ಸಾಲು ಸಾಲು ಹಬ್ಬದ ಖಾದ್ಯಕ್ಕೆ ಅರಸಿನ ಎಲೆ ಸಿದ್ಧ
Team Udayavani, Jul 30, 2017, 7:45 AM IST
ಶ್ರಾವಣ ಮಾಸ ಬಂತೆಂದರೆ ಹಬ್ಬ ಹರಿದಿನಗಳು ಪ್ರಾರಂಭವಾದಂತೆ. ಹಬ್ಬಗಳ ಹೆಬ್ಟಾಗಿಲು ಶ್ರಾವಣ ಅನಿಸಿಕೊಂಡಿದೆ. ಶ್ರಾವಣ ಕಳೆದು ಭಾದ್ರಪದ ಮಾಸ ಬಂದಾಗ ಚೌತಿಯ ಗೌಜಿ. ಅಂತೆ ಹಬ್ಬಗಳ ಸಡಗರಕ್ಕೆ ಶ್ರಾವಣ ಮಾಸ ನಾಂದಿ ಹಾಡಿದಂತೆ ದೇವತಾರಾಧನೆ ಜೊತೆಗೆ ವೈಶಿಷ್ಟ éಪೂರ್ಣ ಖಾದ್ಯದ ಊಟಕ್ಕೂ ನಿತ್ಯ ಎಂಬಂತೆ ತಯಾರಿ ನಡೆಯುತ್ತಿರುತ್ತದೆ.
ಈ ವೇಳೆಗಾಗಲೇ ಹಸಿರು ತರಕಾರಿಗಳ ರಾಶಿ ರಾಶಿ, ಅದರೊಂದಿಗೆ ಈ ಕಾಲಕ್ಕೆ ಮಾತ್ರ ಸಲ್ಲುವ ಅರಸಿನ ಎಲೆಯೂ ಮಾರುಕಟ್ಟೆಗೆ ಧಾವಿಸಿ ಬರುತ್ತದೆ. ನಾಗರ ಪಂಚಮಿ, ನೂಲ ಹುಣ್ಣಿಮೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಹೀಗೆ ಅನೇಕ ಹಬ್ಬಗಳ ಖಾದ್ಯ ದಲ್ಲಿ ಅರಸಿನ ಎಲೆಗೆ ಪ್ರಾಧಾನ್ಯತೆ ಇದೆ.
ಭಾದ್ರಪದ ಮಾಸದ ಚೌತಿವರೆಗೂ ಇದರ ಉಪಯೋಗ ವಾಗುತ್ತಿದ್ದು ಬಳಿಕ ಮಾರುಕಟ್ಟೆಯಲ್ಲಿ ಅರಸಿನ ಎಲೆಗೆ ಹುಡುಕಾಟ ನಡೆಸಿದರೂ ಸಿಗಲಾರದು.
ನಾಗರ ಪಂಚಮಿಯಂದು ಅರಸಿನ ಎಲೆಯ ಕಡುಬು, ಚಪ್ಪೆ ಖೀರಿ ಪಾಯಸಕ್ಕೆ ಅರಸಿನ ಎಲೆ ಬೇಕಾಗುತ್ತದೆ. ಈ ದಿನದಿಂದ ಅರಸಿನ ಎಲೆಗೆ ಅತೀ ಬೇಡಿಕೆಗೆ ಪ್ರಾರಂಭವಾಗುತ್ತದೆ. ಮಾರಕಟ್ಟೆಯಲ್ಲಿ ಇದಕ್ಕೆ ತಲೇವಾರಿ ಬೆಲೆ. ಸಾಮಾನ್ಯ 25ರ ಕಟ್ಟಕ್ಕೆ 40ರಿಂದ 50 ರೂ. ವರೆಗೆ ದರ ಇರುತ್ತದೆ. ಹಬ್ಬದ ಅಗತ್ಯವೆಂದಾಗ ದರದ ಬಗೆ ಚೌಕಾಸಿ ಕಮ್ಮಿ. ಚೌಕಾಸಿಗೆ ನಿಂತರೆ ಪರಿಮಿತವಾಗಿ ದೊರೆಯುವ ಅರಸಿನ ಎಲೆಯೂ ದೊರಕದು. ಹೀಗಾಗಿ ಖರೀದಿ ಸಲು ಬರುವವರು ಕಟ್ಟ ಕೈಗೆತ್ತಿ ಹೇಳಿದ ದರ ತೆತ್ತು ಬಿಡುವುದೇ ವಾಸಿ ಎಂದು ತಿಳಿಸಿದ್ದಾರೆ. ಅದಕ್ಕೆ ರುಚಿ ಹೆಚ್ಚು ಅನ್ನುವ ನಂಬುಗೆಯವರಿಗೆ ಹಬ್ಬದ ದಿನದ ಉತ್ಸಾಹದ ವಾತಾವರಣದಲ್ಲಿ ಮನೆಯೊಳಗೆ ಆಹ್ಲಾದ ಬರಿಸುವ ಅರಸಿನೆಲೆಯ ಪರಿಮಳ ಬೇಕೇ ಬೇಕು.
