ನೈಸರ್ಗಿಕ ನೀರಿನ ಆಗರ ರಕ್ಷಣೆಗೆ ಅಣಿಯಾದ ಗ್ರಾಮಸ್ಥರು
Team Udayavani, Mar 16, 2018, 8:25 AM IST
ಕುಂಬಳೆ: ಪ್ರಕೃತಿ ಆರಾಧನೆ ಭಾರತೀಯ ಸಂಸ್ಕೃತಿಯ ಗುಣ ಲಕ್ಷಣಗಳಲ್ಲಿ ಒಂದಾಗಿದೆ. ಪ್ರಕೃತಿಯಲ್ಲಿ ಕಂಡು ಬರುವ ಮರ, ಪಶು, ಪಕ್ಷಿ ಸಹಿತ ಮಣ್ಣು ನೀರನ್ನು ಪೂಜಿಸಿ ಆರಾಧಿಸುವವರು ನಾವು. ನಿಸರ್ಗದ ಬೆರಗಿಗೆ ಪೌರಾಣಿಕ ಮಹತ್ವ ದೊರೆತಲ್ಲಿ ಅದರ ಮೇಲಿನ ಗೌರವ, ಭಕ್ತಿಯು ಮತ್ತಷ್ಟೂ ದ್ವಿಗುಣಗೊಂಡು ಅದರ ರಕ್ಷಣೆಗೆ ಜನರು ಮುಂದಾಗುತ್ತಾರೆ.
ಅದರಂತೆ ನೈಸರ್ಗಿಕ ನೀರಿನ ಆಗರವಾದ ಧರ್ಮತ್ತಡ್ಕ ಸಮೀಪದ ಕಕ್ವೆಯಲ್ಲಿ ಇಂತಹ ನೀರಿನ ಆಗರವಿದೆ. ಸ್ಥಳ ಪ್ರಶ್ನೆ ಇರಿಸಿದ ಸಂದರ್ಭ ಪಾಂಡವರಿಂದ ನಿರ್ಮಿತವಾಗಿದ್ದು ಎಂಬ ಅಂಶವನ್ನು ಜ್ಯೋತಿಷಿಗಳು ತಿಳಿಸಿದ್ದು, ಇದರ ರಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದಾರೆ. ನಿಸರ್ಗ ರಮಣೀಯ ಪೊಸಡಿಗುಂಪೆ ತಪ್ಪಲಿನ ಪ್ರದೇಶವಾದ ಕಕ್ವೆಯಲ್ಲಿ ನೈಸರ್ಗಿಕ ನೀರಿನ ಆಗರ ಪ್ರಸ್ತುತ ಭಕ್ತಿಯ ಪ್ರತೀಕವಾದ ತೀರ್ಥಕುಂಡವಾಗಿದೆ.
ಬೆಟ್ಟದ ತಪ್ಪಲಿನ ಈ ಪ್ರದೇಶವು ಸಮತಟ್ಟಾಗಿದ್ದು, ಮಳೆಗಾಲದಲ್ಲಿ ಇಳಿಜಾರಿನ ಮೂಲಕ ಹರಿಯುವ ನೀರು ಈ ಕೊಳದಲ್ಲಿ ಶೇಖರವಾಗುತ್ತದೆ. ಕೆಂಪು ಕಲ್ಲು ಹೇರಳವಾಗಿರುವ ಭೂಪ್ರದೇಶದ ಕೊಳದಲ್ಲಿನ ನೀರು ಬಿರು ಬೇಸಗೆಯ ಸಮಯವೂ ಆರದೆ ಇರುವುದು ಕೌತುಕದ ವಿಚಾರವೂ ಆಗಿದೆ. ಸುಮಾರು 15 ಅಡಿ ಆಳವಿರುವ ನೀರಿನ ಸ್ವಾಭಾವಿಕ ಆಗರವು ಸುಮಾರು 6 ಮೀ. ಉದ್ದವಿದ್ದು , 4.5 ಮೀ. ಅಗಲವಿದೆ.
