದಿಲೀಪ್ ತನ್ನ ವೈಯಕ್ತಿಕ ವಿಚಾರದಲ್ಲಿ ಮೂಗುತೂರಿಸಬಾರದು ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಲಕ್ಷ್ಯ ನೀಡಿದ ಸುಳಿವು
ಪ್ರಕರಣದಲ್ಲಿ ದಿಲೀಪ್ ಭಾಗಿಯಾಗಿರುವುದರ ಪ್ರಮುಖ ಸುಳಿವು ಸಿಕ್ಕಿದ್ದು ಕಾವ್ಯಾ ಮಾಧವನ್ ಅವರ ಬೂಟಿಕ್ ಲಕ್ಷ್ಯಾದಲ್ಲಿ. ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಮೂರು ದಿನಗಳ ಬಳಿಕ ಸುನಿ ಈ ಬೂಟಿಕ್‌ಗೆ ಬಂದಿದ್ದ. ಲಕ್ಷ್ಯದಲ್ಲಿ ಸುನಿ ಹಣ ಪಡೆಯುತ್ತಿರುವ ದೃಶ್ಯ ಎದುರಿನ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದೇ ವೇಳೆ ಲಕ್ಷ್ಯದ ಸಿಸಿಟಿವಿಯಲ್ಲಿ ಈ ದಿನವೂ ಸೇರಿದಂತೆ ಹಿಂದಿನ ಮೂರು ದಿನಗಳ ದಾಖಲೆಗಳನ್ನು ಅಳಿಸಿ ಹಾಕಲಾಗಿತ್ತು. ಈ ಸುಳಿವಿನ ಬೆನ್ನು ಹತ್ತಿದಾಗ ಇಡೀ ಸಂಚು ಬಯಲಾಯಿತು.
ನಾದಿರ್‌ಶಾ ಮಾಫಿಸಾಕ್ಷಿ
ದಿಲೀಪ್ ಆತ್ಮೀಯ ಸ್ನೇಹಿತರಾಗಿರುವ ನಿರ್ದೇಶಕ ನಾದಿರ್ ಶಾ ಕೂಡ ಕೆಲವು ಮಾಹಿತಿಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ಇಡೀ ಸಂಚಿನ ಕುರಿತು ತಿಳಿದಿರುವುದು ಸುನಿ, ದಿಲೀಪ್ ಮತ್ತು ನಾದಿರ್‌ಶಾಗೆ ಮಾತ್ರ. ನಾದಿರ್ ಶಾ ಮತ್ತು ದಿಲೀಪ್‌ರನ್ನು ಕೆಲವು ದಿನಗಳ ಹಿಂದೆ ಪೊಲೀಸರು ಸುದೀರ್ಘ ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ನಾದಿರ್‌ಶಾ ಮತ್ತು ದಿಲೀಪ್ ನೀಡಿದ ಹೇಳಿಕೆಗಳಲ್ಲಿ ಬಹಳಷ್ಟು ವೈರುಧ್ಯಗಳಿದ್ದವು. ಇದು ಕೂಡ ಪೊಲೀಸರ ನೆರವಿಗೆ ಬಂದಿದೆ. ನಾದಿರ್‌ಶಾರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪೊಲೀಸರು ಚಿಂತಿಸುತ್ತಿದ್ದಾರೆ.
ನ್ಯಾಯಾಂಗ ಬಂಧನ
ಅಂಗಾಮಾಲಿಯ ನ್ಯಾಯಾಲಯ ದಿಲೀಪ್‌ರನ್ನು 14 ದಿನಗಳ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಬಳಿಕ ಅವರನ್ನು ಪೊಲೀಸರು ಆಲುವಾ ಜೈಲಿಗೆ ಕರೆದೊಯ್ದರು. ಆಲುವಾ ದಿಲೀಪ್ ಹುಟ್ಟೂರು ಕೂಡ ಆಗಿದೆ. ಬಿಗು ಪೊಲೀಸ್ ಕಾವಲಿನಲ್ಲಿ ಇಂದು ಬೆಳಗ್ಗೆ ನಟನನ್ನು ನ್ಯಾಯಾಧೀಶರ ಮನೆಗೆ ಕರೆತರಲಾಯಿತು. ನ್ಯಾಯಾಲಯದ ವಿಧಿ ವಿಧಾನಗಳನ್ನು ಮುಗಿಸಿದ ಬಳಿಕ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದರು. ಈ ವೇಳೆ ನ್ಯಾಯಾಧೀಶರ ಮನೆ ಮುಂದೆ ಜಮಾಯಿಸಿದ್ದ ನೂರಾರು ಜನರು ದಿಲೀಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. ದಿಲೀಪ್ ಪರವಾಗಿ ಖ್ಯಾತ ವಕೀಲ ಕೆ. ರಾಮ್‌ಕುಮಾರ್ ವಾದಿಸುತ್ತಿದ್ದಾರೆ. ನಟನನ್ನು ಪೊಲೀಸರು ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದಾರೆ ಎಂದವರು ಹೇಳಿದರು. ದಿಲೀಪ್ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಅಮ್ಮದಿಂದ ಔಟ್
ಅಸೋಸಿಯೇಶನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್ (ಅಮ್ಮ) ಮತ್ತು ಕೇರಳ ಸಿನೆಮಾ ಕಲಾವಿದರ ಫೆಡರೇಶನ್‌ನಿಂದ (ಎಫ್ಇಎಫ್ಕೆಎ) ದಿಲೀಪ್‌ರನ್ನು ಉಚ್ಚಾಟಿಸಲಾಗಿದೆ. ಇದೇ ವೇಳೆ ಸಿನೆಮಾ ನಿರ್ಮಾಪಕರ ಸಂಘವೂ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಚಿತ್ರೋದ್ಯಮದಲ್ಲಿ ದಿಲೀಪ್ ಈಗ ಅಕ್ಷರಶಃ ಏಕಾಂಗಿಯಾಗಿದ್ದಾರೆ. ದಿಲೀಪ್ ಅಮ್ಮದ ಕೋಶಾಧಿಕಾರಿಯಾಗಿದ್ದರು. ಅವರ ಪ್ರಾಥಮಿಕ ಸದಸ್ಯತ್ವನ್ನೇ ರದ್ದುಗೊಳಿಸಲಾಗಿದೆ. ನಟ ಮಮ್ಮುಟ್ಟಿ ಮನೆಯಲ್ಲಿ ಜರಗಿದ ಅಮ್ಮದ ತುರ್ತು ಸಭೆಯಲ್ಲಿ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳಲಾಯಿತು.
