ಜಿಲ್ಲಾಧಿಕಾರಿ ಕಚೇರಿ ಬಳಿ ಎಬಿವಿಪಿ ಪ್ರತಿಭಟನೆ
Team Udayavani, Jul 7, 2018, 1:40 PM IST
ಮಹಾನಗರ: ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಹಾಗೂ ವಿದ್ಯಾರ್ಥಿಗಳ ಆವಶ್ಯಕತೆಯನ್ನು ಪೂರೈಸುವಲ್ಲಿ ರಾಜ್ಯದ ಬಜೆಟ್ ವಿಫಲವಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಸಲ್ಲಿಸಿದ ಬಜೆಟ್ ರಾಜ್ಯದ ಬಡ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪಾಲಿಗೆ ಇದೊಂದು ನಿರಾಶಾದಾಯಕವಾಗಿದ್ದು, ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಂತಾಗಿದೆ.
ಸತ್ವಹೀನ ಬಜೆಟ್
ಬಡ, ಪ್ರತಿಭಾವಂತ ಮತ್ತು ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸುವ ಸತ್ವಹೀನ ಬಜೆಟ್ ಇದಾಗಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಾಮುಖ್ಯವಾಗಿರುವ ಉಚಿತ ಬಸ್‌ಪಾಸ್ ವಿತರಣೆ, ಪ.ಜಾತಿ, ಪ.ಪಂಗಡ ಹಾಗೂ ಒಬಿಸಿ ವರ್ಗದ ವಿದ್ಯಾರ್ಥಿಗಳ ಸರಕಾರಿ ಹಾಸ್ಟೆಲ್ ಉನ್ನತೀಕರಣ, ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಸಿಬಂದಿ ನೇಮಕ ಸೇರಿದಂತೆ, ಶಿಕ್ಷಣ ಕ್ಷೇತ್ರದಲ್ಲಿ ಈಗಿನ ಆವಶ್ಯಕತೆಯನ್ನು ಪೂರೈಸುವಲ್ಲಿ ಬಜೆಟ್ ವಿಫಲವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಇದೇ ವೇಳೆ ಪ್ರತಿಭಟನ ನಿರತ ವಿದ್ಯಾರ್ಥಿಗಳು ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಪ್ರಯತ್ನಿಸಿದರಲ್ಲದೆ, ಪೊಲೀಸ್ ಜೀಪನ್ನು ಸುತ್ತುವರಿದರು. ಒಂದೆರಡು ವಿದ್ಯಾರ್ಥಿಗಳನ್ನು ಈ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡರಾದರೂ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ಸರ್ವ ಕಾಲೇಜು ಎಬಿವಿಪಿ ಅಧ್ಯಕ್ಷ ವಿಖ್ಯಾತ್, ವಿದ್ಯಾರ್ಥಿನಿ ಪ್ರಮುಖ್ ಬಿಂದು, ನಗರ ಸಂಘಟನ ಕಾರ್ಯದರ್ಶಿ ಕಿರಣ್,
ಕಾರ್ಯಕರ್ತರಾದ ಶೀತಲ್ ಕುಮಾರ್, ಉತೇಶ್, ಮಯೂರೇಶ್, ಶಶಾಂಕ್, ಮಣಿಕಂಠ, ರಾಮ್ ನಾರಾಯಣ್, ತೇಜಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಡಿಸಿ ಬಂದು ಮನವಿ ಸ್ವೀಕರಿಸಲು ಆಗ್ರಹ
ಹಂಪನ್‌ಕಟ್ಟೆ ವಿಶ್ವವಿದ್ಯಾಲಯ ಕಾಲೇಜು, ರಾಮಕೃಷ್ಣ ಕಾಲೇಜು, ಕೆನರಾ, ಸಹಿತ ವಿವಿಧ ಕಾಲೇಜುಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಪ್ರತಿಭಟನ ಸ್ಥಳಕ್ಕೆ ಬಂದು ತಮ್ಮ ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದ್ದರಿಂದ ಅಪರ ಜಿಲ್ಲಾಧಿಕಾರಿ ಕುಮಾರ್ ಸ್ಥಳಕ್ಕೆ
ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.