ಅರಸಿನ ಎಲೆಗಾಗಿ ಕೃಷಿ
ನಗರದ ಬೀರಂತಬೈಲು ನಿವಾಸಿ ವೆಂಕಟೇಶ ಶೆಣೈ ಅವರು ಈ ಮಾಸದ ಅಗತ್ಯಕ್ಕಾಗಿರುವ ಅರಸಿನ ಎಲೆಗಾಗಿ ತಮ್ಮ ತೋಟದಲ್ಲಿ ಅನೇಕ ವರ್ಷಗಳಿಂದ ಅರಸಿನ ಕೃಷಿ ಮಾಡುತ್ತಿದ್ದಾರೆ. ಸುಮಾರು 70-80 ಉದ್ದನೇ ಪಾತಿಗಳಲ್ಲಿ ಗೆಡ್ಡೆ ಹಾಸಿ ಮಳೆ ಬರಲು ಪ್ರಾರಂಭವಾದಂತೆ ಚಿಗುರಿ ಮೇಲಕ್ಕೇಳುವ ಸಸಿ ಬುಡಕ್ಕೆ ಅವರು ನೆಲಗಡಲೆ ಹಿಂಡಿ ಗೊಬ್ಬರವಾಗಿ ನೀಡುತ್ತಾರೆ. ದಿನ ಕಳೆದಂತೆ ಹಸುರು ಹಸುರು ಎಲೆಗಳು ಎದ್ದೇಳಿ ವಾತಾವರಣ ಕಣ್ಣಿಗೆ ರಮ್ಯತೆ ಮೂಡಿಸುತ್ತದೆ. ಅದರೊಂದಿಗೆ ಹಿತ್ತಲಲ್ಲಿ ಎಲೆಯ ಪರಿಮಳವೂ ವ್ಯಾಪಿಸತೊಡಗುತ್ತದೆ.
ನಾಗರ ಪಂಚಮಿಯ ಎರಡು ದಿನ ಮೊದಲು ಅರಸಿನ ಎಲೆಯ ಮೊದಲ ಕಟಾವು ಇವರು ಮಾಡು ತ್ತಾರೆ. ಈ ಕೆಲಸಕ್ಕೆ ಇವರಿಗೆ ನೆರವು ನೀಡುವವರು ನೆರೆಕರೆಯ ಸುಂದರ. ಕಟಾವು ಬೆಳಗ್ಗೆ ಮಾಡಿ 25 ಎಲೆಗಳನ್ನು ಬಾಳೆ ನಾರಿನಿಂದ ಕಟ್ಟಿ ಒಂದು ಕಟ್ಟ ಮಾಡುವುದು. ಪ್ರಾರಂಭದ ಕೊಯ್ಲಿನಲ್ಲಿ ಸುಮಾರು 100 ರಷ್ಟು ಕಟ್ಟ ಮಾಡುವಷ್ಟು ದೊಡ್ಡ ಅರಸಿನ ಎಲೆಗಳು ಸಿಗುತ್ತವೆ. ಈ ಬಾರಿ ಸರಿಯಾಗಿ 100 ಕಟ್ಟ ದೊರೆತಿದ್ದು, ಒಟ್ಟು 2500 ಎಲೆಗಳು ಕೊಯ್ಲಿಗೆ ಸಿಕ್ಕಿದೆ. ಪ್ರಾರಂಭದ ಕೊಯ್ಲು ಸ್ಥಳೀಯ ಅಂಗಡಿಗೆ ಹೋಗುತ್ತದೆ. ನಾಗರ ಪಂಚಮಿಗೆ ಮಾತ್ರ ಇಷ್ಟು ಹೆಚ್ಚು ಎಲೆಗಳು ಸಿಗುತ್ತಿದ್ದು, ಮುಂದಿನ ಕೃಷ್ಣಾಷ್ಟಮಿಗೆ ಶೇ.20 ರಷ್ಟು ಕೊಯ್ಲು ಕಮ್ಮಿಯಾಗುತ್ತದೆ. ಚೌತಿ ವೇಳೆಗೆ ಮಳೆಯೂ ಕಮ್ಮಿಯಾಗುತ್ತಿದ್ದಂತೆ ಎಲೆಗಳ ಸಂಖ್ಯೆಯಲ್ಲೂ ಕಡಿತವಾಗಿ ಶೇ.40 ರಷ್ಟು ಕೊಯ್ಲು ಸಿಗುತ್ತದೆ. ಅಲ್ಲಿಗೆ ಈ ವರ್ಷದ ಬೆಳೆ ಸಮಾಪ್ತವಾದಂತೆ.
