ವಯನಾಟ್ ಕುಲವನ್‌ತೈಯ್ಯಂಕಟ್ಟು ದೈವಗಳ ಇತಿಹಾಸ
Team Udayavani, Apr 26, 2019, 7:24 PM IST
ವಿಷ್ಣುಮೂರ್ತಿ ದೈವ,
1.ಕೋರಚ್ಚನ್ ದೈವ
ವಯನಾಡಿನಿಂದ ಕೇಳನ್‌ನನ್ನು ಕೂಡಿಕೊಂಡು ಉತ್ತರಾಭಿಮುಖವಾಗಿ ಆಗಮಿಸಿದ ಕುಲವನ್ ಅನೇಕ ಕಡೆಗಳಲ್ಲಿ ತನ್ನ ಕಾರಣೀಕ ಶಕ್ತಿಯನ್ನು ತೋರಿ ನೆಲೆಯೂರಿದನು. ಚಂದ್ರಗಿರಿ ನದಿಯ ದಕ್ಷಿಣ ಭಾಗದ ಪನೆಯಾಲ ಎಂಬಲ್ಲಿ ತಲುಪಿ ಇಲ್ಲಿಯ ಇರಿಞಪ್ಪಾರದ ಕೋಟಪ್ಪಾರ ಎಂಬ ತೀಯಾ ಸಮುದಾಯದ ತರವಾಡಿನಲ್ಲಿ ನೆಲೆಯಾದನು. ಈ ತರವಾಡಿನವರು ದೈವಂಕೆಟ್ಟು ಹರಿಕೆಯನ್ನು ನಡೆಸುವಾಗ ತರವಾಡಿನ ಹಿರಿಯನಾದ ಕುಂಞಿಕೋರನ್ ಎಂಬವನು ಬೆಳ್ಚಪ್ಪಾಡನಾಗಿದ್ದನು. ಕುಲವನ್ ವೆಳ್ಳಾಟ ದೈವವು ಕುಂಞಿಕೋರನಲ್ಲಿ ತೇನ್‌ಕುಟ್ಟಿ (ಜೇನುಗುತ್ತಿಯನ್ನು) ಕೇಳಿತು. ಕಾರಣಾಂತರದಿಂದ ಜೇನುಗುತ್ತಿಯನ್ನು ಕಳಕೊಂಡಿದ ಕುಂಞಿಕೋರ ಬೆಳ್ಚಪಾಡನು ಕದಳಿವನದಲ್ಲಿ ಮರೆತು ಹೋಗಿದೆ. ಈಗಲೇ ತರುತ್ತೇನೆ. ಎಂದುತ್ತರಿಸಿ ದೈವದ ಆಯುಧದಿಂದಲೇ ತನ್ನನ್ನು ತಾವೇ ತಿವಿದು ಆತ್ಮ ಸಮರ್ಪಣೆ ಮಾಡಿಕೊಂಡನು. ಬೆಳ್ಚಪಾಡನ ಅಂತ್ಯವಾದುದರಿಂದ ದೈವಂಕೆಟ್ಟ್ನ ಯಾವುದೇ ಕಾರ್ಯಕ್ರಮವು ಮುಂದುವರಿಯಲು ಸಾಧ್ಯವಿಲ್ಲದ ಕಾರಣ ಶವವನ್ನು ನಡುಕೋಣೆಯಲ್ಲಿರಿಸಿ ಆಜ್ಞಾಪಿಸಿದ ದೈವವು ಕುಂಞಿಕೋರನನ್ನು ಹೆಸರು ಹೇಳಿ ಕರೆದಾಗಲೆಲ್ಲಾ ಅದು ಓಗೊಡುತ್ತಿತ್ತು. ಹೀಗೆ ದೈವವು ಆಗಾಗ ಕುಂಞಿಕೋರರನ್ನು ಮಾತನಾಡಿಸುತ್ತಾ ಇದ್ದುದಲ್ಲದೆ ಕೋಲಾಂತ್ಯದಲ್ಲಿ ಕೋರಚ್ಚನ್ ದೈವವೆಂಬುದಾಗಿ ತನ್ನ ಅನುಯಾಯಿಯಾಗಿ ಸೇರಿಸಿಕೊಂಡಿತು. ನಾನು ಕೇಳನು ನಿಮಿತ್ತ ಮಾತ್ರ. ಎಲ್ಲಾ ಕೆಲಸವೂ ಕುಂಞಿಕೋರನಿಗೆ ಈ ಮಾತು ಕೋರಚ್ಚನ್ ದೈವದ ಕುರಿತಾಗಿ ಕುಲವನ್ ದೈವವು ಹೇಳಿದುದಾಗಿರುತ್ತದೆ. ಕೋರಚ್ಚನ್ ದೈವವು ಕುಲವನ್ ಆರಾಧಕನಾಗಿ ಕಾರ್ನವನ್ ಎಂದು ಕರೆಯಲ್ಪಟ್ಟಿತು.
