ಪಯಸ್ವಿನಿ ಹೊಳೆಯಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ
Team Udayavani, Mar 20, 2018, 9:40 AM IST
ಕಾಸರಗೋಡು: ಬೇಸಗೆಕಾಲ ಆರಂಭವಾಗುವುದಕ್ಕಿಂತ ಮೊದಲೇ ಕಾಸರಗೋಡು ಜಿಲ್ಲೆಯಲ್ಲಿ ಬರಗಾಲ ತೀವ್ರಗೊಳ್ಳುತ್ತಿದೆ. ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಅತ್ಯಧಿಕ ಮಂದಿ ಕುಡಿಯುವ ನೀರಿಗಾಗಿ ಆಶ್ರಯಿಸುತ್ತಿರುವ ಪಯಸ್ವಿನಿ ಹೊಳೆಯಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ.
ಕೇಂದ್ರ ಜಲ ಆಯೋಗದ ಪ್ರಕಾರ ಕಳೆದ ವರ್ಷ ಈ ಸಮಯವನ್ನು ಗಣನೆಗೆ ತೆಗೆದುಕೊಂಡಾಗ ಈ ಬಾರಿ ಪಯಸ್ವಿನಿ ನದಿಯಲ್ಲಿ 10 ಸೆಂಟಿ ಮೀಟರ್‌ಗೂ ಅಧಿಕ ನೀರಿನ ಮಟ್ಟ ಕುಸಿದಿದೆ. ಎರಿಂಞಿಪುಯದ ಸ್ಟೇಶನ್ ಗೇಜ್‌ನಲ್ಲಿ ದಾಖಲಿಸಿದ ಅಂಕಿ ಅಂಶದಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗಿದೆ. ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಲ್ಲಿ ಮಾತ್ರವೇ ಪಯಸ್ವಿನಿ ಹೊಳೆಯ ನೀರಿನ ಮಟ್ಟ ಇಳಿಕೆಯಾಗುವುದಾಗಿದೆ.
ಆದರೆ ಈ ಸಲ ಮಾರ್ಚ್ ತಿಂಗಳ ಆರಂಭದಲ್ಲೇ ನೀರಿನ ಮಟ್ಟ ಕಡಿಮೆಯಾಗಿರುವುದು ತೀರಾ ಆತಂಕಕ್ಕೆ ಕಾರಣವಾಗಿದೆ. ಪಾರೆ ರಾಶಿ, ಮರಳು ರಾಶಿಗಳ ಮಧ್ಯ ತಾತ್ಕಾಲಿಕ ಅಣೆಕಟ್ಟುಗಳಲ್ಲಿ ಮಾತ್ರವೇ ನೀರಿದೆ ಎನ್ನಬಹುದು. ಬೇಸಗೆ ಬಿಸಿಲು ಏರಿರುವುದು ಮತ್ತು ಬೇಸಗೆ ಮಳೆ ವಿಳಂಬಗೊಂಡಿರುವುದರಿಂದ ಬೇಸಗೆ ಆರಂಭಕ್ಕೆ ಮುನ್ನವೇ ಹೊಳೆಗಳ ನೀರಿನ ಮಟ್ಟ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
ಇದರಿಂದ ಹೊಳೆಯ ಮತ್ಸ್ಯಸಂಪತ್ತು ವಿನಾಶದ ಭೀತಿ ಎದುರಿಸುತ್ತಿದೆ. ನೀರಿನ ಮಟ್ಟ ಇಳಿಕೆಯಾಗಿ ತಾಪಮಾನ ಹೆಚ್ಚಿರುವುದರಿಂದ ಮೀನುಗಳು ಸಾಯುತ್ತಿವೆ. ಇತರ ಹೊಳೆಗಳಿಗೆ ಹೋಲಿಸಿದರೆ ಪಯಸ್ವಿನಿ ಹೊಳೆಯಲ್ಲಿ ಮಲಿನೀಕರಣ ಕಡಿಮೆಯಾಗಿರುವುದರಿಂದ ಹಲವಾರು ಅಪೂರ್ವ ಮತ್ತು ವಿಶಿಷ್ಟ ಜಾತಿಯ ಮೀನುಗಳು ಈ ನದಿಯಲ್ಲಿ ಕಂಡುಬರುತ್ತಿವೆ.
ಬಾವಿ ನೀರಿನ ಮಟ್ಟ ಕುಸಿತ
ಹೊಳೆಯ ನೀರು ಕಡಿಮೆಯಾಗಿರುವುದು ಮಾತ್ರವಲ್ಲದೆ ಪರಿಸರದ ಬಾವಿಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಎರಡರಿಂದ ಮೂರು ಮೀಟರ್ ವರೆಗೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕಾಸರಗೋಡು ನಗರಕ್ಕೆ ನೀರು ಸರಬರಾಜು ಸಹಿತ ಹಲವು ಕುಡಿಯುವ ನೀರು ಯೋಜನೆಗಳು ಪಯಸ್ವಿನಿ ಹೊಳೆಯಲ್ಲಿವೆ.