ಲೈವ್ ಶೋ ರಿಹರ್ಸಲ್ ವೇಳೆ ಮಾನಹಾನಿ ಸುಪಾರಿ!
ಕೊಚ್ಚಿಯ ಅಬದ್ ಪ್ಲಾಜಾ ಎಂಬ ಹೊಟೇಲಿನಲ್ಲಿ 2013 ರಲ್ಲಿ ನಟಿಯ ಮಾನಕೆಡಿಸುವ ಸಂಚು ರೂಪಿಸಲಾಗಿತ್ತು. ಆಗ ವಿದೇಶದಲ್ಲಿ ಲೈವ್ ಶೋ ನೀಡುವ ಸಲುವಾಗಿ ಅಮ್ಮ ಈ ಹೊಟೇಲ್‌ನಲ್ಲಿ ರಿಹರ್ಸಲ್ ನಡೆಸುತ್ತಿತ್ತು. ಈ ಸಂದರ್ಭವನ್ನೇ ದಿಲೀಪ್ ಸುಪಾರಿ ನೀಡಲು ಬಳಸಿಕೊಂಡಿದ್ದರು. 410ನೇ ಕೊಠಡಿಯಲ್ಲಿ ಸಂಜೆ 7ರಿಂದ 8 ಗಂಟೆ ತನಕ ದಿಲೀಪ್ ಮತ್ತು ಸುನಿಯ ನಡುವೆ ಮಾತುಕತೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಖ್ಯ ಆರೋಪಿ ಪಲ್ಸರ್ ಸುನಿಯನ್ನು ದಿಲೀಪ್‌ಗೆ ಪರಿಚಯಿಸಿದ್ದು ಹಿರಿಯ ನಟ ಹಾಗೂ ಶಾಸಕ ಮುಕೇಶ್. ಆದರೆ ಅನಂತರ ದಿಲೀಪ್‌ಗೆ ಸುನಿ ಹೆಚ್ಚು ನಿಕಟವಾಗಿದ್ದ. ಮೊದಲು ರಾಜ್ಯದ ಹೊರಗೆಲ್ಲಾದರೂ ಈ ಕೃತ್ಯ ಎಸಗುವುದೆಂದು ತೀರ್ಮಾನಿಸಲಾಗಿತ್ತು. ಇದಕ್ಕಾಗಿ 1.5 ಕೋಟಿ ಸುಪಾರಿ ಗೊತ್ತು ಮಾಡಿ 10,000 ರೂ. ಮುಂಗಡ ನೀಡಿದ್ದರು. ಗೋವಾ ಸೇರಿದಂತೆ ಹಲವೆಡೆಗಳಲ್ಲಿ ನಟಿಯ ಮೇಲೆ ಹಲ್ಲೆ ಮಾಡಲು ಸುನಿ ಪ್ರಯತ್ನಿಸಿದ್ದ. ಆದರೆ ಎಲ್ಲ ಪ್ರಯತ್ನಗಳು ವಿಫಲಗೊಂಡ ಬಳಿಕ ಫೆ. 17ರಂದು ಅಂಗಾಮಾಲಿ ಸಮೀಪ ಅಪಹರಿಸಿ ಕಿರುಕುಳ ನೀಡಿ ವೀಡಿಯೊ ಶೂಟಿಂಗ್ ಮಾಡಿದ್ದಾನೆ. ನಟಿಯ ಮುಖದಲ್ಲಿ ನಗು ಇರಬೇಕು ಮತ್ತು ನಿಶ್ಚಿತಾರ್ಥದ ಉಂಗುರ ಸ್ಪಷ್ಟವಾಗಿ ಕಾಣಬೇಕು ಎಂದು ದಿಲೀಪ್ ಸೂಚಿಸಿದ್ದರು. ನಟಿಯ ಮದುವೆ ಮುರಿಯುವುದೇ ಇದರ ಹಿಂದಿನ ಉದ್ದೇಶವಾಗಿತ್ತು. ನಟಿಗೂ ಬೇರೆ ಯುವಕನೊಡನೆ ಸಂಬಂಧ ಇದೆ ಎಂದು ವೀಡಿಯೊ ಮೂಲಕ ಸಾಬೀತುಪಡಿಸಿ ನಿಶ್ಚಿತಾರ್ಥವನ್ನು ಮುರಿದು ಸೇಡು ತೀರಿಸುವುದು ಇಡೀ ಸಂಚಿನ ಹಿಂದಿನ ಉದ್ದೇಶವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.