ವಿರಾಟ್ ಹಿಂದೂ ಸಮಾಜೋತ್ಸವ ಯಶಸ್ವೀ ಸಂಪನ್ನ
Team Udayavani, Apr 29, 2018, 7:00 AM IST
ಬದಿಯಡ್ಕ: ಸಾವಿರ ಸಾವಿರ ವರ್ಷಗಳಿಂದ ದೇಶವನ್ನು ಬೆಳಗಿದ ಸಮಾಜ ಹಿಂದೂ ಸಮಾಜ, ದೇಶದ ಆಸ್ಮಿತೆ ಸಂಸ್ಕೃತಿಯ ಪ್ರತೀಕವಾದ ಹಿಂದೂ ಧರ್ಮ ಮತ್ತು ಹಿಂದೂ ಸಮಾಜವನ್ನು ಬೇರ್ಪಡಿಸಲು ಅಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಪ್ರಾಂತೀಯ ಸಂಘ ಪ್ರಮುಖ್ ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಿಯಡ್ಕದ ಬೋಳುಕಟ್ಟೆ ಮೈದಾನ ದಲ್ಲಿ ಶುಕ್ರವಾರ ನಡೆದ ವಿರಾಟ್ ಹಿಂದೂ ಸಮಾಜೋತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಭರತ ಭೂಮಿಯ ನೆಲ, ಜಲ ಎಲ್ಲವೂ ಪವಿತ್ರವಾದುದು. ಅದರ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರನ್ನು ಸರ್ವ ಹಿಂದೂ ಸಮಾಜದ ಪರವಾಗಿ ಅಭಿನಂದಿಸಿ ಮಾತನಾಡಿ, ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸಮಾಜ ಸೇವೆ, ದೀನ-ದಲಿತರ ಬಗೆಗಿನ ಸೇವಾ ಕೈಂಕರ್ಯಗಳು ಹಿಂದೂ ಸಮಾಜದ ಅಭಿಮಾನವಾಗಿದ್ದು, ಅವರ ಈ ನಡೆ ಎಲ್ಲರಿಗೂ ಮಾದರಿ. ರಾಜಕೀಯವಾಗಿ ಭಿನ್ನ ದೃಷ್ಟಿಕೋನದವರಾಗಿದ್ದರೂ, ಧರ್ಮ, ನೆಲೆಕಂಡುಕೊಂಡ ಬದುಕಿನ ಮೂಲ ಸೆಲೆಯ ಅಭಿಮಾನ ಅವರನ್ನು ಸಮಾಜೋತ್ಸವದ ಅಧ್ಯಕ್ಷ ಸ್ಥಾನ ಅಲಂಕರಿಸುವಲ್ಲಿ ಪ್ರೇರಣೆ ನೀಡಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.
ದಶಕಗಳಿಂದ ಅನುಸರಿಸಿಕೊಂಡು ಬಂದ ರಾಜಕೀಯ ಪಕ್ಷವನ್ನು ಬದಿಗಿಟ್ಟು ಹಿಂದೂ ಸಮಾಜೋತ್ಸವದ ಮಹತ್ವ ಅರಿತು ಪಾಲ್ಗೊಂಡಿರುವುದು ಅತ್ಯಂತ ಪ್ರಶಂಸನೀಯ ಎಂದು ಶ್ಲಾ ಸಿದರು.
ರಾಘವೇಶ್ವರ ಶ್ರೀಗಳ ಸಂದೇಶ
ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದ ಶ್ರೀಮತ್ ರಾಮಚಂದ್ರಾಪುರ ಮಠ ಹೊಸನಗರದ ಶ್ರೀರಾಘವೇಶ್ವರ ಶ್ರೀಗಳು ತಮ್ಮ ಕಾರ್ಯಕ್ರಮಗಳ ಒತ್ತಡದ ಮಧ್ಯೆ ಆಗಮಿಸಿರಲಿಲ್ಲ. ಆದರೆ ಸಮಾಜೋತ್ಸವಕ್ಕೆ ಮೊಬೈಲ್ ಮೂಲಕ ವಾಕ್ ಸಂದೇಶ ಕಳಿಸಿ ಶುಭ ಹಾರೈಸಿದ್ದರು. ಅದನ್ನು ಸಾರ್ವಜನಿಕವಾಗಿ ಕೇಳಿಸಲಾಯಿತು. ಅವರು ತಮ್ಮ ಸಂದೇಶದಲ್ಲಿ ಕೇರಳದಲ್ಲಿ ವರ್ತಮಾನ ಕಾಲಘಟ್ಟದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಕಾರ್ಯಾಚರಣೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಗೋ ಹತ್ಯೆ ಮತ್ತು ಲವ್ ಜೆಹಾದ್‌ನಂತಹ ಪಿಡುಗುಗಳಿಂದ ಹೊರಬರಲು ಹಿಂದೂ ಸಮಾಜ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಕರೆ ನೀಡಿದರು.
ಸ್ವಯಂಸೇವಕರ ಶಿಸ್ತು, ಶುಚಿತ್ವ
ಶುಕ್ರವಾರ ನಡೆದ ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಪೂರ್ವಭಾವಿಯಾಗಿ ಗುರುವಾರದಿಂದಲೇ ಸಮಾಜೋ ತ್ಸವದ ಯಶಸ್ಸಿಗೆ ವಿಹಿಂಪ, ಬಜರಂಗದಳದ ಕಾರ್ಯ ಕರ್ತರ ದಂಡು ಬದಿಯಡ್ಕದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ಕಾರ್ಯ ಪ್ರವೃತ್ತವಾಗಿತ್ತು. ಕೇಸರೀ ವರ್ಣದಿಂದ ಶೃಂಗಾರಗೊಂಡಿದ್ದ ಬದಿಯಡ್ಕ ಪೇಟೆ ಸಂಭ್ರಮ, ಸಡಗರದ ಜಾತ್ರೆಯ ಕಳೆ ಮೂಡಿಸಿತು.ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ, ಸಮಾಜೋತ್ಸವ ನಡೆದ ಮೈದಾನದಲ್ಲಿ ಎಲ್ಲ ಸೇವೆಗಳಿಗೂ ಸಿದ್ಧರಾದ ನೂರಕ್ಕೂ ಮಿಕ್ಕಿದ ಸ್ವಯಂಸೇವಕರು ಬಳಿಕ ಶುಚಿತ್ವ ಕಾರ್ಯ ಕೈಗೊಂಡು ಜನರ ಆದರಕ್ಕೆ ಪಾತ್ರರಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.