ಕಾಡಾನೆ ಹಾವಳಿ : ವ್ಯಾಪಕ ಕೃಷಿ ನಾಶ, ಕೃಷಿಕರ ಕಣ್ಣೀರು
Team Udayavani, Jan 28, 2019, 7:41 PM IST
ಕಾಸರಗೋಡು: ಬೇಡಡ್ಕ ಗ್ರಾ. ಪಂ.ನ ವಟ್ಟಂತಟ್ಟ ಒಳಿಯತ್ತಡ್ಕದಲ್ಲಿ ನಿರಂತರವಾಗಿ ಕಾಡಾನೆ ಆನೆ ಹಾವಳಿಯಿಂದ ವ್ಯಾಪಕವಾಗಿ ಕೃಷಿ ನಾಶನಷ್ಟ ಸಂಭವಿಸಿದ್ದು, ಕೃಷಿಕರು ಕಣ್ಣೀರು ಸುರಿಸುವಂತಾಗಿದೆ.
ಕೃಷಿ ತೋಟಗಳಲ್ಲಿನ ಕಂಗು, ತೆಂಗು, ಬಾಳೆ ಮೊದಲಾದ ಗಿಡ, ಮರಗಳನ್ನು ಉರುಳಿಸಿದ್ದು ವ್ಯಾಪಕ ನಾಶನಷ್ಟ ಉಂಟಾಗಿದೆ. ಹಲಸಿನ ಮರವನ್ನೂ ಕಾಡಾನೆ ಉರುಳಿಸಿದ್ದು ಕೃಷಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಒಳಿಯತ್ತಡ್ಕದ ಕೆ. ಗೋಪಾಲನ್, ಎ. ರಾಘವನ್, ಎ. ಭಾಸ್ಕರನ್, ಎ. ಕೃಷ್ಣನ್, ವಿ. ಸುರೇಶ್ ಕುಮಾರ್, ಕೆ. ವಿಶ್ವನಾಥನ್, ಕೆ. ಕೃಷ್ಣನ್ ನಾಯರ್ ಮೊದಲಾದವರ ತೋಟಗಳಿಗೆ ನುಗ್ಗಿದ ಕಾಡಾನೆ ಹಿಂಡು ಅಪಾರ ನಷ್ಟವನ್ನುಂಟು ಮಾಡಿದೆ. ಶನಿವಾರ ರಾತ್ರಿಯೂ, ರವಿವಾರ ಬೆಳಗ್ಗಿನಿಂದಲೇ ಕಾಡಾನೆ ತೋಟಗಳಿಗೆ ನುಗ್ಗಿ ಸಿಕ್ಕಸಿಕ್ಕ ಮರಗಿಡಳನ್ನು ಉರುಳಿಸುತ್ತಾ ಸಾಗಿದೆ. ಶನಿವಾರ ರಾತ್ರಿ 9 ಗಂಟೆಗೆ ದಾಳಿ ನಡೆಸಿದ ಆನೆ ಹಿಂಡು ಕೃಷಿಯನ್ನು ಹಾನಿಗೊಳಿಸುತ್ತಿದ್ದಾಗ ಸ್ಥಳೀಯರು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಪಟ್ಟರು ಸಫಲರಾಗಲಿಲ್ಲ. ಸಾಕಷ್ಟು ಕೃಷಿ ಹಾನಿ ಮಾಡಿದ ಬಳಿಕವಷ್ಟೇ ಆನೆಗಳು ತೋಟದಿಂದ ದೂರ ಸರಿದವು.
ಪಾತ್ರೆಗಳಿಂದ ಶಬ್ದ ಮಾಡಿ ಓಡಿಸುವ ಪ್ರಯತ್ನವನ್ನೂ ಸ್ಥಳೀಯ ನಾಗರಿಕರು ಮಾಡಿದ್ದರು. ಕೆಲವು ಹೊತ್ತು ದಾಂಧಲೆ ನಡೆಸಿದ ಆನೆ ತೆರಳಿ ಮತ್ತೆ ಮಧ್ಯರಾತ್ರಿ 1.30ಕ್ಕೆ ದಾಳಿ ನಡೆಸಿತು. ಮಧ್ಯ ರಾತ್ರಿ ಆನೆಗಳ ಹಿಂಡು ಹಾವಳಿ ನಡೆಸಿದಾಗ ಸ್ಥಳೀಯರಿಗೆ ಏನು ಮಾಡಲೂ ಸಾಧ್ಯವಾಗಲಿಲ್ಲ.
