ಕೃಷಿ ಇಲಾಖೆಯಿಂದ ಎರಡು ಕೋಟಿ ತರಕಾರಿ ಸಸಿ ವಿತರಣೆ
Team Udayavani, Jun 5, 2018, 6:15 AM IST
ಕಾಸರಗೋಡು: ಕೇರಳದ ಕೃಷಿ ಇಲಾಖೆಯ ಆಶ್ರಯದಲ್ಲಿ “ಓಣಂಗೆ ಒಂದಿಷ್ಟು ತರಕಾರಿ’ ಎಂಬ ಸಂದೇಶದೊಂದಿಗೆ ಹಮ್ಮಿಕೊಂಡಿರುವ ತರಕಾರಿ ಉತ್ಪಾದನಾ ಯೋಜನೆಯು ಎರಡನೇ ವರ್ಷಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡುತ್ತಿದೆ. ಈ ಯೋಜನೆಯಡಿ ಒಂದು ಕೋಟಿ ಬೀಜದ ಪ್ಯಾಕೆಟ್‌ಗಳು ಮತ್ತು ಎರಡು ಕೋಟಿ ತರಕಾರಿ ಸಸಿಗಳನ್ನು ವಿತರಿಸಲು ನಿರ್ಧರಿಸಲಾಗಿದೆ.
ಮುಂಬರುವ ಓಣಂ ಹಬ್ಬದ ಸಂದರ್ಭದಲ್ಲಿ ವಿಷ ರಹಿತವಾದ ತರಕಾರಿಯನ್ನು ಮನೆ ಪರಿಸರದಲ್ಲೇ ಉತ್ಪಾದಿಸಲು ಉದ್ದೇಶಿಸಿ ಜಾರಿಗೊಳಿಸುವ ಈ ಯೋಜನೆಗೆ ಪೂರ್ವ ತಯಾರಿಯಾಗಿ ವಿವಿಧ ರೀತಿಯ ತರಕಾರಿ ಬೀಜಗಳನ್ನೊಳಗೊಂಡ ಒಂದು ಕೋಟಿ ತರಕಾರಿ ಬೀಜದ ಪ್ಯಾಕೆಟ್‌ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಕೃಷಿಕರಿಗೆ ವಿತರಿಸಲು ತೀರ್ಮಾನಿಸಲಾಗಿದೆ.
ಇಂದು ವಿತರಣೆ
ಜೂನ್ 5ರ ಪರಿಸರ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ತರಕಾರಿ ಬೀಜಗಳನ್ನು ಒದಗಿಸಲಾಗುವುದು ಎಂದು ಕೃಷಿ ಇಲಾಖೆ ಸಚಿವ ವಿ.ಎಸ್.ಸುನೀಲ್‌ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡು ಕೋಟಿ ತರಕಾರಿ ಗಿಡಗಳನ್ನು ಕೃಷಿಕರಿಗೆ ಉಚಿತವಾಗಿ ನೀಡಲಾಗುವುದು. ತರಕಾರಿ ಸಸಿಗಳ 42,000 ಗ್ರೋ ಬ್ಯಾಗ್ ಘಟಕಗಳನ್ನು ನಗರ ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕೇರಳದಲ್ಲಿ ತರಕಾರಿ ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕೃಷಿ ಇಲಾಖೆಯು ಕಾರ್ಯಗತಗೊಳಿಸುವ ಸಮಗ್ರ ತರಕಾರಿ ಅಭಿವೃದ್ಧಿ ಯೋಜನೆಯ ಪ್ರಕಾರ ಕಳೆದ ವರ್ಷ 67,858 ಹೆಕ್ಟೇರ್ ಸ್ಥಳದಲ್ಲಿ ತರಕಾರಿ ಕೃಷಿ ಮಾಡಲಾಗಿದ್ದು, ಇದರಿಂದ ಒಟ್ಟು 10.12 ಲಕ್ಷ ಮೆಟ್ರಿಕ್ ಟನ್ ತರಕಾರಿಯನ್ನು ಉತ್ಪಾದಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 21,280 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಳುವರಿಯನ್ನು ಹೆಚ್ಚಿಸಲಾಗಿದ್ದು, 3.82 ಲಕ್ಷ ಟನ್ ಹೆಚ್ಚುವರಿ ತರಕಾರಿ ಉತ್ಪಾದನೆಯಾಗಿದೆ.
