ಜಾಗತಿಕ ಮುಸಲ್ಮಾನರ ತ್ಯಾಗ, ಸ್ಮರಣೆಯ ಬಕ್ರೀದ್
Team Udayavani, Aug 12, 2019, 5:39 AM IST
ಸರ್ವರಿಗೂ ಒಂದೇ ವಸ್ತ್ರ, ಸರ್ವರಿಗೂ ಒಂದೇ ಮಂತ್ರ. ದೇಶ, ಭಾಷೆ, ವರ್ಣ, ಅಂತಸ್ತಿನ ಭೇದವಿಲ್ಲದೆ ಪ್ರವಾಹದಂತೆ ಹರಿದು ಬರುವ ಜಾಗತಿಕ ಮುಸಲ್ಮಾನರು ಹೊಲಿಗೆ ಇಲ್ಲದ ಇಹ್ರಾಂ ಎಂಬ ತುಂಡು ಬಟ್ಟೆಯನ್ನು ತೊಟ್ಟು ಪವಿತ್ರ ನಗರಿಯಾದ ಮಕ್ಕಾ ನಗರದಲ್ಲಿ ಸಂಗಮಿಸಿ ಅಲ್ಲಿನ ಪವಿತ್ರ ಕಅಬಾಗೆ ಪ್ರದಕ್ಷಿಣೆಗೈಯುವ ರೋಮಾಂಚಕ ಕ್ಷಣ. ‘ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಲಾ ಶರೀಕಲಕ ಲಬ್ಬೈಕ್..’ ಮಕ್ಕಾ ನಗರಿಯಲ್ಲಿ ಸಂಗಮಿಸುವ ಅಖಂಡ ಜಗತ್ತಿನ ಮಿಲಿಯಾಂತರ ಮುಸಲ್ಮಾನರ ತುಟಿಗಳಿಂದ ಹೊರಹೊಮ್ಮುವ ಪವಿತ್ರ ಮಂತ್ರ.. ಇಸ್ಲಾಂನ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ದಿನದಂದು ಆಚರಿಸಲ್ಪಡುವ ಹಬ್ಬವೇ ಬಕ್ರೀದ್. ಇಸ್ಲಾಂ ಧರ್ಮದ ರೋಚಕ ಇತಿಹಾಸವನ್ನು ಪುನರ್ ಸ್ಮರಿಸುವ ಈ ಹಬ್ಬ. ಸೌಹಾರ್ದದ ಅಂಗಣದಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬ
ಪವಿತ್ರ ಹಜ್ ಕವåರ್ ಭೂಮಿ
ವಿರಾಟ್ ಹಜ್ ಯಾತ್ರೆಯ ಸಂದರ್ಭದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ ಈದುಲ್ ಅಝಾ. ಇಸ್ಲಾಮಿನ ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಕರ್ಮಭೂಮಿಯಾಗಿದ್ದ ಪವಿತ್ರ ಮಕ್ಕಾ ಮತ್ತು ಮದೀನಾ ನಗರದಲ್ಲಿ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವ ಕ್ಷಣಗಳಾಗಿವೆ. ವಿಶ್ವದ ಮೂಲೆ ಮೂಲೆಗಳಿಂದ ಮಿಲಿಯಾಂತರ ಮುಸಲ್ಮಾನರು ಪವಿತ್ರ ಹಜ್ ಯಾತ್ರೆಯನ್ನು ನಿರ್ವಹಿಸುತ್ತಾರೆ. ಮುಸಲ್ಮಾನರ ಜೀವಿತದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಆಶಯ ಇಸ್ಲಾಂ ಧರ್ಮದಲ್ಲಿದೆ. ಈ ಆಶಯದೊಂದಿಗೆ ಜಗತ್ತಿನಾದ್ಯಂತವಿರುವ ಮುಸ್ಲಿಮರು ಅತ್ಯಂತ ಪವಿತ್ರ ಸ್ಥಳವಾದ ಕಅಬಾದ ಪರಿಸರವನ್ನು ತಲುಪುತ್ತಾರೆ. ಕಅಬಾ ನೆಲೆಗೊಂಡಿರುವ ಮಕ್ಕಾದಲ್ಲಿ ನಡೆಯುವ ಬೃಹತ್ ಹಜ್ ಸಮಾವೇಶ ಏಕದೇವತ್ವದ ಸಿದ್ಧಾಂತದಡಿಯಲ್ಲಿ ಜನರನ್ನು ಒಗ್ಗೂಡಿಸುವ ಮಾನವ ಭ್ರಾತೃತ್ವದ ವಿಶ್ವ ಸಮ್ಮೇಳನವಾಗಿದೆ. ದೈಹಿಕವಾಗಿ ಹಾಗೂ ಆರ್ಥಿಕ ಸಾಮರ್ಥ್ಯವಿರುವವರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಪವಿತ್ರವಾದ ಹಜ್‌ಯಾತ್ರೆ ಕೈಗೊಳ್ಳಬೇಕೆಂಬ ಕಡ್ಡಾಯ ವಿಧಿ ಇಸ್ಲಾಂ ಧರ್ಮದಲ್ಲಿದೆ. ಪವಿತ್ರ ಯಾತ್ರಾ ಸ್ಥಳವಾದ ಕಅಬಾ ದರ್ಶನ ಹಾಗೂ ದುರ್ಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯ ಹಜ್ ಯಾತ್ರೆಯ ಪ್ರಮುಖವಾದ ಘಟ್ಟಗಳಲ್ಲೊಂದು. ಜಾಗತಿಕ ಮುಸಲ್ಮಾನರು ಏಕದೇವತ್ವದ ಸಂದೇಶದಡಿಯಲ್ಲಿ ಒಗ್ಗೂಡುವ ಭಾತೃತ್ವದ ಕ್ಷಣಗಳಾಗಿವೆ ಪವಿತ್ರ ಹಜ್ ಯಾತ್ರೆ.
ಇಸ್ಲಾಂನ ಪಂಚಸ್ತಂಭಗಳಲ್ಲಿ ಕೊನೆಯದಾಗಿರುವ ಹಜ್ ಪ್ರವಾದಿವರ್ಯರು ಹೇಳಿದಂತೆ ಸ್ವೀಕೃತವಾದ ಹಜ್‌ಗೆ ಸಿಗುವ ಪ್ರತಿಫಲವೇ ಸ್ವರ್ಗವಾಗಿದೆ. ಪವಿತ್ರ ಮಕ್ಕಾದಲ್ಲಿರುವ ಕಅಬಾ ಎಂಬುದು ಜಗತ್ತಿನಾದ್ಯಂತವಿರುವ ಕೋಟ್ಯಂತರ ಮುಸಲ್ಮಾನರ ಭಾವನಾತ್ಮಕ ಪ್ರತೀಕವಾಗಿದೆ. ಈ ಪ್ರಪಂಚದಲ್ಲಿ ನಿರ್ಮಿಸಲ್ಪಟ್ಟ ಅಲ್ಲಾಹನ ಭವನವಾದ ಕಅಬಾಗೆ ಹಝ್ರತ್ ಅದಂ (ಅ.ಸ) ಅವರು ಹಿಂದಿನಿಂದ 40 ಹಜ್ಜನ್ನು ನಿರ್ವಹಿಸಿದ ಬಗ್ಗೆ ಉಲ್ಲೇಖಗಳಿವೆ. ಜಿಬ್ರಿಲ್ (ಅ.ಸ) ಅವರು ಒಂದೆಡೆ ಆದಂ (ಅ.ಸ)ರವರಲ್ಲಿ ಹೇಳುತ್ತಾರೆ. ‘ನಿಮಗೆ ನಾಲ್ಕು ಸಾವಿರ ವರ್ಷಗಳಿಂದ ಮಲಕುಗಳು (ದೇವದೂತರು) ಈ ಭವನವನ್ನು ತ್ವವಾಫ್ (ಪ್ರದಕ್ಷಿಣೆ)ಗೈಯುತ್ತಲಿದ್ದಾರೆ.’ ಪ್ರವಾದಿ ನೂಹ್ (ಅ) ರವರ ಕಾಲದಲ್ಲಿ ಉಂಟಾದ ಜಲಪ್ರಳಯದಿಂದ ಹಾನಿಗೊಂಡ ಕಅಬಾ ಮಂದಿರವನ್ನು ಅಲ್ಲಾಹನ ಆಜ್ಞೆಯಂತೆ ಹಝ್ರತ್ ಇಬ್ರಾಹಿಂ (ಅ.ಸ) ಅವರು ಪುನರ್ ನಿರ್ಮಿಸಿದರು. ಅವರ ಪುತ್ರ ಹಝ್ರತ್‌ಇಸ್ಮಾಯಿಲ್ರವರು ಸಹಾಯಕರಾಗಿ ನಿಂತರು. ಮಂದಿರ ನಿರ್ಮಾಣಗೊಂಡ ಬಳಿಕ ಹಝ್ರತ್ ಇಬ್ರಾಹಿಂರವರು ಅಲ್ಲಾಹನ ನಿರ್ದೇಶನದಂತೆ ಜನರನ್ನು ಆ ಭವನದತ್ತ ಆಹ್ವಾನಿಸಿದರು. ಆ ಆಹ್ವಾನಕ್ಕೆ ಓಗೊಟ್ಟ ಜಗತ್ತಿನ ಮೂಲೆ ಮೂಲೆಗಳಿಂದ ಕೋಟ್ಯಂತರ ಜನರು ಪವಿತ್ರ ಹಜ್‌ಕರ್ಮವನ್ನು ನಿರ್ವಹಿಸಲು ಮಕ್ಕಾದತ್ತ ಧಾವಿಸುತ್ತಾರೆ.
ಹಬ್ಬದ ಸಂಭ್ರಮ
ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್ಹಜ್ ತಿಂಗಳ 10ನೇ ದಿನದಂದು ಆಚರಿಸುವ ಬಕ್ರೀದ್ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸಲ್ಪಡುವ ಈ ಹಬ್ಬ ಸಮಕಾಲೀನ ಜಗತ್ತಿಗೆ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶವನ್ನೂ ನೀಡುತ್ತವೆ. ಬಕ್ರೀದ್ ಹಬ್ಬ ಬಲಿ ಕೊಡುವ ಹಬ್ಬ ಎಂಬುವುದಕ್ಕಿಂತಲೂ ಅದು ತ್ಯಾಗ ಬಲಿದಾನದ ಸಂಕೇತದ ಪ್ರತೀಕವಾಗಿ ಆಚರಿಸಲ್ಪಡುತ್ತವೆ.
ಅಲ್ಲಾಹು ಅಕ್ಬರ್..ಅಲ್ಲಾಹು ಅಕ್ಬರ್,,ಎಂಬ ದೈವ ಕೀರ್ತನೆ ಎಲ್ಲೆಡೆ ಮೊಳಗಿದಾಗ ಹಬ್ಬಕ್ಕೆ ಮುಹೂರ್ತ ದೊರೆಯುತ್ತದೆ. ಹಬ್ಬದಂಗವಾಗಿ ಮುಂಜಾನೆ ಬೇಗ ಎದ್ದು ಹೊಸ ಉಡುಪು ಧರಿಸಿ ಸುಗಂಧ ದ್ರವ್ಯ ಸಿಂಪಡಿಸಿ ಎಲ್ಲರೂ ಮಸೀದಿಗೆ ತೆರಳುತ್ತಾರೆ. ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ನಮಾಜು ನಡೆಯುತ್ತವೆ. ಹಬ್ಬದಂದು ಈದ್ಗಾ ಮೈದಾನಕ್ಕೆ ತೆರಳುವ ಮುಸಲ್ಮಾನ ಬಾಂಧವರು ಮನುಕುಲದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ.