ವಯನಾಟು ಕುಲವನ್
ಉತ್ತರ ಕೇರಳದಲ್ಲಿ ತೆಯ್ಯಂಗಳ ಆಚಾರ ವಿಚಾರಗಳನ್ನು ನೆರವೇರಿಸಿಕೊಂಡು ಬರುತ್ತಿರುವ ಒಂದು ಸಂಘಟಿತ ಪಂಗಡ ತೀಯಾ ಸಮುದಾಯವಾಗಿದೆ. ತೆಯ್ಯಂಗಳಿಗೂ ಈ ಸಮುದಾಯಕ್ಕೂ ನಿಕಟವಾದ ಬಾಂಧವ್ಯ ಇದೆ. ತೀಯಾ ಜಾತಿಯವರಲ್ಲದೆ ಯಾರಲ್ಲೂ , ಯಾವಲ್ಲೂ , ಯಾವುದೇ ತೆಯ್ಯಂ ನಡೆಯುವಂತಿಲ್ಲ . ತೀಯನ್ ಮೂತಾಲ್ ತೆಯ್ಯಂ ಎಂಬ ದೈವೋಕ್ತಿಯಂತೆ ಮೃತಿ ಹೊಂದಿದಾಗ ತೆಯ್ಯಂಗಳಾಗಿ ಆರಾಧಿಸಲ್ಪಡುತ್ತಿರುವುದು ಹೆಚ್ಚಿನವೂ ತೀಯಾ ಸಮುದಾಯಗಳಾಗಿವೆ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳದ ಕಣ್ಣೂರು – ವಯನಾಡು ಜಿಲ್ಲೆಯವರೆಗೆ ವಿಸ್ತಾರವಾಗಿರುವ ಪ್ರದೇಶದಲ್ಲಿ ಶ್ರೀ ವಯನಾಟು ಕುಲವನ್ ದೈವವು ಕಾರಣೀಕದ ಶಕ್ತಿಯಾಗಿ ಆರಾಧಿಸಲ್ಪಡುತ್ತಿದೆ. ಈ ಮಹಾದೈವದ ಕರ್ಮಿ ವಿಭಾಗವು ತೀಯಾ ಸಮುದಾಯದವರೇ ಆಗಿದ್ದರೂ ಕ್ಷೇತ್ರೇಶ ವಿಭಾಗದವರು ಬೇರೆ ಬೇರೆ ಸಮುದಾಯಕ್ಕೊಳಪಟ್ಟವರೂ ಇರುತ್ತಾರೆ. ವಯನಾಟು ಕುಲವನ್ ದೈವವೂ ನೆಲೆಯೂರಿರುವ ಒಂದು ತರವಾಡಿನಲ್ಲಿ ಪುತ್ತರಿ (ಹೊಸದೂಟ) ಮತ್ತು ಮರುಪುತ್ತರಿ ಇವು ವಾರ್ಷಿಕ ಸೇವೆಗಳಾಗಿವೆ. ಆದರೆ ದೈವಂಕೆಟ್ಟು ಮಹೋತ್ಸವವು ಎಷ್ಟೋ ವರ್ಷಗಳ ಅನಂತರ ಅದಕ್ಕಾಗಿಯೇ ಸಜ್ಜೀಕರಣಗೊಂಡು ಆದ ಮೇಲೆ ಮಾತ್ರವೇ ನಡೆಸಲ್ಪಡುವ ಉತ್ಸವವಾಗಿದೆ.