ಈ ಹೊಳೆಯ ಆರಂಭದಲ್ಲಿರುವ ದೇಲಂಪಾಡಿ, ಕಾರಡ್ಕ, ಮುಳಿಯಾರು ಗ್ರಾಮ ಪಂಚಾಯತ್‌ಗಳು ಮತ್ತು ಕಾಸರಗೋಡು ನಗರ ಅಲ್ಲದೆ ಆಸುಪಾಸಿನ ಪಂಚಾಯತ್‌ಗಳ ಸಾವಿರಾರು ಮನೆಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಪಯಸ್ವಿನಿ ಹೊಳೆಯೇ ಆಸರೆಯಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ಗಳಲ್ಲಿ ಸದ್ಯಕ್ಕೆ ಅಗತ್ಯದಷ್ಟು ನೀರಿದ್ದರೂ ಬೇಸಗೆ ಮಳೆ ಲಭಿಸದಿದ್ದರೆ ನೀರಿನ ವಿಪರೀತ ಕೊರತೆ ಎದುರಾಗಬಹುದು.
ಉಚಿತ ವಿದ್ಯುತ್‌ನ ದುರ್ಬಳಕೆ
ಕೃಷಿ ಅಗತ್ಯಕ್ಕಿರುವ ಉಚಿತ ವಿದ್ಯುತ್‌ನ ಹೆಸರಿನಲ್ಲಿ ಹೊಳೆಯಿಂದ ಅತಿಯಾದ ನೀರು ಲೂಟಿ ಮಾಡಲಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ. ದೇಲಂಪಾಡಿಯಲ್ಲಿ ಪಯಸ್ವಿನಿ ಹೊಳೆಯು ಜಿಲ್ಲೆಗೆ ಹಾದು ಬರುವಲ್ಲಿಂದ ಚಂದ್ರಗಿರಿ ಹೊಳೆಗೆ ಹಾದು ಹೋಗುವ ಮುನಂಬ ಎಂಬಲ್ಲಿವರೆಗೆ ಸಾವಿರಕ್ಕೂ ಹೆಚ್ಚು ಮೋಟಾರ್‌ಗಳು ಹೊಳೆಯಲ್ಲಿವೆ. ವಿದ್ಯುತ್ ಉಚಿತವಾಗಿರುವುದರಿಂದ ರಾತ್ರಿ ಹಗಲೆನ್ನದೆ ಮೋಟಾರ್ ಕಾರ್ಯಾಚರಿಸುತ್ತಿವೆ. ಕೆಲವರು ಕೃಷಿ ತೋಟಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಉಪಯೋಗಿಸುವುದನ್ನು ರೂಢಿ ಮಾಡಿಕೊಂಡಿರುವುದನ್ನು ಕಾಣಬಹುದು.
ಮಲಿನಗೊಳಿಸುವ ಮದಿರಾಸುರರು
ಬರಗಾಲದತ್ತ ಮುಖ ಮಾಡುತ್ತಿರುವ ಪಯಸ್ವಿನಿ ಹೊಳೆಯನ್ನು ಮಲಿನಗೊಳಿಸಲು ಸಮಾಜ ದ್ರೋಹಿಗಳು ಹೊಂಚುಹಾಕುತ್ತಿದ್ದಾರೆ. ಹೊಳೆಯ ಆಸುಪಾಸುಗಳಲ್ಲಿ ಪರಿಸರ ಸೌಂದರ್ಯವನ್ನು ಆಸ್ವಾದಿಸಿ ಮದ್ಯ ಸೇವಿಸುವವರು ಮದ್ಯದ ಬಾಟಲಿಗಳನ್ನು ಹೊಳೆಗೆಸೆದು ಹಾನಿಯೆಸಗುತ್ತಾರೆ. ಕೆಲವು ಬಾಟ್ಲಿಗಳನ್ನು ಒಡೆದು ಅಲ್ಲೇ ಬಿಟ್ಟು ಹೋಗುತ್ತಾರೆ. ಪ್ಲಾಸ್ಟಿಕ್ ಬಾಟ್ಲಿಗಳು, ಪ್ಲಾಸ್ಟಿಕ್ ಕವರ್‌ಗಳು ಇತ್ಯಾದಿಗಳನ್ನು ಕೂಡ ಹೊಳೆಗೆ ಎಸೆಯುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತುಕೊಂಡು ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ದೊರಕುವಂತೆ ಮಾಡಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.