ಯಕ್ಷಗಾನ ಪ್ರದರ್ಶನದಿಂದ ಬಡ ಕುಟುಂಬಕ್ಕೆ ಸೂರು
Team Udayavani, Apr 25, 2017, 5:08 PM IST
ಗುಡಿಸಲಲ್ಲಿ ವಾಸಿಸುತ್ತಿರುವ ದಂಪತಿಯ ಸಂಕಷ್ಟಕ್ಕೆ ಮಿಡಿದ ಕಲಾಪ್ರೇಮಿಗಳು
ನೀರ್ಚಾಲು: ಯಕ್ಷಗಾನ ಗಂಡುಮೆಟ್ಟಿದ ಕಲೆ. ಎಲ್ಲ ಕಲೆಗಳಿಗಿಂತಲೂ ಭಿನ್ನ. ಈಗಿನ ಕಾಲಘಟ್ಟದಲ್ಲಿ ಯಕ್ಷಗಾನ ಕಲೆ ಯುವ ಜನತೆಯನ್ನು ಆಕರ್ಷಿಸುವುದಲ್ಲದೆ ವೈವಿಧ್ಯದ ಮೆರುಗನ್ನು ಚೆಲ್ಲುತ್ತಿದೆ. ಯಕ್ಷಗಾನ ಕಲೆ ಕೇವಲ ಮನೋರಂಜನೆಗಷ್ಟೇ ಸೀಮಿತವಾದುದಲ್ಲ. ಸಾಮಾಜಿಕ ಕಳಕಳಿಯನ್ನೂ ತೋರುತ್ತದೆ ಎನ್ನುವುದಕ್ಕೆ ಪ್ರಕಾಶ್ ನಾಯಕ್ ನಿರ್ಚಾಲು ಅವರ ಸಂಯೋಜಕತ್ವದಲ್ಲಿ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲೊಂದಾದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ 2ನೇ ಮೇಳದ ಕಲಾವಿದರಿಂದ ಎ. 25ರಂದು ನೀರ್ಚಾಲು ಶಾಲಾ ವಠಾರದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನವೊಂದು ನಿದರ್ಶನ.
ಬದಿಯಡ್ಕ ಪಂಚಾಯತ್‌ನ 13ನೇ ವಾರ್ಡ್ ವ್ಯಾಪ್ತಿಯ ಕನ್ನೆಪ್ಪಾಡಿ ಬಳಿಯ ತಲ್ಪನಾಜೆ ನಾರಾಯಣ ನಾಯಕ್ ಮತ್ತು ಪ್ರೇಮ ದಂಪತಿ ಹಲವು ವರುಷದಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಯಾವುದೇ ಅಧಿಕಾರಿಗಳೂ ಇವರ ಪುನರ್ವಸತಿಗಾಗಿ ಶ್ರಮಿಸದಿರುವುದು ದುರಂತ. ಇವರ ಈ ಸಂಕಷ್ಟದ ಸ್ಥಿತಿಗೆ ಕಲಾಪ್ರೇಮಿ ಮನಸ್ಸುಗಳು ಮಿಡಿದಿವೆ.
ಕೂಲಿ ಕೆಲಸ ಮಾಡುತ್ತಿದ್ದ ನಾರಾಯಣ ನಾಯಕ್ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯುಂಟಾಗಿದೆ. ನಾರಾಯಣ ನಾಯಕ್ ಅವರ ಪತ್ನಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದು ಅದರಿಂದ ಲಭಿಸುವ ನಾಮ ಮಾತ್ರ ಮೊತ್ತದಿಂದ ಜೀವನ ಸಾಗಿಸಬೇಕಾದ ದುಸ್ಥಿತಿ ಬಂದೊದಗಿದೆ.
20 ವರ್ಷಗಳ ಹಿಂದೆ ಸರಕಾರದಿಂದ ಲಭಿಸಿದ 20 ಸೆಂಟ್ ಸ್ಥಳ ದಲ್ಲಿ ಈ ಕುಟುಂಬ ವಾಸಿಸುತ್ತಿದೆ. ಅಂದು ಅಲ್ಲಿ ಹುಲ್ಲು ಹಾಸಿದ ಸಣ್ಣ ಗುಡಿಸಲೊಂದನ್ನು ನಿರ್ಮಿಸಿ ವಾಸವಾಗಿದ್ದರು. ಆರ್ಥಿಕ ಸಂದಿಗ್ಧತೆ ಯಲ್ಲಿ ಗುಡಿಸಲನ್ನು ಉತ್ತಮಗೊಳಿಸಲು ಸಾಧ್ಯವಾಗಲಿಲ್ಲ.