ಜಗತಾ ಪಿತರೌ ಪಾರ್ವತಿ ಪರಮೇಶ್ವರೌಃ ಎಂಬ ಪ್ರಮಾಣ ವಚನಕ್ಕನುಸಾರವಾಗಿ ಈ ಜಗತ್ತಿನ ಮಾತಾ – ಪಿತೃತ್ವವನ್ನು ವಹಿಸಿರುವವರು ಪಾರ್ವತಿ – ಪರಮೇಶ್ವರರಾಗಿರುತ್ತಾರೆ. ಮಹಾಶಿವನು ವಯನಾಟು ಕುಲವನ್ ಆಗಿಯೂ ಶಕ್ತಿದೇವತೆಯಾದ ಪಾರ್ವತಿಯೂ ಕೊರತ್ತಿಮಾತೆಯಾಗಿಯೂ ಕೊಂಡಾಡುತ್ತಿರುವಾಗ ಕಾಲಾಂತರದಲ್ಲಿ ಶ್ರೀ ಮಹಾವಿಷ್ಣು ಮೂರ್ತಿಯೂ ಈ ಶಕ್ತಿಗಳೊಂದಿಗೆ ಕೂಡಿತು. ವಯನಾಟು ಕುಲವನ್ ದೈವವು ಪ್ರಪಿತಾಮಹ ಎಂಬರ್ಥದಲ್ಲಿ ತೊಂಡಚ್ಚನ್ ದೈವವಾಗಿ ಆರಾಧಿಸಲ್ಪಡುತ್ತದೆ.
ವಿಷ್ಣುಮೂರ್ತಿ ದೈವ
ಪುರಾಣಯುಗದಿಂದ ದುಷ್ಟರ ಶಿಕ್ಷೆ – ಶಿಷ್ಟರ ರಕ್ಷಣೆಗಾಗಿ ದೇವಲೋಕದಿಂದ ಧರೆಗಿಳಿದು ಬಂದಂತಹ ಬೇರೆ ಬೇರೆ ದೇವತೆಗಳ ಅವತಾರಗಳೆಂದು ಕರೆಸಿಕೊಳ್ಳುವ ಅನೇಕ ದೈವಗಳಿವೆ. ಇಂತಹವುಗಳಲ್ಲಿ ಹೆಚ್ಚಿನವೂ ಭೂತನಾಥನಾದ ಪರಶಿವನ ಮತ್ತು ದೇವಿ ಭಗವತಿಯ ಅವತಾರಗಳಾಗಿದ್ದು, ತ್ರಿಮೂರ್ತಿಗಳಲ್ಲೋರ್ವನಾದ ಮಹಾವಿಷ್ಣುವಿನ ವೈಷ್ಣವಾಂಶದವುಗಳೆಂದು ಕರೆಸಿಕೊಳ್ಳುವಂತಹವುಗಳು ತುಳು – ಮಲಯಾಳ ದೈವ ರಂಗಗಳೆರಡರಲ್ಲೂ ವಿರಳವೆಂದೇ ಹೇಳಬಹುದು. ಆದರೆ ತುಳುನಾಡಿನ ಮಂಗಳೂರು ಬಳಿಯ ಜೆಪ್ಪು – ಕುಡುಪ್ಪಾಡಿ ಎಂಬಂಲ್ಲಿಂದ ಬಂದಂತಹ ಪಿಲಿಭೂತ ಎಂಬ ದೈವವು ವೈಷ್ಣವಾಂಶವಾಗಿರುತ್ತದೆ. ಈ ಶಕ್ತಿಯು ದಕ್ಷಿಣ ಭಾಗಕ್ಕೆ ಸಂಚರಿಸಿ ಕೋಲತ್ತುನಾಡಿನ ನೀಲೇಶ್ವರ – ಕೋಟಪುರ ಎಂಬಲ್ಲಿ ನೆಲೆಸಿ ಮಹಾ ವಿಷ್ಣುಮೂರ್ತಿ ದೈವವೆಂದು ಕರೆಯಲ್ಪಟ್ಟಿತು. ಉತ್ತರ ಕೇರಳದ ಕಣ್ಣೂರು, ಕಾಸರಗೋಡು ಜಿಲ್ಲೆಗಳು ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರು, ಸುಳ್ಯ ತಾಲೂಕುಗಳ ಕೆಲೆವೆಡೆಗಳಲ್ಲಿ ಈ ದೈವವನ್ನು ಬಯಲುಕೋಲ ಮತ್ತು ಒತ್ತೆಕೋಲ (ಮೇಲೇರಿಚ್ಚಾಟಂ-ಕೇಂಡಸೇವೆ-ಅಗ್ನಿಸೇವೆ) ಎಂಬ ವಿಧಾನದಲ್ಲಿ ಕೊಂಡಾಡಲಾಗುತ್ತದೆ.
