ಕಾಸರಗೋಡಿನ ಸಾಹಿತ್ಯ ಲೋಕ: ಉಡುಪುಮೂಲೆ ಗೋಪಾಲಕೃಷ್ಣ ಭಟ್
Team Udayavani, Jun 4, 2018, 6:00 AM IST
ಕಾಸರಗೋಡಿನ ಸಾಹಿತ್ಯ ಲೋಕಕ್ಕೆ ವೃತ್ತಿಯಲ್ಲಿ ಅನೇಕ ಮಂದಿ ವೈದ್ಯರು, ಕೃಷಿಕರು, ಅಧ್ಯಾಪಕರು, ಮಠಾಧೀಶರು, ದೇವಾಲಯಗಳ ತಂತ್ರಿಗಳು, ಪುರೋಹಿತರು, ಮಂತ್ರವಾದಿಗಳು ತಮ್ಮ ಸೇವೆಯನ್ನು ಸಲ್ಲಿಸಿ ಪ್ರಖ್ಯಾತರಾಗಿರುತ್ತಾರೆ. ಅಂತಹವರಲ್ಲಿ ಮಾಂತ್ರಿಕ ಶಿರೋಮಣಿ ಎಂದು ಪ್ರಖ್ಯಾತರಾದ ಕೀರ್ತಿಶೇಷ ಉಡುಪುಮೂಲೆ ಶಂಕರ ಭಟ್ಟರ ಮೊಮ್ಮಗ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ಹೆಸರೂ ಉಲ್ಲೇಖಾರ್ಹವಾದುದು.
ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರು ಪ್ರತಿಷ್ಠಿ ಹವ್ಯಕ ಬ್ರಾಹ್ಮಣ ಮನೆತನದ ಕೊಡಂಕಿರಿ ರಾಮ ಭಟ್ಟ ಮತ್ತು ಸರಸ್ವತಿ ಅಮ್ಮನವರ ಮೂವರು ಮಕ್ಕಳಲ್ಲಿ ಹಿರಿಯವರಾಗಿ 1944ರ ನವೆಂಬರ 26ರಂದು ಜನಿಸಿದರು. ರಘುರಾಮ ಮತ್ತು ಹೇಮಾವತಿಯವರು ಸೋದರ ಹಾಗೂ ಸೋದರಿಯರು.
ಉಡುಪುಮೂಲೆಯವರು ತಮ್ಮ ಪ್ರಾಥಮಿಕದಿಂದ ಪ್ರೌಢಶಿಕ್ಷಣದ ತನಕದ ವಿದ್ಯಾಭ್ಯಾಸವನ್ನು ಎಡನೀರು ಶ್ರೀ ಸ್ವಾಮೀಜೀಸ್ ಹೈಸ್ಕೂಲ್‌ನಲ್ಲಿ ಪಡೆದರು. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಗಳಿಸಿದರು. ಅನಂತರ ಬೆಳ್ಳೂರು ಮತ್ತು ನೆಟ್ಟಣಿಗೆ ಶಾಲೆಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಎರಡು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ವಿದ್ವಾನ್ ವಳಕುಂಜ ಸುಬ್ರಾಯ ಭಟ್ಟರಿಂದ ಸಂಗೀತ ಮತ್ತು ಕುದಾRಡಿ ವಿಶ್ವನಾಥ ರೈಯವರಲ್ಲಿ ಭರತನಾಟ್ಯಾಭ್ಯಾಸವನ್ನು ಗೈದರು.
ಗೋಪಾಲಕೃಷ್ಣ ಭಟ್ಟರು ಶಾಲೆಗೆ ಹೋಗುತ್ತಿರುವಾಗಲೇ ಅಜ್ಜ ಶಂಕರ ಭಟ್ಟರೊಂದಿಗೆ ಮಂತ್ರವಾದ ಕರ್ಮ ಗಳಿಗೆ ಸಹಾಯಕರಾಗಿ ಹೋಗುತ್ತಿದ್ದರು. ಬಳಿಕ ಅಜ್ಜನ ಆಶೀರ್ವಾದದೊಂದಿಗೆ ಸ್ವಯಂಸ್ಫೂರ್ತಿ ಯಿಂದ ಮಂತ್ರವಾದವನ್ನು ಪ್ರಧಾನ ವೃತ್ತಿಯಾಗಿ ಸ್ವೀಕರಿಸಿ ಅದರಲ್ಲಿ ಸಾಧನೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಊರ ಪರವೂರುಗಳಿಂದ ತಮ್ಮಲ್ಲಿಗೆ ಬಂದವರ ಸಮಸ್ಯೆಯನ್ನು ಸಹನೆಯಿಂದ ಆಲಿಸಿ ಸೂಕ್ತ ಪರಿಹಾರವನ್ನು ಸೂಚಿಸುವ ಇವರು ಗ್ರಾಮೀಣ ಪ್ರದೇಶದ ಅಪರೂಪದ ಮಾಂತ್ರಿಕರು. ಅದೆಷ್ಟೋ ತಜ್ಞ ವೈದ್ಯರಿಂದ ಗುಣಪಡಿಸಲಾಗದ ಮಾನಸಿಕ ರೋಗಿಗಳನ್ನು ಇವರು ಮಂತ್ರವಾದ ಬಲದಿಂದ ಮತ್ತು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳಿಂದ ವಾಸಿಮಾಡಿರುತ್ತಾರೆ. ಇವರ ಮಂತ್ರವಾದ ವೃತ್ತಿಗೆ ಮಾನ-ಸಮ್ಮಾನಗಳು ಪ್ರಾಪ್ತವಾಗಿವೆ.
