ತಿರುವನಂತಪುರ-ಕಾಸರಗೋಡು: ಸೆಮಿ ಹೈಸ್ಪೀಡ್ ಟ್ರೈನ್: ಸರ್ವೆ ಮುಕ್ತಾಯ
Team Udayavani, Jan 7, 2020, 5:34 AM IST
ಕಾಸರಗೋಡು: ಕೇರಳ ಜನತೆಯ ಹಲವು ವರ್ಷಗಳ ಕನಸಾಗಿರುವ ಮಹತ್ವಾ ಕಾಂಕ್ಷೆಯ ತಿರುವನಂತಪುರ- ಕಾಸರಗೋಡು ಸೆಮಿ ಹೈಸ್ಪೀಡ್ ಟ್ರೈನ್‌ನ “ಸಿಲ್ವರ್ ಲೈನ್ ಅಲೈನ್‌ಮೆಂಟ್’ ಯೋಜನೆಯನ್ನು ಸಾಕಾರಗೊಳಿಸುವ ಅಂಗವಾಗಿ ಆರಂಭಿಸಿದ ಹೆಲಿಕಾಪ್ಟರ್‌ನಲ್ಲಿ ಆಗಸದಿಂದ ಸರ್ವೆ ಮುಕ್ತಾಯಗೊಂಡಿತು. ಕಳೆದ ಮಂಗಳವಾರ ಸರ್ವೇ ಪ್ರಕ್ರಿಯೆ ಆರಂಭಿಸಲಾಗಿತ್ತು. ಪ್ರಥಮ ದಿನ ಕಣ್ಣೂರು-ಕಾಸರಗೋಡು ತನಕ ಸರ್ವೆ ನಡೆಸಲಾಗಿದೆ.
ಜ. 5ರಂದು ತಿರುವನಂತಪುರದಲ್ಲಿ ಸಿಲ್ವರ್ ಲೈನ್ ಅಲೈನ್‌ಮೆಂಟ್ ನಿರ್ಣಯಿಸುವ ಸರ್ವೇ ಪೂರ್ತಿಗೊಂಡಿದ್ದು, ಪ್ರಥಮ ಹಂತದ ಪ್ರಕ್ರಿಯೆ ಯಶಸ್ವಿಯಾಯಿತು. ಸಿಲ್ವರ್ ಲೈನ್ 531.45 ಕಿಲೋ ಮೀಟರ್ ದೀರ್ಘವಿದ್ದು, ಇದರ ಸರ್ವೇಗೆ ನೌಕಾದಳದ ಪಿ.68 ಎಂಬ ವಿಮಾನವನ್ನು ಮತ್ತು ಅದರಲ್ಲಿ ಘಟಿಸಿದ ಲ್ಯಾಡರ್ ವ್ಯವಸ್ಥೆಯನ್ನು ಬಳಸಲಾಗಿದೆ. ಇದಲ್ಲದೆ ಈ ಯೋಜನೆಯಲ್ಲಿ ಕಾರ್ಯರೂಪಕ್ಕೆ ಬರುವ ರೈಲು ನಿಲ್ದಾಣಗಳ ಸರ್ವೆಯೂ ಪೂರ್ಣಗೊಂಡಿತು.
ಸಿಲ್ವರ್ ಲೈನ್ ಯೋಜನೆಯನ್ನು ಸಾಕಾರಗೊಳಿಸುವ ಕೇರಳ ರೈಲ್ವೇ ಡೆವಲಪ್‌ಮೆಂಟ್ ಕಾರ್ಪೊರೇಶನ್‌ಗಾಗಿ ಹೈದರಾಬಾದ್‌ನಲ್ಲಿ ಕಾರ್ಯಾಚರಿಸುವ ಜೀಯೋನೋ ಇಂಡಿಯಾ ಲಿಮಿಟೆಡ್ ಎಂಬ ಸಂಸ್ಥೆ ಸರ್ವೇಯನ್ನು ನಡೆಸಿದೆ. ಈಗಾಗಲೇ ನಿಗದಿಪಡಿಸಿದ ಮುಂಬೈ- ಅಹಮ್ಮದಾಬಾದ್ ಬುಲ್ಲೆಟ್ ಟ್ರೈನ್ ಯೋಜನೆಯ ಹಳಿ ನಿರ್ಮಾಣದ ಲೇಡರ್ ಸರ್ವೇಯನ್ನೂ ಕೂಡ ಜೀಯೋನೋ ನಡೆಸಿತ್ತು. ಸರ್ವೆಯ ಮಾಹಿತಿಗಳನ್ನು ಸರ್ವೆ ಆಫ್ ಇಂಡಿಯಾ ಸಹಿತ ಏಜೆನ್ಸಿಗಳು ಮತ್ತು ಸರಕಾರದ ವಿವಿಧ ಇಲಾಖೆಗಳು ಕ್ರೋಡೀಕರಿಸಿ ದುಬಾರಿಯಾಗಿರುವ ಸ್ಥಳಗಳನ್ನು ಹೊರತುಪಡಿಸಿ ಅಂತಿಮ ವರದಿಯನ್ನು ತಯಾರಿಸಲಿದೆ.
ಕೇಂದ್ರ ರೈಲ್ವೇ ಸಚಿವಾಲಯ ಮತ್ತು ರಾಜ್ಯ ಸರಕಾರದ ಸಂಯುಕ್ತ ನೇತೃತ್ವದಲ್ಲಿ ರುವ ಕಂಪೆನಿ ಕೆ. ರೈಲ್ ಯೋಜನೆಯ ನೇತೃತ್ವ ವಹಿಸಿದೆ. ತಿರುವನಂತಪುರದಿಂದ ತೃಶ್ಶೂರು ವರೆಗಿನ 310 ಕಿಲೋ ಮೀಟರ್ ದೂರದ ರೈಲು ಹಳಿಯನ್ನು ಪ್ರಸ್ತುತ ಇರುವ ರೈಲು ಹಳಿಯಿಂದ ಪ್ರತ್ಯೇಕವಾಗಿ ಅಳವಡಿಸಲಾಗುವುದು. ತೃಶ್ಶೂರಿನಿಂದ ಕಾಸರಗೋಡಿನ ವರೆಗಿರುವ ಹಳಿ ನಿರ್ಮಾಣವೂ ಪ್ರಸ್ತುತ ಇರುವ ರೈಲು ಹಳಿಗೆ ಸಮಾನಾಂತರವಾಗಿ ನಡೆಯಲಿದೆ. ತಿರುವನಂತಪುರ, ಕೊಚ್ಚಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರೀತಿಯಲ್ಲಿ ಸಿಲ್ವರ್ ಲೈನ್ ಸ್ಥಾಪಿಸಲಾಗುವುದು. ಈ ರೈಲು ಹಳಿಯಲ್ಲಿ ಒಟ್ಟು 10 ನಿಲ್ದಾಣಗಳಿರುವುದು. ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆ ಯೋಜನೆಯೂ ಸಿಲ್ವರ್ ಲೈನ್ ಯೋಜನೆಯಲ್ಲಿದೆ.
ಈ ರೈಲು ಹಳಿಯಲ್ಲಿ ರೈಲು ಗಾಡಿ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಪರಿಸರ ಮತ್ತು ಜನರಿಗೆ ಯಾವುದೇ ತೊಂದರೆಯಾಗದಂತೆ ರೈಲು ಹಳಿ ನಿರ್ಮಾಣ ಮಾಡಲಿದ್ದು, ಸರ್ವೆಯಲ್ಲಿ ಧನಾತ್ಮಕ ಅಂಶಗಳು ಲಭ್ಯವಾಗಿದೆ. ಈ ಸರ್ವೇಯಲ್ಲಿ ಅರಣ್ಯ ಪ್ರದೇಶ, ನದಿಗಳು, ರಸ್ತೆಗಳು, ತಟಾಕಗಳು, ವಿದ್ಯುತ್ ಲೈನ್‌ಗಳು, ಸಾರ್ವಜನಿಕ ವಲಯಗಳು ಮೊದಲಾದವು ನಿಖರವಾಗಿ ಲಭ್ಯವಾಗಿವೆ. ಇದಕ್ಕಾಗಿ ಅತ್ಯುತ್ತಮ ಗುಣಮಟ್ಟದ ಹಾಗೂ ಅತೀ ಹೆಚ್ಚು ರೆಸಲ್ಯೂಶನ್‌ಕೆಮರಾಗಳನ್ನು ಬಳಸಲಾಗಿದೆ. ದ್ವಿಹಳಿ ನಿರ್ಮಾಣಕ್ಕೆ ಅಗತ್ಯವಾದ ಸ್ಥಳದ ಬಗ್ಗೆ ಸರ್ವೆಯಲ್ಲಿ ಗುರುತಿಸಲಾಗಿದೆ. ಕೆಲವೆಡೆ ಸೇತುವೆಗಳಲ್ಲಿ ರೈಲು ಹಾದು ಹೋಗಲಿದೆ.