ಭೂತ ಪ್ರಪಂಚದಲ್ಲಿ ವಿಷ್ಣುಮೂರ್ತಿಯಷ್ಟು ಪ್ರಸಿದ್ಧಿಯನ್ನು ಪಡೆದ ದೈವವು ಬೇರೊಂದಿಲ್ಲ. ವರ್ತಮಾನ ಕಾಲದಲ್ಲಿ ಉತ್ತರ ಕೇರಳದ ಪ್ರತಿಗ್ರಾಮಗಳಲ್ಲಿ ಹತ್ತಾರು ಕಡೆಯಾಗಿ ಇದನ್ನು ಕಟ್ಟಿ ಕೊಂಡಾಡಲಾಗುತ್ತದೆ. ಪ್ರತಿಯೊಂದು ಕಳಗಂ, ಕೋಟಂ, ತರವಾಡು ಮನೆಗಳಲ್ಲಿ ಜರಗುವ ಕಳಿಯಾಟಂ, ಪೆರುಂಕಳಿಯಾಟಂ, ವಯನಾಟು ಕುಲವನ್ ದೈವಂಕೆಟ್ಟು ಮಹೋತ್ಸವ ಇತ್ಯಾದಿ ಬೃಹತ್ ತೆಯ್ಯಂ – ಉತ್ಸವಗಳಲ್ಲಿ ವಿಷ್ಣುಮೂರ್ತಿ ದೈವದ ನೇಮೋತ್ಸವಕ್ಕೆ ಪ್ರಧಾನ ಸ್ಥಾನವಿದೆ. ಮಾತ್ರವಲ್ಲ ಲೋಕನಾಥನೆಂದೂ, ಪರದೇವತೆಯೆಂದೂ ಕರೆಯಲ್ಪಡುವ ಈ ಶಕ್ತಿಯನ್ನು ಕಟ್ಟುವಲ್ಲೆಲ್ಲ ಏಕಪ್ರಕಾರವಾದ ವೇಷಭೂಷಣಗಳು, ತೋತ್ತಂಪಾಟುಗಳು, ಆಚರಣಾ ಕ್ರಮಗಳು ಇದೆ. ಈ ದೈವವನ್ನು ಎಲ್ಲಾ ಕಡೆಯೂ ಮಲಯನ್ ಸಮುದಾಯದವರು ಮಾತ್ರವೇ ಕಟ್ಟುವುದಾಗಿದ್ದರೂ, ಕಾಸರಗೋಡು ತಾಲೂಕಿನ ಕೆಲವೆಡೆ ಮೊಗೇರ ಸಮುದಾಯದವರಿಂದ ನಡೆಸಲ್ಪಡುವಲ್ಲಿ ನಲಿಕೆ ಸಮುದಾಯದ ದೈವ ಕಲಾವಿದರು ಮಲಯರು ಕಟ್ಟುವಂತೆಯೇ ದೈವವನ್ನು ಕಟ್ಟಿ ಮಲೆಯಾಳಂ ಭಾಷೆಯಲ್ಲಿ ನುಡಿಗಳನ್ನಾಡುತ್ತಾರೆ. ಕೇರಳದ ತೈಯ್ನಾರಾಧನೆಯಲ್ಲಿ ಮಲಯನ್ ಸಮುದಾಯವು ಗಮನಾರ್ಹವಾಗಿ ಗುರುತಿಸಲ್ಪಡಲು ಮುಖ್ಯ ಕಾರಣವು ಅವರು ವಿಷ್ಣುಮೂರ್ತಿ ದೈವವನ್ನು ಕಟ್ಟಿಯಾಡುವುದರಿಂದಲೇ ಆಗಿದೆಯೆಂವಬುದರಲ್ಲಿ ಸಂಶಯವಿಲ್ಲ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ ಪೌರಾಣಿಕ ಹಿನ್ನಲೆಯನ್ನು ಹೊಂದಿರುವುದಾಗಿದೆ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ.
ಚಿತ್ರಿಕರಣ ಮತ್ತು ವರದಿ : ಅಖೀಲೇಶ್ ನಗುಮುಗಂ ಕಾಸರಗೋಡು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.