ಬಳಿಕ ಬಂಧು ಮಿತ್ರಾದಿಗಳ ಮನೆಗೆ ತೆರಳಿ ಪರಸ್ಪರ ಸಂಬಂಧವನ್ನು ಸುದೃಢಗೊಳಿಸುವುದು ರೂಢಿಗಳಲ್ಲೊಂದು. ಕೌಟುಂಬಿಕ ಬಾಂಧವ್ಯ ಬೆಸುಗೆಗೆ ಇದು ಶುಭ ದಿನ. ಈದ್ ನಮಾಜಿನ ಬಳಿಕ ಬಂಧು ಮಿತ್ರಾದಿಗಳು ಪರಸ್ಪರ ಹಸ್ತದಾನ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ. ನಮ್ಮ ನಡುವೆ ಪ್ರೀತಿ ವಿಶ್ವಾಸ ನಷ್ಟಗೊಂಡಿರುವ ಪ್ರಸಕ್ತ ಸನ್ನಿವೇಶದಲ್ಲಿ ತನ್ನ ಸ್ವಸಂತೋಷವೇ ಪರಮ ಪ್ರಾಧಾನ್ಯವಾಗಿ, ಜಾಗತೀಕರಣದ ಭರಾಟೆಯಲ್ಲಿ ರೀತಿರಿವಾಜುಗಳನ್ನು ಮರೆತು ಆಧುನಿಕ ಆಡಂಬರದಲ್ಲಿ ಮೈಮೆರೆತಿರುವಾಗ ಬಕ್ರೀದ್ ಹಬ್ಬ ತ್ಯಾಗ ಸನ್ನದ್ಧತೆಯ ಪ್ರತೀಕವಾಗಿ ನಮ್ಮ ಮುಂದೆ ಬಂದಿದೆ.
ಸಂತ್ರಸ್ತರಿಗೆ ನೆರವಾಗೋಣ
ಇವತ್ತು ಮನುಷ್ಯ-ಮನುಷ್ಯರೊಳಗೆ ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಿಕ್ಕಾಟದ ನಡುವೆ ಆಗಮಿಸಿದ ಈದ್ ಹಬ್ಬ ಯಾವುದೇ ಸಡಗರಗಳಿಗೆ ಸೀಮಿತವಾಗದೆ ಪರಸ್ಪರ ಬಾಂಧವ್ಯದ, ಸಹೋದರತ್ವದ, ಸಮಾನತೆಯ ಬದುಕಿಗೆ ವ್ಯಾಖ್ಯಾನವಾಗುತ್ತಿರುವ ಜತೆಗೆ ಅಶುದ್ಧಿಯಿಂದ ಮುಕ್ತಿಗೊಂಡು ಪರಮಪಾವನವಾಗಿ ನವಜೀವನದ ಆಕಾಂಕ್ಷೆಯೊಂದಿಗೆ ಅಚ್ಚ ಹೊಸ ಕನಸುಗಳೊಂದಿಗೆ ಮುಂದಡಿಯಿಡುವ ಭಾವುಕದ ಕ್ಷಣಗಳಾಗಲಿ.
ಬಕ್ರಿದ್ ಹಬ್ಬ ಸಂತಸ ಸಡಗರ ಮತ್ತು ಆಚರಣೆಗಳ ಜತೆಗೆ ಜೀವನಪರ್ಯಂತ ಎದುರಾಗುವ ವಿಭಿನ್ನ ಸಂದರ್ಭಗಳಲ್ಲಿ ನೆಮ್ಮದಿ, ಶಾಂತಿ ಒದಗಿಸಲಿ. ಜಲಪ್ರಳಯದಿಂದ ತತ್ತರಿಸಿ ಹೋಗಿರುವ ಜನತೆಗೆ ನೆರವಾಗುವುದರೊಂದಿಗೆ ಹಬ್ಬಕ್ಕೆ ಮಾನವೀಯತೆಯ ಸ್ಪರ್ಶ ನೀಡೋಣ. ಸರ್ವರಿಗೂ ಈದ್ ಮುಬಾರಕ್.
- ಹರ್ಷಾದ್ ವರ್ಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.