ಕೊಳದಲ್ಲಿ ಹಲವು ಪ್ರಭೇದಗಳ ಮೀನುಗಳಿದ್ದು, ವರ್ಷಪೂರ್ತಿ ನೀರನ್ನು ಶೇಖರಿಸಿಡುವ ಪೌರಾಣಿಕ ತೀರ್ಥಕುಂಡವನ್ನು ವೀಕ್ಷಿಸಲು ದೂರದೂರಿನ ಹಲವು ಮಂದಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಬಿರು ಬೇಸಗೆಯ ಸಮಯ ಪ್ರಾಣಿಗಳ ಸಹಿತ ಮಾನವರಿಗೆ ಇಂತಹ ಕೊಳಗಳು ಆಸರೆಯಾದ ಉದಾಹರಣೆ ಹಲವಿವೆೆ.
ವರ್ಷಗಳ ಹಿಂದೆ ಕೊಳದ ನೀರನ್ನು ತರಕಾರಿ ಕೃಷಿ ಸಹಿತ ದಿನಬಳಕೆಗೆ ಉಪಯೋಗಿಸಲಾಗುತ್ತಿತ್ತು. ಇಲ್ಲಿನ ಕಾಲನಿಗೆ ಬಾವಿ ಇದ್ದು, ಕೊಳದ ನೀರನ್ನು ಅಷ್ಟಾಗಿ ಉಪಯೋಗಿಸುತ್ತಿಲ್ಲ. ತುಳುನಾಡ ಸಿರಿಕುಳ್ ಎಂಬ ಮಾಯಾಶಕ್ತಿಯ ಪ್ರತೀಕರಾದ ಏಳ್ವೆರ್ ಸಹೋದರಿಯರು ಇಳಿ ಸಂಜೆ ಸಮಯ ಗುಂಪೆ ಗುಡ್ಡದಿಂದ ಇಳಿದು ಕಕ್ವೆ ಕೊಳದಲ್ಲಿ ಮಿಂದು ಶುದ್ಧರಾಗಿ ಸಮೀಪದ ಶಿರಿಯಾ ನಾಳಂಗಾಯಿಗೆ ತಲುಪಿ, ವಾಪಸ್ ಬರುತ್ತಾರೆ ಎಂಬ ನಂಬಿಕೆ ಇಲ್ಲಿನ ಜಾನಪದರದ್ದು. ಈ ಹಿಂದೆ ಕೊಳದಲ್ಲಿನ ನೀರನ್ನು ಆರಿಸಿ ಹೂಳನ್ನೆತ್ತಿದ ಸಂದರ್ಭ ನುಣುಪಾದ ಹಲವು ಶಿಲಾಕಲ್ಲುಗಳು, ಕಲ್ಲಿನ ಕೆತ್ತನೆಗಳು ದೊರೆತಿದ್ದು ಇದರ ಐತಿಹಾಸಿಕತೆಯನ್ನು ಸಾರುತ್ತದೆ. ಈಗಲೂ ಇಂತಹ ಹಲವು ಕಲ್ಲುಗಳು ಕೊಳದಲ್ಲಿವೆ.
ಪಾಂಡವ ನಿರ್ಮಿತ
ಶಂಖಾಕೃತಿಯಲ್ಲಿರುವ ನೀರಿನ ಆಗರದ ಸಮೀಪದಲ್ಲಿ ಕಕ್ವೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರವಿದೆ. ಪ್ರತೀ ಮಂಗಳವಾರ ಭಜನೆಯು ನಡೆಯುತ್ತಿದೆ. ಪ್ರಸ್ತುತ ಭಜನಾ ಮಂದಿರದ ಮೇಲ್ಛಾವಣಿ ಶಿಥಿಲಗೊಂಡಿದ್ದು, ದುರಸ್ತಿ ಕಾರ್ಯದ ಪೂರ್ವಭಾವಿ ನಡೆಸಿದ ಜ್ಯೋತಿಷ ಚಿಂತನೆಯ ಸಂದರ್ಭ ಕೊಳವು ದ್ವಾಪರಯುಗದಲ್ಲಿ ಪಾಂಡವರಿಂದ ನಿರ್ಮಿತವಾದುದು ಎಂಬ ಅಂಶವನ್ನು ದೈವಜ್ಞ ಕೊಳ್ಚಪ್ಪೆ ವಿಶ್ವನಾಥ ಭಟ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.