![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 23, 2020, 7:11 PM IST
ಕಾಸರಗೋಡು: ಕೋವಿಡ್ ಮುಗ್ಗಟ್ಟು ಪರಿಣಾಮ ಸಂದಿಗ್ಧತೆಯಲ್ಲಿದ್ದ ಪ್ರವಾಸೋದ್ಯಮ ವಲಯ ಮತ್ತೆ ಚಿಗುರಿಕೊಂಡಿದ್ದು, ರಾಜ್ಯ ಮತ್ತೆ ಪ್ರವಾಸಿಗರ ಸ್ವರ್ಗವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.
ರಾಜ್ಯದ 14 ಜಿಲ್ಲೆಗಳಲ್ಲಿ ಪೂರ್ಣಗೊಂಡಿರುವ ಪ್ರವಾಸೋದ್ಯಮ ವಲಯದ 26 ಯೋಜನೆಗಳು ಸಹಿತ ಬೇಕಲ ಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಸ್ವಾಗತ ಕಮಾನ ಮತ್ತು ಇತರ ಕೆಲವು ಸೌಲಭ್ಯಗಳ ಉದ್ಘಾಟನೆ ಗುರುವಾರ ಜರಗಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೀಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ, ಮಾತನಾಡಿದರು. ನಮ್ಮ ಪ್ರವಾಸೋದ್ಯಮ ವಲಯ ಬೃಹತ್ ಸಾಧನೆ ನಡೆಸುತ್ತಿರುವ ಸಂದರ್ಭದಲ್ಲೇ ಕೋವಿಡ್ ಸೋಂಕಿನ ಹಾವಳಿ ತಲೆದೋರಿತ್ತು. 25 ಸಾವಿರ ಕೋಟಿ ರೂ.ನ ನಷ್ಟ ಸಂಭವಿಸಿದೆ. ಜತೆಗೆ ದೊಡ್ಡ ಪ್ರಮಾಣದ ಉದ್ಯೋಗ ನಷ್ಟ ಉಂಟಾಗಿದೆ. ಆದರೂ ಕೋವಿಡ್ ಸಂಹಿತೆಗಳನ್ನು ಪಾಲಿಸಿ ಪ್ರವಾಸಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರಕಾರ ಸಿದ್ಧವಾಗಿದೆ. ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮಗಳಲ್ಲಿ ಅಳವಡಿಸಿ 26 ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಎಂದರು.
ಬೇಕಲ ಕೋಟೆಯ ಪ್ರವೇಶ ಗೋಪುರ ಮತ್ತು ಕಾಲ್ನಡಿಗೆ ಹಾದಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬೇಕಲಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಇತಿಹಾಸ ಸಂಶೋಧಕರನ್ನು ಸ್ವಾಗತಿಸುವ ಕಮಾನಗಳು ಕೋಟೆಯ ಸೌಂದರ್ಯವನ್ನು ದ್ವಿಗುಣಿಗೊಳಿಸಲಿವೆ. ದೇವರ ಸ್ವಂತ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯಕ್ಕೆ ಹೆಚ್ಚುವರಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಪೂರಕವಾಗಿವೆ.
ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಇಲಾಖೆ ಕಾರ್ಯುದರ್ಶಿ ರಾಣಿ ಜಾರ್ಜ್ ಪ್ರಧಾನ ಭಾಷಣ ಮಾಡಿದರು. ನಿರ್ದೇಶಕ ಪಿ. ಬಾಲಕಿರಣ್ ವರದಿ ವಾಚಿಸಿದರು.
ನಿರ್ಮಾಣ ಫಲಕವನ್ನು ಶಾಸಕ ಕೆ. ಕುಂಞಿರಾಮನ್ ಅನಾವರಣಗೊಳಿಸಿದರು. ಪಳ್ಳಿಕ್ಕರೆ ಗ್ರಾ.ಪಂ. ಅಧ್ಯಕ್ಷೆ ಪಿ.ಇಂದಿರಾ, ಡಿಟಿಪಿಸಿ ಕಾರ್ಯಕಾರಿ ಸಮಿತಿ ಸದಸಯ ಕೆ.ವಿ. ಕುಂಞಿರಾಮನ್, ವಾರ್ಡ್ ಸದಸ್ಯೆ ಎಂ.ಜಿ. ಆಯಿಷಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಸ್.ಬೇಬಿ ಶೀಜಾ ಮೊದಲಾದವರು ಉಪಸ್ಥಿತರಿದ್ದರು. ಉದುಮಾ ಶಾಸಕ ಕೆ. ಕುಂಞಿರಾಮನ್ ಸ್ವಾಗತಿಸಿದರು. ಡಿಟಿಪಿಸಿ ಕಾರ್ಯದರ್ಶಿ ಬಿಜು ರಾಘವನ್ ವಂದಿಸಿದರು.
You seem to have an Ad Blocker on.
To continue reading, please turn it off or whitelist Udayavani.