2018-19ನೇ ಆರ್ಥಿಕ ವರ್ಷದಲ್ಲಿ ತರಕಾರಿ ಕೃಷಿಗೆ 80 ಕೋಟಿ ರೂ. ಗಳನ್ನು ಮಂಜೂರು ಗೊಳಿಸಲಾಗಿದೆ. ಶಾಲಾ ಮಕ್ಕಳು, ಮಹಿಳೆಯರು, ಸಂಘ ಸಂಸ್ಥೆಗಳ ಪ್ರತಿನಿಗಳು, ರೆಸಿಡೆಂಟ್ಸ್ ಅಸೋಸಿಯೇಶನ್‌ಗಳ ಸದಸ್ಯರು, ಕೃಷಿಕರು ಮುಂತಾದವರು ಯೋಜನೆಯ ಯಶಸ್ವಿಗೆ ಸಹಕರಿಸಬೇಕೆಂದು ಕೃಷಿ ಇಲಾಖೆ ಕೇಳಿಕೊಂಡಿದೆ.
ವಾಣಿಜ್ಯ ಆಧಾರದಲ್ಲಿ ತರಕಾರಿ ಕೃಷಿಯನ್ನು ಪ್ರೋತ್ಸಾಹಿಸಲು 15 ಮಂದಿ ಕೃಷಿಕರನ್ನು ಒಳಗೊಂಡ ಕ್ಲಸ್ಟರ್‌ಗಳನ್ನು ಕೃಷಿ ಭವನ ಮಟ್ಟದಲ್ಲಿ ರೂಪಿಸಲಾಗಿದೆ. ಹೆಕ್ಟೇರ್‌ಗೆ 15,000ರೂ. ಗಳಂತೆ ಧನಸಹಾಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಗಳಲ್ಲೂ ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ಮಾಡಲು ಹೆಕ್ಟೇರ್‌ಗೆ 30 ಸಾವಿರ ರೂ. ಆರ್ಥಿಕ ಸಹಾಯ ಒದಗಿಸಲು ನಿರ್ಧರಿಸಲಾಗಿದೆ.
ಬೇಸಿಗೆ ಹಾಗೂ ಮಳೆಗಾಲದಲ್ಲಿ ಬೆಳೆಗಳನ್ನು ಸಂರಕ್ಷಿಸಿ ತರಕಾರಿ ಕೃಷಿ ಯೋಜನೆ ಜಾರಿಗೆ ತರಲಾಗಿದೆ.ಈ ಮೂಲಕ ವರ್ಷಾದ್ಯಂತ ತರಕಾರಿ ಕೃಷಿ ನಡೆಸಲು ಮತ್ತು ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗಿದೆ. 100 ಸ್ಕಾಯರ್ ಮೀಟರ್ ವಿಸ್ತೀರ್ಣವಿರುವ “ಮಳೆ ಮರ’ ಯೋಜನೆಗೆ 50 ಸಾವಿರ ರೂ. ವರೆಗೆ ಸಹಾಯಧನ ನೀಡಲಾಗುತ್ತಿದೆ.ತರಕಾರಿ ಕೃಷಿಯನ್ನು ಪ್ರೋತ್ಸಾಹಿಸು ವುದರ ಅಂಗವಾಗಿ ಕನಿಷ್ಠ ವೆಚ್ಚದಲ್ಲಿ ನೀರಾವರಿ ವ್ಯವಸ್ಥೆ ಮಾಡಲು ಕಳೆದ ಆರ್ಥಿಕ ವರ್ಷದಲ್ಲಿ ಆರಂಭಿಸಿದ ಫ್ಯಾಮಿಲಿ ಡ್ರಿಪ್ ಇರಿಗೇಶನ್ ಸಿಸ್ಟಂ ವ್ಯವಸ್ಥೆಯು ಈ ವರ್ಷವೂ ಮುಂದುವರಿಯಲಿದೆ.