ಕಾಸರಗೋಡಿನ ಶ್ರೀ ಎಡನೀರು ಮಠ ಯಕ್ಷಗಾನದ ಆಡುಂಬೊಲ. ಇಲ್ಲಿ ಯಕ್ಷಗಾನ ದಿಗ್ಗಜರ ಸಮ್ಮಿಲನದಲ್ಲಿ ಜರಗುತ್ತಿದ್ದ ತಾಳಮದ್ದಳೆ, ಬಯಲಾಟಗಳಲ್ಲಿ ಅರ್ಥಗಾರಿಕೆಯನ್ನು ಹತ್ತಿರದಿಂದ ಕೇಳುವ ಅವಕಾಶಗಳಿಂದಾಗಿ ಇವರೂ ಹಿರಿಯ ಯಕ್ಷಗಾನ ಅರ್ಥಧಾರಿ ದಿ| ನಾರಾಯಣ ಕೆದಿಲಾಯರ ಪ್ರೋತ್ಸಾಹದೊಂದಿಗೆ ಅರ್ಥಗಾರಿಕೆಯನ್ನು ಆರಂಭಿಸಿದರು. ನಾಟ್ಯ ಕಲಿತಿಲ್ಲವಾದರೂ ನಾಟಕ, ಬಯಲಾಟಗಳಲ್ಲಿ ವೇಷ ಮಾಡಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಇವೆಲ್ಲದಕ್ಕೂ ಶ್ರೀ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪೂರ್ಣಾನುಗ್ರಹವೇ ಕಾರಣವಾಗಿತ್ತು. ಶ್ರೀ ಮಠದಲ್ಲಿ ಜರಗುತ್ತಿದ್ದ ಹಿರಿಯ ಕಲಾವಿದರ ಕೂಟದಲ್ಲಿ ಇವರೂ ಎಲ್ಲಾ ತರದ ಪಾತ್ರಗಳ ಅರ್ಥಧಾರಿಯಾಗಿ ತಮ್ಮ ಪ್ರೌಢವಾದ ವಾಕ್ಚಾತುರ್ಯದಿಂದ ಮಿಂಚುತ್ತಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಉಡುಪು ಮೂಲೆಯವರೆಂದೇ ಪ್ರಸಿದ್ಧರಾದ ಗೋಪಾಲಕೃಷ್ಣ ಭಟ್ಟರು ತಮ್ಮ ನಿವಾಸದಲ್ಲಿಯೇ ಯಕ್ಷಗಾನ ಕಲಾಸಂಘವನ್ನು ಸ್ಥಾಪಿಸಿ ಅನೇಕ ಮಂದಿ ಶಿಷ್ಯರನ್ನು ಅರ್ಥಗಾರಿಕೆಯಲ್ಲಿ ತರಬೇತುಗೊಳಿಸಿರುತ್ತಾರೆ. ಅವರಲ್ಲಿ ಕೆಲವರು ಈಗ ಪ್ರಸಿದ್ಧ ಅರ್ಥಧಾರಿಗಳಾಗಿದ್ದಾರೆ. ಬದಿಯಡ್ಕದ ಶ್ರೀ ಅಯ್ಯಪ್ಪ ಕಲಾವೃಂದದ ನಿರ್ದೇಶಕರಾಗಿ ನಾಟಕಗಳ, ಬಯಲಾಟಗಳ ಪಾತ್ರಗಳಿಗೆ ನಿರ್ದೇಶನವನ್ನು ನೀಡುತ್ತಿದ್ದರು.