ಈ ಕೃಷಿ ಇರುವುದು ಕೇವಲ ಅರಸಿನ ಎಲೆ ಪಡೆಯಲು ಮಾತ್ರ. ಹೀಗಾಗಿ ಇದಕ್ಕಾಗಿ ವ್ಯಯಿ ಸಿದ ಹಣ ಖಂಡಿತಾ ಸಿಗುವುದಿಲ್ಲ. ಒಂದು ವೇಳೆ ಗೆಡ್ಡೆಯನ್ನು ಒಣಗಿಸಿ ಅರಸಿನ ಮಾಡುವ ಕಾಯಕ ಕೈಗೊಂಡರೆ ಇಷ್ಟು ವ್ಯಾಪ್ತಿಯಲ್ಲಿ ಮಾಡಿದ ಕೃಷಿ ಯಿಂದ ವರಮಾನ ಗಳಿಸಬಹುದೋ ಏನೋ ಎಂದು ಶೆಣೈ ತಿಳಿಸುತ್ತಾರೆ. ಆದರೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣಕ್ಕೆ ಆ ದಿಶೆಯಲ್ಲಿ ಅವರು ಚಿಂತಿಸಿಲ್ಲ.
ಈ ಸಮಯದ ಹಬ್ಬದ ದಿನಗಳಲ್ಲಿ ಮಾರುಕಟ್ಟೆ ಯಲ್ಲಿ ಯಾರಿಗಾದರೂ ಅರಸಿನ ಎಲೆ ಸಿಗದಿ ದ್ದರೆ ತಮ್ಮ ಮನೆಗೆ ಬಂದು ಅರಸಿನ ಎಲೆ ಪಡೆಯಬಹುದು. ಅದಕ್ಕೆ ಯಾವುದೇ ಬೆಲೆ ನೀಡಬೇಕಾಗಿಲ್ಲ ಎಂದು ವೆಂಕಟೇಶ್ ಶೆಣೈ ಅವರು ಹಬ್ಬದ ವಿಶೇಷ ಆಫರ್ ನೀಡಿದ್ದಾರೆ.
ಅರಸಿನ ಮಂಗಲ ದ್ರವ್ಯ ಎನಿಸಿದೆ. ಶ್ರೀ ವಿಷ್ಣುವಿನ ಪ್ರಿಯವಾದ ಬಣ್ಣವಿದು. ಶ್ರೀಕೃಷ್ಣ ಅರಸಿನ ವರ್ಣದ ಬಟ್ಟೆಯನ್ನೇ ಧರಿಸುತ್ತಿರುವುದು ವಿಶೇಷ ಎನಿಸಿದೆ. ಚೌದ್ಧರಲ್ಲಿ ಅರಸಿನ ಬಣ್ಣವು ಉದಾರತೆಯ ಪ್ರತೀಕ. ಬುದ್ಧನನ್ನೇ ಸಾಂಕೇತಿಸುತ್ತಿದೆ. ಅವರು ಅರಸಿನವನ್ನು ಪವಿತ್ರ ಮತ್ತು ಶುಭಗುಣದ ಸಂಕೇತವೆಂದೇ ಗುರುತಿಸಿಕೊಂಡಿದ್ದಾರೆ. ಅರಸಿನ ಋಣಾತ್ಮಕ ಶಕ್ತಿಯನ್ನು ದೂರಗೊಳಿಸುತ್ತದೆ ಅನ್ನುವ ನಂಬುಗೆಯೂ ಇದೆ. ಇದು ಆಧ್ಯಾತ್ಮಿಕ ಶಕ್ತಿಯ ಪ್ರತೀಕವೆಂದೂ ವಿಶ್ವಾಸವಿದೆ.