ಒಳಿಯತ್ತಡ್ಕದ ಆನಂದ ಮಠದ ನಾರಾಯಣಿ, ಕುಂಞಿಕಣ್ಣನ್, ವಿಜಯನ್ ಅವರ ಕೃಷಿ ತೋಟಗಳಿಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ನಷ್ಟವನ್ನುಂಟು ಮಾಡಿತ್ತು.
ಅರಣ್ಯ ಇಲಾಖೆಯ ಪಾಂಡಿ ವಿಭಾಗದ ಕಾರಡ್ಕ ಸಂರಕ್ಷಿತ ಅರಣ್ಯದ ಎರಿಂಞಪುಳ ಪರಿಸರದ ಒಳಿಯತ್ತಡ್ಕದಲ್ಲಿ ಜನವರಿ 2ರಂದು ಕಾಡಾನೆ ದಾಂಧಲೆ ನಡೆಸಿತ್ತು.
ಐದು ವರ್ಷಗಳಿಂದ ಹಾನಿ
ಕಳೆದ ಐದು ವರ್ಷಗಳಿಂದ ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ನಾಶನಷ್ಟ ಸಂಭವಿಸಿದೆ. ಕಾಡಾನೆ ಹಾವಳಿಯಿಂದ ಕೃಷಿ ತೋಟ ಮತ್ತು ಕೃಷಿಯನ್ನು ಸಂರಕ್ಷಿಸಲು ಸೌರ ವಿದ್ಯುತ್ ಬೇಲಿ, ಕಗ್ಗಲ್ಲಿನ ಗೋಡೆ ಗಳನ್ನು ಶೀಘ್ರವೇ ಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಲೇ ಬಂದಿದ್ದರೂ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಹಾವಳಿಯನ್ನು ನಿಗ್ರಹಿಸಲು ಅಗತ್ಯದ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿರುವ ಬಂದಡ್ಕ ಅರಣ್ಯ ವಿಭಾಗೀಯ ಅಧಿಕಾರಿ ವಿ.ಎಸ್.ವಿನೋದ್ ಕುಮಾರ್ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ವಿಭಾಗೀಯ ಅರಣ್ಯ ಅಧಿಕಾರಿ ಕೆ.ಎನ್.ರಮೇಶನ್, ಆರ್.ಎಫ್. ವಾಚರ್ ಎ.ಅಶ್ರಫ್ ಮೊದಲಾದವರು ಬಂದಡ್ಕ ಪ್ರದೇಶದಲ್ಲಿ ರಾತ್ರಿ ಹೊತ್ತು ಗಸ್ತು ಕ್ರಮ ತೆಗೆದುಕೊಂಡಿದ್ದಾರೆ.
ಅಗತ್ಯ ಕ್ರಮ
ಕಾಡಾನೆ ಹಿಂಡು ಎರಿಂಞಪುಳ ಹೊಳೆಯ ದಡದಲ್ಲಿ ವಿಹರಿಸುತ್ತಿದ್ದು, ಮತ್ತೆ ಕಾಡಾನೆ ತೋಟಗಳಿಗೆ ನುಗ್ಗುವ ಸಾಧ್ಯತೆ ಇದೆ. ಮತ್ತೆ ಕಾಡಾನೆ ಹಿಂಡು ಕೃಷಿ ತೋಟ ಗಳಿಗೆ ದಾಳಿಯನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ವಿ.ಎಸ್. ವಿನೋದ್ ಕುಮಾರ್, ಅರಣ್ಯ ವಿಭಾಗೀಯ ಅಧಿಕಾರಿ, ಬಂದಡ್ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.