ಉಡುಪುಮೂಲೆಯವರು ಮುಖ್ಯವಾಗಿ ಅನೇಕ ಯಕ್ಷಗಾನದ ಬಗ್ಗೆ ಮತ್ತು ವೈಚಾರಿಕ ಲೇಖನಗಳನ್ನು ಬರೆದಿದ್ದು ಅವುಗಳು ನಾಡಿನ ಸ್ಮರಣ ಸಂಚಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಹಾಗೂ ಕೆಲವು ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ವ್ಯಕ್ತಿಚಿತ್ರಣವನ್ನು ಕಾವ್ಯರೂಪದಲ್ಲಿ ರಚಿಸುತ್ತಿದ್ದರು. ಅಪ್ರಕಟಿತ “ಎಲೆಮರೆಯ ಕಾಯಿಗಳು’ ಎಂಬುದು ಇಂತಹ ಒಂದು ರಚನೆ. ಅಲ್ಲದೆ ತಾಳಮದ್ದಳೆಯಲ್ಲಿ ಅವರ ಮೆಚ್ಚಿನ ವಿದುರ, ಸುಗ್ರೀವ, ಅಕ್ರೂರ, ವಿಭೀಷಣ, ಶಲ್ಯ ಮೊದಲಾದ ಪಾತ್ರಗಳ ಚಿತ್ರಣಗಳನ್ನು ಹಾಗೂ ಮಕ್ಕಳಿಗಾಗಿ ಕೆಲವು ಕಿರುನಾಟಕಗಳನ್ನೂ ರಚಿಸಿರುತ್ತಾರೆ. ಆದರೆ ಹಲವು ವರ್ಷಗಳ ಹಿಂದೆ ರಚಿತವಾದ ಅವುಗಳ ಹಸ್ತಪ್ರತಿಗಳು ಕೂಡ ಈಗಿಲ್ಲ.
ಅವರ ಧರ್ಮಪತ್ನಿ ಶಾರದ. ಈ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯವರಾದ ಬಾಲಮುರಳಿಕೃಷ್ಣ ಬೆಂಗಳೂರಿನಲ್ಲಿ ಆಯುರ್ವೇದ ಡಾಕ್ಟರ್, ಮಗಳು ಲಲಿತ ವಿವಾಹಿತಳಾಗಿ ಪತಿಯೊಂದಿಗೆ ಬೆಂಗಳೂರಿನ ಕಂಪೆನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಮತ್ತೋರ್ವ ಮಗ ರಾಘವೇಂದ್ರ ಸಂಸ್ಕೃತ ಸ್ನಾತಕೋತ್ತರ ಪದವಿಯನ್ನು ಪಡೆದು ಪಾರಂಪರಿಕ ಮಂತ್ರವಾದ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಇವರ ಪತ್ನಿ ಅನುಪಮಾ ರಾಘವೇಂದ್ರ ಇವರು ನೃತ್ಯ ವಿದುಷಿಯಾಗಿದ್ದು ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಂಬ ಕಲಾಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಗೋಪಾಲಕೃಷ್ಣ ಭಟ್ಟರ ತಮ್ಮ ರಘುರಾಮ ಭಟ್ಟರು ಸಾಹಿತಿ, ಉಪಾನ್ಯಾಸಕರಾಗಿದ್ದು ಇದೀಗ ಹುದ್ದೆಯಿಂದ ನಿವೃತ್ತಿಯಾಗಿ ಉಡುಪುಮೂಲೆಯಲ್ಲಿ ಅಣ್ಣನೊಂದಿಗೆ ನೆಲೆಸಿ ಸಹಕರಿಸುತ್ತಿದ್ದಾರೆ. ತಂಗಿ ಹೇಮಾವತಿ ಮತ್ತು ಅವರ ಪತಿ ಪ್ರತಿಷ್ಠಿತ ಉನ್ನತ ಹುದ್ದೆಯಲ್ಲಿದ್ದಾರೆ.
ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ಸಪ್ತತಿ ಸಂಭ್ರಮವನ್ನು 2013 ಜೂನ್ ತಿಂಗಳಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಈ ಶುಭ ಅವಸರದಲ್ಲಿ ಸಪ್ತತಿ ಸಂಭ್ರಮದ “ದ್ರಷ್ಟಾರ’ ಎಂಬ ನೆನಪಿನ ಸಂಪುಟವನ್ನು ಪೂಜ್ಯ ಶ್ರೀ ಎಡನೀರು ಮಠಾಧೀಶರು ಬಿಡುಗಡೆಗೊಳಿಸಿದ್ದರು.
– ಲೇ: ಕೇಳು ಮಾಸ್ತರ್ ಅಗಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.