ಯೋಜನೆಗೆ ಅಗತ್ಯದ ಮೊತ್ತವನ್ನು ಸರಿದೂಗಿಸಲು ಹೂಡಿಕೆ ಸಂಗ್ರಹಿಸಲು ಕೇರಳ ರೈಲ್ವೇ ಅಭಿವೃದ್ಧಿ ನಿಗಮಕ್ಕೆ (ಕೆ.ಆರ್. ಡಿ.ಸಿ.ಎಲ್) ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಪ್ರಾಥಮಿಕ ಹಂತದಲ್ಲಿ 100 ಕೋಟಿ ರೂ. ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.
ರೈಲು ಹಳಿ ನಿರ್ಮಾಣ ಸಂದರ್ಭದಲ್ಲಿ ಸುಮಾರು 50 ಸಾವಿರ ಉದ್ಯೋಗ ಅವಕಾಶ ಲಭಿಸಲಿದೆ. ಯೋಜನೆ ಪೂರ್ತಿಯಾದ ಬಳಿಕ 11,000 ಮಂದಿಗೆ ಉದ್ಯೋಗ ಲಭಿಸಲಿದೆ. ಯೋಜನೆ ಶೇ. 100 ಪರಿಸರ ಸೌಹಾರ್ದವಾಗಿರುವುದು. ಇದಕ್ಕಾಗಿ ಗುಜರಾತ್‌ನ ಅಹ್ಮದಾಬಾದ್‌ನ ಐ.ಐ.ಎಂ. ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಸೌರ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು. ಸ್ಟೀಲ್ ಹಾಗೂ ಕಾಂಕ್ರೀಟ್ ಪುನರ್ ಸಂಸ್ಕರಿಸಿ ಬಳಸುವಂತೆ ಮಾಡಲಾಗುವುದು. ನಿರ್ಮಾಣ ಸಂದರ್ಭದಲ್ಲಿ ಉಂಟಾ ಗುವ ಸಾಮಗ್ರಿ ಉಳಿಕೆಯನ್ನು ಸಂಸ್ಕರಿಸಲಾ ಗುವುದು. ಪ್ಯಾರಿಸ್‌ನ ಸಿಸ್ಟ್ರಾ ಎಂಬ ಸಂಸ್ಥೆ ಸೆಮಿ ಹೈಸ್ಪೀಡ್ ರೈಲು ಹಳಿ ನಿರ್ಮಾಣದ ಬಗ್ಗೆ ಸಾಧ್ಯತೆ ಅಧ್ಯಯನ ನಡೆಸಿತ್ತು.
66,405
ಕೋ.ರೂ. ಯೋಜನೆ
ಮಹತ್ವಾಕಾಂಕ್ಷೆಯ ತಿರುವನಂತಪುರ- ಕಾಸರಗೋಡು ಸೆಮಿ ಹೈಸ್ಪೀಡ್ ಟ್ರೈನ್ ಹಳಿ ಯೋಜನೆಯಾದ “ಸಿಲ್ವರ್ ಲೈನ್’ಗೆ ರೈಲ್ವೇ ಸಚಿವಾಲಯ ಅನುಮತಿ ನೀಡಿದ್ದು, ಈ ರೈಲುಗಾಡಿ ಯೋಜನೆ ಸಾಕಾರಗೊಂಡಲ್ಲಿ ಕೇರಳದ ರಾಜಧಾನಿ ತಿರುವನಂತಪುರದಿಂದ ಕಾಸರಗೋಡಿಗೆ 4 ಗಂಟೆಗಳಲ್ಲಿ ರೈಲು ತಲುಪಲಿದೆ. ಈ ಯೋಜನೆಗೆ 66,405 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಸ್ಥಳ ಸರ್ವೆ ಶೀಘ್ರ
ಈ ಸಮಗ್ರ ಯೋಜನೆ ವರದಿ (ಡಿ.ಪಿ.ಆರ್)ಯ ಆಧಾರದಲ್ಲಿ ಅಲೈನ್‌ಮೆಂಟ್ ನಿರ್ಣಯಿಸಲಾಗುವುದು. ಸರ್ವೇಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ತಿಗೊಳಿಸಲು ಸಾಧ್ಯವಾಗಿರುವುದರಿಂದ ಡಿ.ಪಿ.ಆರ್. ಮತ್ತು ಲೊಕೇಶನ್ ಸರ್ವೆಯೂ ಶೀಘ್ರಗತಿಯಲ್ಲಿ ನಡೆಸಿ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿದೆ.
-ವಿ.ಅಜಿತ್ ಕುಮಾರ್,
ಎಂ.ಡಿ, ಕೆ.ಆರ್.ಡಿ.ಸಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.