ವರ್ಷವಿಡೀ ಫಲ ನೀಡುವ ತರಕಾರಿಗಳಾದ ನುಗ್ಗೆ, ಕರಿಬೇವು, ಪಪ್ಪಾಯಿ, ಬಸಳೆ, ಹಸಿರು ಸೊಪ್ಪುಗಳು ಮೊದಲಾದ ಕೃಷಿಯನ್ನು ಪ್ರೋತ್ಸಾಹಿಸಲು ಮತ್ತು ವಿಸ್ತರಿಸಲು ತರಕಾರಿ ಸಸಿಗಳನ್ನು ಒಳಗೊಂಡ ಕಿಟ್‌ಗೆ 100ರೂ. ನಂತೆ ಕೃಷಿಕರಿಗೆ ವಿತರಿಸುವ ಯೋಜನೆಯೂ ಅನುಷ್ಠಾನದಲ್ಲಿದೆ. ಕಡಿಮೆ ಜಾಗದಲ್ಲಿ ತರಕಾರಿ ಕೃಷಿಯನ್ನು ಬೆಂಬಲಿಸುವುದಕ್ಕಾಗಿ ರೂಪಿಸಲಾದ ಮಿನಿ ಪಾಲಿಹೌಸ್‌ಗಳು ಹಾಗೂ 10 ಸ್ಕಾÌಯರ್ ಮೀಟರ್ ವಿಸ್ತೀರ್ಣದ ಪಾಲಿಹೌಸ್‌ಗೆ ಒಂದು ಯೂನಿಟ್‌ಗೆ 60 ಸಾವಿರ ರೂ. ಧನ ಸಹಾಯ ನೀಡಲು ತೀರ್ಮಾನಿಸಲಾಗಿದೆ.
ವಿದ್ಯುತ್ ರಹಿತ ಶೀತಲೀಕರಣ ಘಟಕ
ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲಿ ವರ್ಷಪೂರ್ತಿಯಾಗಿ ತರಕಾರಿ ಕೃಷಿ ಸಾಧ್ಯವಾಗಿಸಲು ಹವಾಮಾನ ಅನುಕೂಲ ಕ್ರಮಗಳನ್ನು ಕೂಡ ಜಾರಿಗೊಳಿಸಲಾಗುವುದು. ಅಲ್ಲದೆ ಉತ್ಪಾದಿಸಿದ ವಿಷರಹಿತ ಹಾಗೂ ಸಾವಯವಯುಕ್ತ ತರಕಾರಿಗಳನ್ನು ಹಾಳಾಗದಂತೆ ಸಂರಕ್ಷಿಸಲು ತರಕಾರಿ ಅಭಿವೃದ್ಧಿ ಯೋಜನೆಯಡಿ ಕಳೆದ ವರ್ಷ ಆರಂಭಿಸಿದ ಕಡಿಮೆ ವೆಚ್ಚದ ವಿದ್ಯುತ್ ರಹಿತ ಶೀತಲೀಕರಣ ಘಟಕಗಳನ್ನು ಮುಂದುವರಿಸುವ ಕುರಿತು ನಿರ್ದೇಶಿಸಲಾಗಿದೆ. ಪ್ರತಿ ವಿದ್ಯುತ್ ರಹಿತ ಶೀತಲೀಕರಣ ಘಟಕಕ್ಕೆ 15 ಸಾವಿರ ರೂ. ಧನಸಹಾಯ ನೀಡಲಾಗುತ್ತದೆ. ಹೊರಗಿನ ತಾಪಮಾನಕ್ಕಿಂತ 10-15 ಡಿಗ್ರಿ ವರೆಗೆ ಕಡಿಮೆ ಉಷ್ಣಾಂಶವಿರುವ ರೀತಿಯಲ್ಲಿ ನಿರ್ಮಿಸಿದ ಶೀತಲೀಕರಣ ಘಟಕದಲ್ಲಿ ಒಂದು ವಾರದ ತನಕ ತರಕಾರಿಗಳನ್ನು ಹಾಳಾಗದಂತೆ ಸಂರಕ್ಷಿಸಿಡಲು ಸಾಧ್ಯವಾಗುತ್ತದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.