ಬಡವರಿಗೆ ಮನೆ ನಿರ್ಮಾಣಕ್ಕೆ ಸೌಲಭ್ಯ ದೊರಕುತ್ತಿರುವಾಗ, ನಾರಾಯಣ ನಾಯಕ್ ಅದಕ್ಕಾಗಿ 15 ವರ್ಷಗಳಿಂದೀಚೆಗೆ ಅರ್ಜಿ ಸಲ್ಲಿಸಿದರೂ ಆ ಬಗ್ಗೆ ಪಂಚಾಯತ್ ಪರಿಗಣಿಸಲಿಲ್ಲ. ಹುಲ್ಲು ಹಾಸಿದ ಮನೆ ಈಗ ತೀರಾ ಶೋಚನೀಯ ಸ್ಥಿತಿಗೆ ತಲುಪಿದ್ದು ಇಂದೋ ನಾಳೆಯೋ ಮುರಿದು ಬೀಳುವ ಮನೆಯು ವಾಸಿಸಲು ಅಯೋಗ್ಯವಾಗಿದೆ. ಮನೆಗೆ ವಿದ್ಯುತ್ ಲಭಿಸಲಿಲ್ಲ. ಸೀಮೆ ಎಣ್ಣೆ ದೀಪವನ್ನೇ ಉಪಯೋಗಿಸಲಾಗುತ್ತಿದೆ. ಸೀಮೆ ಎಣ್ಣೆ ಖರೀದಿಸಲೂ ಸಾಮರ್ಥ್ಯವಿಲ್ಲದ ವೃದ್ಧ ದಂಪತಿ ಕತ್ತಲಲ್ಲೇ ಜೀವನ ಸಾಗಿಸಬೇಕಾಗಿದೆ. ವೃದ್ಧಾಪ್ಯ ಪಿಂಚಣಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಇನ್ನೂ ದೊರಕುತ್ತಿಲ್ಲ. ಕುಡಿಯಲು ಶುದ್ಧ ನೀರೂ ಲಭಿಸುತ್ತಿಲ್ಲ. ಯೋಜನೆಯ ಹಣವಿದ್ದರೂ ಅದು ಫಲಾನುಭವಿಗಳ ಕೈ ಸೇರದಿರುವುದರಿಂದ ಈ ಕುಟುಂಬ ದುಖೀಸುತ್ತಿದೆ. ಈ ಬಡಕುಟುಂಬದ ಸಂಕಷ್ಟ ಸ್ಥಿತಿಯನ್ನರಿತು ಯಕ್ಷಗಾನ ಪ್ರದರ್ಶನದ ಮೂಲಕ ವಸತಿ ನಿರ್ಮಿಸುವ ಮಹತ್ತರ ಕಾರ್ಯ ಉದಾತ್ತವಾದುದು.
ಯಕ್ಷಗಾನ ಕಲೆ – ಕಲಾವಿದರ ಸಮಾಜ ಸೇವೆಯ ಮೂಲಕ ಜನಪ್ರತಿನಿಧಿಗಳು ಕಲಿಯುವುದು ತುಂಬಾ ಇದೆ. ಏನೇ ಆಗಲಿ ಯಕ್ಷಗಾನ ಕಲೆಯ ಮೂಲಕ ಇಂತಹ ಸಾಮಾಜಿಕ ಕಳಕಳಿಯ ಕಾರ್ಯ ಯಶಸ್ವಿಯಾಗಲಿ. ನಾರಾಯಣ ನಾಯಕರ ಕುಟುಂಬದ ವಸತಿ ನಿರ್ಮಾಣ ಕಾರ್ಯ ನಿಶ್ಚಿಂತೆಯಿಂದ ನೆರವೇರಲೆಂದು ಶುಭಹಾರೈಸೋಣ.
ಹಿಡಿಂಬಾ ವಿವಾಹ, ಕೀಚಕ ವಧೆ
ಶ್ರೀ ಗೋಪಾಲಕೃಷ್ಣ ಕೃಪಾಪೋಶಿತ ಯಕ್ಷಗಾನ ಮಂಡಳಿ ಯವರಿಂದ ನಾರಾಯಣ ನಾಯಕ್-ಪ್ರೇಮಾ ದಂಪತಿಗೆ ಸೂರು ನಿರ್ಮಿಸಲು ಎ. 25ರಂದು ಸಂಜೆ 6.30ರಿಂದ ಹಿಡಿಂಬಾ ವಿವಾಹ, ಕೀಚಕ ವಧೆ, ಉತ್ತರನ ಪೌರುಷಗಳೆಂಬ ಕಥಾನಕಗಳ ಯಕ್ಷಗಾನ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ.
-ಮಣಿರಾಜ್ ವಾಂತಿಚ್ಚಾಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.