ಆಧುನಿಕ ವೈದ್ಯಕೀಯ ವಿಜ್ಞಾನದಲ್ಲೂ ಅರಸಿನಕ್ಕೆ ಮಹತ್ತರ ಔಷಧ ಗುಣವಿದೆ ಎಂದು ಕಂಡುಕೊಳ್ಳ ಲಾಗಿದೆ. ಕ್ಯಾನ್ಸರ್ ನಿರೋಧಕ, ಯಕೃತ್, ಹೃದಯದ ರೋಗ, ಅಲ್‌ಜೀಮರ್ ರೋಗಕ್ಕೂ ಇದು ಔಷಧಿ. ಮುಖದ ಮೇಲೆ ನೆರಿಗೆ ಸುಕ್ಕುಗಳಿದ್ದರೆ ಹಾಲು ಕೆನೆ ಮತ್ತು ಅರಸಿನ ಹುಡಿ ಬೆರೆಸಿ ನಿತ್ಯ ಲೇಪಿಸಿ ಮಾಲಿಶು ಮಾಡಿದರೆ ಮುಖ ರಂಗೇರುತ್ತದೆ. ಅರಸಿನ ಎಲೆಯ ಕಡುಬು, ಕಾಯಿ ಹಾಲು ಪಾಯಸಕ್ಕೆ ಉಪಯೋಗಿಸುವ ಇದರ ಸೇವನೆ ಪೌಷ್ಟಿಕ ಆಹಾರ ಎನಿಸಿದೆ. ಹಸಿ ಅರಸಿನದ ಜ್ಯೂಸ್‌ಗೆ ಹಾಲು ಬೆರೆಸಿ ಕುಡಿದರೆ ಮೂಳೆಗಳೂ ಸುದೃಢವಾಗುತ್ತದೆ.ಇದರಲ್ಲಿ ಅಡಗಿರುವ ಆ್ಯಂಟಿ ಆಕ್ಸಿಡೆಂಟ್ ಪದಾರ್ಥವೇ ಅರಸಿನಕ್ಕೆ ಔಷಧೀಯ ಗುಣ ಹೊಂದಲು ಕಾರಣ ಎಂದು ತಿಳಿಸಲಾಗಿದೆ.
ಔಷಧೀಯ ಗುಣ
ಅರಸಿನ ಎಲೆಗೆ ಔಷಧೀಯ ಗುಣವಿದೆ. ಇದರಲ್ಲಿನ ಅರಸಿನ ವರ್ಣದ ಸಾರ ಶಕ್ತಿಯುತ ಮೂಲ ಧಾತುವಿನ ಆಮ್ಲ ಜನಕ ಸಂಯುಕ್ತ ಎನಿಸಿದೆ. ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿದಂತೆ ಅರಸಿನ ಎಲೆಯನ್ನು ಅರೆದು ಪೇಸ್ಟ್ ಮಾಡಿ ಶರೀರಕ್ಕೆ ಲೇಪಿಸಿದರೆ ಕಜ್ಜಿ, ತುರಿಕೆ, ವೃಣ, ಸುಕ್ಕುಗಟ್ಟುವ ಚರ್ಮದಿಂದ ಪಾರಾಗಬಹುದಂತೆ. ಪ್ರಾಚೀನ ಕಾಲದಿಂದಲೇ ಈ ದೇಶದಲ್ಲಿ ಇದರ ಉಪಯೋಗ ಮಾಡುತ್ತಿದ್ದರು. ತರಚು ಗಾಯ, ಸುಟ್ಟ ಗಾಯದ ಮೇಲೆ ಇದರ ಲೇಪನ ಉಪಯುಕ್ತವಾಗಿದ್ದು, ಇದು ಆ್ಯಂಟಿಸೆಪ್ಟಿಕ್ ಆಗಿದೆ ಎಂದು ಆಯುರ್ವೇದ ತಿಳಿಸುತ್ತಿದೆ. ನಂಜನ್ನು ನಿವಾರಿಸುವ ಗುಣ ಹೊಂದಿದೆ. ಇದರಿಂದ ಶರೀರ ಶುದ್ಧಿಯಾಗುತ್ತದೆ ಎಂದೂ ಹೇಳಲಾಗಿದೆ. ವಾಯು ಸಮಸ್ಯೆ ನಿವಾರಣೆ ಹಾಗೂ ಜೀರ್ಣಶಕ್ತಿ ಹೆಚ್ಚಿಸಲೂ ಸಹಾಯಕ.
– ರಾಮದಾಸ್ ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.