ಸಂಚಾರಕ್ಕೆ ತಡೆ ಒಡ್ದುವವರ ವಿರುದ್ಧ ಕ್ರಮ
Team Udayavani, Jul 21, 2018, 12:31 PM IST
ಮಹಾನಗರ: ರಸ್ತೆ ಬದಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ತಡೆ ಉಂಟು ಮಾಡುತ್ತಿರುವುದರ ವಿರುದ್ಧ ಟ್ರಾಫಿಕ್ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕಲ್ಯಾಣ ಮಂಟಪಗಳ ಎದುರು ರಸ್ತೆ ಬದಿ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳ ಇತರ ಎಲ್ಲ ವಾಣಿಜ್ಯ ಮಳಿಗೆಗಳ ಹಾಗೂ ಕಟ್ಟಡಗಳ ಮುಂಭಾಗದ ರಸ್ತೆಗಳ ಬದಿ ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಚಾರಕ್ಕೆ ಅನನುಕೂಲ
ವಾಣಿಜ್ಯ ಕಟ್ಟಡಗಳ ಎದುರು ರಸ್ತೆ ಬದಿ ನಿಲ್ಲಿಸುವ ವಾಹನಗಳ ಪೈಕಿ ಹೆಚ್ಚಿನ ವಾಹನಗಳು ವ್ಯಾಪಾರ, ವ್ಯವಹಾರ ನಡೆಸುವ ಮಾಲಕರದ್ದೇ ಆಗಿರುತ್ತವೆ. ಗ್ರಾಹಕರ ವಾಹನಗಳು ಬೇಗನೆ ಅಲ್ಲಿಂದ ನಿರ್ಗಮಿಸುತ್ತವೆ. ಆದರೆ ಅಂಗಡಿ ಮಾಲಕರ ವಾಹನಗಳು ದಿನವಿಡೀ ಅಲ್ಲಿ ನಿಂತಿರುತ್ತವೆ. ಇದರಿಂದ ಇತರ ವಾಹನಗಳ ನಿಲುಗಡೆಗೆ ಹಾಗೂ ಸಂಚಾರಕ್ಕೆ ಅನನುಕೂಲ ಆಗುತ್ತದೆ ಎಂದು ಟಿ.ಆರ್. ಸುರೇಶ್ ತಿಳಿಸಿದರು. ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಎರಡೂ ಬದಿ ಅನಧಿಕೃತ ವಾಹನ ನಿಲುಗಡೆ ಮಾಡುವುದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಹಲವಾರು ಮಂದಿ ಕರೆ ಮಾಡಿ ದೂರು ನೀಡಿದರು.
ತೊಕ್ಕೊಟ್ಟು, ಪಂಪ್‌ವೆಲ್ ಫ್ಲೈ ಓವರ್ ಕೆಳ ಭಾಗದಲ್ಲಿ ವಾಹನ ಸಂಚಾರ
ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಫ್ಲೈ ಓವರ್ ಕೆಳ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಟೆಕ್ನಿಕಲ್ ಎಂಜಿನಿಯರ್ ಅವರ ತಪಾಸಣೆಯ ಬಳಿಕ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದರು.
ಪರಿಸರ ಮಾಲಿನ್ಯ
ಫ್ಲೈ ಓವರ್ ಕೆಳ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರೆ ಈ ಎರಡೂ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಜಾಂ ಆಗುವುದನ್ನು ಬಹಳಷ್ಟು ಕಡಿಮೆ ಮಾಡಬಹುದು ಎಂದು ಫೋನ್ ಕರೆ ಮಾಡಿದ್ದ ಬಿ.ಎಸ್. ಹಸನಬ್ಬ ಅಮ್ಮೆಂಬಳ ಅವರು ಸಲಹೆ ಮಾಡಿದ್ದರು. ದೇರಳಕಟ್ಟೆ, ನಾಟೆಕಲ್ಲು ಮುಂತಾದ ಕಡೆ ಕೋಳಿ ತ್ಯಾಜ್ಯವನ್ನು ಬಯಲಿಗೆ ಎಸೆಯುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದ ಪರಿಸರವಾದಿಯೂ ಆಗಿರುವ ಬಿ.ಎಸ್. ಹಸನಬ್ಬ ಅವರು ಪೊಲೀಸ್ ಆಯುಕ್ತರ ಗಮನಕ್ಕೆ ತಂದರು.
ಇದು 84ನೇ ಫೋನ್‌ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 32 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಮಂಜುನಾಥ್, ಗುರುದತ್ತ ಕಾಮತ್, ಎಎಸ್‌ಐಗಳಾದ ಯೂಸುಫ್, ಚಂದ್ರ, ನಾಗೇಶ್, ಹೆಡ್‌ಕಾನ್‌ಸ್ಟೇಬಲ್ ಪುರುಷೋತ್ತಮ ಅವರು ಉಪಸ್ಥಿತರಿದ್ದರು.
ಅನಧಿಕೃತ ವ್ಯಾಪಾರ
ನಗರದಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಿಸುವಾಗ ನೀಲ ನಕ್ಷೆಯಲ್ಲಿ ತಳ ಅಂತಸ್ತನ್ನು ವಾಹನ ಪಾರ್ಕಿಂಗ್‌ಗೆ ಗುರುತಿಸುತ್ತಾರೆ. ಆದರೆ ಕಟ್ಟಡ ಉದ್ಘಾಟನೆಯ ಬಳಿಕ ಕ್ರಮೇಣ ತಳ ಅಂತಸ್ತು ವ್ಯಾಪಾರ ವಹಿವಾಟಿಗೆ ಬಳಕೆಯಾಗುತ್ತದೆ. ಆಗ ವಾಹನಗಳ ನಿಲುಗಡೆ ತಾಣ ಕಟ್ಟಡದ ಎದುರಿನ ರಸ್ತೆಯ ಬದಿಗೆ ಶಿಫ್ಟ್ ಆಗುತ್ತದೆ. ಇದರಿಂದಾಗಿ ಅಲ್ಲಿ ಟ್ರಾಫಿಕ್ ಜಾಂ ಉಂಟಾಗಲು ಕಾರಣವಾಗುತ್ತದೆ. ಕೆಲವೊಂದು ಕಟ್ಟಡಗಳಲ್ಲಿ ತಳ ಅಂತಸ್ತಿನ ಅನಧಿಕೃತ ವ್ಯಾಪಾರ ಮಹಾನಗರ ಪಾಲಿಕೆ ವತಿಯಿಂದ ದಂಡ ಸ್ವೀಕರಿಸಿ ಅಕ್ರಮ ಸಕ್ರಮ ಕಾಯ್ದೆಯಡಿ ಸಕ್ರಮಗೊಳ್ಳುವ ನಿದರ್ಶನಗಳೂ ಇವೆ ಎಂದು ಕಮಿಶನರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.